ಬದುಕು ಪುರಾಣ

ಬದುಕು ಪುರಾಣ | ‘ಏನು ಶನಿ ಕಾಟವಪ್ಪಾ’!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಮನುಜಕೋಟಿಯು ‘ಶನಿ’ಯನ್ನು ಎಂದೂ ಧನಾತ್ಮಕವಾಗಿ ಕಂಡಿಲ್ಲ! ಆತ ಪೀಡೆಯನ್ನು ಕೊಡುವ ಗ್ರಹ ಎಂದೇ ಸ್ವೀಕರಿಸಿದ್ದಾರೆ. ಜ್ಯೋತಿಷಿಗಳು ‘ನಿಮ್ಮ ರಾಶಿಗೆ ಈಗ ಶನಿಯ ಪ್ರವೇಶವಾಗಿದೆ’ ಎಂದಾಗ ಹೆದರಿ, ನಡುಗಿ ಕಂಗಾಲಾಗಿ ‘ಪರಿಹಾರ ಏನು’ ಎಂದು ಕೇಳಿ, ಜ್ಯೋತಿಷಿಗಳು ಹೇಳಿದಂತೆ ತಕ್ಷಣ ಧಾರ್ಮಿಕ ವಿಧಿಗಳನ್ನು ಮಾಡಿಸುತ್ತಾರೆ. ಶನಿಯು ಎಲ್ಲರೊಳಗೂ ಪ್ರವೇಶಿಸಿ ಬದುಕಿನ ಹಳಿಯನ್ನು ಸರಿದೂಗಿಸುವಾಗ ಕಷ್ಟ, ಸುಖಗಳು ಸಾಮಾನ್ಯವೆಂದು ಜನರು ಅರ್ಥ ಮಾಡಿಕೊಳ್ಳುವುದಿಲ್ಲ.
ಬದುಕಿನ ಯಾನದಲ್ಲಿ ಶನಿಯನ್ನು ‘ತಮಗೆ ಹಿತವಾಗದ ವ್ಯಕ್ತಿ’ಯ ಮೇಲೆ ಆರೋಪಿಸುತ್ತೇವೆ. ‘ಅವನೊಬ್ಬ ಶನಿ ಮಾರಾಯ’ ಎಂದು ದೂರೀಕರಿಸುತ್ತೇವೆ. ‘ಶನಿ ಬಂದ ಹಾಗೆ ಬಂದು ಒಕ್ಕರಿಸಿದ,’ ಗೊಣಗಾಡುತ್ತೇವೆ. ಕಷ್ಟ ಬಂದಾಗ ‘ಈ ಶನಿ ಕಾಟದಿಂದ ಬಿಡುಗಡೆ ಯಾವಾಗ,’ ಪರಿತಪಿಸುತ್ತೇವೆ. ಉದ್ದೇಶಿಸಿದ ಕೆಲಸ ಆಗದೇ ಇದ್ದಾಗ ‘ಛೇ ಶನಿ ದೆಸೆ ಇರಬೇಕು” ಎನ್ನುತ್ತೇವೆ.
ಅದೊಂದು ಚಿಕ್ಕ ಕುಟುಂಬ. ಇಬ್ಬರು ಮಕ್ಕಳು. ಕೊನೆಯವನು ಜನಿಸಿದ ಬಳಿಕ ಯಾಕೋ ಕುಟುಂಬದ ಬದುಕಿನ ಹಳಿ ತಪ್ಪಿತು. ಕಾರಣ ಏನೇ ಇದ್ದರೂ, “ಈ ಶನಿ ಹುಟ್ಟಿದ ಮೇಲೆ ಕಷ್ಟಗಳನ್ನು ಅನುಭವಿಸುವಂತಾಯಿತು” ಎಂದು ಮಗನ ಮೇಲೆ ಕೆಂಗಣ್ಣು ಬೀರಿದ ಆ ಮುಖ ಮರೆಯಲು ಸಾಧ್ಯವಿಲ್ಲ.  ತನ್ನ ಮಗ ಶನಿಯಾದರೆ, ತಾನು ಸೂರ್ಯನಂತೆ ಎಂದು ಅಪ್ಪನಾದವನು ಯಾಕೆ ಯೋಚಿಸುವುದಿಲ್ಲ. ಇಲ್ಲೆಲ್ಲಾ ಶನಿಯನ್ನು ಋಣಾತ್ಮಕವಾಗಿಯೇ ಚಿತ್ರಿಸಿದ್ದಾರೆ. ಶನಿಯನ್ನು ದೇವರೆಂದು ಪೂಜಿಸಿ, ವಿವಿಧ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡಿಸುತ್ತಾ ಇರುವ ನಾವು, ಬದುಕಿನಲ್ಲಿ ಅವನನ್ನು ಕೆಟ್ಟದಾಗಿ ಕಾಣುತ್ತೇವೆ. ಇದು ತಪ್ಪೋ ಸರಿಯೋ ಎನ್ನುವ ಮಾತು ಬೇರೆ. ಪುರಾಣ ವ್ಯಕ್ತಿಗಳನ್ನು ಬದುಕಿನೊಳಗೆ ಸೇರಿಸಿಕೊಂಡಿರುವ ನಮ್ಮ ಹಿರಿಯರಲ್ಲಿರುವ ‘ಕೋಡ್ ವರ್ಡ್’ ನಿಜಕ್ಕೂ ಆಶ್ಚರ್ಯ.
ಕೋವಿಡ್ ಮೊದಲನೆಯ ಅಲೆಯಲ್ಲಿ ವಾಹಿನಿಗಳ ಬೊಬ್ಬಾಟದಿಂದಾಗಿ ಟಿವಿಯನ್ನು ಶಾಶ್ವತವಾಗಿ ಬಂದ್ ಮಾಡಿರುವವರ ಸಂಖ್ಯೆ ದೊಡ್ಡದಿದೆ. ಆ ಸಂದರ್ಭದಲ್ಲಿ ಒಂದು ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿ ದಾಖಲಾಗಿತ್ತು. ವಾಹಿನಿಗಳು ‘ಶನಿವಾರದ ಶನಿ’, ‘ಏನು ಶನಿ ಕಾಟವಪ್ಪಾ’, ‘ಕನ್ನಾಡಿಗೆ ಒಕ್ಕರಿಸಿದ ಶನಿ’.. ಹೀಗೆಲ್ಲಾ ಶೀರ್ಷಿಕೆ ನೀಡಿ ವಿಶೇಷ ಕಾರ್ಯಕ್ರಮಗಳನ್ನು ‘ಸೃಷ್ಟಿಸು’ತ್ತಿದ್ದುವು. ಕೊರೊನಾ ಸೋಂಕು ಜಾಸ್ತಿಯಾಗಿದೆ ಎನ್ನುವುದಕ್ಕೆ ‘ಶನಿ’ ಪರ್ಯಾಯ ಶಬ್ದವಾಗಿತ್ತು. ವೀಕ್ಷಕರಿಗೆ ಶನಿಯು ಯಾರೆಂಬ ವಿಚಾರವು ತಿಳಿದಿರಬೇಕೆಂದಿಲ್ಲ. ಶನಿ ಅಂದರೆ ಕಷ್ಟ, ಅಪಾಯ ಎನ್ನುವ ಸಂಗತಿಗಳು ಪಾರಂಪರಿಕವಾಗಿ ಮನೆಯೊಳಗೆ ತಿರುಗುತ್ತಿರುವುದರಿಂದ ಗ್ರಹಿಕೆ ಸುಲಭವಾಯಿತು.
ಒಂದೆರಡು ಗಂಟೆ ಮಳೆ ಜೋರಾಗಿ ಸುರಿಯುತ್ತಿದ್ದಾಗ , ‘ಎಂತಹ ಶನಿ ಮಳೆ, ನಮ್ಮ ಕೆಲಸ ಎಲ್ಲಾ ಹಾಳು’, ಮನೆಗೆ ಬರುವ ಅತಿಥಿಯ ವಾಹನ ಕೆಟ್ಟು ಹೋದಾಗ, ‘ಛೇ.. ಶನಿ ಹಿಡಿದ ಹಾಗೆ,’ ಪಡಿತರ ಪಡೆಯುವ ಸರದಿ ಸಾಲಿನಲ್ಲಿ ಕಿರಿಕ್ ಮಾಡಿದವನಿಗೆ, ‘ಆ ಶನಿ ಇಲ್ಲದೇ ಇರುತ್ತಿದ್ದರೆ ಪಡಿತರ ಬೇಗ ಸಿಗುತ್ತಿತ್ತು, ಯಕ್ಷಗಾನ ಪ್ರದರ್ಶನವೊಂದರಲ್ಲಿ ಜನರೇಟರ್ ಕೆಟ್ಟುಹೋದಾಗ, ‘ಛೇ.. ಎಂತಹ ಶನಿ ಗ್ರಹಚಾರ’ – ಇಲ್ಲೆಲ್ಲಾ ಶನಿಯನ್ನು ವ್ಯವಸ್ಥೆಯೊಂದಿಗೆ ಆರೋಪಿಸುವುದನ್ನು ಕಾಣುತ್ತೇವೆ. ಮಳೆ ಬಂದುದು ತಪ್ಪಾ, ಅತಿಥಿಯ ಹಳೆ ವಾಹನ ಕೆಟ್ಟದ್ದಕ್ಕೆ ಯಾರು ಕಾರಣ, ಪಡಿತರದ ಸಾಲಿನಲ್ಲಿ ಕಿರಿಕ್ ಮಾಡಿದವನನ್ನು ಅಲ್ಲೇ ವಿಚಾರಿಸಿಕೊಳ್ಳಬೇಕಿತ್ತು, ಜನರೇಟರ್ ಶನಿಯಿಂದಾಗಿ ಕೆಟ್ಟು ಹೋಯಿತಾ.. ಈ ಪ್ರಶ್ನೆಗಳಿಗೆಲ್ಲಾ ಉತ್ತರವಿಲ್ಲ. ಅದನ್ನು ಉತ್ತರದ ನಿರೀಕ್ಷೆಯಲ್ಲಿ ಪ್ರಶ್ನಿಸಲೂ ಬಾರದು. ಅದು ನಂಬುಗೆಯಷ್ಟೇ. ಎಷ್ಟೋ ಸಾರಿ ಬುದ್ಧಿಪೂರ್ವಕವಾಗಿ ಪದಗಳನ್ನು ಬಳಸಿರುವುದಿಲ್ಲ. ‘ಶನಿ ಅಂದರೆ ಕಷ್ಟ ಕೊಡುವವನು’ ಎನ್ನುವುದು ನಾಲಗೆಗೆ ಅಭ್ಯಾಸವಾಗಿ ಹೋಗಿದೆ!
ಬ್ರಾಹ್ಮಣನನ್ನು ‘ಶನಿ’ಗೆ ಹೋಲಿಸುವುದು ಬಹುತೇಕರಿಗೆ ಅಭ್ಯಾಸವಾಗಿದೆ. ತನ್ನ ಎದುರಿಗೆ ಬ್ರಾಹ್ಮಣನೊಬ್ಬ ಎದುರಾದ ಎಂದಿಟ್ಟುಕೊಳ್ಳಿ. ‘ಶನಿ ಬ್ರಾಹ್ಮಣ’ ಎಂದು ಗೊಣಗಾಡುತ್ತಾ, ಚೇಳು ಕಡಿದಂತೆ ಚಡಪಡಿಸುವ ಹತ್ತಾರು ವ್ಯಕ್ತಿಗಳ ಹತ್ತಿರದ ಪರಿಚಯವಿದೆ. ವಾಹನದಲ್ಲಿ ಬಂದವರಾದರೆ ವಾಹನವನ್ನು ಹತ್ತು ಮಾರು ಹಿಂದಕ್ಕೆ ಸರಿಸಿ ಮತ್ತೆ ಮುಂದುವರಿಯುತ್ತಾರೆ! ಸಾರ್ವಜನಿಕ ದಾರಿಯಲ್ಲಿ ಬ್ರಾಹ್ಮಣ ಮಾತ್ರ ಪಯಣಿಸುವುದಲ್ಲವಲ್ಲ. ಎಲ್ಲಾ ವರ್ಗದವರು, ಜಾತಿಯವರು, ಮತಸ್ಥರು ಪ್ರಯಣ ಮಾಡುತ್ತಾರೆ. ಹಾಗಿದ್ದರೆ ಇಂತಹ ನಂಬುಗೆಗಳು ಯಾಕೆ ಪ್ರಚಲಿತದಲ್ಲಿದೆ? ಎಂದೋ, ಯಾರಿಗೋ, ಏನೋ.. ಒಂದು ಘಟನೆ ನಡೆದುಹೋಗಿರುತ್ತದೆ. ಅದೇ ಮುಂದೆ ‘ಪರಂಪರೆ’ಯಾಗಿ ಮುಂದುವರಿಯುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಶನಿ ಗ್ರಹ’ದ ಸಂಚಾರದಿಂದ ಉಂಟಾಗುವ ಸುಖ, ದುಃಖಗಳ ಉಲ್ಲೇಖಗಳು ಸಿಗುತ್ತಿವೆ. ಶನಿ ದೋಷ ಪರಿಹಾರಕ್ಕಾಗಿ ‘ಶನೈಶ್ಚರ ವೃತ’, ‘ಶನಿಪೂಜೆ’ ಮಾಡುವಂತಹ ವ್ಯವಸ್ಥೆಗಳು ದೇವಾಲಯಗಳಲ್ಲಿದೆ. ಶಾಸ್ತ್ರದಲ್ಲಿ ‘ಸಾಡೇಸಾಥ್’ ಇರುವ ನಕ್ಷತ್ರದವರು ತುಂಬಾ ಎಚ್ಚರಲ್ಲಿರಬೇಕೆಂಬ ಸೂಚನೆಗಳಿವೆ. ಏನಿದ್ದರೂ ಅವರವರ ಭಾವಕ್ಕೆ.. ಭಕುತಿಗೆ.. ವರ್ತಮಾನದ ಕಾಲಘಟ್ಟದಲ್ಲಿ ಯಾವುದನ್ನು ಸಮರ್ಥಿಸಿಕೊಂಡರೂ ಅದಕ್ಕೆ ಎಡ-ಬಲವನ್ನು ಥಳಕು ಹಾಕುವ ಮನಸ್ಸುಗಳು ನೂರಾರು ಇಲ್ವಾ.
ಆ ‘ಶನಿ’ ದೇವನ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ?:  ವಿಶ್ವಕರ್ಮನ ಮಗಳು ಸಂಜ್ಞಾ ಸೂರ್ಯನ ಪತ್ನಿ. ವೈವಸ್ವತ ಮನು, ಯಮಧರ್ಮ ಮತ್ತು ಯಮುನಾ  ಮಕ್ಕಳು.  ಅವಳಿಗೆ ಪತಿಯ ತೇಜಸ್ತೋಮವನ್ನು ಸಹಿಸಲು ಅಸಾಧ್ಯವಾಯಿತು. ಅವನೊಡನೆ ಜೀವಿತ ಕಷ್ಟವಾಯಿತು. ಬೇರೆ ಹಾದಿ ಕಾಣದೆ ತನ್ನಂತೆಯೇ ರೂಪವನ್ನು ತನ್ನ ಛಾಯೆಯಲ್ಲಿ ರೂಪಿಸಿದಳು. ಅವಳು ಛಾಯಾದೇವಿ.
“ನಾನು ತಂದೆಯ ಮನೆಗೆ ಹೋಗುವೆ. ನೀನು ನನ್ನ ಸ್ಥಾನದಲ್ಲಿದ್ದು ಸೂರ್ಯನ ಜತೆ ಸಂಸಾರ ಮಾಡು. ನನ್ನ ಮಕ್ಕಳನ್ನು ಪ್ರೀತಿಯಿಂದ ರಕ್ಷಿಸು. ಈ ವಿಚಾರ ಪತಿದೇವರಿಗೆ ಹೇಳದಿರು,” ಎಂದು ಛಾಯೆಗೆ ಅರುಹಿದಳು. “ನನ್ನ ಪತಿ ಕೂದಲನ್ನು ಹಿಡಿದು ಎಳೆದು ದಂಡಿಸುವ ಸಂದರ್ಭ ಬಂದಾಗ ಮಾತ್ರ ನಿಜಸ್ಥಿತಿಯನ್ನು ಹೇಳುವೆ. ಅದರ ಹೊರತು ಗೌಪ್ಯತೆಯನ್ನು ಕಾಪಾಡುತ್ತೇನೆ.” ಎಂದು ವಾಗ್ದಾನ ನೀಡಿದಳು.
