ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಶಿವಮೊಗ್ಗದ ಅಲ್ಲಮಪ್ರಭು ಉದ್ಯಾವನದಲ್ಲಿ ನಡೆಯುತ್ತಿರುವ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಮೇಳಕ್ಕೆ ಸಾವಿರಾರು ಸಾರ್ವಜನಿಕರು ಆಗಮಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಲ್ಕು ದಿನಗಳ ಕಾಲ ಆಯೋಜಿಸಿರುವ ಈ ಮೇಳದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಮೇಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ತಮ್ಮ ತಯಾರಿಕೆಯ ವಸ್ತುಗಳನ್ನು ಪ್ರದರ್ಶಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ವಿಶೇಷ ಗಮನ ಸೆಳೆಯುತ್ತಿದೆ.
ಸಚಿವ ಮಧು ಬಂಗಾರಪ್ಪ, ಯಡಿಯೂರಪ್ಪ ಭೇಟಿ: ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಅವರು ಉದ್ಯಾನವನಕ್ಕೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ಮತ್ತು ಮೇಳವನ್ನು ವೀಕ್ಷಿಸಿದರು. ಮೇಳದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ಸ್ವಸಹಾಯ ಸಂಘಗಳ ಮಹಿಳೆಯರ ಉತ್ಪನ್ನಗಳ ಗುಣಮಟ್ಟ ಹಾಗೂ ಗ್ರಾಮೀಣ ಉದ್ಯಮಶೀಲತೆಯನ್ನು ಪ್ರಶಂಸಿಸಿದರು.
ರಾಷ್ಟ್ರೀಯ ಜೀವನೋಪಾಯ ಯೋಜನೆಯಿಂದ ಬದುಕಿಗೆ ದಾರಿ : ಮೇಳದಲ್ಲಿ ಭಾಗವಹಿಸಿರುವ ರಾಷ್ಟ್ರೀಯ ಜೀವನೋಪಾಯ ಯೋಜನೆಯ ಫಲಾನುಭವಿ ಮಂಗಳ ನಾಗರಾಜ್ ಮಾತನಾಡಿ, “ಕೇಂದ್ರ ಸರ್ಕಾರದ ಯೋಜನೆಯಿಂದ ಕುಂಬಾರಿಕೆಯಲ್ಲಿ ವಿವಿಧ ಕಲಾಕೃತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಈ ಯೋಜನೆ ನಮಗೆ ಅತ್ಯಂತ ಉಪಯುಕ್ತವಾಗಿದ್ದು, ಬದುಕಿಗೆ ದಾರಿ ಮಾಡಿಕೊಟ್ಟಿದೆ,” ಎಂದು ಹೇಳಿದರು.
ಮಲೆನಾಡಿನ ಹಸೆ ಚಿತ್ತಾರಕ್ಕೆ ಮಾರುಕಟ್ಟೆ ನಿರ್ಮಾಣ: ಅಶ್ವಿನಿ ದೇವಗಂಗೆ ಮಾತನಾಡಿ, ಮಲೆನಾಡಿನ ಸಾಂಪ್ರದಾಯಿಕ ಹಸೆ ಚಿತ್ತಾರವನ್ನು ನಾವು ನಿರಂತರವಾಗಿ ಬರೆಯುತ್ತಾ ಬಂದಿದ್ದೇವೆ. ಇದಕ್ಕೆ ಮಾರುಕಟ್ಟೆ ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಜೀವನೋಪಾಯ ಯೋಜನೆಯ ಮೂಲಕ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಿದೆ,” ಎಂದು ತಿಳಿಸಿದರು.
ಮೇಳಕ್ಕೆ ಜನರ ನಿರಂತರ ಭೇಟಿ : ಸಿರಿಧಾನ್ಯ ಮೇಳ ಹಾಗೂ ಕರಕುಶಲ ಉತ್ಸವದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದ್ದು, ಗ್ರಾಮೀಣ ಕಲೆ ಮತ್ತು ಕೃಷಿ ಆಧಾರಿತ ಉದ್ಯಮಗಳಿಗೆ ಉತ್ತೇಜನ ಸಿಕ್ಕಿದೆ. ಸಾರ್ವಜನಿಕರಿಂದ ನಿರಂತರವಾಗಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.




