ಕೆಲ ದಿನಗಳ ಹಿಂದೆ ಗುರು ಸಂದೇಶವನ್ನು ಕೇಳುತ್ತಿದ್ದೆ ವಿಷಯ: ಸೃಷ್ಟಿಯನ್ನು ತಿದ್ದಲು ಹೋಗಬೇಡ ಏಕೆಂದರೆ ಅದು ಬಹಳ ದೊಡ್ಡದು. ಅದರ ಬದಲು ಸೃಷ್ಟಿಗೆ ತಕ್ಕಂತೆ ದೃಷ್ಟಿಯನ್ನು ಬದಲಾಯಿಸು! ನೆಮ್ಮದಿ ಬೇಕೆಂದರೆ ನಾವು ಶುಭ ದೃಷ್ಟಿಗಳಾಗಬೇಕು!
ಸುಂದರ ಕಥೆಯ ಮೂಲಕ ಅದನ್ನು ನಿರೂಪಿಸಿದ್ದರು. ಗುರುವೊಬ್ಬರು ಶಿಷ್ಯರಿಗೆ ಪ್ರಶ್ನೆ ಪತ್ರಿಕೆಯನ್ನು ಕೊಟ್ಟಿದ್ದರಂತೆ. ಖಾಲಿ ಹಾಳೆಯಲ್ಲಿ ಕಪ್ಪು ಚುಕ್ಕೆ ಪ್ರಶ್ನ ಪತ್ರಿಕೆ ! ಶಿಷ್ಯರು ಉತ್ತರಿಸಲು ತೊಡಗಿದರು. ಕಪ್ಪು ಚುಕ್ಕೆಯ ಮೇಲೆ ಅನೇಕರು ಅನೇಕ ಬಗೆಯ ವ್ಯಾಖ್ಯಾನವನ್ನು ಬರೆದರು. ಉತ್ತರವನ್ನೆಲ್ಲ ಓದಿದ ಗುರುಗಳು, ಹೇಳಿದ್ದಿಷ್ಟೇ. ಉತ್ತರಗಳೆಲ್ಲಾ ಸೊಗಸಾಗಿದೆ. ಆದರೆ ಆದರೆ ವಿಶಾಲವಾದ ಬಿಳಿ ಹಾಳೆಯಲ್ಲಿ ಕಂಡದ್ದು ಕಪ್ಪು ಚುಕ್ಕೆ ಮಾತ್ರ. ನಿಮ್ಮ ದೃಷ್ಟಿಯನ್ನು ಬದಲಾಯಿಸಿದ್ದರೆ ಬಿಳಿಯದಾದ ದೊಡ್ಡ ಜಾಗೆ ಕಾಣುತ್ತಿತ್ತು. ಕಪ್ಪು ಚುಕ್ಕೆ ಗೌಣವಾಗುತ್ತಿತ್ತು.
ನನಗೆ ಈ ಕಥೆಯನ್ನು ಕೇಳುತ್ತಿದ್ದಂತೆ ನನ್ನ ವೃತ್ತಿಯಾದ ಕೃಷಿಯ ಬಗ್ಗೆಯೇ ಯೋಚನೆಗಳು ಹುಟ್ಟಿಕೊಂಡವು. ಆಧುನಿಕ ಸಮಸ್ಯೆಗಳಾದ ಅಡಿಕೆ ಕ್ಯಾನ್ಸರ್ ಕಾರಕ ಮತ್ತು ಹಳದಿ ಎಲೆ ರೋಗ ಈ ಸುತ್ತ ಮುತ್ತ ನನ್ನ ಮನಸ್ಸು ಓಡಿತು. ದೃಷ್ಟಿಯನ್ನ ಬದಲಾಯಿಸುವ ಬಗ್ಗೆ ಮತ್ತೆ ಮತ್ತೆ ಮನಸ್ಸು ಒತ್ತಿ ಒತ್ತಿ ಹೇಳಿತು.
