ರೂಬಿ ಮಲ್ಲೇಶ್ ಅವರು ಮೂಲತಃ ಕೃಷಿ ಕುಟುಂಬದ ಹಿನ್ನಲೆ ಇರುವವರಲ್ಲ. ಓದಿದ್ದೂ ಹತ್ತನೇ ತರಗತಿಯಷ್ಟೇ. ಜೀವನೋಪಾಯಕ್ಕೆ ರೆಸ್ಟೋರೆಂಟ್, ಕೂಲ್ ಡ್ರೀಂಗ್ಸ್ ಏಜೆನ್ಸಿ, ಅಗರಬತ್ತಿ ಫ್ಯಾಕ್ಟರಿ.. ಹೀಗೆ 33 ಬಗೆಯ ಉದ್ಯೋಗ/ಕೆಲಸದಲ್ಲಿ ತೊಡಗಿದ್ದವರು. ಎಲ್ಲಾ ಕಡೆಯೂ ಕಾರ್ಮಿಕರ ಸಮಸ್ಯೆ. ಎಲ್ಲವನ್ನೂ ಬಿಟ್ಟು ತುಳಿದಿದ್ದು ಕೃಷಿ ಹಾದಿಯನ್ನು.
ಕೃಷಿ ಸಂಕಲ್ಪ ಮಾಡಿದ್ದಾಯ್ತು. ಆದರೆ, ಸ್ವಂತದ್ದು ಅಂತಾ ತುಂಡು ಭೂಮಿಯೂ ಇಲ್ಲ. ಮೂರು ವರ್ಷದ ಕೆಳಗೆ ದೂಪದಹಳ್ಳಿ ಸಮೀಪ 6 ಎಕರೆ ಮಸಾರೆ ಭೂಮಿಯನ್ನು ವರ್ಷಕ್ಕೆ 90 ಸಾವಿರದಂತೆ 15 ವರ್ಷಕ್ಕೆ ಗುತ್ತಿಗೆ ಪಡೆದರು. ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಎಕರೆಗೆ 500 `ಮಹಾಗನಿ’ ಸಸಿ ನಾಟಿ ಮಾಡಿದರು. ಇದು ದೀರ್ಘಕಾಲಿಕ ಮರ ಬೆಳೆ. ನಡುವೆ ಚೆಂಡು ಹೂವು, ಕಲ್ಲಂಗಡಿ, ಕಾಯಿ-ಪಲ್ಲೆಗಳನ್ನು ವರ್ಷಗಳ ಕಾಲ ಬೆಳೆದರು. ಕಾರ್ಮಿಕರ ಸಮಸ್ಯೆ, ದರಗಳ ಏರಿಳಿತದಿಂದ ಕಂಗೆಟ್ಟರು.
ಬಹು ಬೆಳೆ ಆಯ್ಕೆ: ಮೂರು ಎಕರೆಯಲ್ಲಿ ವೈವಿಧ್ಯಮಯ ತೋಟಕಾರಿಕೆ ಬೆಳೆ ಬೆಳೆಯಲು ನಿರ್ಧಿರಿಸಿದರು. ಎರಡು ಬೋರ್ ವೆಲ್ ನಿಂದ ಬೆಳೆಗಳಿಗೆ ನೀರುಣಿಸುವ ಡ್ರಿಪ್ ಅಳವಡಿಸಿಕೊಂಡರು. 730 ಗುಂಪು ಏಲಕ್ಕಿ ಬಾಳೆ, 1800 ಅಡಿಕೆ, 1200 ನಿಂಬು , 80 ಅಂಜೂರ, 100 ಪೇರಲಾ, 30 ಸಪೋಟ ಬದುವಿಗೆ 120 ತೆಂಗು, ಕರಿಬೇವು, ತಾಳೆ, ನೇರಳೆ, ನುಗ್ಗೆ, ಸೀತಾಫಲ.. ಶಿಸ್ತುಬದ್ಧವಾಗಿ ಬೆಳೆಸಿದ್ದಾರೆ. ಇನ್ನುಳಿದ ಮೂರು ಎಕರೆಯಲ್ಲಿ ರೇಷ್ಮೆ ಸಾಕಣೆಗಾಗಿ ಹಿಪ್ಪುನೇರಳೆ ಬೆಳೆಸಿದರು. ಕೃಷಿ ಹೊಂಡ ಮಾಡಿ ಮೀನು ಸಾಕುತ್ತಿದ್ದಾರೆ. ಪ್ರತಿ ಹಂತದಲ್ಲೂ ಸಹಜ ಕೃಷಿ ಅಳವಡಿಸಿಕೊಂಡಿದ್ದಾರೆ.
