ಕಳೆದ ನಾಲ್ಕು ವರ್ಷಗಳ ನಂತರ ನೈಸರ್ಗಿಕ ರಬ್ಬರ್ ಮಾರುಕಟ್ಟೆ ಚೇತರಿಕೆ ಕಂಡುಬಂದಿತ್ತು. ಪ್ರತೀ ಕೆಜಿಗೆ 192 ರೂಪಾಯಿವರೆಗೂ ತಲುಪಿ ಕೃಷಿಕರೂ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಇದೀಗ ಒಂದು ತಿಂಗಳಿನಿಂದ ಧಾರಣೆ ಕುಸಿಯುತ್ತಿದ್ದು ಸದ್ಯ 158 ರೂಪಾಯಿ ಆಸುಪಾಸಿಗೆ ಬಂದಿದೆ. ಹೀಗಾಗಿ ಮತ್ತೆ ರಬ್ಬರ್ ಬೆಳೆಗಾರರು ಚಿಂತಿಸುವಂತೆ ಮಾಡಿದೆ.
ಕೊರೋನಾ ಕಾರಣದಿಂದ ಜಾಗತಿಕವಾಗಿ ವಾಹನ ಉದ್ದಿಮೆಗಳ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು. ಹೀಗಾಗಿ ರಬ್ಬರ್ ಬಳಕೆ ಕೂಡಾ ಇಳಿಕೆಯಾಗಿತ್ತು. ಈ ಕಾರಣದಿಂದ ನೈಸರ್ಗಿಕ ರಬ್ಬರ್ ಧಾರಣೆ ಇಳಿಕೆಯ ಹಾದಿಯಲ್ಲಿ ಸಾಗಿತು. ಕೊರೋನಾ ನಂತರ ಉದ್ದಿಮೆಗಳು ಮತ್ತೆ ಬಲಗೊಂಡು ರಬ್ಬರ್ ಧಾರಣೆ ಕೂಡಾ ಜಾಗತಿಕವಾಗಿ ಏರಿಕೆಯ ಹಾದಿಯಲ್ಲಿ ಸಾಗಿತು. ಚೀನಾದಂತಹ ದೇಶಗಳಲ್ಲಿ ರಬ್ಬರ್ ಬಳಕೆ ಹೆಚ್ಚಾಗಿಯೇ ಮುಂದುವರಿಯಿತು. ಭಾರತ ಕೂಡಾ ದೇಶೀಯ ರಬ್ಬರ್ ಬಳಕೆಗೇ ಆದ್ಯತೆ ನೀಡಿತು. ಇದೀಗ ಮತ್ತೆ ಕೊರೋನಾ ಅಬ್ಬರದ ಕಾರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ರಬ್ಬರ್ ಧಾರಣೆಯ ಮೇಲೆ ಹೊಡೆತ ಬಿದ್ದಿದೆ.
ಆದರೆ ಭಾರತದಲ್ಲಿ ದೇಶೀಯ ರಬ್ಬರ್ ಉತ್ಪಾದನೆ ಇದ್ದರೂ ಸುಂಕ ರಹಿತವಾಗಿ ರಬ್ಬರ್ ಆಮದಿಗೆ ಒತ್ತಾಯ ಕೇಳಿಬಂದಿದೆ. ನೈಸರ್ಗಿಕ ರಬ್ಬರನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಟೈರ್ ಉದ್ಯಮ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸುತ್ತಿದೆ. ಈಗಿನ ಯೋಜನೆಯಂತೆ 7,90,000 ಟನ್ ರಬ್ಬರ್ ಆಮದಿಗೆ ಬೇಡಿಕೆ ವ್ಯಕ್ತವಾಗಿದೆ. ಇದರಿಂದ ದೇಶೀಯ ರಬ್ಬರ್ ಮಾರುಕಟ್ಟೆ ಮೇಲೆ ಹೊಡೆತ ಬೀಳುವುದಲ್ಲದೆ ಇಲ್ಲಿನ ಕೃಷಿಕರು ಬೆಳೆಯುವ ರಬ್ಬರ್ ಮೇಲೂ ಪರಿಣಾಮವಾಗುತ್ತಿದೆ. ಈ ಕಾರಣದಿಂದ ಭಾರತದ ರಬ್ಬರ್ ಧಾರಣೆ ಸದ್ಯ ಇಳಿಕೆಯ ಹಾದಿಯಲ್ಲಿದೆ ಎನ್ನುವುದು ರಬ್ಬರ್ ಮಾರುಕಟ್ಟೆ ವಲಯದ ಅಭಿಪ್ರಾಯ.

