ಸಾರಡ್ಕದಲ್ಲಿ ಕೃಷಿ ಹಬ್ಬ | ಅಡಿಕೆ ಮೌಲ್ಯವರ್ಧನೆಗೆ ಇನ್ನೊಂದು ಸೇರ್ಪಡೆ | ಕೃಷಿ ಗೋಷ್ಟಿಯಲ್ಲಿ ಹೊಸತನ |

January 28, 2025
11:25 PM

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಬಳಿಯ ಸಾರಡ್ಕದಲ್ಲಿ ಎರಡು ವರ್ಷಗಳಿಂದ ಕೃಷಿ ಹಬ್ಬ ನಡೆಯುತ್ತಿದೆ. ಸಾರಡ್ಕದ ಆರಾಧನಾ ಕಲಾಮಂದಿರದಲ್ಲಿ ಈ ಬಾರಿ ಕೃಷಿ ಹಬ್ಬ ಸಂಪನ್ನಗೊಂಡಿತು. ಬೆಳಗ್ಗೆ ಉದ್ಘಾಟನೆಯ ಬಳಿಕ ವಿವಿಧ ಕೃಷಿ ಗೋಷ್ಟಿಗಳು ನಡೆದವು. ಕೃಷಿಗೋಷ್ಟಿಯಲ್ಲಿ ಕೃಷಿಕರೇ ಹೆಚ್ಚಿನ ಮಾಹಿತಿ ನೀಡಿದ್ದರೆ, ಕೆಲವು ವಿಷಯ ತಜ್ಞರೂ ಮಾಹಿತಿ ನೀಡಿದ್ದರು. ಈ ಬಾರಿಯ ಕೃಷಿ ಹಬ್ಬದಲ್ಲಿ ಅಡಿಕೆಯ ಹೊಸದೊಂದು ಉತ್ಪನ್ನವು ಪ್ರದರ್ಶನಗೊಂಡಿತು, ಕೃಷಿ ಗೋಷ್ಟಿಯಲ್ಲಿ ಹೊಸತನವೊಂದನ್ನು ಅಳವಡಿಕೆ ಮಾಡಲಾಗಿತ್ತು. …..ಮುಂದೆ ಓದಿ….

Advertisement

ಕೃಷಿಕ ಹಾಗೂ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ ಅವರ ಶ್ರಮದಿಂದ ಎರಡನೇ ವರ್ಷವೂ ಕೃಷಿ ಹಬ್ಬ ಚೆನ್ನಾಗಿ ನಡೆಯಿತು. ಈ ಬಾರಿಯ ಕೃಷಿ ಹಬ್ಬದಲ್ಲಿ ಅಡಿಕೆಯ ಹೊಸದೊಂದು ಉತ್ಪನ್ನವನ್ನು ಹಬ್ಬದಲ್ಲಿ ಬೆಳಕಿಗೆ ಬಂದಿದೆ. ವೀಳ್ಯದೆಲೆ ಹಾಗೂ ಅಡಿಕೆಯ ಸಾರವನ್ನು ತೆಗೆದು ಅದನ್ನು ಮೌತ್‌ ವಾಶ್‌ ಗಾಗಿ ಮೌತ್‌ ಪ್ರೆಶ್ನರ್‌ ಆಗಿ ಬಳಸಬಹುದಾದ ಹೊಸ ಪ್ರಯತ್ನವೊಂದನ್ನು ರಾಕಾ ಇನಿಶೀಯೇಟಿವ್‌ ಅವರು ಮಾಡಿದ್ದಾರೆ. ಎಲೆ ಅಡಿಕೆಯ ಜಗಿದಾಗ ಆಗುವ ಅನುಭವ ಇಲ್ಲಿದೆ. ಈ ಉತ್ಪನ್ನ ಅಡಿಕೆಯ ಮೌಲ್ಯವರ್ಧನೆಗೆ ಹೊಸದೊಂದು ಸೇರ್ಪಡೆಯಾಗಿದೆ.

