ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ

May 15, 2024
11:34 AM
ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು ಆದಿ ಶಂಕರರು. ಜೀವಿಸಿದ್ದ 32 ವರ್ಷಗಳ ಅಲ್ಪಾವಧಿಯಲ್ಲಿ ದೇಶದ ಮೂಲೆ ಮೂಲೆಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಹಿಂದೂ ಧರ್ಮವನ್ನು ಪುನರುತ್ಥಾನ ಗೊಳಿಸಿದರು.

ಇದೇ ಮೇ ತಿಂಗಳ 12ರಂದು ಅಂದರೆ ವೈಶಾಖ ಶುಕ್ಲಪಕ್ಷದ ಪಂಚಮಿ ತಿಥಿಯಂದು 1236ನೇ ಶಂಕರ
ಜಯಂತಿಯನ್ನು ಆಚರಿಸಿದೆವು. ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ
ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು ಆದಿ ಶಂಕರರು. ಅದ್ವೈತ ತತ್ವದ ಪ್ರತಿಪಾದಕರಾಗಿ ತಾವು
ಜೀವಿಸಿದ್ದ 32 ವರ್ಷಗಳ ಅಲ್ಪಾವಧಿಯಲ್ಲಿ ದೇಶದ ಮೂಲೆ ಮೂಲೆಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಹಿಂದೂ ಧರ್ಮವನ್ನು ಪುನರುತ್ಥಾನ ಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು
ಒಗ್ಗೂಡಿಸಿ ಷಣ್ಮತ ಪ್ರತಿಪಾದಕರೆನ್ನಿಸಿದವರು. ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಬಾಷ್ಯ ಬರೆದ
ಮೊದಲ ಆಚಾರ್ಯರಾಗಿ ಶಂಕರ ಭಗವತ್ಪಾದರು ಪ್ರಸಿದ್ಧರಾದರು. …….ಮುಂದೆ ಓದಿ…..

Advertisement

ಈ ಲೇಖನದ ಶಿರೋನಾಮೆ ಸ್ವಲ್ಪ ಗೊಂದಲ ಉಂಟು ಮಾಡಬಹುದು. ಏಕೆಂದರೆ “ಭಜಗೋವಿಂದಂ
ಭಜಗೋವಿಂದಂ ಭಜಗೋವಿಂದಂ ಮೂಢಮತೇ” ಎಂಬ ಶ್ಲೋಕವನ್ನು ರಾಗವಾಗಿ ಹಾಡುವಾಗ ಅದು ಮೃದು
ಮಧುರವಾಗಿ ಕೇಳುತ್ತದೆ. ಆದರೆ ಅದು ಹುಟ್ಟಿದ್ದು ಆಕ್ರೋಶಿತ ಶಂಕರರ ಕಂಠದಿಂದ ಎಂಬುದು ವಿಸ್ಮಯ ಆದರೂ
ಸತ್ಯ. ಕ್ರೌಂಚಗಳ ಮಿಥುನಕ್ಕೆ ಅಡ್ಡಿಯಾಗುವಂತೆ ಬಾಣವನ್ನೆಸೆದು ಗಂಡು ಕ್ರೌಂಚದ ಸಾವಿಗೆ ಕಾರಣನಾದ ಬೇಡನನ್ನು
ಉದ್ದೇಶಿಸಿ, “ ಮಾನಿಷಾದ ತ್ವಮಗಮ: ಶಾಶ್ವತೀಃ ಸಮಾಃ | ಯತ್ ಕ್ರೌಂಚ ಮಿಥುನಾದೇಕ ಮವಧಿಃ ಕಾಮ
ಮೋಹಿತಮ್” ಎಂದರೆ ಪ್ರೀತಿಯಲ್ಲಿ ಮುಳುಗಿದ್ದ ಹಕ್ಕಿಗಳನ್ನು ನೋಯಿಸಿದ್ದರಿಂದ ನೀನು ದೀರ್ಘಕಾಲ ವಿಶ್ರಾಂತಿಯನ್ನು
ಕಾಣುವುದಿಲ್ಲ ಎಂದು ಕ್ರೋಧ ಮತ್ತು ದುಃಖದಿಂದ ಸ್ವಯಂಪ್ರೇರಿತವಾಗಿ ವಾಲ್ಮೀಕಿಯ ಬಾಯಿಂದ ಹೊರಟ ಮೊದಲ
ಶ್ಲೋಕವು ರಾಮಾಯಣಕ್ಕೆ ನಾಂದಿಯಾಗಿರುವಂತೆ ಇಲ್ಲಿಯೂ ಶಂಕರರು ಆಕ್ರೋಶಗೊಂಡು ಉದ್ಗರಿಸಿದ ಶ್ಲೋಕವು
ಮುಂದಿನ 30 ಶ್ಲೋಕಗಳಿಗೆ ನಾಂದಿಯಾದಂತಿದೆ.

