ಅಪರಿಚಿತ ವ್ಯಕ್ತಿಯೊಬ್ಬ ಬೈಕಿನಲ್ಲಿ ನಮ್ಮ ಮನೆಗೆ ಬಂದ… ಬಂದವನೇ “ನಿಮ್ಮ ಹೋರಿನ ನೋಡಬಹುದಾ…!? ” ಅಂದ. ನನ್ನ ತಂದೆಯವರು ಅವನನ್ನು ಕೊಟ್ಟಿಗೆಗೆ ಕರೆದುಕೊಂಡು ಬಂದರು. ನಾನು ಕೊಟ್ಟಿಗೆಯಲ್ಲೇ ಇದ್ದೆ. ಬಂದವ ಅವನ ಪರಿಚಯ ಕೂಡ ಮಾಡಿಕೊಳ್ಳದೇ ದೂರದಿಂದಲೇ ನಮ್ಮ ಹೋರಿ ನೋಡಿ (ಅಪರಿಚಿತರನ್ನ ನಮ್ಮ ಯಾವುದೇ ಜಾನುವಾರುಗಳು ಹತ್ತಿರಕ್ಕೂ ಸೇರಿಸಿಕೊಳ್ಳೊಲ್ಲ. ಇದು ಮಲೆನಾಡು ಗಿಡ್ಡದ ವಿಶಿಷ್ಠವಾದ ಗುಣ), ಕೊಟ್ಟಿಗೆ ಬಾಕಲು (ಬಾಗಿಲು)ತಂಕ ಪಿಕ್ ಅಪ್ ಬತ್ತದಲ್ವ (ಬರುತ್ತಲ್ವ)…?” ಎಂದ.
ನಾನು – ಏಕೆ ಹಾಗೆ ಕೇಳ್ತಿದ್ದೀರ..?, ಆತ- ನನ್ನವೊಂದು ಎತ್ತಿನ ಜೋಡು ಕೊಟ್ಟೆ ಅದರ ಬದಲಿಗೆ ಇನ್ನೊಂದು ಜೊತೆ ಎತ್ತಿನ ಜೋಡು ಮಾಡಬಕು ಅದಕ್ಕೆ ನಿಮ್ಮ ಹೋರಿನ ಕೇಂಡೆ ..(ಕೇಳಿದೆ).
ನಾನು – ನೀವು ಯಾರು..? ನಿಮಗೆ ಯಾರು ನಮ್ಮ ಹೋರಿ ಮಾರಾಟಕ್ಕಿದೆ ಎಂದರು..?
ಆತ – ನೊಣಬೂರಲ್ಲಿ ಯಾರೋ ಹೇಳಿದರು.
ನಾನು – ನೀವು ಯಾರು..?
ಆತ – ನಾನು ಇಟ್ಟಕ್ಕಿ ಸುರೇಶ … ನಾನು ನಾಳೆಯೇ ಹೋರಿ(Bullock) ತಗು ಹೋತಿನಿ.. ನೀವು ಹೋರಿ ಕುತ್ತಿಗೆಗೆ ಹಗ್ಗ ಹಾಕಿ ಕೊಡಿ .. ನಾನು ಮೂಗುದಾಣ ಹಾಕ್ಕೊಂಡು ಕುತ್ತಿಗೆ ಚೆಂಡಿಗೆ ಊದ್ದ ಬಳ್ಳಿ (ಹಗ್ಗ) ಹಾಕಿ ಪಿಕ್ ಅಪ್ ಗೆ ಹತ್ತಿಸುತ್ತೇನೆ. ನಾನು ಸಾಕಕ್ಕೆ ಹೋರಿ ತಗು ಹೋಗದು…. ಎಂದು ಬಡ ಬಡ ಮಾತನಾಡಿದ. ಆತನ ಮಾತು ತೊದಲುತ್ತಿತ್ತು. ಅವನು ಬೆಳ್ ಬೆಳಿಗ್ಗೆಯೇ ಸ್ವಲ್ಪ ಕುಡಿದಂತನ್ನಿಸಿತು.