ಭಾರತದ ನೈಸರ್ಗಿಕ ರಬ್ಬರ್ ಉತ್ಪಾದನೆಯು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ತೀವ್ರವಾಗಿ ಕುಸಿತವಾಗಿತ್ತು. ಭಾರೀ ಮಳೆಯ ಕಾರಣದಿಂದ ರಬ್ಬರ್ ಇಳುವರಿಯಲ್ಲೂ ಕೊರತೆಯಾಗಿತ್ತು. ಮಳೆಯ ಕಾರಣದಿಂದ ಎಲೆ ಉದುರುವ ರೋಗದಿಂದ ಇಳುವರಿ ಕಡಿಮೆಯಾಗಿತ್ತು. ದೇಶದಲ್ಲಿ ರಬ್ಬರ್ ಅಗ್ರ ಉತ್ಪಾದನೆಯ ದಕ್ಷಿಣ ರಾಜ್ಯವಾದ ಕೇರಳದಲ್ಲಿ ಭಾರೀ ಮಳೆಯು ಟ್ಯಾಪಿಂಗ್ ಮೇಲೆ ಪರಿಣಾಮ ಬೀರಿತ್ತು. ಇದೇ ಸಮಯದಲ್ಲಿ ಕಡಿಮೆ ಉತ್ಪಾದನೆಯ ಕಾರಣದಿಂದ ನೈಸರ್ಗಿಕ ರಬ್ಬರನ್ನು ಡಿಸೆಂಬರ್ ವೇಳೆಗೆ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಿಂದ ಆಮದು ಮಾಡಲು ಟಯರ್ ಕಂಪನಿಗಳು ಒತ್ತಾಯಿಸಿದವು. ಹೀಗಾಗಿ ಭಾರತದಲ್ಲಿ ಧಾರಣೆ ಕೂಡಾ ಇಳಿಕೆಯಾದವು ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ.
ಜಾಗತಿಕವಾಗಿ ರಬ್ಬರ್ ಮಾರುಕಟ್ಟೆ ಭರವಸೆಯನ್ನು ಮೂಡಿಸುತ್ತಿದೆ. ನೈಸರ್ಗಿಕ ರಬ್ಬರ್ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಮುಂಬರುವ ಋತುಮಾನದಲ್ಲಿ ಕಡಿಮೆ ಪೂರೈಕೆಯ ಕಾರಣದಿಂದ ಹಾಗೂ ಚೀನಾದಲ್ಲಿ ಹೆಚ್ಚುತ್ತಿರುವ ರಬ್ಬರ್ ಬೇಡಿಕೆಯ ಕಾರಣದಿಂದ ರಬ್ಬರ್ ಧಾರಣೆ ಏರಿಕೆಯಾಗಬಹುದು ಎಂದು ನೈಸರ್ಗಿಕ ರಬ್ಬರ್ ಉತ್ಪಾದಕ ರಾಷ್ಟ್ರಗಳ ಸಂಘ ಹೇಳಿದೆ.
ರಬ್ಬರ್ ಮಾರುಕಟ್ಟೆ ವರದಿಯ ಪ್ರಕಾರ ಡಿಸೆಂಬರ್ ಮತ್ತು ಜನವರಿ 2022 ರ ಅವಧಿಯಲ್ಲಿ ಚೀನಾ ಸುಮಾರು 5,00,000 ಟನ್ ರಬ್ಬರ್ ಗಳನ್ನು ದಾಸ್ತಾನು ಮಾಡುವ ಗುರಿ ಇರಿಸಿಕೊಂಡಿದೆ. ಕೋವಿಡ್ ಕಾರಣದಿಂದ ಉದ್ಯಮದಲ್ಲಿ ಬದಲಾವಣೆ ಸಾಧ್ಯತೆ ಇರುವುದರಿಂದ ರಬ್ಬರ್ ದಾಸ್ತಾನು ಮಾಡಿಕೊಳ್ಳುವ ಗುರಿ ಇರಿಸಿಕೊಂಡಿದೆ ಚೀನಾ.