ಶಂಕರಾಚಾರ್ಯರು ತಮ್ಮ ಹದಿನಾಲ್ಕು ಮಂದಿ ಶಿಷ್ಯರೊಂದಿಗೆ ಕಾಶಿಯಾತ್ರೆಗೆ ತೆರಳಿದ್ದರು. ಅಲ್ಲಿಯ
ಬೀದಿಯಲ್ಲಿ ಸಾಗುತ್ತಿದ್ದಾಗ ಒಬ್ಬ ವೃದ್ಧ ವ್ಯಕ್ತಿಯು ಸಂಸ್ಕೃತ ವ್ಯಾಕರಣವನ್ನು ಕಲಿಯಲು ತಿಣುಕುತ್ತಿದ್ದುದನ್ನು ಕಂಡು
ಅಸಹನೆಗೊಂಡರು. ಈ ವಯಸ್ಸಿನಲ್ಲಿ ಈತ ವ್ಯಾಕರಣ ಕಲಿಯುವ ಬದಲು ಮಾಡಬೇಕಾದ್ದೇನು ಎಂಬುದನ್ನು ತಿಳಿಸಲು
ಆತನನ್ನು “ಮೂಢಮತೇ” ಎಂದು ಕರೆದು “ಮೃತ್ಯು ಸನ್ನಿಹಿತವಾದಾಗ (ಸಂಪ್ರಾಪ್ತೇ ಸನ್ನಿಹಿತೇ ಕಾಲೇ) ನೀನು
ಬಾಯಿಪಾಠ ಮಾಡುವ (ಡುಕ್ರುಂ ಕರಣೇ) ವ್ಯಾಕರಣವು ನೆರವಾಗುವುದಿಲ್ಲ. ಅದರ ಬದಲು ಗೋವಿಂದನ ಭಜನೆ
ಮಾಡು. ಅದು ನೆರವಿಗೆ ಬರುತ್ತದೆ.” ಎಂದು ಬೋಧಿಸುತ್ತಾರೆ. ಶಂಕರರ ಉದ್ದೇಶ ಮತ್ತು ಬೋಧನೆಯ ಅರ್ಥವನ್ನು
ಗಮನಿಸಿದರೆ ಅದು ಮೃದು ಧ್ವನಿಯಲ್ಲಿ ಉದ್ಗರಿಸಿದ್ದಲ್ಲ. ಹೆಡ್ಡನಿಗೆ ತೀಕ್ಷ್ಣವಾಗಿಯೇ ಹೇಳಬೇಕಾದ ಅವಶ್ಯಕತೆ ಇದೆ.
ಹಾಗಾಗಿ ಇದೇ ಧಾಟಿಯಲ್ಲಿ ಮುಂದಿನ ಶ್ಲೋಕಗಳಲ್ಲೂ ಶಂಕರರು ಧನ ಕನಕ ಸುಖ ಸೌಲಭ್ಯಗಳ ಅನುಭೋಗದ
ಆಸಕ್ತಿಯಲ್ಲಿ ಮುಳುಗಿದ ಮನುಷ್ಯನನ್ನು ಎಚ್ಚರಿಸುವ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅವೆಲ್ಲವೂ ಶಂಕರರ
“ಬ್ರಹ್ಮಸತ್ಯಂ ಜಗನ್ಮಿಥ್ಯಾ” ಎಂಬ ತತ್ವಕ್ಕೆ ಅನುಗುಣವಾಗಿ ಹೇಳಿದ ಬೋಧನೆಗಳಾಗಿವೆ.