ಸೂರ್ಯದೇವನು ಛಾಯೆಯನ್ನು ಸಂಜ್ಞಾಳೆಂದು ಭಾವಿಸಿ ಅವಳೊಡನೆ ಸಂಸಾರ ಮಾಡಿದ ಫಲವಾಗಿ ಇಬ್ಬರು ಗಂಡು ಮಕ್ಕಳು ಜನಿಸಿದರು. ಒಬ್ಬ ಸಾವಣ್ರ್ಯಮನು, ಮತ್ತೊಬ್ಬ ಶನೈಶ್ಚರ. ಸಹಜವಾಗಿ ತನ್ನ ಮಕ್ಕಳ ಮೇಲೆ ಪ್ರೀತಿ ಹೆಚ್ಚಾಗಿ, ಸಂಜ್ಞೆಯ ಮಕ್ಕಳ ಮೇಲೆ ಒಲವು ಕಡಿಮೆಯಾಯಿತು. ಎಲ್ಲವನ್ನೂ ಸಹಿಸುತ್ತಿದ್ದ ಯಮನು ಒಂದಿನ ‘ನಿನ್ನನ್ನು ಒದ್ದು ಹಾಕುವುದಾಗಿ’ ಗದರಿಸಿದ. ಕ್ರೋಧಗೊಂಡ ಛಾಯೆ ‘ನಿನ್ನ ಕಾಲು ಬಿದ್ದು ಹೋಗಲಿ’ ಎಂದು ಶಪಿಸಿದಳು. ಯಮನು ಸೂರ್ಯನಿಗೆ ದೂರಿತ್ತ.
ಜ್ಞಾನದೃಷ್ಟಿಯಿಂದ ಎಲ್ಲವನ್ನೂ ಗ್ರಹಿಸಿದ ಸೂರ್ಯ ಛಾಯೆಯ ಕೂದಲನ್ನು ಜಗ್ಗಿ ‘ಯಾರು ನೀನು, ನಿಜ ಹೇಳು’ ಎಂದಾಗ, ನಡೆದ ವಿಚಾರವನ್ನೆಲ್ಲಾ ಅರುಹಿದಳು. ಅಸಹನೆಗೊಂಡ ಸೂರ್ಯನು ಮಾವನಾದ ವಿಶ್ವಕರ್ಮನಲ್ಲಿಗೆ ತೆರಳಿದ. “ನಿನ್ನ ತೇಜಸ್ಸನ್ನು ಸಹಿಸಲಾಗದೆ ಉತ್ತರ ಕುರು ದೇಶದಲ್ಲಿ ತಪಸ್ಸನ್ನಾಚರಿಸುತ್ತಿದ್ದಾಳೆ.” ಎನ್ನುವ ವಿಚಾರವನ್ನು ತಿಳಿದ ಸೂರ್ಯ ಕುರುದೇಶವನ್ನು ತಲಪಿದಾಗ, ಸಂಜ್ಞೆಯು ಕುದುರೆ ರೂಪದಿಂದ ಹುಲ್ಲು ಮೇಯುತ್ತಿರುತ್ತಾಳೆ. ಸೂರ್ಯನು ಅಶ್ವವಾಗಿ ರೂಪಾಂತರಗೊಂಡ. ಅಶ್ವರೂಪಿ ದಂಪತಿಗಳ ದಾಂಪತ್ಯದ ಫಲವಾಗಿ  ‘ನಾಸತ್ಯ, ದಸ್ರ’ ಎನ್ನುವ ಮಕ್ಕಳು ಜನಿಸಿದರು. ಇವರೇ ಅಶ್ಚಿನಿ ದೇವತೆಗಳು.
ಮುಂದೆ ಯಮಧರ್ಮನು ದಕ್ಷಿಣ ದಿಕ್ಕಿನ ಅಧಿಪತಿಯಾದನು. ಸಾವರ್ಣಿಮನುವು ಸಾವರ್ಣಿ ಮನ್ವಂತರಕ್ಕೆ ಅಧಿಪತಿಯಾದನು. ಶನೈಶ್ಚರ ನವಗ್ರಹಗಳಲ್ಲಿ ಒಂದು ಗ್ರಹವಾದ. ಯುಮನೆಯು ನದಿಯಾದಳು. ಸೂರ್ಯನ ತೇಜಸ್ಸನ್ನು ಕುಗ್ಗಿಸಲು ವಿಶ್ವಕರ್ಮನು ಸಾಣೆ ಹಿಡಿದಾಗ, ಆ ತೇಜಸ್ಸಿನ ತುಣುಕುಗಳಿಂದ ‘ವಿಷ್ಣು’ ಚಕ್ರವನ್ನು ನಿರ್ಮಿಸಿದ. (ಇದು ಬ್ರಹ್ಮ ಪುರಾಣದ ಕತೆ)