ಸಾರಡ್ಕ ಕೃಷಿ ಹಬ್ಬದಲ್ಲಿ ಈ ಬಾರಿಯ ಗೋಷ್ಟಿಗಳಲ್ಲಿ ಕೃಷಿಕರಿಗಾಗಿಯೇ ಸಮಯ ಮೀಸಲಿಡಲಾಗಿತ್ತು. ಮೊದಲ ಪ್ರಯತ್ನ ಇದಾದ್ದರಿಂದ ಕೃಷಿಕರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಮಾದರಿಯಲ್ಲಿ ಶಂಕರ ಸಾರಡ್ಕ ಅವರು ಅಟ್ಟದಿಂದ ಅಡಿಕೆ ಚೀಲವನ್ನು ಕೆಳಗಿಸಲು ತಾವು ಮಾಡಿರುವ ಸರಳ ಉಪಾಯದ ಬಗ್ಗೆ ಮಾಹಿತಿ ನೀಡಿದರು. ಹೆಚ್ಚಿನ ಕೃಷಿ ಗೋಷ್ಟಿಗಳಲ್ಲಿ ಕೃಷಿಕರಲ್ಲಿನ ಪೂರಕ ಮಾಹಿತಿ ಇರುವುದು ಕಾಣುತ್ತೇವೆ, ಆದರೆ ಅದನ್ನು ಹಂಚಿಕೊಳ್ಳಲು ಅವಕಾಶಗಳು ಇರುವುದಿಲ್ಲ. ಸೋಶಿಯಲ್‌ ಮೀಡಿಯಾಗಳಲ್ಲಿ ಹಾಕಿಕೊಳ್ಳಬಹುದಾದರೂ ಅವುಗಳು ಹೆಚ್ಚು ಫಲಪ್ರದವಾಗಲು, ಅಂತಹ ಕೆಲವು ಉಪಾಯಗಳು ಹೆಚ್ಚು ಬಲಗೊಳ್ಳಲು ವೇದಿಕೆಗಳ ಮೂಲಕ ಸಂವಾದ ನಡೆಯಬೇಕಿದೆ. ಹೀಗಾಗಿ ಈ ಬಾರಿಯ ಗೋಷ್ಟಿಯಲ್ಲಿ ಶಂಕರ ಸಾರಡ್ಕ ಅವರು ವೇದಿಕೆ ಸೃಷ್ಟಿಸಿದ್ದರು. ಆದರೆ ಈ ಅಂಶ ಕೃಷಿಕರಿಗೆ ಗಮನಕ್ಕೆ ಬಂದಿರಲಿಲ್ಲ. ಮುಂದೆ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ. ಮುಂದಿನ ಕೃಷಿ ಗೋಷ್ಟಿಗಳಲ್ಲಿ ಕೃಷಿಕರ ಮಾಹಿತಿಗಾಗಿಯೇ ಸ್ವಲ್ಪ ಸಮಯ ಮೀಸಲಿಡಬೇಕಿದೆ. ಈ ಮೂಲಕ ಕೃಷಿ ಮಾಹಿತಿಗಳನ್ನು ಹೆಚ್ಚು ಫಲಪ್ರದವಾಗಿ ಅಳವಡಿಸಲು ಅವಕಾಶಗಳು ಇವೆ.

ಕೃಷಿ ಹಬ್ಬವನ್ನು ಪದ್ಮಶ್ರೀ ಪ್ರಶಸ್ತಿಪುರಸ್ಕೃತರಾದ ಸತ್ಯನಾರಾಯಣ ಬೆಳೇರಿಯವರು ಉದ್ಘಾಟಿಸಿದರು. ಕ್ಯಾಂಪ್ಕೊ  ಉಪಾಧ್ಯಕ್ಷ ಶಂ.ನಾ ಖಂಡಿಗೆ, ನಿರ್ದೇಶಕ ಜಯಪ್ರಕಾಶನಾರಾಯಣ ತೊಟ್ಟೆತೋಡಿ, ಗ್ರಾಪಂ ಅಧ್ಯಕ್ಷ ರಾಘವ ಮಣಿಯಾಣಿ, ಅಬ್ದುಲ್ಲ ಮಾದುಮೂಲೆ, ಅನೂಪ್‌  ಮೊದಲಾದವರಿದ್ದರು. ಇದೇ ವೇಳೆ ಶಂಕರ ಸಾರಡ್ಕರು ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ನಂತರ ನಡೆದ ಗೋಷ್ಟಿಯಲ್ಲಿ  ಗೋನಂದಾಜಲದ ಬಗ್ಗೆ ಪ್ರವೀಣ ಸರಳಾಯ, ಬಿದಿರು ಕೃಷಿಯ ಬಗ್ಗೆ ರಾಮಪ್ರತೀಕ್‌ ಕರಿಯಾಲ, ಕಾರ್ಬನ್‌ ಕ್ರೆಡಿಟ್‌ ಬಗ್ಗೆ  ಕೈರಳಿ ರೈತ ಸೇವಾ ಸಂಸ್ಥೆಯ ಅಧಿಕಾರಿ ಶಿವಪ್ರಸಾದ ಎಸ್.ಎಂ. ಮಾತನಾಡಿದರು. ಕೇಶವ ಪ್ರಸಾದ ಮುಳಿಯ ಸಭಾಧ್ಯಕ್ಷತೆ ವಹಿಸಿದ್ದರು.

