ಡಾ.ಎಚ್.ಜಿ ಶ್ರೀಧರ್ ಅವರು ಎಲೆ ಮರೆಯ ಕಾಯಿಯಂತೆ ಉಳಿದವರು. ಯಾವತ್ತಿಗೂ ತಮ್ಮ ಇರುವನ್ನು ಪ್ರದರ್ಶಿಸದೇ ನಾಟಕ, ಕಾದಂಬರಿ, ಸಂಶೋಧನೆ, ಸಂಘಟನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೈ ಆಡಿಸಿ, ಸಮಾಜಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಕೊಡುಗೆ ನೀಡಿದ ಇವರು ನಮಗೊಂದು ಹೆಮ್ಮೆ ಮತ್ತು ಇಂದಿನ ಯುವ ಸಾಹಿತಿಗಳಿಗೆ ಆದರ್ಶ ಎಂದು ಪುತ್ತೂರು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಐತಪ್ಪ ನಾಯ್ಕ್ ಹೇಳಿದರು.
ಇಲ್ಲಿನ ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ (ಸ್ವಾಯತ್ತ)ದಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಡಾ.ಎಚ್ ಜಿ ಶ್ರೀಧರ ಇವರ ಬದುಕು- ಬರೆಹ ಕುರಿತ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ .ಶ್ರೀಧರ್ ಹೆಚ್ ಜಿ ಮಾತನಾಡಿ, ಓರ್ವ ಗುರು ಉಳಿಯುವುದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಾತ್ರ. ವಿದ್ಯಾರ್ಥಿಗಳ ಜೊತೆಗಿನ ಭಾವನಾ ಬೆಸುಗೆ ಅಗತ್ಯವಾದುದು. ಸಂಸ್ಥೆ ನನಗೆ ನೀಡಿರುವ ಪ್ರೀತಿ ಅಪಾರವಾದದ್ದು, ಇದಕ್ಕೆ ನಾನು ಸದಾ ಚಿರಋಣಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಸಾಹಿತಿ ಡಾ. ಡಾ.ಎಚ್. ಜಿ ಶ್ರೀಧರ್ ಅವರ ಕೃತಿಗಳು ಹಾಗೂ ಅವರ ಜೀವನದ ಬಗೆಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ವಿವಿಧ ವಿಚಾರಗೋಷ್ಠಿಗಳು ನಡೆಯಿತು.
ಕನ್ನಡ ಸಂಘದ ವತಿಯಿಂದ ನಡೆಸಲಾದ ರಸಪ್ರಶ್ನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ದೀಪ, ಸೌಮ್ಯ ಆಶಯ ಗೀತೆ ಹಾಡಿದರು. ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್ ಸ್ವಾಗತಿಸಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮನಮೋಹನ್ ಎಂ ವಂದಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ ಟಿ ಕಾರ್ಯಕ್ರಮ ನಿರೂಪಿಸಿದರು.