ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ‘ ದುಡಿಯೋಣ ಬಾ ‘ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ , ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಬೇಸಿಗೆಯಲ್ಲಿ ಕೆಲಸಕ್ಕಾಗಿ ಜನರು ವಲಸೆ ಹೋಗುವುದನ್ನು ತಪ್ಪಿಸಲು , ಆಯಾ ಊರಿನಲ್ಲಿ ಕೆಲಸ ಒದಗಿಸಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಪ್ರಾರಂಭಿಸಲಾಗಿದ್ದು , ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಲಾಯಿತು.
ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಆಯೋಜಿಸಲಾಗಿದ್ದ ದುಡಿಯೋಣ ಬಾ ಕಾರ್ಯಕ್ರಮ ಉದ್ದೇಶಿಸಿ ಮಡಿಕೇರಿ ತಾಲ್ಲೂಕು ತಾಂತ್ರಿಕ ಸಂಯೋಜಕರು ಮಾತನಾಡಿದರು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿ ಹಾಗು ವೈಯಕ್ತಿಕ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಿ , ಕೂಲಿ ಮೊತ್ತ 289 ರಿಂದ 309 ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ನಿರ್ಮಲ ಭರತ್ ,ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಾರ್ಚ್ 15 ರಿಂದ ಜೂನ್ 30 ರವರೆಗೆ , ದುಡಿಯೋಣ ಬಾ ಅಭಿಯಾನದಲ್ಲಿ ಭಾಗವಹಿಸಿ ಅಕುಶಲ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡುವುದು ,ಯೋಜನೆಯಿಂದ ಹೊರಗುಳಿದ ಕುಟುಂಬವನ್ನು ಗುರುತಿಸಿ ಉದ್ಯೋಗ ಚೀಟಿಯನ್ನು ವಿತರಿಸುವುದು.ಅಭಿಯಾನದ ಮುಖ್ಯ ಉದ್ದೇಶವಾಗಿದೆ.ಸಂಪಾಜೆ ಗ್ರಾಮದ ಜನರು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ .ಇನ್ನಷ್ಟು ಯೋಜನೆಯ ಅವಕಾಶವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ ನವ ಭಾರತದ ನಾರಿ ‘ ಪ್ರಶಸ್ತಿಗೆ ಭಾಜನರಾದ ನರೇಗಾ ಫಲಾನುಭವಿ ಉದಯಕುಮಾರಿ ಸಂಪಾಜೆ ಯವರನ್ನು , ಗೌರವಿಸಲಾಯಿತು . ಹಾಗೂ ನರೇಗಾದಡಿ ನೂರು ದಿನ ಕೆಲಸ ಪೂರೈಸಿದ ಸೀತಮ್ಮ ಸುಂದರ , ಜಲಜಾ ಚಂದ್ರಶೇಖರ , ನಾರಾಯಣ ಕುಕ್ಕೇಟಿ ಅವರನ್ನು ಸನ್ಮಾನಿಸಲಾಯಿತು.
ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಮಾಹಿತಿಯುಳ್ಳ ಕರಪತ್ರವನ್ನು ಹಂಚಿ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ನಡೆದ ನರೇಗಾ ಕಾಮಗಾರಿ ಕುರಿತಾದ ವಿಡಿಯೋ ಡಾಕ್ಯುಮೆಂಟರಿಯನ್ನು , ಪ್ರದರ್ಶಿಸಲಾಯಿತು. ಹಾಗು ಜಾಬ್ ಕಾರ್ಡ್ ಅನ್ನು ಗ್ರಾ.ಪಂ ಅಧ್ಯಕ್ಷರು ,ಉಪಾಧ್ಯಕ್ಷರು , ಸದಸ್ಯರು ವಿತರಿಸಿದರು.
ನರೇಗಾ ಉದ್ಯಾನವನದಲ್ಲಿ ಸಸಿ ನೆಡುವಿಕೆ : ಪಂಚಾಯತ್ ಮುಂಭಾಗ ಹಾಗು ಬಿ.ಸಿ.ಎಂ ಹಾಸ್ಟೆಲ್ ಮುಂಭಾಗ ನಿರ್ಮಾಸುತ್ತಿರುವ ನರೇಗಾ ಉದ್ಯಾನವನದಲ್ಲಿ ಸಸಿಯನ್ನು ಜಾಬ್ ಕಾರ್ಡ್ ದಾರರು ನೆಟ್ಟರು.
ಪೌಷ್ಟಿಕ ತೋಟ ತರಕಾರಿ ಮಾರಾಟ : ನರೇಗಾದಲ್ಲಿ 1854 ರೂ ರಷ್ಟು ವೈಯಕ್ತಿಕ ಪೌಷ್ಟಿಕ ತೋಟ ನಿರ್ಮಿಸಲು ಅವಕಾಶವಿದ್ದು , ಪೌಷ್ಟಿಕ ತೋಟದಲ್ಲಿ ಬೆಳೆದ ಸೊಪ್ಪು , ತರಕಾರಿಯನ್ನು ಫಲಾನುಭವಿಗಳು ಮಾರಾಟಕ್ಕೆ ಇರಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಜನರು ತರಕಾರಿ ಖರೀದಿಯಲ್ಲಿ ತೊಡಗಿದ್ದರು.
ತಾಲೂಕು ಐ.ಇ.ಸಿ. ಸಂಯೋಕರಾದ ಅಕ್ಷಿತ ಕೆ.ಡಿ ನರೇಗಾ ಮಾಹಿತಿಯನ್ನು ಒದಗಿಸಿಕೊಟ್ಟರು .ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಸ್ವಾಗತಿಸಿ ನಿರೂಪಿಸಿದರು , ಕಾರ್ಯದರ್ಶಿ ಸೀತಾರಾಮ ವಂದಿಸಿದರು. ತಾಲೂಕು ಎಮ್.ಐ.ಎಸ್ ಸಂಯೋಜಕರು ಬಿನ್ಸಿ ಜಿ.ಯು , ಗ್ರಾ.ಪಂ ಉಪಾಧ್ಯಕ್ಷರು ಜಗದೀಶ್ , ಗ್ರಾ.ಪಂ ಸದಸ್ಯರು , ಪಂಚಾಯತ್ ಸಿಬ್ಬಂದಿ ವರ್ಗ , ಸ್ವಸಹಾಯ ಸಂಘದ ಸದಸ್ಯರು , ಗ್ರಾಮಸ್ಥರು ಹಾಜರಿದ್ದರು.