ನಾವು ಚಿಕ್ಕವರಿರುವಾಗ ಅಂದರೆ ಸುಮಾರು 50 ವರ್ಷದ ಹಿಂದೆ ಖಾಲಿ ಜಾಗವಿದ್ದಲ್ಲೆಲ್ಲ ಹಬ್ಬುತ್ತಿದ್ದುದು ಒಂದೇ ಸಸ್ಯ, ಅದಕ್ಕೆ ಕಮ್ಯುನಿಸ್ಟ್ ಗಿಡ ಅಂತ ನಾಮಕರಣ ಮಾಡಿದ್ದರು. ನಮ್ಮ ಹಿರಿಯರು ಅದರ ಬಗ್ಗೆ ಪರಂಚಿಕೊಳ್ಳುವುದನ್ನು ಕೇಳಿದ್ದೆ. ಆ ಮೇಲಿನ ಕೆಲವು ವರ್ಷಗಳ ನಂತರ ನಿಧಾನಕ್ಕೆ ಅದರ ಹಾವಳಿ ಕಡಿಮೆಯಾಗಿ ಬೇರೆ ಸಸ್ಯಗಳು ಆ ಜಾಗಗಳಲ್ಲಿ ತುಂಬಿದ್ದನ್ನು ಕಂಡಿದ್ದೇನೆ. ಸುಮಾರು 30 ವರ್ಷದ ಹಿಂದೆ ಶಾರೀರಿಕ ನಿತ್ರಾಣಕ್ಕಾಗಿ ನೆಲ ಉತ್ತರಣೆ ಗಿಡದ ಹಾಲು ಕಷಾಯವನ್ನು ನನ್ನ ಪತ್ನಿಗೆ ಪಂಡಿತರೊಬ್ಬರು ನೀಡಿದ್ದರು. ತೋಟದ ಎಲ್ಲೆಲ್ಲಿಯೂ ಅದರ ಬಳ್ಳಿಗಳು ಹುಲುಸಾಗಿದ್ದವು. ಹುಡುಕಾಡುವುದೇನೂ ಕಷ್ಟವಾಗಿರಲಿಲ್ಲ. ಮತ್ತಿನ 20 ವರ್ಷದ ನಂತರ ನನ್ನ ಬಂಧು ಒಬ್ಬರಿಗೆ ಅದು ಬೇಕಾಗಿತ್ತು. ಧಾರಾಳ ಕೊಡಬಲ್ಲೆ ಅಂತಂದು ಹುಡುಕಾಡಿದರೆ, ಬಳ್ಳಿಯೇ ಸಿಗಲೊಲ್ಲುದು. ತುಂಬಾ ಹುಡುಕಿನ ನಂತರ ಸಂಗ್ರಹಿಸಿ ಕೊಡಬೇಕಾಯಿತು. ಪ್ರಕೃತಿ ತನ್ನ ಅಗತ್ಯಕ್ಕೆ ಅದನ್ನು ಬೆಳೆಸಿತ್ತು,ನಂತರ ಸಂಪೂರ್ಣ ನಾಶವಾಗದಂತೆ ಅಲ್ಲೊಂದು ಇಲ್ಲೊಂದು ಬುಡವನ್ನು ಮಾತ್ರ ಉಳಿಸಿತ್ತು!. ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡ ಮೇಲೆ ತೋಟದ ಎಲ್ಲೆಲ್ಲಿಯೂ ಸಿಗುತ್ತಿದ್ದ, ತಿಮರೆ, ಹೊನಗಣೆ, ಮೈಥಲು ಮುಂತಾದ ಸಸ್ಯಗಳು ಕಾಣೆಯಾಗಿ ಕೇವಲ ಜರಿ ಗಿಡಗಳು ಮಾತ್ರ ಹುಟ್ಟಿಕೊಂಡವು. ಈಗಿತ್ತಲಾಗಿ ಅದರ ಪಾರಮ್ಯ ಕಡಿಮೆಯಾಗಿ ಅನೇಕ ವೈವಿಧ್ಯ ಸಸ್ಯಗಳು ತೋಟದಲ್ಲಿ ಚಿಗುರೂವುದನ್ನು ಕಾಣುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ತೋಟದ ಎಲ್ಲೆಂದರಲ್ಲಿ ಮಳೆಗಾಲದಲ್ಲಿ ಚಿಗುರುತ್ತಿದ್ದ ತುರುಚೆ ಗಿಡ ಇಂದು ಅಸ್ತಿತ್ವದಲ್ಲಿ ಇಲ್ಲದಂತಾಗಿದೆ. ಕಳೆದ ನಾಲ್ಕೈದು ವರ್ಷದಿಂದ ನನ್ನ ತೆಂಗಿನ ತೋಟದಲ್ಲಿ ಕಾಡುತ್ತಿದ್ದದ್ದು ನಾಚಿಕೆ ಮುಳ್ಳಿನ ಗಿಡ. ದನಗಳಿಗೆ ಮೇವು ಮಾಡಲು ಸಾಧ್ಯವಿಲ್ಲದಂತೆ ಅದು ಬೆಳೆಯುತ್ತಿತ್ತು. ಹುಲ್ಲು ಕಟಾವು ಯಂತ್ರದ ಮೂಲಕ ನಿವಾರಿಸಬೇಕಾಗಿತ್ತು .
ಕಳೆದ ಮಳೆಗಾಲದ ಕೊನೆಯಲ್ಲಿ ತೋಟದ ಮೂಲೆಯೊಂದರಲ್ಲಿ ಹೊಸದಾದ ಸಸ್ಯ ಒಂದನ್ನು ಗಮನಿಸಿದ್ದೆ. ಸುಮಾರು ಎರಡರಿಂದ ಎರಡುವರೆ ಅಡಿ ಎತ್ತರವಾಗಿ ಬೆಳೆಯುವ ಹುಲ್ಲು. ಅದು ಅಲ್ಲಿ ಹಾಗೆಯೇ ಉಳಿದಿತ್ತು ಬೇಸಿಗೆಯಲ್ಲಿ ಹೂವು ಬಂದುದನ್ನು ಗಮನಿಸಿದ್ದೆ. ಈ ವರ್ಷ ಪರಮಾಶ್ಚರ್ಯ! ಸುಮಾರು ಎರಡು ಎಕ್ರೆ ಜಾಗದಲ್ಲಿ ಅದೇ ಹುಲ್ಲಿನ ಪಾರಮ್ಯ. ನಾಚಿಕೆ ಮುಳ್ಳು ಹೆಚ್ಚು ಕಮ್ಮಿ ನಾಶದತ್ತ. ಸಂಪೂರ್ಣ ನಾಶವಾಗದಂತೆ ಪ್ರಕೃತಿಯ ಬಹಳ ಎಚ್ಚರಿಕೆಯ ಹೆಜ್ಜೆ ಅಂದರೆ ಅಲ್ಲೊಂದು ಇಲ್ಲೊಂದು ಬುಡ ಇದ್ದೇ ಇರುತ್ತದೆ. ಹುಲುಸಾಗಿ ಬೆಳೆಯುತ್ತಿದ್ದ ಕಾಳು ಮೆಣಸಿನ ಬಳ್ಳಿಗಳು ನಿಧಾನಕ್ಕೆ ರೋಗದಿಂದ ಸಾಯುವುದನ್ನು ಕಂಡಿದ್ದೇವೆ. ಕಡಿಮೆ ಇಳುವರಿಯಾದರೂ ಬಳ್ಳಿ ಉಳಿದರೆ ಸಾಕೆಂದು ಕಾಡು ಹಿಪ್ಪಲಿ ಕಶಿ ಗಿಡದತ್ತ ದೃಷ್ಟಿಯನ್ನು ಹರಿಸಿದ್ದೇವೆ.
