ಕಳೆದ ಐದು ದಿನಗಳಿಂದ ಭೂಮಿ ಕಂಪನದ ಅನುಭವ. ಎರಡು ದಿನಗಳಿಂದ ಧಾರಾಕಾರ ಮಳೆ. ಈ ಎರಡೂ ಕಾರಣಗಳಿಂದ ಕುಸಿಯುತ್ತಿರುವ ಧರೆ. ಈ ನಡುವೆ ನಿತ್ಯದ ಬದುಕು ಸಾಗಿಸುತ್ತಿರುವ ಚೆಂಬು ಗ್ರಾಮದ ಜನತೆ. ಶನಿವಾರ ರಾತ್ರಿ 8.15 ಕ್ಕೆ ಮತ್ತೊಮ್ಮೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ.ಈ ಮೂಲಕ ಏಳನೇ ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ.
ಸಂಪಾಜೆ, ಚೆಂಬು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭೂಕಂಪನವಾಗುತ್ತಿದೆ. ಈ ನಡುವೆ ಆಗಾಗ ಭಾರೀ ಮಳೆಯೂ ಸುರಿಯುತ್ತಿದೆ. ಭಾರೀ ಮಳೆಯ ಕಾರಣದಿಂದ ಭೂಕುಸಿತ ಸಂಭವಿಸುತ್ತಿದೆ. ಚೆಂಬು ಪ್ರದೇಶದ ಪೂಜಾರಿಗದ್ದೆಯಲ್ಲಿ ಶುಕ್ರವಾರ ರಾತ್ರಿ ಬರೆ ಕುಸಿತಗೊಂಡು ಗಿರಿಧರ ಎಂಬವರ ಮನೆಗೆ ಹಾನಿಯಾಗಿದೆ. ಮನೆಗೆ ಬಿದ್ದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಹಿಟಾಚಿ ಮೂಲಕ ತೆರವುಗೊಳಿಸಿ ಬಳಿಕ ಸ್ಥಳೀಯ ಯುವಕರು ಮಣ್ಣು ತೆರವಿಗೆ ನೆರವಾಗಿದ್ದಾರೆ. ಸ್ಥಳಕ್ಕೆ ಶಾಸಕ ಬೋಪಯ್ಯ ಭೇಟಿ ನೀಡಿದ್ದಾರೆ. ಚೆಂಬು ಗ್ರಾಪಂ ಸದಸ್ಯ ತೀರ್ಥರಾಮ ಅವರು ಗ್ರಾಮದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಮಳೆಯ ಕಾರಣದಿಂದ ಚೆಂಬು ಪ್ರದೇಶದ ಹಲವು ಕಡೆಗಳಲ್ಲಿ ಆಗಾಗ ಬರೆ ಕುಸಿತ ಉಂಟಾಗುತ್ತಿದೆ. ಸಣ್ಣಪುಟ್ಟ ಬರೆ ಕುಸಿತ ನಡೆಯುತ್ತಿದೆ. ಈ ನಡುವೆ ಆಗಾಗ ಭಾರೀ ಮಳೆಯೂ ಆಗುತ್ತಿದೆ. ಹಳ್ಳಗಳು ತುಂಬಿ ಹರಿಯುತ್ತಿದೆ.
ಶನಿವಾರ ಎರಡು ಬಾರಿ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆ 1.8 ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ರಾತ್ರಿ 8.15 ಕ್ಕೆ ಮತ್ತೆ ಭೂಕಂಪನದ ಅನುಭವವಾಗಿದೆ ಎಂದು ಹೇಳಿದ್ದಾರೆ.