ಪುತ್ತೂರಿನ ಅಭಿನವ ಭಾರತ ಮಿತ್ರ ಮಂಡಳಿ ಮತ್ತು ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ವತಿಯಿಂದ ಸೋಮವಾರ ಸಂಜೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ಜನಜಾಗೃತಿ ಜಾಥಾ ಹಾಗೂ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಕಾನೂನು ವ್ಯವಸ್ಥೆಯೊಳಗೆ ಕಳ್ಳರಿದ್ದಾರೆ. ಇದರಿಂದಾಗಿ ನಾವು ಕಾನೂನು ವ್ಯವಸ್ಥೆಯ ಬಗ್ಗೆ ನಂಬಿಕೆ ಕಳಕೊಳ್ಳುವಂತಾಗಿದೆ. ಉಳ್ಳವರಿಗೆ ಮಾತ್ರ ಕಾನೂನು ಎಂಬ ವ್ಯವಸ್ಥೆಯಿಂದಾಗಿ ನಾವಿಂದು ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿದೆ ಎಂದ ಅವರು ಸೌಜನ್ಯ ಕೊಲೆ ಪ್ರಕರಣದ ತನಿಖಾಧಿಕಾರಿಗಳು ತಮ್ಮ ಮಕ್ಕಳಿಗೆ ಇಂತಹ ಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ನ್ಯಾಯಪೀಠ ಮತ್ತು ಧರ್ಮಪೀಠದಲ್ಲಿ ನ್ಯಾಯ ದೊರಕದಿದ್ದಲ್ಲಿ ನಾವು ಯಾರಲ್ಲಿ ನ್ಯಾಯ ಕೇಳಬೇಕು. ಕೊಲೆಗೀಡಾದ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಹೋರಾಟಕ್ಕೆ ಇಳಿದವರು ನಾವು. ಇದರ ಜೊತೆಗೆ ಧರ್ಮ ಪೀಠದಲ್ಲಿ ಧರ್ಮ ಉಳಿಯಬೇಕು ಎಂಬುದೂ ನಮ್ಮ ಉದ್ದೇಶ ಎಂದರು.
ಸೌಜನ್ಯ ಅವರ ತಾಯಿ ಕುಸುಮಾವತಿ ಮಾತನಾಡಿ ನನ್ನ ಮಗಳಿಗೆ ಆಗಿರುವ ಸ್ಥಿತಿ ಇನ್ನೊಂದು ಹೆಣ್ಣು ಮಗುವಿಗೆ ಆಗಬಾರದು ಎಂಬ ನಿಟ್ಟಿನಲ್ಲಿ ನಾನು ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಬಿಜೆಪಿಯವರು ಇದೀಗ ನನ್ನ ಮಗಳ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಆದರೆ 11 ವರ್ಷಗಳಿಂದ ಅವರು ನಮಗೆ ನ್ಯಾಯ ಕೊಟ್ಟಿಲ್ಲ. ನಳಿನ್ ಕುಮಾರ್ ಕಟೀಲ್ ಅವರೂ ನಮಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಪ್ರಧಾನಿ ಮೋದಿ ಬಳಿ ಹೋಗಿ ನ್ಯಾಯ ಕೇಳಬೇಕು ಅದಕ್ಕಾಗಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೌಜನ್ಯ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಸಂತೋಷ್ ರಾವ್ ಅವರ ಪರವಾಗಿ ವಾದಿಸಿದ್ದ ನ್ಯಾಯವಾದಿಗಳಾದ ಮೋಹಿತ್ ಕುಮಾರ್ ಮತ್ತು ನವೀನ್ ಪದ್ಯಾಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಭಿನವ ಭಾರತ ಮಿತ್ರ ಮಂಡಳಿಯ ಪ್ರವರ್ತಕರಾದ ದಿನೇಶ್ ಜೈನ್ , ಅಭಿನವ ಭಾರತ ಮಿತ್ರ ಮಂಡಳಿಯ ಅಧ್ಯಕ್ಷ ಧನ್ಯಕುಮಾರ್ ಬೆಳಂದೂರು, ನವೀನ್ ಕುಲಾಲ್ ಉಪಸ್ಥಿತರಿದ್ದರು.
ಸಭೆಯ ಮೊದಲು ಪ್ರತಿಭಟನೆಯ ಜನಜಾಗೃತಿ ಮೆರವಣಿಗೆ ನಡೆಯಿತು.