ಮನುಷ್ಯನ ಜೀವನದಲ್ಲಿ ಆಂತರಿಕ ಮೌಲ್ಯಗಳು ಬಹುಮುಖ್ಯ. ಜ್ಞಾನ, ಅಧಿಕಾರ, ಐಶ್ವರ್ಯ, ಕೀರ್ತಿ ಇವುಗಳೆಲ್ಲವೂ ಬದುಕನ್ನು ಹೊಳೆಯುವಂತೆ ಮಾಡುತ್ತವೆ. ಆದರೆ ಅವುಗಳ ಹಿಂದೆ ನಿಂತಿರುವ ಆಂತರಿಕ ಶಕ್ತಿಗಳು ಮನುಷ್ಯನ ನಿಜವಾದ ವ್ಯಕ್ತಿತ್ವವನ್ನು ರೂಪಿಸುತ್ತವೆ. ಆತ್ಮಗೌರವ, ವಿನಯ ಮತ್ತು ಅಹಂಕಾರ – ಈ ಮೂರು ಮೌಲ್ಯಗಳು ಮನುಷ್ಯನ ಜೀವನದ ಮೂಲತತ್ವವನ್ನು ನಿರ್ಧರಿಸುತ್ತವೆ. ಆತ್ಮಗೌರವವು ಬದುಕಿನ ಶ್ವಾಸ, ವಿನಯವು ನಾದ, ಅಹಂಕಾರವು ನಿಶ್ಶಬ್ದದ ಕತ್ತಲೆ ಎಂಬ ರೂಪಕವು ಜೀವನದ ಸೂಕ್ಷ್ಮ ಸತ್ಯವನ್ನು ಬಿಂಬಿಸುತ್ತದೆ. ಸಮಾಜದಲ್ಲಿ ಮಾನವೀಯತೆ, ಸಮತೋಲನ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಈ ಮೌಲ್ಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ.
ಆತ್ಮಗೌರವವೆಂಬುದು ಬದುಕಿನ ಶ್ವಾಸ.ಆತ್ಮಗೌರವವೆಂದರೆ ಸ್ವಮೌಲ್ಯವನ್ನು ಅರಿತುಕೊಳ್ಳುವುದು, ಅದನ್ನು ಕಾಪಾಡುವುದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ – “ಶ್ರೇಯಾನ್ಸ್ವಧರ್ಮೋ ವಿಘುನಃ ಪರಧರ್ಮಾತ್ಸ್ವನುಷ್ಟಿತಾತ್” (3.35). ಅಂದರೆ ತನ್ನ ಕರ್ತವ್ಯ, ತನ್ನ ಗೌರವವೇ ಶ್ರೇಷ್ಠ; ಇತರರ ಧರ್ಮವನ್ನು ಅನುಸರಿಸುವುದಕ್ಕಿಂತಲೂ ಸ್ವಧರ್ಮದಲ್ಲೇ ಸ್ಥಿರವಾಗಿರುವುದು ಮಿಗಿಲು ಎಂದು ಸ್ಪಷ್ಟವಾಗಿ ಹೇಳಿದ್ದಾನೆ.
ಸಮಾಜದಲ್ಲಿ ಆತ್ಮಗೌರವವಿಲ್ಲದ ವ್ಯಕ್ತಿ ಇತರರ ಮುಂದೆ ಬಿದ್ದು ಬದುಕುತ್ತಾನೆ. ಆತ್ಮಗೌರವ ಕಾಪಾಡಿದಾಗ ಮಾತ್ರ ವ್ಯಕ್ತಿ ತನ್ನ ಹಕ್ಕುಗಳನ್ನು ಪ್ರತಿಪಾದಿಸಬಲ್ಲನು ಮತ್ತು ನ್ಯಾಯಕ್ಕಾಗಿ ನಿಲ್ಲಬಲ್ಲನು.
ನಮ್ಮ ಇತಿಹಾಸವನ್ನು ಗಮನಿಸುವುದಾದರೆ ಗಾಂಧೀಜಿಯವರ ಸತ್ಯಾಗ್ರಹ ಚಳವಳಿ ಆತ್ಮಗೌರವದ ಜೀವಂತ ಉದಾಹರಣೆ. “ನಾವು ದಾಸರಲ್ಲ, ಸ್ವತಂತ್ರರು” ಎಂಬ ಮನೋಭಾವವನ್ನು ಜನರಲ್ಲಿ ಬೆಳೆಸಿ, ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದವರು ಗಾಂಧೀಜಿ. ಆತ್ಮಗೌರವವು ವ್ಯಕ್ತಿಗಷ್ಟೇ ಅಲ್ಲ, ರಾಷ್ಟ್ರಕ್ಕೂ ಶ್ವಾಸವಾಗಿದೆ ಎಂಬುದಕ್ಕೆ ಇದು ಸಾಕ್ಷಿ.
