ಇತ್ತೀಚೆಗೆ ಮಾನವನಿಂದ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಪ್ರಮಾಣವು ಮನುಕುಲಕ್ಕೆ ತಿರುಗಿ ಬಂದು ಹೊಡೆಯುತ್ತಿದೆ. ಅದರ ಜೊತೆಗೆ ಜಲಚರ, ಪ್ರಾಣಿ-ಪಕ್ಷಿ, ಪ್ರಕೃತಿಗೂ ಸಂಕಷ್ಟವನ್ನುಂಟು ಮಾಡುತ್ತಿದೆ.
ಬ್ರೆಜಿಲ್ನ ಜ್ವಾಲಾಮುಖಿ ಟ್ರಿಂಡೇಡ್ ದ್ವೀಪ ಇದೀಗ ವಿಜ್ಞಾನಿಗಳ ಕೌತುಕ ತಾಣವಾಗಿ ಮಾರ್ಪಟ್ಟಿದೆ. ಈ ತಾಣ ಅಳಿವಿನಂಚಿನಲ್ಲಿರುವ ಹಸಿರು ಆಮೆ, ಚೆಲೋನಿಯಾ ಮೈಡಾಸ್ ಆಮೆಗಳ ಸಂತತಿಗೆ ಆವಾಸಸ್ಥಾನವಾಗಿದ್ದು ಅನೇಕ ಆಮೆಗಳು ಈ ಸ್ಥಳಕ್ಕೆ ಮೊಟ್ಟೆಯಿಡಲು ಬರುತ್ತವೆ. ಆದ್ದರಿಂದಲೇ ಈ ಪ್ರದೇಶ ಅನೇಕ ಸಂಶೋಧನೆಗಳ ತಾಣವಾಗಿದೆ. ಆದರೆ ಇದೀಗ ವಿಜ್ಞಾನಿಗಳ ಕಳವಳಕ್ಕೆ ಕಾರಣವಾಗಿರುವ ಅಂಶವೊಂದು ಬೆಳಕಿಗೆ ಬಂದಿದೆ, ಅದುವೇ ಈ ತಾಣದಲ್ಲಿರುವ ಪ್ಲಾಸ್ಟಿಕ್ ಬಂಡೆಗಳಾಗಿವೆ.
ಎಸ್ಪಿರಿಟೋ ಸ್ಯಾಂಟೋ ರಾಜ್ಯದಿಂದ ಸುಮಾರು 1,140 ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪದಲ್ಲಿ ಬಂಡೆಗಳೊಂದಿಗೆ ಅಂಟಿಕೊಂಡಿರುವ ಪ್ಲಾಸ್ಟಿಕ್‌ಗಳು ಪತ್ತೆಯಾಗಿವೆ.
ಮಾನವನ ಚಟುವಟಿಕೆಯೇ ಇದಕ್ಕೆ ಕಾರಣ
ಇಂತಹ ಅನ್ವೇಷಣೆಯು ಹೊಸತಾಗಿದೆ. ಅಷ್ಟೇ ಭಯಾನಕವೂ ಆಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಾನವನು ನಡೆಸುತ್ತಿರುವ ಮಾಲಿನ್ಯವು ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿದ್ದು, ಇದರಿಂದ ಸರ್ವರಿಗೂ ತೊಂದರೆ ಇದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣವು ಮನುಕುಲಕ್ಕೆ ಕಳವಳಕಾರಿಯಾಗಿದ್ದು ಪ್ರಕೃತಿಗೂ ಸಂಕಷ್ಟವನ್ನುಂಟು ಮಾಡಿದೆ ಎಂದು ಪರಾನಾ ಫೆಡರಲ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಫರ್ನಾಂಡಾ ಅವೆಲರ್ ಸ್ಯಾಂಟೋಸ್ ತಿಳಿಸಿದ್ದಾರೆ.
ವಿಜ್ಞಾನಿಗಳಿಗೆ ಕಂಡುಬಂತು ಬೆಚ್ಚಿಬೀಳಿಸುವ ಅಂಶ
ಸ್ಯಾಂಟೋಸ್ ಮತ್ತು ಅವರ ತಂಡವು “ಪ್ಲಾಸ್ಟಿಗ್ಲೋಮರೇಟ್ಸ್” ನಲ್ಲಿ ಕಂಡುಬರುವ ಪ್ಲಾಸ್ಟಿಕ್‌ಗಳ ಪ್ರಕಾರವನ್ನು ನಿರ್ಧರಿಸಲು ರಾಸಾಯನಿಕ ಪರೀಕ್ಷೆಗಳನ್ನು ನಡೆಸಿದ್ದಾರೆ. ಈ ಬಂಡೆಗಳು ಪ್ಲಾಸ್ಟಿಕ್‌ನೊಂದಿಗೆ ಮಿಳಿತಗೊಂಡಿರುವ ಸಂಚಿತ ಕಣಗಳು ಹಾಗೂ ಶಿಲಾಖಂಡಗಳ ಮಿಶ್ರಣದೊಂದಿಗೆ ಒಳಗೊಂಡಿವೆ.
ಬಂಡೆಗಳಲ್ಲಿ ಪ್ಲಾಸ್ಟಿಕ್ ಅಂಟಿಕೊಳ್ಳಲು ಕಾರಣವೇನು?