ಹೀಗೆ ಶನಿಯು ನವಗ್ರಹಗಳಲ್ಲಿ ಒಂದು ಗ್ರಹವಾಗಿ ಪ್ರಪಂಚದ ಎಲ್ಲಾ ಜನರು ಮರೆಯದಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗೆ ಪ್ರತ್ಯೇಕ ಸ್ಥಾನ. ಯಾಕೋ ಏನೋ ‘ಆತ ಕ್ಷುದ್ರ ಗ್ರಹ’ ಎಂದೇ ಜನರು ಭಾವಿಸಿದ್ದಾರೆ. ಶನಿ ಕೆಟ್ಟವನಲ್ಲ. ಒಳ್ಳೆಯ ಕೆಲಸವನ್ನು ಮಾಡಿದ ಸಜ್ಜನರಿಗೆ ಒಳಿತನ್ನು ಮಾಡುತ್ತಾನೆ. ಅಂದರೆ ಕರ್ಮಕ್ಕ ತಕ್ಕ ಫಲವನ್ನು ನೀಡುತ್ತಾನೆ ಎನ್ನುವ ನಂಬುಗೆ.
ಶನಿ ದೇವಾಲಯ
‘ಶನಿ’ ಪರಮಾತ್ಮನ ದೇವಾಲಯವು ದೇಶದ ಉದ್ದಗಲದಲ್ಲೂ ಕಾಣಬಹುದು.
  • ದೆಹಲಿಯ ಛತ್ತರ್‍ಪುರದಲ್ಲಿದೆ, ಶನಿಧಾಮ ದೇವಾಲಯ. ವಿಶ್ವದ ಅತಿ ಎತ್ತರದ ಶನಿ ದೇವನ ಪ್ರತಿಮೆ ಇಲ್ಲಿನ ಆಕರ್ಷಣೆ.
  • ದೆಹಲಿಯ ಮೆಹ್ರೌಲಿಯ ಶನಿ ದೇವನ ವಿಗ್ರಹವು ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ. ಇಲ್ಲಿ ಶನಿದೇವನು ಒಂದು ವಿಗ್ರಹದಲ್ಲಿ ರಣಹದ್ದಿನ ಮೇಲೆ ಮತ್ತು ಇನ್ನೊಂದನ್ನು ಎಮ್ಮೆಯ ಮೇಲಿಟ್ಟು ಸವಾರಿ ಮಾಡುವ ಚಿತ್ರಣವಿದೆ.
  • ಮಹಾರಾಷ್ಟ್ರದಲ್ಲಿರುವ ಶನಿದೇವನ ಸಾನ್ನಿಧ್ಯಕ್ಕೆ ದೇವಾಲಯದಂತಹ ಕಟ್ಟಡ, ಗೋಪುರಗಳಿಲ್ಲ. ವಿಗ್ರಹವು ಸುಮಾರು ಐದು ಅಡಿ ಒಂಭತ್ತು ಇಂಚು ಎತ್ತರ ಮತ್ತು ಸುಮಾರು ಒಂದು ಅಡಿ ಆರು ಇಂಚು ಅಗಲವಿದೆಯಂತೆ.
  • ಇಂದೋರಿನಲ್ಲಿದೆ, ವಿಶ್ವದ ಅತ್ಯಂತ ಹಳೆಯ ಶನಿ ದೇವಾಲಯ. ಇಲ್ಲಿ ಶನಿದೇವನನ್ನು ಸಿಂಧೂರದಿಂದ ಅಲಂಕರಿಸಲಾಗುತ್ತದೆ.
  • ಉತ್ತರ ಪ್ರದೇಶದ ಪ್ರತಾಪಗಢದಲ್ಲಿರುವ ‘ಶನಿದಾಮ’ ಪವಾಡಗಳಿಂದ ಕೂಡಿದ ದೇವಾಲಯ. ಪ್ರತಿ ಶನಿವಾರ ಐವತ್ತಾರು ಬಗೆಯ ಪ್ರಸಾದಗಳನ್ನು ಅರ್ಪಿಸಲಾಗುತ್ತದೆ.