ನಾನು- ನಮಗೆ ಈ ಕಾಲದಲ್ಲಿ ಹೋರಿ ಸಾಕಣೆ ಕಷ್ಟವೇ …ಆದರೂ ನಾವು ಯಾರಿಗಾತ ಅವರಿಗೆ ಹೋರಿನ ಮಾರೋಲ್ಲ… ನಾವು ಜಾನುವಾರು ಕೊಡೋದು ತುಂಬಾ ಕಡಿಮೆ. ಕೊಡುವುದಾದರೂ ಅವರ ಸಂಪೂರ್ಣ ಕುಲ ಗೋತ್ರ ವಿಚಾರಣೆ ಮಾಡಿಯೇ ಕೊಡೋದು , ಅವರು ಸುದೀರ್ಘ ಕಾಲ ಜಾನುವಾರು ಸಾಕುತ್ತಾರೆ ಎಂದು ನಮಗೆ ನಂಬಿಕೆ ಬಂದರೆ ಮಾತ್ರ ಜಾನುವಾರು ಕೊಡುತ್ತೇವೆ.
ಆತ ತನ್ನ ಫೋನ್ ಓಪನ್ ಮಾಡಿ ಮುರುಕು ಕೊಟ್ಟಿಗೆಯಲ್ಲಿ ಯಾವುದೋ ಪೂಜೆ ಮಾಡಿದ ಎತ್ತಿನ ಚಿತ್ರ ತೋರಿಸಿದ.
ತಾನು ಅಷ್ಟು ಚೆನ್ನಾಗಿ ಸಾಕುತ್ತೇನೆ ಎಂದ. ಆದರೆ ಆತ ನಮ್ಮ ಬಳಿ ಸೌಜನ್ಯಕ್ಕೂ ಹೋರಿ ಬೆಲೆ ಕೇಳದೇ ಹೋರಿ ಕೊಂಡೊಯ್ಯುವುದರ ಬಗ್ಗೆಯೇ ಮಾತನಾಡಿದ. ಇವರ ಮನೆಯಲ್ಲಿ ಕಂಡಾಪಟ್ಟೆ ಜಾನುವಾರು ಇವೆ. ಈ ಹೋರಿಯಂತೂ ಇವರಿಗೆ ಬಹಳ ತೊಂದರೆ ಕೊಡುತ್ತದೆ. ಇವರ ಬಳಿ ಈ ಹೋರಿನ ಕೇಳಿದ ಕೂಡಲೇ “ತಗೊಂಡು ಹೋಗು ಮಾರಾಯ ನೀ ಎಷ್ಟಾದರೂ ದುಡ್ಡು ಕೊಡು …” ಅಂತಾರೆ ಎಂದು ಅವನ ನಂಬಿಕೆ.
ಊರಿನ ಜನರೂ ನಾನು ಊರಿನಲ್ಲಿ ಇಲ್ಲದಾಗ ನನ್ನ ಎಪ್ಪತ್ತೈದು ವರ್ಷದ ತಂದೆಯವರು ಕಷ್ಟಪಟ್ಟು ಹೋರಿಯನ್ನ ಮನೆಗೆ ಹೊಡೆದುಕೊಂಡು ಹೋಗುವುದನ್ನು ನೋಡಿ “ಇವರಿಗೆ ಈ ಹೋರಿ ದಾಟಿಸಿದರೆ ಸಾಕಾಗಿರುತ್ತದೆ.. ಯಾರು ಕೇಳಿದರೂ ಕೊಡ್ತಾರೆ ” ಅಂತ ಯೋಚನೆ ಮಾಡಿ ಹಿಂಗಿಂದ ಜನರಿಗೆ ಮಾಹಿತಿ ನೀಡ್ತಾರೆ. ಈ ಸುರೇಶನಂತವರು ನಮ್ಮ ದೇಸಿ ಹಸು ಮಲೆನಾಡು ಗಿಡ್ಡ ತಳಿಗಳ ಪಾಲಿನ “ಯಮ ಕಿಂಕರರು”.. ಸುರೇಶ ನಮಗೆ ಒಂದೋ ಎರಡೋ ಸಾವಿರ ದುಡ್ಡು ಕೊಟ್ಟು ಹೋರಿಯನ್ನ ಪಿಕ್ ಅಪ್ ಹತ್ತಿಸಿ.. ಮನಿಗೆ ತಗೊಂಡು ಹೋಗಿ ಒಂದು ನಾಕು ದಿನ ಸಾಕಿ ಒಂದು ದಿನ ಯಾರೋ ಕಟುಕರಿಗೆ ಇಪ್ಪತ್ತು ಮೂವತ್ತು ಸಾವಿರಕ್ಕೆ ಮಾರುತ್ತಾರೆ.