ನಂತರ ನಡೆದ ಕೃಷಿ ಗೋಷ್ಟಿಯಲ್ಲಿ ಕೂಲಿ ಸಮಸ್ಯೆಯನ್ನು ಕಡಿಮೆ ಮಾಡುವ ಪರಿಹಾರವಾಗಿ ಶ್ರೀಹರಿ ಭಟ್ ಸಜಂಗದ್ದೆಯವರು ಪಾತಾಳದಿಂದ ಮೇಲಕ್ಕೆ ಬರುವ ಅಡಿಕೆ ಅಥವಾ ಇನ್ನಿತರ ಭಾರದ ವಸ್ತುಗಳ ಸಾಗಾಟದ ರೋಪುವೇ ಸರಳ ತಂತ್ರಜ್ಞಾನದ ಬಗ್ಗೆ ತಾವು ಮಾಡಿರುವ ಅನುಭವದ ಬಗ್ಗೆ ಮಾತನಾಡಿದರು. ಯಾವತ್ತೂ ಯಂತ್ರಗಳು ಅನಿವಾರ್ಯ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತವೆ ಎನ್ನುವ ಶ್ರೀಹರಿ ಭಟ್‌ ಅವರು, ಆರಂಭದಲ್ಲಿ ಯೂಟ್ಯೂಬ್‌ ಮೂಲಕ ನೋಡಿರುವ ವಿಡಿಯೋವನ್ನು ನಮಗೆ ಬೇಕಾದ ಮಾದರಿಯಲ್ಲಿ ಅಳವಡಿಕೆ ಮಾಡಲಾಯಿತು ಎಂದರು. ಕೃಷಿಯಲ್ಲಿ ತೊಡಗಿಸಿಕೊಂಡ ಕೃಷಿಕನಿಗೆ ಆಯಸ್ಸು ಹಾಗೂ ಆರೋಗ್ಯ ಎರಡೂ ನೀಡುವುದು ಕೃಷಿಯೇ ಎನ್ನುತ್ತಾರೆ.(ಆಡಿಯೋ ಇದೆ…)

ಕೆರೆ ಉಳಿಸಿಕೊಳ್ಳುವ ಬಗ್ಗೆ ಮಾತನಾಡಿದ ಕೃಷಿಕ ಎ ಪಿ ಸದಾಶಿವ ಅವರು, ಕೆರೆಯ ಹೂಳೆತ್ತುವುದೇ ಈಗ ಕೃಷಿಕರಿಗೆ ಸಮಸ್ಯೆ. ಈ ಸಂದರ್ಭ ರಾಜಸ್ಥಾನದ ಮಂದಿ ಕಂಡುಕೊಂಡ ಮಾದರಿಯನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಮರು ವಿನ್ಯಾಸ ಮಾಡಿಕೊಂಡು ಸದಾಶಿವ ಅವರು ಕೆರೆ ಸ್ವಚ್ಛಗೊಳಿಸಿದ ಕಾರ್ಯದ ಬಗ್ಗೆ ಮಾತನಾಡಿದರು.(ಆಡಿಯೋ ಇದೆ…)

ತಂತ್ರಜ್ಞಾನವನ್ನು ಬಳಕೆ ಮಾಡಿ ಸುಲಭದಲ್ಲಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಕಿಸಾನ್ ಆಗ್ರೋ ಸಂಸ್ಥೆಯ ಅಭಿಜಿತ್‌ ಅವರು ಮಾಹಿತಿ ನೀಡಿದರು.

ಇಡೀ ದಿನದ ಕೃಷಿ ಹಬ್ಬದಲ್ಲಿ ಕೃಷಿಕರ ಜ್ವಲಂತ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕಂಡುಕೊಳ್ಳಬಹುದಾದ ತಂತ್ರಗಳ ಬಗ್ಗೆ ಚರ್ಚಿಸಲಾಯಿತು. ಕೃಷಿ ಬೆಳವಣಿಗೆಗೆ ಇಂತಹ ಹಬ್ಬಗಳ ಅಗತ್ಯ ಇದೆ. ಕೃಷಿಕರೇ ತಮ್ಮ ಅನುಭವದ ಮೂಲಕ ನೀಡುವ ಮಾಹಿತಿಗಳು ಹೆಚ್ಚು ಫಲಪ್ರದವಾಗಿರುತ್ತದೆ. ಹೀಗಾಗಿ ಸಾರಡ್ಕದ ಕೃಷಿಹಬ್ಬ ವಿಶೇಷ ಎನಿಸಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್
ಏಪ್ರಿಲ್ 2 ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿ
April 2, 2025
6:18 AM
by: ದ ರೂರಲ್ ಮಿರರ್.ಕಾಂ
ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group