ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಆಯೋಜನೆಯಾಗಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಸುಮಾರು 20 ಬ್ಯಾನರ್ ಸ್ವಾಗತ ಕೋರಿತ್ತು. ಇದೆಲ್ಲಾ ಬ್ಯಾನರ್ ಊರಿನ ಅಭಿವೃದ್ಧಿ ವೈಫಲ್ಯದ ಆಕ್ರೋಶವಾಗಿತ್ತು. ಜನರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು ಗ್ರಾಮ ವಾಸ್ತವ್ಯದ ನಡುವೆ ಊರಿಡೀ ಸುತ್ತಾಡಿ ಹೇಳಿದ್ದು,”ನಿಮ್ಮ ಆಕ್ರೋಶ ಅರ್ಥವಾಯಿತು”.
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಪಂ ವ್ಯಾಪ್ತಿಯ ಪಂಬೆತ್ತಾಡಿ ಗ್ರಾಮದಲ್ಲಿ ಶನಿವಾರ ಅಧಿಕಾರಿಗಳ ಗ್ರಾಮ ವಾಸ್ತವ್ಯ ಆಯೋಜನೆಯಾಗಿತ್ತು. ಗ್ರಾಮದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬೇಡಿಕೆಯ ಮನವಿ ಪಡೆಯಲು ಬಂದ ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡರು. ಕಳೆದ ಸುಮಾರು 30 ವರ್ಷಗಳಿಂದ ಕರಿಕಳ-ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸುತ್ತಲೇ ಇದ್ದರು. ಸುಮಾರು 7 ಬಾರಿ ಶಾಸಕರನ್ನು ಭೇಟಿಯಾಗಿದ್ದರು, ಬೆಂಗಳೂರಿಗೂ ತೆರಳಿದ್ದರು. ಕೊನೆಗೆ ಅಧಿಕಾರಿಗಳು ನೀಡಿದ ಹೇಳಿಕೆಯಿಂದ ಬೇಸತ್ತು ವಾಪಾಸ್ ಆಗಿದ್ದರು. ಇದೀಗ ಮತ್ತೆ ಗ್ರಾಮ ವಾಸ್ತವ್ಯದ ನೆಪದಲ್ಲಿ ಜನರನ್ನು ಮಂಗ ಮಾಡುವುದು ಬೇಡ, ತಕ್ಷಣವೇ ರಸ್ತೆ ದುರಸ್ತಿ ಮಾಡಿ ಎಂಬುದು ಜನರು ಆಕ್ರೋಶವಾಗಿತ್ತು.
ಗ್ರಾಮ ವಾಸ್ತವ್ಯ ಸ್ಥಳದಲ್ಲಿ ರೋಸಿ ಹೋಗಿದ್ದ ಜನರು ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬ್ಯಾನರ್ ತೆರವು ಮಾಡಲು ಸೂಚಿಸಿದ್ದರು. ಆದರೆ ಬ್ಯಾನರ್ ತೆರವು ಮಾಡಲು ಒಪ್ಪದ ಜನರು, ಇದು ನಮ್ಮ ಹಕ್ಕೊತ್ತಾಯ, ಈ ಬೇಡಿಕೆ ಪೂರೈಸಿ, 30 ವರ್ಷದಿಂದ ರಸ್ತೆ ದುರಸ್ತಿಯಾಗದೇ ಇರುವುದು ಆಡಳಿತ ವೈಫಲ್ಯ ಎಂದೇ ಟೀಕಿಸಿದರು. ಕೊನೆಗೆ ಬ್ಯಾನರ್ ನಡುವೆಯೇ ಅಹವಾಲು ಸ್ವೀಕರಿಸಿದ ಅಧಿಕಾರಿಗಳನ್ನು ಊರಿನ ರಸ್ತೆ ವೀಕ್ಷಣೆಗೆ ಕರೆದೊಯ್ದರು. ರಸ್ತೆ ವೀಕ್ಷಣೆ ಬಳಿಕ ಅಧಿಕಾರಿಗಳು ಹೇಳಿದ್ದು,”ನಿಮ್ಮ ಆಕ್ರೋಶ ಅರ್ಥವಾಯಿತು” ಎಂದು.
ಮುಂದಿನ 15 ದಿನದಲ್ಲಿ ನಮಗೆ ಈ ಗ್ರಾಮ ವಾಸ್ತವ್ಯದ ಹಾಗೂ ರಸ್ತೆ ಸಮಸ್ಯೆ ಬಗ್ಗೆ ಪರಿಹಾರದ ಉತ್ತರಗಳು ಬೇಕು, ಇಲ್ಲದೇ ಇದ್ದರೆ ರಸ್ತೆ ತಡೆ, ಹೋರಾಟ ಕೊನೆಗೆ ಮತ ಬಹಿಷ್ಕಾರಕ್ಕೂ ಸಿದ್ಧ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಇದೇ ಸಭೆಯಯಲ್ಲಿ ಜನರು ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆಗಾಗಿ ಭಿಕ್ಷೆ ಎಂದು ಹುಂಡಿಯನ್ನು ರಚನೆ ಮಾಡಿದ್ದರು. ಈ ಮೂಲಕ ಆಕ್ರೋಶ ಹೊರಹಾಕಿದ್ದರು.
ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆ ಗ್ರಾಮೀಣ ರಸ್ತೆಯಾಗಿದ್ದು ಬ್ರಿಟಿಷ್ ಸರ್ಕಾರ ಇರುವಾಗಲೇ ರಚನೆಯಾಗಿದ್ದ ರಸ್ತೆ ಇದಾಗಿತ್ತು. ಸುಮಾರು 30 ವರ್ಷಗಳ ಹಿಂದೆ ಡಾಮರು ಕಂಡ ರಸ್ತೆ ನಂತರ ಡಾಮರು ಕಾಣಲೇ ಇಲ್ಲ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ. ರಸ್ತೆಯ ಅಲ್ಲಲ್ಲಿ ಗ್ರಾಮ ಪಂಚಾಯತ್ ಮೂಲಕ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ ಇಲಾಖೆಗಳಿಂದ , ಶಾಸಕರ, ಸಂಸದರ ಅನುದಾನಗಳು ಇದುವರೆಗೂ ಲಭ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. 6 ಕಿಮೀ ರಸ್ತೆಗೆ 40೦ ಮೀಟರ್ ಕಾಂಕ್ರೀಟೀಕರಣ ಮಾಡುವ ಬಗ್ಗೆ ಈಗ ಭರವಸೆ ವ್ಯಕ್ತವಾಗುತ್ತಿದೆ, ಉಳಿದ ಕಡೆ ಜನರು ಓಡಾಟ ನಡೆಸುವುದು ಹೇಗೆ ಎನ್ನುವುದು ಜನರ ಪ್ರಶ್ನೆ.
ಈಗಾಗಲೇ ರಸ್ತೆ ದುರಸ್ತಿಗಾಗಿ ಪರದಾಟ ಮಾಡಿದ ಜನರು ತಾವೇ ಹಣ ಸಂಗ್ರಹಿಸಿ ಸುಮಾರು 70 ಸಾವಿರ ರೂಪಾಯಿ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಿದ್ದಾರೆ. ಇಲಾಖೆಗಳು, ಜನಪ್ರತಿನಿಧಿಗಳು ಆದರೂ ಗಮನಹರಿಸುತ್ತಿಲ್ಲ ಎನ್ನುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
This slideshow requires JavaScript.