ಈವಾಗ ದೇಸಿ ಹಸುಗಳನ್ನು ಖರೀದಿಸಲು ಅದರಲ್ಲೂ ಹೋರಿ ಸಾಕಲು ಬರುವವರು ಇಂತಹ ಹಿಂದೂ ಕಟುಕರೇ ರಮೇಶ, ಸರೇಶ, ಕೃಷ್ಣಮೂರ್ತಿ, ಗೋಪಾಲ , ಗೋವಿಂದನೇ ಬರೋದು. ” ನೆನಪಿಡಿ ಗೋಪಾಲಕರೇ “… ಯಾರೂ ಈವಾಗ ಮಲೆನಾಡು ಗಿಡ್ಡ ತಳಿಯ ಹೋರಿ ಕರುಗಳನ್ನ ಕೊಂಡೊಯ್ದು ತಿದ್ದಿ ” ಎತ್ತಿನ ಜೋಡು ” ಮಾಡೋಲ್ಲ…. ನಿಮ್ಮ ಮನೆಯಿಂದ ಕೊಂಡೊಯ್ಯುವ ಹೋರಿ ನೂರಕ್ಕೆ ನೂರರಷ್ಟು ಕಸಾಯಖಾನೆಗೇ ಹೋಗುತ್ತದೆ. ನಮಗೆ ಹೇಗೆ ಗೊಡ್ಡು ಬಿದ್ದ ಹಸುಗಳು, ವೃದ್ದ ಹಸುಗಳು ಅನುತ್ಪಾದಕ ಆಸ್ತಿಗಳೋ ಹಾಗೆಯೇ ಎಲ್ಲರಿಗೂ…
ನಮ್ಮೂರ ಸಮೀಪದಲ್ಲಿ ಒಬ್ಬ ಇಂತಹ ಜಾನುವಾರುಗಳ ಖರೀದಿಸುವ ಯಮ ಕಿಂಕರನೊಬ್ಬ ಗೋಶಾಲೆ ಮಾಡಿ. ಅದರಲ್ಲಿ ಹಾಲು ಕೊಡುವಂತಹ ಗೋವುಗಳನ್ನ ರೈತರಿಗೆ ಮಾರಿ ಉಳಿದ ಗೋವುಗಳನ್ನ ಕಟುಕರಿಗೆ ಮಾರಾಟ ಮಾಡುವ ಯೋಜನೆ. ಆತ ತಾಲೂಕು ಪಶು ವೈದ್ಯಾಧಿಕಾರಿಯವರಿಗೆ ಗೋಶಾಲೆ ಸ್ಥಾಪಿಸಲು ಅರ್ಜಿ ಹಾಕಿದಾಗ ಸಮಾಜ ಅದನ್ನು ವಿರೋಧ ಮಾಡಿ ತಡೆ ಹಿಡಿಯಲಾಯಿತು. ಇದು ಕ್ರೌರ್ಯದ ಪರಮಾವಧಿಯಲ್ವ…?