ಎರಡನೇಯ ಶ್ಲೋಕದಲ್ಲಿ “ನಿನ್ನ ಕೆಲಸದ ಪ್ರತಿಫಲಗಳನ್ನು ಮೀರಿದ ಸಂಪತ್ತು ಬೇಕೆಂಬ ಆಸೆಯನ್ನು
ಇಟ್ಟುಕೊಳ್ಳಬೇಡ” (ನಿಜ ಕರ್ಮೋಪಾತ್ತಂ ವಿತ್ತಂ, ಕುರು ಸದ್ಬುದ್ಧಿಂ ಮನಸಿ ವಿತೃಷ್ಟಾಮ್) ಎಂದು ಹೇಳಿದ್ದಾರೆ.
ಮೂರನೇ ಶ್ಲೋಕದಲ್ಲಿ ಹೆಣ್ಣಿನ ಸ್ತನಗಳು ಹಾಗೂ ನಾಭಿ ಪ್ರದೇಶಗಳಿಗೆ ಆಕರ್ಷಿತರಾಗದೆ ಇರಲು ಅವುಗಳು ಕೂಡಾ
ಆಕೆಯ ಮಾಂಸದ ಇನ್ನೊಂದು ರೂಪ ಎಂದು ತಿಳಿದರೆ ಸಾಕು. ಈ ತಿಳುವಳಿಕೆ ಬಂದಾಗ “ಮಾಯಾ
ಮೋಹಾವೇಷಕ್ಕೆ” ಮರುಳಾಗದೆ ಇರಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ನಾಲ್ಕನೇ ಶ್ಲೋಕದಲ್ಲಿ ಮನುಷ್ಯನ ಜೀವನವೆಂದರೆ ಕಮಲದಳದ ಮೇಲೆ ಬಿದ್ದ ಮಳೆ ನೀರು. ಅದು
ಹನಿಗಳಾಗಿ ನೆಲಕ್ಕುರುಳುವಂತೆ ಬದುಕು ಆಶಾಶ್ವತವಾದುದು. ದುಃಖ, ಸ್ವಾರ್ಥ ಹಾಗೂ ರೋಗಗಳಿಗೆ ಪಕ್ಕಾಗುವಂಥದ್ದು
ಎಂದಿದ್ದಾರೆ. ಐದನೇ ಶ್ಲೋಕದಲ್ಲಿ ವ್ಯಕ್ತಿಯ ನಿಜ ಪರಿವಾರವೆಂದು ಅಂದರೆ ಹತ್ತಿರ ಸಂಬಂಧಿಗಳೆಂದು ಆಸಕ್ತಿ
ತೋರುವವರೂ ಕೊನೆಗಾಲದಲ್ಲಿ ಹತ್ತಿರದಲ್ಲಿರುವುದಿಲ್ಲ.

ಆರನೇ ಶ್ಲೋಕದಲ್ಲಿ ದೇಹದಲ್ಲಿ ಶ್ವಾಸ ನಿಂತಾಗ ಹೆಂಡತಿ ಕೂಡ ಮೃತ ಶರೀರವನ್ನು ನೋಡಲಾಗದ ಭಯದಿಂದ ದೂರ ಹೋಗುತ್ತಾಳೆ. ಹೀಗಾಗಿ ಜೀವನವು ಹೇಗೆ ಲೆಕ್ಕಕ್ಕೆ ಸಿಗದಂತೆ ಕಳೆದು ಹೋಗುತ್ತದೆ ಎಂಬುದನ್ನು ಏಳನೇ ಶ್ಲೋಕದಲ್ಲಿ ಸೂಚಿಸಿದ್ದಾರೆ. ವ್ಯಕ್ತಿಯ ಬಾಲ್ಯವು ಕ್ರೀಡೆಯಲ್ಲಿ ಕಳೆಯುತ್ತದೆ, ತಾರುಣ್ಯದಲ್ಲಿ ಕಾಮಾಸಕ್ತಿಯಿಂದ ಕಳೆಯುತ್ತದೆ, ವೃದ್ಧಾಪ್ಯವು ತನ್ನಿಂದ ಮಾಡಲಾಗದ ಅಥವಾ ಮಾಡಿದ್ದರ ಫಲ ಸಿಗದ ಚಿಂತೆಯಲ್ಲೇ ಕಳೆಯುತ್ತದೆ. ಹಾಗಾಗಿ ಪರಬ್ರಹ್ಮನಲ್ಲಿ ಆಸಕ್ತಿ ಹೊಂದುವ ವ್ಯವಧಾನ ಇರುವವರೇ ಇಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.

ಎಂಟನೇ ಶ್ಲೋಕದಲ್ಲಿ ಯಾರು ಹೆಂಡತಿ, ಯಾರು ಗಂಡ, ಯಾರು ಪುತ್ರ, ಯಾರು ಎಲ್ಲಿಂದ ಬಂದರು? ಇದನ್ನು ಅರ್ಥೈಸಿಕೊಳ್ಳುವುದೇ ತೀವ್ರ ವಿಚಿತ್ರವಾದ ಸಂಗತಿಯಾಗಿದೆ. (ಸಂಸಾರೋಯಮತೀವ ವಿಚಿತ್ರಃ) ಎನ್ನುತ್ತಾರೆ.
ಮೇಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವಿರುವುದು ಸತ್ಸಂಗದಲ್ಲಿ ಎಂಬುದಾಗಿ ಒಂಭತ್ತನೇ ಶ್ಲೋಕದಲ್ಲಿ
ವಿವರಿಸಿದ್ದಾರೆ. ನಿಃಸಂಗತ್ವ ಅಥವಾ ಅಂಟಿಕೊಳ್ಳದಿರುವಿಕೆಯಲ್ಲಿ ಸತ್ಸಂಗವಿರುತ್ತದೆ, ನಿಸ್ಸಂಗದಲ್ಲಿ ನಿರ್ಮೋಹತ್ವ
ಉಂಟಾಗುತ್ತದೆ, ನಿರ್ಮೋಹತ್ವದಿಂದಾಗಿ ಚಿತ್ತವು ನಿಶ್ಚಲ ತತ್ವದಲ್ಲಿ ನೆಲೆಗೊಳ್ಳುತ್ತದೆ ಹಾಗೂ ಅದರಿಂದಲೇ
ಜೀವನ್ಮುಕ್ತಿ ಸಿಗುತ್ತದೆ. ಇನ್ನು, ವಯಸ್ಸು ಕಳೆದಂತೆ ಕಾಮ ವಿಕಾರ ಇಳಿಯುತ್ತದೆ. ಶುಷ್ಕ ಕೆರೆಯಿಂದ ಏನು
ಪ್ರಯೋಜನ? ವಿತ್ತ ಕಳೆದುಕೊಂಡ ವ್ಯಕ್ತಿ ಯಾರಿಗೆ ಬೇಕು? ಇಂತಹ ಸತ್ಯವನ್ನು ತಿಳಿದಾಗ ಸಂಸಾರ ಎಂಬುದರ
ನಿಜವೇನು ಎಂಬುದು ತಿಳಿಯುತ್ತದೆ ಎಂಬುದು ಹತ್ತನೇ ಶ್ಲೋಕದ ತಾತ್ಪರ್ಯವಾಗಿದೆ.