ವಿನಯ ವೆಂಬುದು ಬದುಕಿನ ನಾದವಿನಯವೆಂದರೆ ಸೌಮ್ಯತೆ, ಮೃದುಸ್ವಭಾವ, ಇತರರ ಗೌರವವನ್ನು ಅರಿತುಕೊಳ್ಳುವ ಗುಣ. ಚಾಣಕ್ಯ ನು “ವಿನಯಾದ್ಯಾತಿ ಪಾತ್ತ್ರತ್ವಂ, ಪಾತ್ತ್ರತ್ವಾದ್ಧನಮಾಪ್ನುಯಾತ್”. ಅಂದರೆ ವಿನಯದಿಂದ ವ್ಯಕ್ತಿ ಪಾತ್ರನಾಗುತ್ತಾನೆ, ಪಾತ್ರತ್ವದಿಂದ ಗೌರವ ಮತ್ತು ಸಂಪತ್ತು ದೊರೆಯುತ್ತದೆ ಎಂಬುದಾಗಿ ಹೇಳಿದ್ದಾನೆ . ಸಮಾಜದಲ್ಲಿ ಮನುಷ್ಯನು ಎಷ್ಟೇ ಜ್ಞಾನಿ, ಎಷ್ಟೇ ಧನಿಕನಾದರೂ, ವಿನಯವಿಲ್ಲದಿದ್ದರೆ ಅವನ ಜ್ಞಾನ–ಧನ ವ್ಯರ್ಥ. ವಿನಯವು ಸಂಬಂಧಗಳನ್ನು ಮಧುರಗೊಳಿಸುವ ನಾದ. ನಾಯಕತ್ವದಲ್ಲಿಯೂ ವಿನಯವೇ ಜನಮನ ಗೆಲ್ಲುವ ಶಕ್ತಿ.ನಮ್ಮ ಪುರಾಣಗಳನ್ನು ಗಮನಿಸಿದರೆ ರಾಮಾಯಣದಲ್ಲಿ ಶ್ರೀರಾಮನು ಸಾಮ್ರಾಟನಾಗಿದ್ದರೂ ಋಷಿಗಳ ಮುಂದೆ, ಸಾಮಾನ್ಯ ಪ್ರಜೆಗಳ ಮುಂದೆ ಸದಾ ವಿನಯದಿಂದ ವರ್ತಿಸಿದನು. ಇದರಿಂದಲೇ ಅವನು ತನ್ನ ನಡೆ ನುಡಿಯಿಂದಲೇ “ಮರ್ಯಾದಾ ಪುರುಷೋತ್ತಮ” ಎಂಬ ಬಿರುದಿಗೆ ಪಾತ್ರನಾದ. ಸಮಾಜದಲ್ಲಿ ವಿನಯವೇ ನಾದ, ಅದು ಮನುಷ್ಯತ್ವದ ಮಧುರ ಸಂಗೀತ.
ಅಹಂಕಾರ ವೆಂಬುದು ಬದುಕಿನ ನಿಶ್ಶಬ್ದದ ಕತ್ತಲೆ ಅಹಂಕಾರವೆಂದರೆ ತಾನು ಶ್ರೇಷ್ಠನೆಂದು ಭ್ರಮಿಸುವ ಅಂಧಕಾರ.
ಕಠೋಪನಿಷತ್ ಹೇಳುವಂತೆ “ಅವಿದ್ಯಾಯಾಮಂತರೆ ವರ್ತಮಾನಾಃ ಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ”. ಅಹಂಕಾರಿಯು ಅಜ್ಞಾನಿಯಾಗಿದ್ದರೂ ತಾನೇ ಜ್ಞಾನಿ ಎಂದು ಭಾವಿಸುತ್ತಾನೆ; ಈ ಭ್ರಮೆಯೇ ಅವನ ಪತನಕ್ಕೆ ಕಾರಣ.