ಇಂತಹ ಸುರೇಶನಂತವರು ಈ ಹೋರಿ , ದನಗಳನ್ನ ಗೋಪಾಲಕರ ಕೊಟ್ಟಿಗೆ ಯಿಂದ ತಮ್ಮ ಕೊಟ್ಟಿಗೆ ತಂದು ಅದನ್ನು ನಾಜೂಕಾಗಿ ಕಸಾಯಿ ಗಳಿಗೆ ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ. ಇವತ್ತು ದೇಸಿ ಹಸುಗಳನ್ನು ರೈತ ಗೋಪಾಲಕರ ಮನೆಯಿಂದ ಯಾವ ವ್ಯಾಪಾರಿಯೂ ಉತ್ತಮ ಬೆಲೆಗೆ ಖರೀದಿಸಿರೋಲ್ಲ. ಆದರೆ ಈ ಯಮ ಕಿಂಕರರು ಒಂದೊ ಎರಡೋ ಸಾವಿರಕ್ಕೆ ಕೊಂಡ ದನಗಳನ್ನ ಹೋರಿಗಳನ್ನ ಹತ್ತು ಇಪ್ಪತ್ತು ಸಾವಿರಕ್ಕೆ ಕಟುಕರಿಗೆ ಮಾರುತ್ತಾರೆ. ಈ ಯಮ ಕಿಂಕರರು ತಾವು ಗೋಪಾಲಕರ ಮನೆಯಿಂದ ತಂದ ಗೋವುಗಳನ್ನ ಕಟುಕರಿಗೆ ತೂಕದ ಲೆಕ್ಕಾಚಾರದಲ್ಲೇ ಮಾರಾಟ ಮಾಡುವುದು.ಇದೊಂದು ದೊಡ್ಡ ಲಾಭದ ದಂದೆಯಾಗಿದೆ.
ಮೊದ ಮೊದಲು ನಮ್ಮ ಕೊಟ್ಟಿಗೆಯ ಜಾನುವಾರುಗಳೂ ನಮಗೆ ಅರಿವಿಲ್ಲದೆ ಕೈ ತಪ್ಪಿ ಈ ಕಟುಕರ ಪಾಲಾಗಿದೆ. ಆ ಬಗ್ಗೆ ನಮಗೆ ಇವತ್ತಿಗೂ ಅಪರಾಧಿ ಭಾವವಿದೆ. ನಮ್ಮ ಅನೇಕ ಗೋಪಾಲಕರು ಈ ಹಸುಗಳ ವ್ಯಾಪಾರದ ಬಗ್ಗೆ ಒಂದು ಪಾಲಾಯನವಾದ ಇದೆ. ” ನಮ್ಮ ಮನೆಯಿಂದ ಗೋವು ತಗೊಂಡು ಹೋಗು ವವರು ಹಿಂದೂಗಳೇ… ಅವರು ನಮ್ಮಲ್ಲಿಂದ ಸಾಕಲೆಂದೇ ನಮ್ಮ ಗೋವುಗಳನ್ನ ಖರೀದಿಸಿ ಕೊಂಡೊಯ್ಯುತ್ತಾರೆ. ನಮ್ಮ ಕೈ ಜಾರಿ ಅವರ ಕೈ ಸೇರಿದ ಮೇಲೆ ಅವರು ಏನಾದರೂ ಮಾಡಲಿ.. ಅದು ನಮಗೆ ಸಂಬಂಧಿಲ್ಲ….” ಎನ್ನುತ್ತಾರೆ.
