ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್) ನ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಲಿನಿ ರಜನೀಶ್, ನಬಾರ್ಡ್ ವಿಶೇಷ ಯೋಜನೆಗಳ ಮೂಲಕ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು ಹಾಗೂ ಯುವ ಜನತೆ ನಬಾರ್ಡ್ ನ ವಿವಿಧ ಯೋಜನೆಗಳನನ್ನು ಸದುಪಯೋಗಪಡಿಸಿಕೊಂಡು, ಉದ್ಯಮಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
RBIನ ಪ್ರಾದೇಶಿಕ ನಿರ್ದೇಶಕರಾದ ಸೋನಾಲಿ ಸೇನ್ ಗುಪ್ತಾ, ಇಂದಿನ ಸಮಗ್ರ ಹಣಕಾಸು ಸಹಕಾರಿ ಬ್ಯಾಂಕಿಂಗ್ ಸುಧಾರಣೆಗಾಗಿ ನಬಾರ್ಡ್ ಶ್ರಮಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ನಬಾರ್ಡ್ ಮಾಡುತ್ತಿರುವ ಕಾರ್ಯ ಪ್ರಶಂಸನೀಯ ಎಂದರು.
ನಬಾರ್ಡ್ ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು, ಗ್ರಾಮೀಣ ಪ್ರದೇಶಗಳ ಆರ್ಥಿಕ ಮಟ್ಟ ಸುಧಾರಣೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಪ್ರಗತಿಗೆ ನಬಾರ್ಡ್ ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿ ದೇಶದ ಪ್ರಗತಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್, ನಬಾರ್ಡ್ 44 ವರ್ಷದ ಯುವ ಸಂಸ್ಥೆಯಾಗಿದೆ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಕಾಲದಿಂದ ನಾನು ನಬಾರ್ಡ್ ಪ್ರಗತಿ ಕಂಡಿದ್ದೇನೆ, ನಬಾರ್ಡ್ ಎಲ್ಲಾ ಬ್ಯಾಂಕರ್ ಗಳ ಜೊತೆ ಸದಾ ಇರಲಿದೆ. ಗ್ರಾಮೀಣ ಕೃಷಿ ಕ್ಷೇತ್ರದ ಸಂಶೋಧನ ತಂಡ ಅನೇಕ ಯೋಜನೆಗಳನ್ನು ಆವಿಷ್ಕರಿಸುವ ಮೂಲಕ ದೇಶದ ಪ್ರಗತಿಗೆ ಕಾರಣವಾಗಿದೆ. 2047ರ ವಿಕಸಿತ ಭಾರತದ ಪ್ರಗತಿಗೆ ನಬಾರ್ಡ್ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ್ ಎಂ.ಭಂಡಿವಾಡ್, ಉಪ ಪ್ರಧಾನ ವ್ಯವಸ್ಥಾಪಕ ಶ್ರೀಜಾ ನಾಯರ್ ಸೇರಿದಂತೆ ಬ್ಯಾಂಕಿಂಗ್ ವಲಯದ ಹಿರಿಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸಹಕಾರಿ ಮತ್ತು ಬ್ಯಾಂಕಿಂಗ್ ವಲಯದ ಪ್ರತಿನಿಧಿಗಳು ಭಾಗಿಯಾಗಿದ್ದರು.