ಕಳೆದ ಮೂರು ದಿನಗಳಿಂದ ಕಲ್ಮಕಾರು – ಕೊಲ್ಲಮೊಗ್ರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತಿದೆ. ಸಂಜೆ ವೇಳೆಯೇ ಭಾರೀ ಮಳೆಯಾಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಲ್ಲಮೊಗ್ರ-ಕಲ್ಮಕಾರಿನಲ್ಲಿ ಯುವಕರ ತಂಡವೊಂದು ರಾತ್ರಿ ಇಡೀ ಜಾಗರಣೆ ಮಾಡಿ ಊರಿನ ಮಂದಿಗೆ ನೆರವು ನೀಡುತ್ತಿದ್ದಾರೆ, ನೆರೆಯ ಮಾಹಿತಿ ನೀಡುತ್ತಿದ್ದಾರೆ, ತಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. ಇಲಾಖೆಗಳು, ಸರ್ಕಾರದ ಜೊತೆ ಕೈಜೋಡಿಸುತ್ತಿದ್ದಾರೆ. ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಹಾಗೂ ಪಶ್ಚಿಮ ಘಟ್ಟದ ಸಾಲಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಲೇ ಇದೆ. ಅದರಲ್ಲೂ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು, ಸಂಪಾಜೆ, ಚೆಂಬು ಅರಂತೋಡು, ತೊಡಿಕಾನ ಪ್ರದೇಶದ ಅರಣ್ಯ ಪ್ರದೇಶ ಹಾಗೂ ಅದರ ತಪ್ಪಲು ಭಾಗದಲ್ಲಿ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಧ್ಯಾಹ್ನದವರೆಗೂ ಮಳೆ ಕಡಿಮೆಯಾಗಿ ಸಂಜೆಯಾಗುತ್ತಲೇ ಭಾರೀ ಮಳೆ ಸುರಿಯುತ್ತದೆ. ಒಮ್ಮೆಲೇ ಸುರಿಯುವ ಮಳೆಗೆ ಜನರು ತತ್ತರವಾಗುತ್ತಿದ್ದಾರೆ. ಮಳೆಯ ಜೊತೆಗೇ ಪ್ರವಾಹವೂ ಏರುವುದರಿಂದ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತದೆ. ಇಂತಹ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಜನರು ದಿಕ್ಕು ತೋಚದಂತಾಗುತ್ತದೆ. ಇಲಾಖೆಗಳು, ಸರ್ಕಾರಗಳಿಗೂ, ಆಡಳಿತಕ್ಕೂ ನಡುರಾತ್ರಿಯಲ್ಲಿ ಯಾವುದೇ ನೆರವು ನೀಡಲೂ ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಸ್ಥಳೀಯರ ಯುವಕರ ತಂಡ ತಕ್ಷಣ ನೆರವಿಗೆ ಧಾವಿಸುತ್ತಾರೆ. ಸೇವಾ ಮನೋಭಾವದ ಯುವಕರ ತಂಡವೇ ಈಗ ಗ್ರಾಮಗಳಲ್ಲಿ ಆಸರೆ ಹಾಗೂ ಹೆಚ್ಚು ಶಕ್ತಿ ನೀಡಿವೆ.
ಕಲ್ಮಕಾರು , ಕೊಲ್ಲಮೊಗ್ರದಲ್ಲಿ ಇಂತಹ ಯುವಕ ತಂಡ ಕಳೆದ ಮೂರು ದಿನಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಎರಡು ದಿನಗಳ ಹಿಂದೆ ಕ್ರೇನ್ ಆಪರೇಟರ್ ರಕ್ಷಣೆ ಮಾಡಲು ಮೂಲಕ ಸುದ್ದಿಯಾದ ಗ್ರಾಮೀಣ ಭಾಗವು ಇದೀಗ ಸೇವಾ ಕಾರ್ಯದ ಮೂಲಕವೂ ಗುರುತಿಸಿಕೊಂಡಿದೆ. ಕೊಲ್ಲಮೊಗ್ರದಲ್ಲಿ ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಹಾಗೂ ಅವರ ನೇತೃತ್ವದ ತಂಡ ರಾತ್ರಿ ಇಡೀ ಗ್ರಾಮೀಣ ಭಾಗದಲ್ಲಿ ತಕ್ಷಣದ ನೆರವು ನೀಡುತ್ತಿದ್ದಾರೆ. ಕೊಲ್ಲಮೊಗ್ರ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಕೊಪ್ಪಡ್ಕ ಹಾಗೂ ಕೊಲ್ಲಮೊಗ್ರ ಪಿ ಡಿ ಒ ಕಳೆದ ಮೂರು ದಿನಗಳಿಂದ ಗ್ರಾಮದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಲೇ ಇದ್ದಾರೆ. ಅಗತ್ಯ ನೆರವು ಬೇಕಾದಲ್ಲಿಗೆ ತಾವೇ ಸ್ವತ: ಹೋಗಿ ಸಹಕಾರ ನೀಡುತ್ತಿದ್ದಾರೆ. ಯುವಕರ ತಂಡದಲ್ಲಿ ಕೊಲ್ಲಮೊಗ್ರದ ರವಿಚಂದ್ರ, ಚಲನ್ ಕೊಪ್ಪಡ್ಕ, ಕೇಶವ ಅಂಬೆಕಲ್ಲು, ಹೇಮಂತ್ ಗೋಳ್ಯಾಡಿ,ಗಂಗಾಧರ ಮಿತ್ತೋಡಿ, ಶಶಿ ತೋಟದಮಜಲು, ಜಗದೀಶ ಅಂಬೆಕಲ್ಲು ಸೇರಿದಂತೆ ಇನ್ನೂ ಹಲವು ಯುವಕರು ತಂಡದಲ್ಲಿದ್ದಾರೆ. ಸಂಜೆಯಿಂದ ಗ್ರಾಮದ ಜನರಿಗೆ ಅಗತ್ಯ ನೆರವುಗಳ ಕಡೆಗೆ ಗಮನಹರಿಸುವ ಯುವಕರ ತಂಡ ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದಾರೆ. ಯುವಕರ ಈ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
Heavy rain at Kollamogra . pic.twitter.com/TrEbInzVeZ
Advertisement— theruralmirror (@ruralmirror) August 3, 2022