ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ನದಿಗೆ ಹರಿದ ಯುವಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ದಿನದ ಕಾರ್ಯಾಚರಣೆಯಲ್ಲೂ ಯಾವುದೇ ಸುಳಿವು ಸಿಕ್ಕಿಲ್ಲ. ಬೆಳಗ್ಗೆ ಏಳು ಗಂಟೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆದಿದೆ. ಸಂಜೆಯ ಬಳಿಕ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದೀಗ ಯುವಕನ ಮಿತ್ರರು ಹಾಗೂ ಪೋಷಕರು ಆಡಳಿತ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಜನರಷ್ಟೂ ಕೂಡಾ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರವಾಸಿಗರಾಗಿ ಬಂದಿದ್ದ ಬೆಂಗಳೂರಿನ ದೀಪಾಂಜಲಿ ನಗರದ ಸ್ವಾಮಿ ಎಂಬ ಯುವಕ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆ ಇಳಿದ ಬಳಿಕ ನಾಪತ್ತೆಯಾಗಿದ್ದರು. ಮೂರು ದಿನವಾದರೂ ಯುವಕ ಪತ್ತೆಯಾಗಿಲ್ಲ. ನೀರಿನಲ್ಲಿ ಮುಳುಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ, ಮಂಗಳವಾರ ಇಡೀ ದಿನ ಸ್ಥಳೀಯ ಮುಳುಗು ತಜ್ಞರ ಸಹಾಯದಿಂದ ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ ಸಹಾಯದೊಂದಿಗೆ ಹುಡುಕಾಟ ನಡೆಸಲಾಗಿದೆ. ಇದುವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಸುಮಾರು 15 ಜನ ನುರಿತ ಈಜುಗಾರರು, ಅಗ್ನಿಶಾಮಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು, ಗೃಹರಕ್ಷಕ ದಳ,ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ನೆರವು ನೀಡಿದ್ದಾರೆ. ಆದರೆ ಇಲಾಖೆಗಳ ಅಧಿಕಾರಿಗಳಿಂದ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿಲ್ಲ ಎಂದು ಯುವಕನ ಮಿತ್ರರು ಹಾಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು, ಆಡಳಿತವು ಸೂಕ್ತ ರೀತಿಯ ವ್ಯವಸ್ಥೆ ಮಾಡುತ್ತಿಲ್ಲ. ಸ್ಥಳೀಯ ಜನರಷ್ಟು ಕೂಡಾ ಸಹಾಯ ಮಾಡುತ್ತಿಲ್ಲ. ಬಡವರು ಎಂದರೆ ಅಷ್ಟೊಂದು ನಿರ್ಲಕ್ಷ್ಯವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ದೊಡ್ಡವರ ಮಕ್ಕಳಾದರೆ ಹೀಗೆ ಮಾಡುತ್ತಿದ್ದರೇ? ಯಾವುದೇ ವ್ಯವಸ್ಥೆಗಳಿಲ್ಲದೆ ಅಗ್ನಿಶಾಮಕ ದಳ, ಇಲಾಖೆಗಳು ಹೇಗೆ ಕೆಲಸ ಮಾಡುವುದು ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.