ಎಂ.ಬಿ.ಎ ಮುಗಿಸಿ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪೆನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಕೃಷಿಗೆ ಮರಳಿ ಯಶಸ್ಸು ಕಂಡಿದ್ದಾರೆ.ವಿಜಯಪುರ ನಗರದ ಗ್ಯಾಂಗ್ ಬಾವಡಿ ಬಡಾವಣೆಯ ನಿವಾಸಿಯಾದ ಸಾಯಿನಾಥ್ ಶೇರಖಾನ್ ಈಗ ಆದರ್ಶ ಕೃಷಿನಾಗಿದ್ದಾರೆ.
ಮೂಲತಃ ವಿಜಯಪುರ ನಗರದ ಗ್ಯಾಂಗ್ ಬಾವಡಿ ಬಡಾವಣೆಯ ನಿವಾಸಿಯಾದ ಸಾಯಿನಾಥ್ ಶೇರಖಾನ್ ಎಂ.ಬಿ.ಎ ಮುಗಿಸಿ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪೆನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ 40 ಸಾವಿರ ಸಂಬಳವನ್ನು ಪಡೆಯುತ್ತಿದ್ದರು. ಕೃಷಿ ಅವರ ಆಸಕ್ತಿಯ ವಿಷಯವಾಗಿತ್ತು. ಹೀಗಾಗಿ ಕೆಲಸವನ್ನು ಬಿಟ್ಟು ಮರಳಿ ಊರಿಗೆ ಬಂದು ಈಗ ಯುವಜನಾಂಗಕ್ಕೆ ಮಾದರಿ ರೈತನಾಗಿದ್ದಾರೆ.
ತನ್ನ ಎಂಟು ಎಕರೆ ಜಮೀನಿನಲ್ಲಿ 6 ಎಕರೆಯಷ್ಟು ಕಬ್ಬು ಹಾಗೂ ಉಳಿದ ಎರಡು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಸಿ ಆಡು ಸಾಕುತ್ತಿದ್ದಾರೆ. ಒಂದು ತಿಂಗಳ ಆಡು ಮರಿಗೆ 16 ರಿಂದ 20 ಸಾವಿರ ಹಣ ಕೊಟ್ಟು ಖರೀದಿ ಮಾಡಿಕೊಂಡು ಹೋಗುತ್ತಾರೆ. ಜಿಲ್ಲೆಯ ರೈತರು ಮಾತ್ರವಲ್ಲ ಮಹಾರಾಷ್ಟ್ರ ರಾಜ್ಯದ ರೈತರು ಸಹಿತ ಸಾಯಿನಾಥ್ ಬಳಿಯಿಂದ ಆಡು ಖರೀದಿ ಮಾಡುತ್ತಾರೆ.
ತಿಂಗಳಿಗೆ ನಲವತ್ತು ಸಾವಿರ ಪಡೆಯುತ್ತಿದ್ದ ಸಾಯಿನಾಥ್ ಶೇರಖಾನ್ ಅವರು ಈಗ ಒಂದು ವರ್ಷದಲ್ಲಿ ಆಡುಗಳಿಂದ ಸುಮಾರು 10 ರಿಂದ 14 ಲಕ್ಷದಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಈ ಮಾದರಿಯಿಂದ ಹಲವಾರು ಯುವ ರೈತರು ಸಹ ಪ್ರೇರಣೆಯನ್ನು ಪಡೆದು ಬದುಕಲು ನೂರು ದಾರಿಯಿದೆ ಛಲವಿದ್ದರೆ ಸಾಕು ಎನ್ನುತ್ತಿದ್ದಾರೆ.