ಹಿಜಾಬ್ ವಿವಾದದ ಬಗ್ಗೆ ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವುದರಿಂದ ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್ನ ಹಿಜಾಬ್ ತೀರ್ಪು ಊರ್ಜಿತದಲ್ಲಿ ಇರುತ್ತದೆ. ಮುಂದೆ ವಿಸ್ತ್ರೃತ ಪೀಠ ರಚನೆ ಮಾಡಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಅಲ್ಲಿಯವರೆಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಕರಣದ ವಿಚಾರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸುಪ್ರೀಂಕೋರ್ಟ್ನ ಆದೇಶ ಪ್ರಕಟವಾಗಲಿದ್ದು, ಅದು ಹೈಕೋರ್ಟ್ ಆದೇಶದ ಜಾಗದಲ್ಲಿ ಊರ್ಜಿತಕ್ಕೆ ಬರಲಿದೆ. ಹೀಗಾಗಿ ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್ನ ಆದೇಶ ಯಥಾಸ್ಥಿತಿ ಮುಂದುವರಿಯಲಿದ್ದು, ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಕಾನೂನು ತಜ್ಞರು ಹಾಗೂ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಹಿಜಾಬ್ ಕುರಿತು ಇಂದು ಅಂತಿಮ ತೀರ್ಪು ಪ್ರಕಟವಾಗಬೇಕಿತ್ತು. ಸುಪ್ರೀಂ ಕೋರ್ಟ್ ನ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಹಿಜಾಬ್ ವಿವಾದ ಕುರಿತು ಭಿನ್ನ ತೀರ್ಪುಗಳನ್ನು ನೀಡಿರುವುದರಿಂದ ನಿರ್ದಿಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ವಿಷಯವನ್ನು ಸೂಕ್ತ ನಿರ್ದೇಶನಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತ ತಳ್ಳಿಹಾಕಿದರೆ ನ್ಯಾಯಮೂರ್ತಿ ಸುಧಾಂಶು ಧುನಿಯಾ ಮೇಲ್ಮನವಿ ಸಲ್ಲಿಕೆಯನ್ನು ಪುರಸ್ಕರಿಸಿದರು.