ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಡಿನೆಲ್ಲೆಡೆ ನಾಗದೋಷ ನಿವಾರಣೆಯ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಈ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಉತ್ಸವದ ಸಂದರ್ಭ ಮಾತ್ರಾ ನಡೆಯುವ ವಿಶೇಷ ಸೇವೆಗಳಾದ ಎಡೆಸ್ನಾನ ಹಾಗೂ ಬ್ರಹ್ಮರಥೋತ್ಸವ ಸೇವೆ ಹಾಗೂ ಬೀದಿ ಮಡೆಸ್ನಾನ ಗಮನ ಸೆಳೆಯುತ್ತದೆ. ಈ ಬಾರಿ ಮೂರು ದಿನಗಳಲ್ಲಿ 489 ಮಂದಿ ಭಕ್ತರಿಂದ ಎಡೆಸ್ನಾನ ಹಾಗೂ 141 ಮಂದಿ ಭಕ್ತರಿಂದ ಬ್ರಹ್ಮರಥ ಸೇವೆ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ವಾರ್ಷಿಕ ಜಾತ್ರಾ ಉತ್ಸವದ ಸಂದರ್ಭ ಮಡೆಸ್ನಾನ ನಡೆಯುತ್ತಿತ್ತು. ಸಂಪ್ರದಾಯಗಳ , ಆಚರಣೆಗಳಲ್ಲಿ ಸಹಜ ಬದಲಾವಣೆಯ ಬಳಿಕ ಎಡೆಸ್ನಾನವು ಜಾರಿಗೆ ಬಂದಿತ್ತು. ದೇವರ ಅನ್ನ ಪ್ರಸಾದವನ್ನು ದೇವಸ್ಥಾನದ ಹೊರಾಂಗಣದಲ್ಲಿ ಇರಿಸಿ ಗೋವುಗಳಿಂದ ಈ ಪ್ರಸಾದವನ್ನು ತಿನ್ನಿಸಿದ ಬಳಿಕ ಭಕ್ತಾದಿಗಳು ಉರುಳುಸೇವೆ ನಡೆಸುತ್ತಾರೆ. ಚಂಪಾಷಷ್ಠಿ ಮಹೋತ್ಸವದ ಮೂರು ದಿನಗಳ ಕಾಲ ಈ ಸೇವೆ ನಡೆಯುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಈ ಸೇವೆ ಸ್ಥಗಿತವಾಗಿತ್ತು. ಈ ಬಾರಿ ಮತ್ತೆ ಆರಂಭಗೊಂಡ ಸೇವೆಯಲ್ಲಿ ಒಟ್ಟು ಮೂರು ದಿನಗಳ ಕಾಲ 489 ಮಂದಿ ಭಕ್ತರು ಸೇವೆ ನಡಸಿದರು. ಷಷ್ಠಿ ದಿನವಾದ ಮಂಗಳವಾರ 210 ಮಂದಿ ಎಡೆಸ್ನಾನ ಸೇವೆ ನೆರವೇರಿಸಿದರು.
ಮಂಗಳವಾರ ಬೆಳಗ್ಗೆ 7.05ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನೆರವೇರಿ, ಬ್ರಹ್ಮರಥೋತ್ಸವ ಜರುಗಿತು.141 ಮಂದಿ ಭಕ್ತರು ಬ್ರಹ್ಮರಥ ಸೇವೆ ನೆರವೇರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಮಹಾಪ್ರಸಾದ ವಿತರಣೆಯಾಗುತ್ತದೆ.
ಲಕ್ಷದೀಪೋತ್ಸವ ಬಳಿಕ ಬೀದಿ ಮಡೆಸ್ನಾನ ನಡೆಯುತ್ತದೆ. ಕುಮಾರಧಾರ ತೀರ್ಥ ಸ್ನಾನದಿಂದ ದೇವಳದ ತನಕ ಸುಮಾರು 2ಕಿ.ಮೀ ದೂರದವರೆಗೆ ಉರುಳುತ್ತಾ ಸಾಗುವ ಅತ್ಯಂತ ಕಠಿಣವಾದ ಹರಕೆ ಸೇವೆ ಬೀದಿಯ ಉರುಳು ಸೇವೆ. ಈ ಸೇವೆ ಕೂಡಾ ಬ್ರಹ್ಮರಥೋತ್ಸವದ ಬಳಿಕ ಕೊನೆಗೊಳ್ಳುತ್ತದೆ. ನೂರಾರು ಮಂದಿ ಈ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.
Edesnana seva was held at #KukkeSubrahmanya temple during the annual festival.
ವಾರ್ಷಿಕ ಜಾತ್ರಾ ಉತ್ಸವದ ಸಂದರ್ಭ #ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಡೆಸ್ನಾನ ಸೇವೆ ನಡೆಯಿತು.#Kukketemple #Kukke pic.twitter.com/bDr43rLxfT— theruralmirror (@ruralmirror) November 29, 2022
Advertisement