11 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕು.ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸುವ ಮೂಲಕ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣವನ್ನು ಮರುತನಿಖೆ ಮಾಡಬೇಕು ಮತ್ತು ನಿರ್ದೋಷಿ ಸಂತೋಷ್ ರಾವ್ ಅವರಿಗಾದ ನಷ್ಟವನ್ನು ಭರಿಸಿ ಪರಿಹಾರಕ್ಕಾಗಿ ಆಗ್ರಹಿಸಿ ಪುತ್ತೂರಿನಲ್ಲಿ ಅಭಿನವ ಭಾರತ ಮಿತ್ರ ಮಂಡಳಿ ಪುತ್ತೂರು ಮತ್ತು ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಆ.28 ರಂದು ಜನಜಾಗೃತಿ ಸಭೆ ಮತ್ತು ಜನಜಾಗೃತಿ ಮೆರವಣಿಗೆ ನಡೆಯಲಿದೆ ಎಂದು ಅಭಿನವ ಭಾರತ ಮಿತ್ರ ಮಂಡಳಿಯ ಪ್ರವರ್ತಕ ದಿನೇಶ್ ಜೈನ್ ತಿಳಿಸಿದ್ದಾರೆ.
ಅವರು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ.28 ರಂದು ಸಂಜೆ ಗಂಟೆ 3 ಗಂಟೆಗೆ ದರ್ಬೆಯಿಂದ ಮೆರವಣಿಗೆ ಮೂಲಕ ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಬೃಹತ್ ಜನಜಾಗೃತಿ ಸಭೆ ನಡೆಯಲಿದೆ. ಪ್ರಜಾಪ್ರಭುತ್ವ ವೇದಿಕೆಯ ಮಹೇಶ್ ಶೆಟ್ಟಿ ತಿಮರೋಡಿ, ಪ್ರವೀಣ್ ವಾಲ್ಕೆ, ಪ್ರಸಾದ್ ಅತ್ತಾವರ ಅವರು ಜನಜಾಗೃತಿ ವೇದಿಕೆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜನಜಾಗೃತಿ ಸಭೆಗೂ ಮುಂದೆ ಸಂಜೆ ಗಂಟೆ 3ಕ್ಕೆ ದರ್ಬೆಯಿಂದ ಮೆರವಣಿಗೆ ಹೊರಡಲಿದೆ. ಮೆರವಣಿಗೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು ಎಂದು ನಿರೀಕ್ಷಣಾ ಮಂದಿರ ಬಳಿಯಿಂದ ಸಂತ ಫಿಲೋಮಿನಾ ಕಾಲೇಜು ತನಕದ ರಸ್ತೆಯು ಒಂದು ಬದಿಯಲ್ಲಿ ಎಲ್ಲರು ಸೇರಲಿದ್ದು ಅಲ್ಲಿಂದ ದರ್ಬೆ ವೃತ್ತಕ್ಕೆ ಬಂದು ಮೆರವಣಿಗೆ ಆರಂಭಂಗೊಳ್ಳಲಿದೆ. ರಸ್ತೆಯುದ್ದಕ್ಕೂ ಒಂದು ಬದಿಯಿಂದ ಮೆರವಣಿಗೆ ಮತ್ತೊಂದು ಬದಿಯಿಂದ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಎಲ್ಲೂ ಕೂಡಾ ರಸ್ತೆ ತಡೆ, ಬಂದ್ ಮಾಡದೆ ಮೆರವಣಿಗೆ ದರ್ಬೆಯಿಂದ ಬಸ್‌ನಿಲ್ದಾಣದ ಬಳಿಯಿಂದ ಮುಖ್ಯರಸ್ತೆಯಾಗಿ ಪ್ರಧಾನ ಅಂಚೆಕಚೇರಿಯ ಬಳಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಾಗಿ ಸಂಜೆ ಗಂಟೆ 4ಕ್ಕೆ ಸರಿಯಾಗಿ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಅವರಣದಲ್ಲಿ ಜನಜಾಗೃತಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಬೆಳ್ತಗಂಡಿ ಪ್ರಜಾ ಪ್ರಭುತ್ವ ವೇದಿಕೆಯ ಅನಿಲ್ ಕುಮಾರ್ ಅವರು ಮಾತನಾಡಿ ಸಂತೋಷ್ ರಾವ್ ಅವರನ್ನು ಟಾರ್ಗೆಟ್ ಮಾಡಿ ತನಿಖೆ ನಡೆಸಲಾಗಿದೆ. ಬಳಿಕ ಅವರು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ನಾವು ಹೋರಾಟ ನಡೆಸುತ್ತಾ ಬಂದಿದ್ದೇವೆ. ಸೌಜನ್ಯ ಪ್ರಕರಣದಲ್ಲಿ ಅತ್ಯಾಚಾರ ಮಾಡಿದವರು ಯಾರು, ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡಿದವರು ಯಾರು ಇದ್ದಾರೋ ಅದು ಜಗತ್ತಿಗೆ ಗೊತ್ತಾಗಬೇಕು. ಆ ಪ್ರಕರಣಕ್ಕೆ ನ್ಯಾಯ ಸಿಗಬೇಕು. ಆ ಪ್ರಕರಣಕ್ಕೆ ಜನರೇ ಮಾತನಾಡಬೇಕು. 11 ವರ್ಷಗಳಿಂದ ಈ ಪ್ರಕರಣಕ್ಕೆ ನ್ಯಾಯ ಒದಗಿಸದೆ ಇರಲು ಕಾರಣ ಯಾರು. ಪ್ರಕರಣವನ್ನು ಮುಚ್ಚಿ ಹಾಕಿದವರು ಯಾರು, ನಿಜವಾದ ಆರೋಪಿಗಳನ್ನು ಬಿಟ್ಟವರು ಯಾರು ಎಂಬುದು ಮುಖ್ಯ. ಒಟ್ಟಿನಲ್ಲಿ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಭಿನವ ಭಾರತ ಮಿತ್ರ ಮಂಡಳಿಯ ಪ್ರವರ್ತಕರಾದ ನವೀನ್ ಕುಲಾಲ್ ಮತ್ತು ಧನ್ಯ ಕುಮಾರ್ ಬೆಳಂದೂರು ಉಪಸ್ಥಿತರಿದ್ದರು.