ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ATMA) ಭಾರತಕ್ಕೆ ಬರುತ್ತಿರುವ ಹೆಚ್ಚಿನ ಪ್ರಮಾಣದ ಬಳಸಿದ ಟೈರ್‌ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸುರಕ್ಷತೆ ಮತ್ತು ಪರಿಸರ ಅಪಾಯಗಳನ್ನು ತರುತ್ತದೆ ಎಂದು ಹೇಳಿದೆ.ಇಂತಹ ಟಯರ್ ಆಮದು ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದೆ. ಇದೇ ವೇಳೆ ರಬ್ಬರ್ ಆಮದು ಬಗ್ಗೆಯೂ ಚರ್ಚೆ ಆರಂಭವಾಗಿದ್ದು, ಆಮದು ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇರಳದ ರಬ್ಬರ್ ಬೆಳೆಗಾರರೂ ಒತ್ತಾಯಿಸಿದ್ದಾರೆ.
ಭಾರತವು 200 ಮಿಲಿಯನ್ ವಾರ್ಷಿಕವಾಗಿ ಟೈರ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ನಡುವೆ ಕಳಪೆ ಗುಣಮಟ್ಟದ, ಬಳಸಿದ ಟಯರ್ ಆಮದು ಮಾಡಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಸುಮಾರು 14 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಈ ಟೈರ್‌ಗಳನ್ನು ಕಳೆದ ವರ್ಷ ದೇಶಕ್ಕೆ ತರಲಾಯಿತು. ಇದು ಅಪಾಯಕಾರಿ, ಇವು ಪರಿಸರದ ಮೇಲೂ ಭಾರತದಲ್ಲಿ ಪರಿಣಾಮ ಬೀರುತ್ತದೆ. ಈ ರೀತಿಯ ಆಮದುಗಳನ್ನು ನಿಯಂತ್ರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ತೀರಾ ಅಗತ್ಯವಾದಲ್ಲಿ ಸಣ್ಣ ಪ್ರಮಾಣದಲ್ಲಿ ಮಾತ್ರ ಆಮದಿಗೆ ಅನುಮತಿಸಬೇಕು ಎಂದು ATMA ಹೇಳಿದೆ.
ಭಾರತೀಯ ಕಂಪನಿಗಳು ಪ್ರತಿ ವರ್ಷ 200 ಮಿಲಿಯನ್‌ಗಿಂತಲೂ ಹೆಚ್ಚು ಟೈರ್‌ಗಳನ್ನು ತಯಾರಿಸಬಹುದು, ಹೀಗಾಗಿ ದೇಶದಲ್ಲಿ ಹೆಚ್ಚಿನ ಟೈರ್ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ ಎಂದು ಎಟಿಎಂಎ ಅಧ್ಯಕ್ಷ ಅರ್ನಾಬ್ ಬ್ಯಾನರ್ಜಿ ಹೇಳಿದ್ದಾರೆ.
ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ನೈಸರ್ಗಿಕ ರಬ್ಬರ್‌ನ ಸುಂಕ-ಮುಕ್ತ ಆಮದುಗಳಿಗೂ ಅವಕಾಶ ನೀಡಬಹುದು ಸೇರಿದಂತೆ ಇತರ ಸಲಹೆಯನ್ನು ನೀಡಲಾಗಿದೆ.
ಈ ಬೆಳವಣಿಗೆಯ ನಡುವೆ ರಬ್ಬರ್ ಬೆಳೆಗಾರರಿ ಆತಂಕ ವ್ಯಕ್ತಪಡಿಸಿದ್ದಾರೆ. ರಬ್ಬರ್ ಆಮದು ಜೊತೆಗೆ ಟ್ಯಾಪಿಂಗ್ ಕೂಡಾ ಹೆಚ್ಚಳವಾಗಿರುವುದರಿಂದ ರಬ್ಬರ್ ಧಾರಣೆ 180 ರೂಪಾಯಿಗಿಂತ ಕೆಳಗೆ ಇಳಿಯುವ ಆತಂಕದಲ್ಲಿದ್ದಾರೆ. ಒಂದು ವೇಳೆ ಟಯರ್ ಉತ್ಪಾದನೆಯ ಕಾರಣದಿಂದ ರಬ್ಬರ್ ಆಮದು ಎರಡು ತಿಂಗಳ ನಂತರ ಹೆಚ್ಚಾದರೆ ಧಾರಣೆ ಇಳಿಕೆ ಖಚಿತವಾಗಿದೆ. ಈಗಿನ ಪ್ರಕಾರ ಜುಲೈ ಅಂತ್ಯದ ವೇಳೆಗೆ, ರಬ್ಬರ್ ಆಮದು ಹಿಂದಿನ ಮಟ್ಟಕ್ಕೆ ಮರಳಬಹುದು. ಇದು ರಬ್ಬರ್ ಬೆಲೆ ಕಡಿಮೆಯಾಗಲು ಕಾರಣವಾಗಬಹುದು ಎಂದು ಕೇರಳದ ರಬ್ಬರ್ ಬೆಳೆಗಾರರು ಹೇಳಿದ್ದಾರೆ.