ಹನ್ನೊಂದನೇ ಶ್ಲೋಕದಲ್ಲಿ ಧನ ಜನ ಮತ್ತು ಯೌವ್ವನದ ಮದ ಪಡಬೇಡ. ಇವೆಲ್ಲವೂ ಕ್ಷಣಿಕ. ಪ್ರಪಂಚದ
ಮಾಯೆಯ ಆಕರ್ಷಣೆಗೆ ಒಳಗಾಗಬೇಡ. ಆಗ ಮಾತ್ರ ಶಾಶ್ವತ ಸತ್ಯದ ಅರಿವಾಗುತ್ತದೆ. ರಾತ್ರೆ ಹಗಲುಗಳ
ಆವರ್ತದಲ್ಲಿ ದಿನಗಳು ಕಳೆಯುತ್ತವೆ, ಶಿಶಿರ ವಸಂತ ಮಾಸಗಳು ಬಂದು ಹೋಗಿ ವರ್ಷಗಳು ಉರುಳುತ್ತವೆ. ಹೀಗೆ
ಕಾಲವು ಗತಿಸುತ್ತಿದ್ದರೂ ಆಸೆಯೆಂಬುದು ಮುಗಿಯುವುದಿಲ್ಲ ಎಂಬುದು ಹನ್ನೆರಡನೇ ಶೋಕದ ತಾತ್ಪರ್ಯವಾಗಿದೆ.
ಭಜಗೋವಿಂದಂ ಶ್ಲೋಕಗಳ ಸರಣಿಯಲ್ಲಿ ಇನ್ನೂ ಹತ್ತೊಂಭತ್ತು ಶ್ಲೋಕಗಳಿವೆ.

ಪ್ರತಿಯೊಂದರಲ್ಲಿಯೂ ವಿಥ್ಯೆಯನ್ನು ಮೀರಿ ಸತ್ಯದತ್ತ ನಮ್ಮ ಗಮನ ಇರಬೇಕೆಂದು ಅಂತಸ್ಥವಾಗಿ ಸೂಚಿಸಿದ್ದಾರೆ. ಮಹಾನ್ ತತ್ವಜ್ಞರಾದ ಶಂಕರಾಚಾರ್ಯರ ಈ ಬೋಧನೆಯನ್ನು ನಾವು ಅಂತರ್ಗತಿಸಿಕೊಂಡರೆ “ನಮ್ಮದ್ದು ಯಾವುದು ಮತ್ತು ನಮ್ಮದಲ್ಲದ್ದು ಯಾವುದು?” ಎಂಬುದನ್ನು ಸುಲಭವಾಗಿ ತಿಳಿದು ನಮ್ಮದಲ್ಲದ್ದನ್ನು ಎಸೆದು ಹಗುರವಾಗಿ ಸುಖ ಜೀವನ
ಸಾಧಿಸಬಹುದು. ಆ ದಿಸೆಯಲ್ಲಿ ಶಂಕರ ಜಯಂತಿಯು ನಮಗೆ ಅಥಪೂರ್ಣವಾಗಿ ಪರಿಣಮಿಸಲಿ ಎಂದು ಆಶಿಸುತ್ತೇನೆ.

ಬರಹ :
ಚಂದ್ರಶೇಖರ ದಾಮ್ಲೆ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ಹೊಸೆದ ಬಿರುದುಗಳು ನಾಚುತ್ತಿವೆ!
May 4, 2025
7:24 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಕಾಯಿ ಪಕೋಡ
May 3, 2025
8:00 AM
by: ದಿವ್ಯ ಮಹೇಶ್
ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು
May 1, 2025
10:52 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group