ಈ ದೃಷ್ಟಿಯಲ್ಲಿ ಯೋಚಿಸಿದಾಗ ನನಗೆ ಕಂಡದ್ದು, ಅತಿಯಾದ ಅಡಿಕೆ ಕೃಷಿಯ ವಿಸ್ತರಣೆ ಪ್ರಕೃತಿಗೆ ಬೇಡವಾಗಿದೆಯೇನೋ? ಸಾಮ್ಯತೆಯನ್ನು ಗಮನಿಸಿ.ಎಷ್ಟೇ ಹಳದಿ ಎಲೆ ರೋಗದಿಂದ ತೋಟ ಕಾಡುತ್ತಿದ್ದರೂ, ಆ ಜಾಗದಲ್ಲಿಯೂ ರೋಗ ನಿರೋಧಕ ಮರಗಳು ಒಂದಷ್ಟು ಉಳಕೊಂಡಿದೆ ಎಂದರೆ, ಕಮ್ಯೂನಿಸ್ಟ್, ನಾಚಿಕೆ ಮುಳ್ಳು, ನೆಲ ಉತ್ತರಣೆ( ನಾನು ಗಮನಿಸಿದ್ದು ಮಾತ್ರ. ದೃಷ್ಟಿಗೆ ಗೋಚರವಾಗದ್ದು ಸಾವಿರಾರು ಇರಬಹುದು) ನಾಶವಾದಂತೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಅನಗತ್ಯ ಎಂಬುದನ್ನು ಪ್ರಕೃತಿಯೇ ಲಯದತ್ತ ಕೊಂಡೊಯ್ಯುತ್ತಿದೆಯೇ?ಎಂಬ ಭಯ ನನ್ನನ್ನು ಕಾಡಿತು.
ಕೋಟ್ಯಂತರ ವರ್ಷಗಳ ಪ್ರಕೃತಿಯ, ಸಾವಿರಾರು ವರ್ಷದ ಮಾನುಷ ಜೀವನದ ಇತಿಹಾಸದಲ್ಲಿ, 40 ವರುಷಗಳ ಕ್ರಿಯಾಶೀಲ ಬದುಕಿನಲ್ಲಿ, ಪ್ರಕೃತಿಯನ್ನು ಸಂಪೂರ್ಣ ಅರಿತವರಂತೆ ಕಪ್ಪು ಚುಕ್ಕಿಯನ್ನೇ ವಿಸ್ತರಿಸುತ್ತಾ ಹೋದರೆ, ಬಿಳಿ ಹಾಳೆ ಸಂಪೂರ್ಣ ಕಪ್ಪು ಅಗಲಾರದೆ? ಗಿಡಮರದ ಸಾಮರ್ಥ್ಯವನ್ನು ಉಪೇಕ್ಷಿಸಿ ನಮ್ಮ ಅಪೇಕ್ಷೆಯಾದ ಅಧಿಕ ಇಳುವರಿಯತ್ತ ಯೋಚಿಸಿದರೆ, ಪ್ರಕೃತಿ ಅಡಿಕೆಯನ್ನು ಉಪೇಕ್ಷಿಸದೆ ಇರುತ್ತಾಳೆಯೇ?
ಋತು ಚಕ್ರ ತಿರುಗುವುದು ಕಾಲನೆದೆ ಮರುಗುವುದು,
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು,
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ,
ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ.
ನಮ್ಮ ಗುರುವೂ ಹೇಳಿದಂತೆ, ತಿಮ್ಮ ಗುರುವೂ ಅಂದಂತೆ ಪ್ರಕೃತಿಯಲ್ಲಿ ಅದ್ಭುತ ಕೃಷಿ ಸತತವಾಗಿ ನಡೆಯುತ್ತಲೇ ಇರುತ್ತದೆ. ಸೃಷ್ಟಿ ನಿಯಮವನ್ನು ಕಾಣುವ ದೃಷ್ಟಿ ನಮ್ಮೆಲ್ಲರದೂ ಆಗಿರಲಿ ಎಂದು ಗುರುದ್ವಯರಿಗೆ ನಮಿಸುವೆ.