ಮಣ್ಣೆಲ್ಲ ಹೊನ್ನು: ಅವರು ಬೇಸಾಯ ಮಾಡುವ ಹೊಲದ ಮಣ್ಣು ಟೀ ಪುಡಿಯಂತೆ ಕಪ್ಪು, ಮೃದು. ಹೊಲವನ್ನೆಲ್ಲ ಎರೆ ಹುಳು ಆವರಿಸಿವೆ. ಬೆಳೆಗಳ ಎಲೆಗಳು ಕಡು ಕಪ್ಪು ಹಸಿರಿನಿಂದ ಕೂಡಿವೆ. ಎಲ್ಲಾ ಬೆಳೆಗಳು ನಿರೀಕ್ಷೆ ಮೀರಿ ಫಲ ಕೊಡುತ್ತಿವೆ. `ಈ ಹೊಲದಲ್ಲಿ ಮೊದಲು ಮೊಣಕಾಲು ಮಟ ಹುಲ್ಲು ಬೆಳೆಯುತ್ತಿತ್ತು. ಪ್ರತಿ ಸಾರಿ ಬ್ರೆಷ್ ಕಟರ್ ನಿಂದ ಕಟ್ ಮಾಡಿ ಅಲ್ಲೇ ಬಿಡುತ್ತಿದ್ದೆ. ಇದೇ ಕಸುವು. ಕೊಟ್ಟಿಗೆ, ಕುರಿ ಗೊಬ್ಬರ, ಕೆರೆ ಮಣ್ಣು.. ಹೀಗೆ ಏನನ್ನೂ ಹಾಕುವುದಿಲ್ಲ’ ಅನ್ನುತ್ತಾರೆ ಮಲ್ಲೇಶ್. ಭಾರಿ ಮಳೆ ಬಂದರೂ ನೀರು ಕೆಲ ಹೊತ್ತಿನಲ್ಲೇ ಇಂಗುತ್ತದೆ. ಹೆಚ್ಚಾದ ನೀರು ಕೃಷಿಹೊಂಡ ಸೇರುತ್ತದೆ. ತ್ಯಾಜ್ಯವೆಲ್ಲ ಗೊಬ್ಬರ, ಮುಚ್ಚಿಗೆ ಆಗಿ ತೇವಾಂಶ ಕಾಪಿಡುತ್ತದೆ. ಹೀಗಾಗಿ ಇವರದ್ದು ಸೇರಿದಂತೆ ಸುತ್ತಲಿನ ಬೋರ್ ವೆಲ್ ಗಳು ಸುಸ್ಥಿತಿಯಲ್ಲಿವೆ.
ಶ್ರೀಗಳು ಪ್ರೇರಣೆ: ಬೆಳೆಸಿದ ಎಲ್ಲಾ ಬೆಳೆಯ ಬೆಳವಣಿಗೆ ಮತ್ತು ಇಳುವರಿ ಹುಬ್ಬೇರಿಸುವಂತೆ ಮಾಡಿದೆ. ` ನಾನು ಒಬ್ಬನೇ ಇದನ್ನೆಲ್ಲ ನಿರ್ವಹಣೆ ಮಾಡುತ್ತಿದ್ದೇನೆ. ಸಂಪೂರ್ಣ ಜೀರೋ ಕಲ್ಟಿವೇಶನ್. ನೈಸರ್ಗಿಕ ಕೃಷಿಯನ್ನು ಕನಿಷ್ಟ ವೆಚ್ಚದಲ್ಲಿ ವೈಜ್ಞಾನಿಕವಾಗಿ ಮಾಡುತ್ತಿದ್ದೇನೆ. ಕೋರಿಯನ್ ಸಿಸ್ಟ್ಂ ಲ್ಲಿ ಗೊಬ್ಬರ, ಔಷಧಿಗಳನ್ನು ಸ್ವತಃ ತಯಾರಿಸಿ ಕ್ರಮಬದ್ಧವಾಗಿ ಬಳಸುವೆ. ಇದಕ್ಕೆಲ್ಲ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿ, ವರ್ತೂರ್ ನಾರಾಯಣರೆಡ್ಡಿಯವರೇ ಪ್ರೇರಣೆ..’ ಎನ್ನುತ್ತಾರೆ ಮಲ್ಲೇಶ್.