ಇದೊಂದು ಮಾಲಿನ್ಯವಾಗಿದೆ ಎಂದು ತಿಳಿಸಿರುವ ವಿಜ್ಞಾನಿ ಫೆರ್ನಾಂಡಾ, ಮೀನುಗಾರಿಕೆ ಬಲೆಗಳಿಂದ ಇದು ಬರುತ್ತಿದ್ದು ಟ್ರಿನಿಡೇಡ್ ದ್ವೀಪದ ಕಡಲತೀರಗಳಲ್ಲಿ ಕಂಡುಬರುವ ಅವಶೇಷಗಳಿಂದ ಉಂಟಾದ ಮಾಲಿನ್ಯವಾಗಿದೆ ಎಂದು ತಿಳಿಸಿದ್ದಾರೆ. ಈ ಬಲೆಗಳು ತೀರದಿಂದ ಸಮುದ್ರದ ಅಲೆಗಳಿಗೆ ಸೆಳೆದು ತೀರಗಳಲ್ಲಿ ಸಂಗ್ರಹಗೊಳ್ಳುತ್ತದೆ. ಉಷ್ಣತೆಯು ಹೆಚ್ಚಾದಾಗ ಈ ಪ್ಲಾಸ್ಟಿಕ್ ಕರಗುತ್ತದೆ. ಕಡಲತೀರದ ನೈಸರ್ಗಿಕ ವಸ್ತುಗಳೊಂದಿಗೆ ಹುದುಗುತ್ತದೆ.
ಅಳಿವಿನಂಚಿನಲ್ಲಿರುವ ಹಸಿರು ಆಮೆಗಳು
ಇನ್ನು ಈ ಪ್ರದೇಶದಲ್ಲಿರುವ ಹಸಿರು ಆಮೆ, ಚೆಲೋನಿಯಾ ಮೈಡಾಸ್ ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಪ್ರತಿ ವರ್ಷ, ಟ್ರಿಂಡೇಡ್ ದ್ವೀಪದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಟ್ಟೆ ಇಡಲು ಬರುತ್ತವೆ. ಬ್ರೆಜಿಲಿಯನ್ ನೌಕಾಪಡೆಯು ದ್ವೀಪದಲ್ಲಿ ನೆಲೆಯನ್ನು ಕಂಡುಕೊಂಡು ಆಮೆ ಗೂಡುಗಳನ್ನು ಕಾಪಾಡುತ್ತದೆ. ಇದು ಟ್ರಿಂಡೇಡ್‌ನಲ್ಲಿರುವ ಏಕೈಕ ಮಾನವ ಜನಸಂಖ್ಯೆಯಾಗಿದೆ.
ಪರಿಸರದ ಮೇಲೆ ಮಾನವರ ಅತಿಯಾದ ಪ್ರಭಾವ
“ನಾವು ಈ ಪ್ಲಾಸ್ಟಿಕ್ ಮಾದರಿಗಳನ್ನು ಕಂಡುಕೊಂಡ ಸ್ಥಳವು ಬ್ರೆಜಿಲ್‌ನಲ್ಲಿ ಶಾಶ್ವತವಾಗಿ ಸಂರಕ್ಷಿಸಲಾದ ಪ್ರದೇಶವಾಗಿದೆ. ಈ ಪ್ರದೇಶವು ಅಳಿವಿನಂಚಿನಲ್ಲಿರುವ ಹಸಿರು ಆಮೆಗಳು ಮೊಟ್ಟೆಗಳನ್ನು ಇಡುವ ಸ್ಥಳದ ಸಮೀಪದಲ್ಲಿದೆ” ಎಂದು ಸ್ಯಾಂಟೋಸ್ ಹೇಳಿದರು. ಗ್ರಹದ ಭೂವಿಜ್ಞಾನ ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಮಾನವರ ಪ್ರಭಾವದಿಂದ ಪರಿಣಾಮಕ್ಕೊಳಗಾದ ಪ್ರಸ್ತುತ ಭೌಗೋಳಿಕ ಅಂಶವನ್ನು ಉಲ್ಲೇಖಿಸಿ ಮಾತನಾಡಿದ ಸ್ಯಾಂಟೋಸ್ ಮಾನವರ ಅತಿಯಾದ ಮಾಲಿನ್ಯವೇ ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಂಡೆಗಳ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಮಾನವನು ಮಾಡುತ್ತಿರುವ ಮಾಲಿನ್ಯ, ಸಮುದ್ರದಲ್ಲಿನ ಕಸ ಮತ್ತು ಸಾಗರಗಳಲ್ಲಿ ಒಮ್ಮೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಸೆಯಲಾದ ಪ್ಲಾಸ್ಟಿಕ್‌ನಿಂದ ಭೂವೈಜ್ಞಾನಿಕ ವಸ್ತುವಾಗಿ ಪ್ರಕೃತಿ ಹಾಗೂ ಭೂಮಿಗೆ ಸಂಕಷ್ಟನ್ನೊಡ್ಡುತ್ತಿದೆ. ಇದನ್ನು ತಡೆಗಟ್ಟಲು ಎಲ್ಲರೂ ಮುಂದಾಗಬೇಕು ಹಾಗೂ ಅಳಿವಿನಂಚಿನಲ್ಲಿರುವ ಹಸಿರು ಆಮೆಗಳನ್ನು ರಕ್ಷಿಸಬೇಕು ಎಂದು ಸ್ಯಾಂಟೋಸ್ ತಿಳಿಸಿದ್ದಾರೆ.