ಅಹಂಕಾರವು ಕುಟುಂಬದಲ್ಲಿ ಜಗಳ, ಸಂಸ್ಥೆಯಲ್ಲಿ ಭೇದ, ರಾಷ್ಟ್ರದಲ್ಲಿ ಕಲಹಕ್ಕೆ ಕಾರಣವಾಗುತ್ತದೆ. ಅಹಂಕಾರಿ ವ್ಯಕ್ತಿ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ, ಸಮಾಜವನ್ನು ಅಶಾಂತಗೊಳಿಸುತ್ತಾನೆ.
ರಾಮಾಯಣದಲ್ಲಿ ರಾವಣನ ಪತನವೇ ಅಹಂಕಾರದ ಶ್ರೇಷ್ಠ ಪಾಠ. ಬಲ, ಜ್ಞಾನ, ಭಕ್ತಿ ಎಲ್ಲವಿದ್ದರೂ ಅಹಂಕಾರದ ಮಾಡದಲ್ಲಿ ಮುಳುಗಿ ತನ್ನ ರಾಜ್ಯವನ್ನೇ ಕಳೆದುಕೊಂಡನು. ಸಮಾಜದಲ್ಲಿ ಅಹಂಕಾರವು ಬೆಳಕನ್ನು ನುಂಗುವ ಕತ್ತಲೆ.
ಇಂದಿನ ಸಮಾಜದಲ್ಲಿ ಈ ಮೌಲ್ಯಗಳ ಮಹತ್ವ ಇನ್ನೂ ಹೆಚ್ಚಾಗಿದೆ.ಉದ್ಯೋಗ ಕ್ಷೇತ್ರದಲ್ಲಿ ಆತ್ಮಗೌರವ ಕಾಪಾಡಿಕೊಂಡು, ವಿನಯದಿಂದ ತಂಡದೊಂದಿಗೆ ವರ್ತಿಸುವವರು ಮಾತ್ರ ಉತ್ತಮ ನಾಯಕತ್ವ ತೋರಬಲ್ಲರು.
ರಾಜಕೀಯದಲ್ಲಿ ಅಹಂಕಾರದಿಂದ ವರ್ತಿಸಿದ ನಾಯಕ ಶೀಘ್ರ ಪತನವಾಗುವನು; ವಿನಯ ಮತ್ತು ಆತ್ಮಗೌರವದ ಸಮತೋಲನ ಹೊಂದಿದವನು ಮಾತ್ರ ಜನಪ್ರಿಯನಾಗುವನು.
ಕುಟುಂಬ ಜೀವನದಲ್ಲಿಯೂ ಆತ್ಮಗೌರವವು ಸಂಬಂಧಗಳ ಗಡಿಯನ್ನು ನಿಶ್ಚಯಿಸುತ್ತದೆ, ವಿನಯವು ಮಮತೆಯ ಬಲವನ್ನೂ ನೀಡುತ್ತದೆ, ಅಹಂಕಾರವು ಕಳಚುವ ಶಕ್ತಿಯೂ ಆಗುತ್ತದೆ.
ಮನುಷ್ಯನು ಕೇವಲ ಜ್ಞಾನದಿಂದ ಶ್ರೇಷ್ಠನಾಗುವುದಿಲ್ಲ. ಆತ್ಮಗೌರವವನ್ನು ಉಸಿರಾಗಿ, ವಿನಯವನ್ನು ನಾದವಾಗಿ, ಅಹಂಕಾರವನ್ನು ದೂರವಿಟ್ಟು ಬದುಕಿದಾಗ ಮಾತ್ರ ಅವನ ವ್ಯಕ್ತಿತ್ವ ಸಂಪೂರ್ಣವಾಗುತ್ತದೆ. ಸಮಾಜದಲ್ಲಿಯೂ ಇದೇ ಸತ್ಯ. ಆತ್ಮಗೌರವವಿಲ್ಲದ ಸಮಾಜವು ಶ್ವಾಸವಿಲ್ಲದ ಶರೀರದಂತಿದೆ. ವಿನಯವಿಲ್ಲದ ಸಮಾಜವು ಶಬ್ದವಿಲ್ಲದ ಸಂಗೀತದಂತಿದೆ. ಅಹಂಕಾರದ ಕತ್ತಲೆಯುಳ್ಳ ಸಮಾಜವು ಸೌಹಾರ್ದ ಕಳೆದುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಮೌಲ್ಯಗಳನ್ನು ಅರಿತು ಪಾಲಿಸಿದಾಗ ಮಾತ್ರ ವ್ಯಕ್ತಿಯೂ, ಸಮಾಜವೂ, ರಾಷ್ಟ್ರವೂ ಸಮಗ್ರವಾಗಿ ಅರಳುತ್ತವೆ.