ಮಕ್ಕಳಿಗೆ ಕೃಷಿ ಪಾಠ: ತಮಗೆ ಕೃಷಿ ಹಿನ್ನಲೆ ಇಲ್ಲದಿದ್ದರೂ ಮಕ್ಕಳಿಗೆ ಕೃಷಿ ಅನುಭವ, ಪಾಠ ಹೇಳುತ್ತಾರೆ ಮಲ್ಲೇಶ್. ಓದು-ಬರಹದೊಟ್ಟಿಗೆ ಹೊಲ ಮನೆ ಕೆಲಸಗಳಲ್ಲಿ ಭಾಗಿಯಾಗುವ ಇಬ್ಬರು ಗಂಡು ಮಕ್ಕಳು ಬಾಳೆ, ಕರಿಬೇವು, ಪಪ್ಪಾಯಿ, ನುಗ್ಗೆ, ಮೊಟ್ಟೆಯನ್ನು ಕೊಟ್ಟೂರಿನಲ್ಲಿ ಮಾರುತ್ತಾರೆ. ` ಮಕ್ಕಳಿಗೆ ಬೆವರಿನ ಬೆಲೆ, ಬದುಕುವ ರೀತಿ, ಕೃಷಿ ಪ್ರೀತಿ ಕಲಿಸುತ್ತೇನೆ. ಒಂದು ಪಕ್ಷ ಓದು ಕೈ ಹಿಡಿಯದಿದ್ದರೂ ಕೃಷಿ ಕೈ ಹಿಡಿಯಲಿದೆ ಎಂಬ ಆತ್ಮವಿಶ್ವಾಸ ಬಿತ್ತುವ ಉದ್ದೇಶ ನನ್ನದು…’ ಎನ್ನುತ್ತಾರೆ ಮಲ್ಲೇಶ್. ಅವರ ತೋಟದ ಸಾವಯವ, ತಾಜಾ ಉತ್ಪನ್ನಗಳನ್ನು ಕಾಯಂ ಆಗಿ ಖರೀದಿಸುವ ಗ್ರಾಹಕ ವರ್ಗ ಇದೆ. ನೇರ ಮಾರುಕಟ್ಟೆಯಿಂದಲೇ ಹೆಚ್ಚಿನ ಲಾಭ ಗಳಿಸುತ್ತಾರೆ.
ದಿನವೂ ಹಣದ ಹರಿವು: ತಿಂಗಳಿಗೊಮ್ಮೆ ಬಾಳೆ ಕಟಾವ್, ಕೃಷಿ ಹೊಂಡದಲ್ಲಿ ಸಾಕಿದ ಮೀನು ಮಾರಾಟ, ರೇಷ್ಮೆ ಕೃಷಿ, ಮೇಕೆ, 100 ಕೇರಳ ತಳಿಯ ನಾಟಿ ಕೋಳಿ ಮತ್ತು ಅವುಗಳ ಮೊಟ್ಟೆ, ನುಗ್ಗೆಕಾಯಿ, ನುಗ್ಗೆ ಸೊಪ್ಪು ಒಣಗಿಸಿ ಮಾಡಿದ ಪುಡಿ… ಹೀಗೆ ಬಹು ಉತ್ಪನ್ನಗಳಿಂದ ದಿನವೂ ಅವರಿಗೆ ಹಣ ಕೈ ಸೇರುತ್ತದೆ.
`ಇಷ್ಟೆಲ್ಲಾ ಮಾಡಿ ಒಪ್ಪಂದದಂತೆ ಹೊಲ ಬಿಡುವಾಗ್ಗೆ ಅಡಿಕೆ, ತೆಂಗು, ಅಲಸು.. ಬೆಳೆಗಳನ್ನೆಲ್ಲ ಹಾಗೆ ಬಿಟ್ಟು ಹೋಗುತ್ತೀರಾ..? ಎಂಬ ಪ್ರಶ್ನೆಗೆ ` ಮಾಲೀಕರಿಗೆ ಕೃತಜ್ಞತೆಯ ರೂಪವಾಗಿ ಅಷ್ಟೂ ಕೊಡದಿದ್ದರೆ ಹೇಗೆ..? ವಿನೀತರಾಗಿ ಹೇಳುತ್ತಾರೆ. ` ಮಲ್ಲೇಶ್ ಅವರ ಕೃಷಿ ಸಾಧನೆ ನೋಡಿ ಅಚ್ಚರಿ ಆಗುತ್ತದೆ. ಕೃಷಿ ಎಂದರೆ ಬರೀ ಋಣಾತ್ಮಕವಾಗಿ ಯೋಚಿಸುವವರಿಗೆ ಇಲ್ಲಿದೆ ಧನಾತ್ಮಕ ಪಾಠ..’ ಎನ್ನುತ್ತಾರೆ ಹೊಲದ ಮಾಲಿಕ ಗೂಳಿ ಮಲ್ಲಿಕಾರ್ಜುನ
Source : Social Network