ಚೀನಾದ ಹಾಗೂ ಇತರ ಕೆಲವು ದೇಶಗಳ ಬೇಡಿಕೆಯ ಕಾರಣದಿಂದಾಗಿ ದೇಶೀಯ ರಬ್ಬರ್ ಬೆಲೆಗಳು 200 ದಾಟಿದೆ. ಆಮದು ಸ್ಥಗಿತಗೊಂಡಿದ್ದರಿಂದ ಟೈರ್ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ರಬ್ಬರ್ ಸಂಗ್ರಹಿಸಬೇಕಾಯಿತು. ಇದರ ಜೊತೆಗೇ, ಜೂನ್‌ನಲ್ಲಿ ಮಳೆಯಿಂದಾಗಿ ಟ್ಯಾಪಿಂಗ್ ಸ್ಥಗಿತಗೊಂಡಿತ್ತು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ರಬ್ಬರ್ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಧಾರಣೆ ಏರಿಕೆಯ ಹಾದಿಯಲ್ಲಿ ಮುಂದುವರಿದಿದೆ ಎಂದು ಕೇರಳದ ಖಾಸಗಿ ವಿಶ್ಲೇಷಣೆ ಹೇಳಿದೆ.
ಈಗಿನ ಮಾಹಿತಿ ಪ್ರಕಾರ, ಇನ್ನೆರಡು ವಾರಗಳಲ್ಲಿ ವಿದೇಶದಿಂದ ರಬ್ಬರ್ ಆಗಮನ ಪ್ರಕ್ರಿಯೆ ನಡೆಯಬಹುದು. ರಬ್ಬರ್ ಸಾಗಾಣಿಕೆಗೆ ಕಂಟೈನರ್ ಬುಕಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ದೊಡ್ಡ ಟೈರ್ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ, ಕಾರಣ ರಬ್ಬರ್ ಲಭ್ಯತೆಯ ಕೊರತೆ. ಆಮದು ಸಕ್ರಿಯವಾಗುವುದರಿಂದ ಟೈರ್ ವಲಯಕ್ಕೆ ಉತ್ತೇಜನ ಸಿಗುತ್ತದೆ, ಆದರೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ ಇದು ಕೇರಳದಲ್ಲಿ ರಬ್ಬರ್ ಬೆಳೆಗಾರರು ವ್ಯಕ್ತಪಡಿಸುವ ಆತಂಕ, ಇದಕ್ಕಾಗಿ ರಬ್ಬರ್ ಆಮದು ಪ್ರಕ್ರಿಯೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಬೇಡಿಕೆ ಇರುವ ಅರ್ಧದಷ್ಟು ಕೂಡಾ ರಬ್ಬರ್ ಉತ್ಪಾದನೆಯಾಗುವುದಿಲ್ಲ. ಹಾಗಾಗಿ ಆಮದು ನಡೆದರೂ ಇಲ್ಲಿನ ಈಗಿನ ಧಾರಣೆ ಕುಸಿತವಾಗದು ಎಂಬ ವಾದ ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಟೈರ್ ಉತ್ಪಾದನೆ, ಬೇಡಿಕೆ ಹೆಚ್ಚಾಗಿದೆ. ಆದರೆ, ಈ ಬಾರಿ ಧಾರಣೆಯ ಕಾರಣದಿಂದ ಟ್ಯಾಪಿಂಗ್ ಪ್ರಕ್ರಿಯೆ ಹೆಚ್ಚಾಗಿದೆ. ಈ ನಡುವೆ ಆಮದು ಕೂಡಾ ನಡೆದರೆ ರಬ್ಬರ್ ಬೆಲೆ 180 ರೂ.ಗಿಂತ ಕೆಳಗಿಳಿಯುವ ಆತಂಕವನ್ನೂ ಕೇರಳದ ರಬ್ಬರ್ ಬೆಳೆಗಾರರು ವ್ಯಕ್ತಪಡಿಸಿದ್ದಾರೆ. ಸದ್ಯ ರಬ್ಬರ್‌ನ ಅಂತರಾಷ್ಟ್ರೀಯ-ದೇಶೀಯ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಹೀಗಾಗಿ ಸಹಜವಾಗಿಯೇ ರಬ್ಬರ್ ಬೆಳೆಗಾರರು ಧಾರಣೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
Rubber tire manufacturing companies are calling for limit the import of low-quality tires, while rubber growers are requesting a ban on rubber imports.
According to the Automotive Tyre Manufacturers’ Association (ATMA), the import of waste/scrap tyres into India has increased by more than five times since FY20-21. Such indiscriminate import of waste/scrap tyres is not only an environmental and Safety concern but also undermines the very purpose of Extended Producers Responsibility (EPR) Regulation on Waste Tyres