2021 ರ ವರ್ಷದಲ್ಲಿ ವಿಶ್ವ ರಬ್ಬರ್ ಆರ್ಥಿಕತೆಯು ಸುಮಾರು 2,00,000 ಟನ್‌ಗಳ ಕೊರತೆಯೊಂದಿಗೆ ಕೊನೆಗೊಳ್ಳುವ ಸಾಧ್ಯತೆಯಿದೆ. ವಿಶ್ವದ ರಬ್ಬರ್ ಪೂರೈಕೆ 13.882 ಮಿಲಿಯನ್ ಟನ್‌ಗಳು ಇದ್ದು ಬೇಡಿಕೆ: 14,076 ಮಿಲಿಯನ್ ಟನ್ ಬೇಡಿಕೆ ಇದೆ ಎಂದು ರಬ್ಬರ್ ಜರ್ನಲ್ ತಿಳಿಸುತ್ತದೆ. ಆದರೆ ಒಮಿಕ್ರಾನ್ ರೂಪಾಂತರದ ಹರಡುವಿಕೆಯ ಕಾರಣದಿಂದ ಯುರೋಪಿನಾದ್ಯಂತ ವಿಧಿಸಲಾದ ಹೊಸ ನಿರ್ಬಂಧಗಳು ಮತ್ತು ರಬ್ಬರ್‌ನ ಬೇಡಿಕೆಯ ಮೇಲೂ ಪರಿಣಾಮ ಬೀರಬಹುದು ಎನ್ನುವುದು ರಬ್ಬರ್ ಫ್ಯೂಚರ್ಸ್ ಮಾರುಕಟ್ಟೆಯ ಅಭಿಪ್ರಾಯ.
ರಬ್ಬರ್ ಪ್ಯೂಚರ್ ಟ್ರೆಂಡ್ ಪ್ರಕಾರ, ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ದರ ಕುಸಿತವು ಹೆಚ್ಚು ಸಮಯ ಉಳಿಯದು. ಮುಂದಿನ ತಿಂಗಳು ರಬ್ಬರ್ ಉತ್ಪಾದನೆಯು ಕಡಿಮೆಯಾಗುವುದರಿಂದ ಜನವರಿ ಮಧ್ಯದ ವೇಳೆಗೆ ಬೆಲೆಗಳು ಹೆಚ್ಚಾಗುತ್ತವೆ. ಈ ವರ್ಷ ಹವಾಮಾನ ಪರಿಸ್ಥಿತಿಗಳು ತುಂಬಾ ಅನಿಶ್ಚಿತ ಮತ್ತು ಅನಿಯಮಿತವಾಗಿವೆ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಬ್ಬರ್ ಧಾರಣೆ ಏರಿಕೆಯ ನಿರೀಕ್ಷೆ ಇದೆ.
ಭಾರತದ ರಬ್ಬರ್ ಮಾರುಕಟ್ಟೆ ಚೇತರಿಕೆ ಕಂಡು ಇದೀಗ ಕುಸಿತದ ಹಾದಿಯಲ್ಲಿ ಇರುವುದು ರಬ್ಬರ್ ಬೆಳೆಗಾರರಿಗೂ ಸಂಕಷ್ಟ ತಂದಿದೆ. ಸುಮಾರು 10 ವರ್ಷಗಳ ಬಳಿಕ ಧಾರಣೆ ಏರಿಕೆ ಕಂಡಿತ್ತು. ರಬ್ಬರ್ ಬೆಳೆಗಾರರು ಕೃಷಿ ಸುಧಾರಣೆಯನ್ನು ಕಂಡಿದ್ದರು. ಇದೀಗ ಮತ್ತೆ ಧಾರಣೆ ಇಳಿಕೆಯ ಹಾದಿಯಲ್ಲಿ ಸಾಗಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ.