ಮಂಗಳೂರು: ಕೊರೊನಾ ವೈರಸ್ ಹರಡುವ ಇಂತಹ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ರಕ್ಷಿಸಲು ಕಾಸರಗೋಡು ಹಾಗೂ ಕೇರಳದ ಕಡೆಯಿಂದ ಮಂಗಳೂರಿಗೆ ಚಿಕಿತ್ಸೆಗೆ ಬರುವುದು ತಡೆಯಬೇಕು ಎಂದು ಕಳೆದ ಅನೇಕ ದಿನಗಳಿಂದ ಭಾರೀ ಚರ್ಚೆಯಾಗುತ್ತಿತ್ತು. ಈ ಬಗ್ಗೆ ಕೇರಳ ಸರಕಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಟ್ವಿಟ್ಟರ್ ನಲ್ಲಿ #Savekarnataka ಎಂಬ ಹ್ಯಾಶ್ ಟ್ಯಾಗ್ ಈಗ ಟ್ರೆಂಡ್ ಆಗಿದೆ. ಸಾವಿರಾರು ಜನರು ಈ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಮಂಗಳೂರಿಗೆ ಬರಬಾರದು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಹರಡುವ ಸಂದರ್ಭ ಕೇರಳ-ಕರ್ನಾಟಕ ಗಡಿ ಭಾಗದ ರಸ್ತೆ ಬಂದ್ ಮಾಡಲಾಗಿತ್ತು. ಬಳಿಕ ಮಂಗಳೂರು-ಕಾಸರಗೋಡು ಗಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ತುರ್ತು ವೈದ್ಯಕೀಯ ಸೇವೆಗಳಿಗಾಗಿ ತಕ್ಷಣ ತೆರವುಗೊಳಿಸುವಂತೆ ಕೇರಳ ಸರಕಾರ ಕೇಂದ್ರ ಸರಕಾರ ಹಾಗೂ ಕೇರಳ ಹೈಕೋರ್ಟ್ ಮುಂದೆ ಹೋಗಿತ್ತು.
ಇದೀಗ ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ಟ್ವಿಟ್ಟರ್ ಮೂಲಕ ಒತ್ತಾಯ ಮಾಡಿದ್ದಾರೆ. ಮಂಗಳೂರು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಈಗಾಗಲೇ ಮಂಗಳೂರು ಡೇಂಜರ್ ಝೋನ್ ನಲ್ಲಿ ಇರುವುದರಿಂದ ಮಂಗಳೂರು ಜನತೆಯ ಸುರಕ್ಷತೆ ಅಗತ್ಯವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಒತ್ತಾಯ ಕೇಳಿಬಂದಿದೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಕೊರೊನಾ ದಂತಹ ಮಾರಣಾಂತಿಕ ಖಾಯಿಲೆಯ ಸಂದರ್ಭದಲ್ಲಿ ನಮ್ಮ ರಾಜ್ಯದ ಜನರ ರಕ್ಷಣೆಯೆ ನಮ್ಮ ಮೊದಲ ಆದ್ಯತೆ ಅದರಲ್ಲಿ ಯಾವ ಅನುಮಾನವೂ ಬೇಡ ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಕೇರಳದ ಮಾದರಿ ವಿಶೇಷ ಹಾಗೂ ಉತ್ತಮ ಎಂದಿರುವವರು ಈಗ ಏಕೆ ಮಂಗಳೂರಿಗೆ ಹಠ ಹಿಡಿಯುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.