ಆದರೆ ಇದು ಮನುಷ್ಯರ ಕೋರ್ಟ್ ನಲ್ಲಿ ಅಪರಾಧವಲ್ಲ…!!! ಆದರೆ ನಾವು ನಮ್ಮ ಹಸುಗಳನ್ನು ಕೊಂಡೊಯ್ಯುವರು ಏನು ಮಾಡುತ್ತಾರೆ..? ಅವರು ಯಾರು ..? ಏನು ಮಾಡುತ್ತಾರೆ..? ಅವರ ಸಂಪರ್ಕ ಏನು..? ಎಂಬುದನ್ನು ವಿಚಾರಿಸದೇ ನಾವು ಗೋಪಾಲಕರು ಗೋವುಗಳಿಗೆ ಮೇವಿಗೆ ಖರ್ಚು ಮಾಡುವ ಹಣ ಉಳಿತು… ಗೋವುಗಳ ನಿರ್ವಹಣೆ ಮಾಡುವ ಕೆಲಸ ಕಡಿಮೆ ಆತು… ಅಂತ ಸಮಾಧಾನ ಮಾಡಿ ಕೊಂಡರೆ ಅದು ದೇವರ ಕೋರ್ಟ್ ನಲ್ಲಿ ದೊಡ್ಡ ಗಂಭೀರವಾದ ಅಪರಾಧ ವೇ…
ಆ ಕಸಾಯಿ ಮತ್ತು ನಮ್ಮ ಮನೆಯಿಂದ ಹಸುಗಳ ಕೊಂಡೊಯ್ಯುವ ರಮೇಶ ಸುರೇಶ ರಂತಹ ಸ್ವಧರ್ಮಿ ಕಸಾಯಿಗಳಿಗಿಂತ ವಿಚಾರಿಸಿದೇ ಗೋವುಗಳನ್ನ ದಾಟಿ ಸಿದ ನಾವೇ ದೊಡ್ಡ ಅಪರಾಧಿಗಳಾಗುತ್ತೇವೆ.
ಗೋಪಾಲಕರಲ್ಲಿ ಒಂದು ವಿನಂತಿ: ದಯಮಾಡಿ ನಿಮ್ಮ ಹಸುಗಳನ್ನು ಖರೀದಿಸುವವರ ಹಿನ್ನೆಲೆ ವಿಚಾರಿಸದೇ ಮಾರಬೇಡಿ… ಸಮೀಪದ ಗೋಶಾಲೆ ಗಳನ್ನು ಸಂಪರ್ಕ ಮಾಡಿ ಅವರಿಗೆ ಏನೋ ಕೊಟ್ಟು ಹಸುಗಳನ್ನು ನೀಡಿ… ದಯಮಾಡಿ ಇಂತಹ ಕಸಾಯಿಗಳ ಕೈಲಿ ಮುಗ್ದ ನಿರುಪದ್ರವಿ ಭೂಮಿಯ ಮೇಲಿನ ಜೀವಂತ ದೇವರಾದ ಗೋವುಗಳನ್ನ ಮಾರದಿರಿ..ಹೀಗೆ ಅಕ್ರಮ ಕಸಾಯಿಗಳಿಗೆ ಮಾರುವುದು ಮಹಾಪಾಪ…!!
ಈ ಕಸಾಯಿಗಳು ಈ ನಮ್ಮ ಹಸುಗಳಿಗೆ ಪರಮ ಹಿಂಸೆ ಮಾಡಿ ಲಾರಿ ಗಳಲ್ಲಿ ಮೂಟೆ ತುಂಬಿದಂತೆ ತುಂಬಿ ಕೊಂಡೊಯ್ಯುತ್ತಾರೆ..!! ಗೋವುಗಳ ಕಾಲುಗಳನ್ನು ಕಡಿದು ಕಾರಿನಲ್ಲಿ ತುಂಬಿ ಕೊಂಡೊಯ್ಯುತ್ತಾರೆ. ನಮ್ಮ ಗೋವುಗಳು ಈ ಹಿಂಸೆಯಲ್ಲಿ ನೋವಿನಿಂದ ಹಾಕುವ ಕಣ್ಣೀರು ನಮ್ಮ ಪಾಪದ ಕೊಡ ತುಂಬಿಸುತ್ತದೆ… ಆದ್ದರಿಂದ ಗೋಪಾಲಕರು ಈ ವಿಚಾರದಲ್ಲಿ ದಯಮಾಡಿ ಜಾಗೃತರಾಗಿ.. …