ಬೇಸಿಗೆಯ ಬೇಗೆಗೆ ದಣಿದ ಪಕ್ಷಿಗಳ ನೀರಡಿಕೆ ನೀಗಿಸುವ ವಿನೂತನ ಕಾರ್ಯಕ್ಕೆ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಕೈ ಹಾಕಿದೆ. ತೆಂಗಿನಕಾಯಿಯ ಗೆರಟೆಯಲ್ಲಿ ನೀರು ತುಂಬಿಸಿ ಅದನ್ನು ಮರದ ಕೊಂಬೆಗಳಿಗೆ ಕಟ್ಟುವ ಮೂಲಕ ಹಕ್ಕಿಗಳ ದಾಹವನ್ನು ನೀಗಿಸುವ ವಿಶೇಷ ಅಭಿಯಾನ ಇದಾಗಿದೆ.
ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, “ಬಿಸಿಲ ಝಳ ಇಡೀ ಜೀವಸಂಕುಲವನ್ನೇ ಕಾಡುತ್ತಿದೆ. ಈ ಸಂದರ್ಭದಲ್ಲಿ ಇಂತಹ ಅಭಿಯಾನವನ್ನು ಮಾಡುವ ಅವಶ್ಯಕತೆಯಿದೆ. ಇದು ಒಂದು ದಿನಕ್ಕೆ ಸೀಮಿತವಾಗಿರದೆ, ಪ್ರತೀ ದಿನವೂ ಮುಂದುವರೆಯಬೇಕು” ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್, ಪರೀಕ್ಷಾಂಗ ಕುಲಸಚಿವ ಡಾ. ಹೆಚ್. ಜಿ ಶ್ರೀಧರ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.