ಉಬರಡ್ಕ ಮಿತ್ತೂರು ಗ್ರಾಮ ವ್ಯಾಪ್ತಿಯ ಅರ್ಧಭಾಗದ ಜನರು ಉಬರಡ್ಕ ಮಿತ್ತೂರು ಗ್ರಾಮದ ಕೇಂದ್ರಸ್ಥಾನವನ್ನು ತಲುಪಲು ಈ ರಸ್ತೆಯನ್ನೇ ಅವಲಂಬಿಸಿದ್ದು, ಅತೀ ಮುಖ್ಯವಾದ ಗ್ರಾಮೀಣ ರಸ್ತೆಯಾಗಿರುತ್ತದೆ. ಸುಮಾರು 6 ಕಿ.ಮೀ ದೂರದ ಕೊಡಿಯಾಲಬೈಲ್ ಜನವಸತಿ ಪ್ರದೇಶದಿಂದ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪಂಚಾಯತ್ ಕಚೇರಿ, ಗ್ರಾಮ ಲೆಕ್ಕಾಧಿಕಾರಿಕಚೇರಿ, ಅಂಚೆ ಕಚೇರಿ ಮತ್ತು ಸಹಕಾರಿ ಸಂಘದ ಕಚೇರಿಗಳಿಗೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಧದಷ್ಟು ಜನವಸತಿ ಪ್ರದೇಶದ ಮತದಾರರು ಈ ಭಾಗದಲ್ಲೇ ಇದ್ದಾರೆ. ಇಂತಹ ರಸ್ತೆಯನ್ನು ಇಂದಿನವರೆಗೂ ಗ್ರಾಮ ಪಂಚಾಯತ್ 14 ಮತ್ತು 15ನೇ ಹಣಕಾಸು ಅನುದಾನದಲ್ಲಿ ಸುಮಾರು 4.50 ಲಕ್ಷದಲ್ಲಿ 100 ಮೀ ನಷ್ಟು ಕಾಂಕ್ರೇಟೀಕರಣ ಹಾಗೂ ಸಣ್ಣ ಅನುದಾನದಲ್ಲಿ ರಸ್ತೆ ದುರಸ್ಥಿ ಆಗಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ಅಭಿವೃದ್ದಿ ಕಂಡಿಲ್ಲ. ಪ್ರತಿ ವರ್ಷ ಸುರಿಯುವ ಭಾರಿ ಮಳೆಗೆ ಸದ್ರಿ ರಸ್ತೆಗೆ ತೀವ್ರ ಹಾನಿಯಾಗುವುದರಿಂದ ರಸ್ತೆ ಸಂಚಾರಕ್ಕೆ ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ನೀರು ರಸ್ತೆಯ ಮಧ್ಯೆ ಭಾಗದಲ್ಲಿ ಹಾದುಹೋಗಿ ರಸ್ತೆಯ ಮಧ್ಯದಲ್ಲಿಯೇ ಗುಂಡಿಗಳಾಗಿವೆ. ಇದರಿಂದ ವಾಹನ ಸಂಚಾರಕ್ಕೆ ಅಪಾಯವಾಗುವ ಸಂಭವ ಉಂಟಾಗುವ ಸಾಧ್ಯತೆ ಇರುತ್ತದೆ.
ಈ ರಸ್ತೆಗೆ ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕಂದಡ್ಕ-ಉಬರಡ್ಕ ಹೊಳೆಯ ಮಧ್ಯೆ ದೊಡ್ಡಡ್ಕ ಎಂಬಲ್ಲಿ ಕಾಲುಸಂಕವಿರುತ್ತದೆ. ಈ ಕಾಲುಸಂಕವು ಕೂಡಾ ಅತ್ಯಂತ ಶಿಥಿಲಾವಸ್ಥೆಯಲ್ಲಿ ಇದ್ದು, ಇದರ ಎರಡು ಬದಿಯಲ್ಲಿರುವ ಕಬ್ಬಿಣದ ಪೈಪ್ ಗಳು ಮುರಿದಿದ್ದು, ಕೆಲವೊಂದು ಪೈಪ್ ಗಳು ಕಳ್ಳತನವಾಗುತ್ತಿದೆ. ಕಾಲುಸಂಕದ ಅಡಿಭಾಗದಲ್ಲಿಯೂ ಸಿಮೆಂಟ್ ಸಹ ಎದ್ದು ಹೋಗಿದ್ದು ಮುರಿದು ಸಂಪರ್ಕ ಕಡಿತಗೊಳ್ಳುವ ಭೀತಿ ಈ ಪ್ರದೇಶದ ಜನರಲ್ಲಿದೆ. ಸದ್ಯ ಈ ಸೇತುವೆಯಲ್ಲಿ ಕೇವಲ ದ್ವಿಚಕ್ರ ವಾಹನಗಳು ಹಾಗೂ ಸಣ್ಣ ರಿಕ್ಷಾದಂತಹ ವಾಹನಗಳು ಮಾತ್ರ ಸಂಚರಿಸಲು ಸಾಧ್ಯವಾಗುತ್ತದೆ. ಘನ ವಾಹನಗಳ ಸಂಚಾರಕ್ಕೆ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಸಾಧ್ಯವಾಗುತ್ತದೆ. ಆದ್ದರಿಂದ ಉಬರಡ್ಕ-ನೀರಬಿದಿರೆ ರಸ್ತೆಗೆ ಪೂರ್ಣ ಪ್ರಮಾಣದ ಕಾಂಕ್ರೀಟೀಕರಣ ಹಾಗೂ ಸೇತುವೆಯ ನಿರ್ಮಾಣವು ಈ ಭಾಗದ ಸಾರ್ವಜನಿಕರ ಅತೀ ಮುಖ್ಯ ಬೇಡಿಕೆಯಾಗಿದೆ.
(ಮಾಹಿತಿ-ಬರಹ : ರಜೀಶ್ ನೀರಬಿದಿರೆ )