(ಕೃಪೆ : ಜಾಲತಾಣ)

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 26-03-2025 | ಇಂದೂ ಕೆಲವು ಕಡೆ ಗಾಳಿ ಸಹಿತ ಮಳೆ ಸಾಧ್ಯತೆ | ಮಾ.27 ರಿಂದ ಮಳೆ ಕಡಿಮೆ |

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ…

9 hours ago

ಸಾಕೆನ್ನಿಸದಷ್ಟು ಎತ್ತರದ ಅಪೇಕ್ಷೆಗಳು, ಜೀವನವೇ ಸಾಕೆನ್ನಿಸುವ ಸಾವುಗಳು

ವಾಸ್ತವಿಕವಾಗಿ ಈ ಪ್ರಪಂಚದಲ್ಲಿ ಯಾರೂ ಏಕಾಂಗಿಗಳಲ್ಲ. ನಮಗೆ ಯಾವುದೇ ಸ್ವಂತ ನಿರ್ಧಾರಗಳ ಸಮರ್ಪಕತೆಯನ್ನು…

13 hours ago

ಕಂದಕ ಬದು ನಿರ್ಮಾಣ ಕುರಿತ ಕಾರ್ಯಾಗಾರ | ಬದು ನಿರ್ಮಾಣದಿಂದ ಮಳೆ ನೀರು ಪೋಲು ನಿಯಂತ್ರಣ |

ಜಲಸಂರಕ್ಷಣೆಗೆ ವಿವಿಧ ಪ್ರಯತ್ನ ನಡೆಯುತ್ತಿದೆ. ತಾಪಮಾನ ಏರಿಕೆಯಾದಂತೆ ಅಂತರ್ಜಲಮಟ್ಟವೂ ಕುಸಿತವಾಗುತ್ತಿದೆ. ಇಂತಹ ಸಮಯದಲ್ಲಿ…

15 hours ago

ಹಾಸನ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ | ಸೆರೆ ಹಿಡಿದ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ

ಹಾಸನ ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳ ಜನರಿಗೆ ಆತಂಕ ಸೃಷ್ಟಿಸಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿದು…

15 hours ago

ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು  ಕಾರ್ಯಾಚರಣೆ

ಕೋಲಾರ ತಾಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು …

15 hours ago

ಕೃಷಿ ವಿಜ್ಞಾನ ಕೇಂದ್ರದಲ್ಲಿ  ಸಸ್ಯ ತಳಿಗಳ ಸಂರಕ್ಷಣೆ ತರಬೇತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ…

15 hours ago