ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದಲ್ಲಿ ಸಂಜೀವಿನಿ ಸಂತೆ ನಡೆಯಿತು. ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗಿತ್ತು.
ಸಂತೆಯಲ್ಲಿ ಗ್ರಾಮೀಣ ಮಹಿಳೆಯರು ತಯಾರಿಸಿದ ಮೀನಿನ ಉತ್ಪನ್ನಗಳು, ಸಾಂಬಾರ ಪುಡಿ, ಕಷಾಯ ಪುಡಿ, ಹಪ್ಪಳ, ರೊಟ್ಟಿ, ಚಪಾತಿ, ಎಣ್ಣೆ, ಮಣ್ಣಿನ ದೀಪಗಳು, ಮನೆಯಲ್ಲಿ ತಯಾರಿಸಿದ ಸಿದ್ಧ ಉಡುಪುಗಳು ಸೇರಿದಂತೆ ವಿವಿಧ ಮನೆಬಳಕೆ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇಸೀಯ ಮತ್ತು ಶುದ್ಧ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಲಭಿಸಿತು.
ಇದೇ ವೇಳೆ ಮಹಿಳೆಯರು ಹಾಗೂ ಯುವಜನರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು. ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
ಗ್ರಾಹಕ ಚಂದ್ರಪೂಜಾರಿ ಮಾತನಾಡಿ, “ಇಲ್ಲಿನ ವಸ್ತುಗಳು ಶುದ್ಧ ಹಾಗೂ ದೇಸೀಯವಾಗಿರುವುದರಿಂದ ರುಚಿಕರವಾಗಿವೆ. ಗ್ರಾಮೀಣ ಮಹಿಳೆಯರ ಸ್ವಾವಲಂಬಿ ಬದುಕಿಗೆ ಇಂತಹ ಸಂತೆಯು ಅತ್ಯಂತ ಸಹಕಾರಿಯಾಗಿದೆ” ಎಂದರು.
ಸಂಜೀವಿನಿ ಸಂಘದ ರೇಖಾ , ಈ ಸಂತೆಯಿಂದ ಗ್ರಾಮೀಣ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ದೊರಕಿದ್ದು, ಉತ್ತಮ ವ್ಯಾಪಾರ ಹಾಗೂ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇಂತಹ ಸಂತೆಯು ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಚಂದ್ರ ಹೇಳುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




