ಸೌಜನ್ಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆಯಾಗಬೇಕು ಎಂದು ಒತ್ತಾಯಿಸಿ ಭಾನುವಾರ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸಹಿತ ನೇತ್ರಾವತಿ ಸ್ನಾಘಟ್ಟದಿಂದ ಧರ್ಮಸ್ಥಳದಲ್ಲಿ ಪ್ರವೇಶದ್ವಾರದ ವರೆಗೆ ಶಿವಪಂಚಾಕ್ಷರಿ ಪಠಣದೊಂದಿಗೆ ಪಾದಯಾತ್ರೆಯಲ್ಲಿ ಬಂದು ಬಳಿಕ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಬಂದು ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಸೌಜನ್ಯ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಉಗ್ರ ಶಿಕ್ಷೆ ನೀಡಬೇಕು. ತನ್ಮೂಲಕ ಕೊಲೆಯಾದ ಸೌಜನ್ಯ ಆತ್ಮಕ್ಕೆ ಶಾಂತಿ ದೊರಕುವಂತಾಗಬೇಕು ಎಂದು ಕುಸುಮಾವತಿ ಕಣ್ಣೀರು ಸುರಿಸಿ ಅಣ್ಣಪ್ಪಸ್ವಾಮಿ ಪದತಲದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಇದೇ ವೇಳೆ ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಮತ್ತು ಉದಯ ಜೈನ್, ಅಣ್ಣಪ್ಪಸ್ವಾಮಿ ಬೆಟ್ಟದ ತಳದಲ್ಲಿ ಪ್ರಾರ್ಥನೆ ಸಲ್ಲಿಸಿ ಸೌಜನ್ಯ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಆಣೆಪ್ರಮಾಣ ಮಾಡಿದರು. ತಮ್ಮ ಬಗ್ಗೆ ಅಪಪ್ರಚಾರವಾಗುತ್ತಿದೆ ನೈಜ ಆರೋಪಿ ಪತ್ತೆಯಾಗಿ ಉಗ್ರಶಿಕ್ಷೆ ನೀಡಬೇಕು ಎಂದರು.
ಧೀರಜ್ ಕೆಲ್ಲ ಮಾತನಾಡಿ ತಾವು ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ.
ತಾವು ಯಾವುದೇ ರೀತಿಯ ತನಿಖೆಗೆ ಸಿದ್ಧರಿದ್ದೇವೆ. ತಮ್ಮ ಸಂಸಾರದ ಬಗ್ಯೆಯೂ ಮಾಧ್ಯಮದವರು ಕಾಳಜಿ ವಹಿಸಿ ಅಪಪ್ರಚಾರ ಮಾಡಬಾರದು ಎಂದು ಸಲಹೆ ನೀಡಿದರು.
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel