ರೈತ ಸಣ್ಣಪ್ಪನ ಬಳಿ ಇರುವುದು ಒಂದು ಎಕರೆ ಕೃಷಿ ಜಮೀನು.ಅದರಲ್ಲೇನಾದರೂ ಬೆಳೆ ಬೆಳೆಸೋಣ ಎಂದರೆ ಆತನಲ್ಲೇನೂ ಹಣ ಇಲ್ಲ.ಸಾಲ ಪಡಕೊಳ್ಳೋಣ ಅಂದರೆ ಬಡ್ಡಿ ವಿಪರೀತ ಆಗ್ತದೆ ಎಂಬ ಭಯ.ಬ್ಯಾಂಕಿಗೂ ಬಡ್ಡಿ ಇಲ್ಲದೆ ಸಾಲ ಕೊಡಲು ಸಾಧ್ಯ ಇಲ್ಲ.ಈರ್ವರಿಗೂ ಅನುಕೂಲವಾಗುವಂತಹ ಒಂದು ಪದ್ದತಿಯೇ ಅಲ್ಪಾವಧಿ ಬೆಳೆ ಸಾಲ.
ಸಣ್ಣಪ್ಪ ತನ್ನ ಜಮೀನಿನಲ್ಲಿ ಅಲಸಂಡೆ ಬೆಳೆ ಬೆಳೆಸ ಬೇಕೆಂದು ನಿರ್ಧರಿಸುತ್ತಾನೆ.ಅದಕ್ಕಾಗಿ ಅಗತ್ಯ ಇರುವ ಹಣಕ್ಕಾಗಿ ಆತ ಬ್ಯಾಂಕಿಗೆ ಹೋಗ್ತಾನೆ. ಬ್ಯಾಂಕಿನವರು ಒಂದು ಎಕರೆ ಅಲಸಂಡೆ ಬೆಳೆ ಬೆಳೆಸಲು ಖರ್ಚು ಎಷ್ಟು ಬೇಕು ಎಂಬುದನ್ನು ಸಂಶೋಧನಾಲಯಗಳ ಮುಖಾಂತರ ಪಟ್ಟಿ ಮಾಡಿಸಿಕೊಂಡಿದ್ದಾರೆ.ಅವರ ಪ್ರಕಾರ ಮೂವತ್ತು ಸಾವಿರ ರುಪಾಯಿ ಒಂದು ಎಕರೆ ಅಲಸಂಡೆ ಬೆಳೆಸಲು ಬೇಕಾಗುವ ಹಣ. ಬ್ಯಾಂಕ್ ಸಣ್ಣಪ್ಪನಿಗೆ ಅಲ್ಪಾವಧಿ ಬೆಳೆ ಸಾಲವಾಗಿ ಮೂವತ್ತು ಸಾವಿರ ರುಪಾಯಿ ಮಂಜೂರು ಮಾಡ್ತದೆ.ಆದರೆ ಅಷ್ಟೂ ಹಣ ಸಣ್ಣಪ್ಪನಿಗೆ ಆಗಲೇ ಬೇಕಾಗಿಲ್ಲ.ತಗೊಂಡು ಹೋದರೆ ಬಡ್ಡಿ ಕಟ್ಟೋದ್ಯಾರು? ಆತ ಮೊತ್ತ ಮೊದಲಿಗೆ ಒಂದು ಸಾವಿರ ರುಪಾಯಿ ಮಾತ್ರ ಪಡಕೊಳ್ತಾನೆ.ಆ ಒಂದು ಸಾವಿರ ರುಪಾಯಿಗೆ ಮಾತ್ರ ಬ್ಯಾಂಕ್ ಬಡ್ಡಿ ಲೆಕ್ಕಾಚಾರ ಆರಂಭಿಸುತ್ತದೆ.
ಸಣ್ಣಪ್ಪ ಆ ಹಣದಲ್ಲಿ ಜಮೀನಿನಲ್ಲಿದ್ದ ಕಳೆಗಳನ್ನೆಲ್ಲ ತೆಗೆಸ್ತಾನೆ.ದೊಡ್ಡ ಗಾತ್ರದ ಕಳೆಗಳು ಇದ್ದದ್ದರಿಂದ ಅವನ್ನು ಕಟ್ಟಿಗೆ ಅಂತ ಮಾರಾಟ ಮಾಡಲು ಸಾಧ್ಯ ಆಗ್ತದೆ.ಆ ಮೂಲಕ ಸಣ್ಣಪ್ಪನಿಗೆ ನೂರು ರುಪಾಯಿಗಳು ಸಿಗ್ತದೆ. ಸಣ್ಣಪ್ಪ ಈ ನೂರು ರುಪಾಯಿಯನ್ನು ಬ್ಯಾಂಕಿನಲ್ಲಿರುವ ತನ್ನ ಸಾಲದ ಖಾತೆಗೆ ಕಟ್ತಾನೆ.ಈಗ ಸಣ್ಣಪ್ಪನ ಸಾಲದ ಅಸಲಿನ ಮೊತ್ತ ಒಂಬೈನೂರು ರುಪಾಯಿಗಳು.ಬ್ಯಾಂಕ್ ಅಂದಿನಿಂದ ಆ ಒಂಬೈನೂರು ರುಪಾಯಿಗಷ್ಟೇ ಬಡ್ಡಿ ಲೆಕ್ಕಾಚಾರ ಮಾಡ್ತದೆ.
ಮತ್ತೆ ಸಣ್ಣಪ್ಪ ಟ್ರಾಕ್ಟರ್ ತರಿಸಿ ಉಳುಮೆ ಮಾಡಿಸ್ತಾನೆ.ಟ್ರಾಕ್ಟರಿಗೆ ಕೊಡಬೇಕಾದ ಮೂರು ಸಾವಿರ ರುಪಾಯಿ ಬ್ಯಾಂಕಿಂದ ಪಡೆದು ಕೊಡ್ತಾನೆ.
ಸಣ್ಣಪ್ಪನ ಸಾಲದ ಮೊತ್ತ ಇದೀಗ ಮೂರು ಸಾವಿರದ ಒಂಬೈನೂರು ರುಪಾಯಿಗಳು.ಬಡ್ಡಿ ಲೆಕ್ಕಾಚಾರ ಅಲ್ಲೀಂದೀಚೆಗೆ ಆ ಹಣಕ್ಕೆ.ಸಣ್ಣಪ್ಪ ಮತ್ತೆ ಮತ್ತೆ ಬೀಜಕ್ಕಾಗಿ, ಗೊಬ್ಬರಕ್ಕಾಗಿ, ಔಷಧಿಗಾಗಿ ಖರ್ಚು ಮಾಡಬೇಕಾಗ್ತದೆ. ಆವಾಗಾವಾಗ ಆತ ಬ್ಯಾಂಕಿಗೆ ಹೋಗಿ ಅದಕ್ಕೆ ಬೇಕಾದಷ್ಟು ಹಣ ಪಡೆದು ಬಳಸಿಕೊಳ್ತಾನೆ.ಸಾಲದ ಮೊತ್ತ ಬದಲಾದಂತೆ ಬಡ್ಡಿ ಲೆಕ್ಕಾಚಾರವೂ ಬದಲಾಗ್ತದೆ.
ಒಂದು ತಿಂಗಳ ಬಳಿಕ ಅಲಸಂಡೆ ಇಳುವರಿ ಆರಂಭವಾಗ್ತದೆ.ಮಾರಾಟ ಮಾಡಿದಂತೇ ಸಿಕ್ಕಿದ ಹಣವನ್ನೆಲ್ಲಾ ಸಣ್ಣಪ್ಪ ಬ್ಯಾಂಕಿನಲ್ಲಿರುವ ತನ್ನ ಸಾಲದ ಖಾತೆಗೆ ತುಂಬುತ್ತಾ ಬಂದಿದ್ದಾನೆ. ಹಣ ತುಂಬುತ್ತಿದ್ದಂತೇ ಬ್ಯಾಂಕ್ ಕೂಡಾ ಹೊಸದಾಗಿ ಬಡ್ಡಿ ಲೆಕ್ಕಾಚಾರ ಮಾಡ ಹೊರಟಿದೆ. ಅಂತಿಮವಾಗಿ ಎರಡು ತಿಂಗಳು ಕಳೆದಾಗ ಸಣ್ಣಪ್ಪ ತಾನು ಪಡೆದ ಸಾಲದ ಮೊತ್ತವನ್ನು ಸಂಪೂರ್ಣವಾಗಿ ಕಟ್ಟಿದ್ದಾನೆ.ಇದೀಗ ಬ್ಯಾಂಕ್ ಸಣ್ಣಪ್ಪನಿಗೆ ಕೊಟ್ಟ ಸಾಲಕ್ಕೆ ಒಟ್ಟು ಬಡ್ಡಿ ಎಷ್ಟಾಗ್ತದೆ ಅಂತ ಲೆಕ್ಕ ಹಾಕುತ್ತದೆ.ಮತ್ತು ಅಷ್ಟು ಹಣ ಕೊಟ್ಟರೆ ಸಾಲದ ಖಾತೆಯನ್ನು ರದ್ದು ಮಾಡಿ ಸಣ್ಣಪ್ಪನನ್ನು ಋಣ ಮುಕ್ತ ಅಂತ ಘೋಷಿಸ್ತದೆ.
ಈ ವ್ಯವಹಾರದಲ್ಲಿ ಸಣ್ಣಪ್ಪನಿಗೆ ಕೃಷಿ ಮಾಡಲು ಸಕಾಲದಲ್ಲಿ ಬೇಕಿದ್ದ ಹಣ ಸಿಕ್ಕಿದೆ.ಮತ್ತೆ ಮತ್ತೆ ಸಾಲ ತೆಗೆಯುವ ಬದಲು ಒಂದೇ ಸಾಲದಲ್ಲಿ ಅಗತ್ಯ ಇದ್ದಷ್ಟು ಹಣ ಮಂಜೂರಾಗಿದೆ.ಸಾಲದ ಒಟ್ಟು ಮೊತ್ತ ತೆಗೆದು ಕಟ್ಟಿದಂತೆ ವ್ಯತ್ಯಾಸ ಆಗುವುದರಿಂದ ಒಟ್ಟು ಬಡ್ಡಿ ಮೊತ್ತ ಕನಿಷ್ಟ ಮಟ್ಟಕ್ಕಿಳಿದಿದೆ.ಜೊತೆಗೆ ಬ್ಯಾಂಕಿನವರಿಗೂ ಕೊಟ್ಟ ಸಾಲದ ಹಣಕ್ಕೆ ಬರಬೇಕಾದ ಬಡ್ಡಿ ಸಂಪೂರ್ಣವಾಗಿ ಬಂದಿದೆ.ಯಾರಿಗೂ ನಷ್ಟ ಇಲ್ಲ.ಈರ್ವರಿಗೂ ಅನುಕೂಲ.
ಇದು ಬೆಳೆ ಸಾಲದ ಹಿಂದಿನ ತಾತ್ವಿಕತೆ.
ಬೆಳೆ ಬೆಳೆಸಲು ಬೇಕಿದ್ದಷ್ಟು ಮೊತ್ತವನ್ನು ಹಂತ ಹಂತವಾಗಿ ಪಡೆದುಕೊಳ್ಳುವುದು ಮತ್ತು ಬೆಳೆ ಬಂದ ಕೂಡಲೇ ತಗೊಂಡ ಸಾಲದ ಮರು ಪಾವತಿ ಮಾಡುವುದು.ಬಹುತೇಕ ಬೆಳೆಗಳಲ್ಲೂ ಕನಿಷ್ಟ ವರ್ಷಕ್ಕೆ ಒಮ್ಮೆಯಾದರೂ ಇಳುವರಿ ಇರುವುದರಿಂದ ಸಾಲದ ಅವಧಿಯೂ ಒಂದು ವರ್ಷಕ್ಕಷ್ಟೇ ಸೀಮಿತ.ತಗೊಂಡ ಸಾಲ ವರ್ಷಕ್ಕೊಮ್ಮೆಯಾದರೂ ಮರುಪಾವತಿ ಮಾಡಲೇ ಬೇಕು.
ವಾಸ್ತವ ಇಷ್ಟೊಂದು ಸರಳ ಅಲ್ಲ.ಹಲವಾರು ಕಾರಣಗಳು ಹಲವು ಹಂತಗಳಲ್ಲಿ ಹೆಚ್ಚುವರಿ ನಿಯಮಗಳನ್ನು ಹೇರುವಂತೆ ಮಾಡಿದೆ.
ರೈತ ತೆರಬೇಕಾದ ಬಡ್ಡಿ ಹಣವನ್ನು ಕನಿಷ್ಟ ಮಟ್ಟಕ್ಕಿಳಿಯುವಂತೆ ಮಾಡಿದ್ದರೂ ಆ ಕನಿಷ್ಟ ಬಡ್ಡಿದರವನ್ನೂ ಕೊಡಲು ರೈತ ಅಸಹಾಯಕನಾಗಿದ್ದಾನೆ ಎಂಬ ಚಿಂತನೆಯ ಮೇಲೆ ಮತ್ತಷ್ಟು ರಿಯಾಯಿತಿ ಕೊಡಲು ಸರಕಾರ ನಿರ್ಧರಿಸಿದ್ದು.
ಮೊದಲು ಕೇಂದ್ರ ಸರಕಾರ ರೈತ ತೆರಬೇಕಾದ ಬಡ್ಡಿ ಹಣದಲ್ಲಿ ಮೂರು ಶೇಕಡಾದಷ್ಟನ್ನು ತಾನು ಬ್ಯಾಂಕಿಗೆ ಮರು ತುಂಬಿಸಿಕೊಡುತ್ತೇನೆ ಅಂತ ಹೇಳಿತು.ಕರ್ನಾಟಕ ರಾಜ್ಯ ಸರಕಾರ ತಾನು ಇನ್ನುಳಿದ ಬಡ್ಡಿಯನ್ನೂ ಸಹಕಾರ ಸಂಘದಿಂದ ತೆಗೆದ ಅಲ್ಪಾವಧಿ ಬೆಳೆ ಸಾಲಗಳಿಗೆ ತುಂಬುತ್ತೇನೆ ಅಂತ ಹೇಳಿತು.ಈಗ ರೈತ ವಾಯಿದೆಗೆ ಸರಿಯಾಗಿ ತನ್ನ ಅಲ್ಪಾವಧಿ ಬೆಳೆ ಸಾಲದ ಅಸಲು ಹಣವನ್ನು ಮಾತ್ರ ಕಟ್ಟಿದರೆ ಆಯ್ತು.ಬಡ್ಡಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಜೊತೆ ಸೇರಿ ಸಹಕಾರ ಸಂಘಕ್ಕೆ ಕೊಡುತ್ತವೆ.ಕರ್ನಾಟಕ ರಾಜ್ಯದ ರೈತನಿಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಬೆಳೆ ಸಾಲ ಸಿಕ್ಕಂತಾಯಿತು.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ ವಿತರಿಸುವಂತಿಲ್ಲ.ರೈತ ಯಾವ ಬೆಳೆಗಳನ್ಬು ಬೆಳೆಯುತ್ತಿದ್ದಾನೆ ಎಂಬುದನ್ನು ಗಮನಿಸಿ ಆ ಬೆಳೆಗಳಿಗೆ ಸರಕಾರ ಜಿಲ್ಲಾ ಕೇಂದ್ರೀಯ ಬ್ಯಾಂಕ್ ಮುಖಾಂತರ ನಿರ್ಧರಿಸಿದಷ್ಟೇ ಸಾಲ ವಿತರಿಸ ಬಹುದು.ಜೊತೆಗೆ ಈ ಮಾದರಿ ವಿತರಿಸ ಬಹುದಾದ ಸಾಲಕ್ಕೊಂದು ಗರಿಷ್ಟ ಮಿತಿ ಸರಕಾರ ನಿರ್ಧರಿಸಿದೆ.
ಇಲ್ಲಿಯ ತನಕ ರೈತರಿಗೆ ವಿತರಿಸ ಬಹುದಾದ ರಿಯಾಯಿತಿ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲದ ಗರಿಷ್ಟ ಮಿತಿ ಮೂರು ಲಕ್ಷ ರುಪಾಯಿಗಳಾಗಿತ್ತು.ಇದೀಗ ಕೇಂದ್ರ ಸರಕಾರ ಈ ಮಿತಿಯನ್ನು ಐದು ಲಕ್ಷ ರುಪಾಯಿಗಳಿಗೆ ಏರಿಸಿದೆ.ಅಂದರೆ ಕೇಂದ್ರ ಸರಕಾರ ಐದು ಲಕ್ಷ ರುಪಾಯಿಯ ಮೊತ್ತದ ಸಾಲಕ್ಕೆ ತಾನು ಒಪ್ಪಿರುವ ಬಡ್ಡಿಯನ್ನು ಪಾವತಿಸಲು ಒಪ್ಪಿಕೊಂಡಿದೆ.
ಇನ್ನೀಗ ರಾಜ್ಯ ಸರಕಾರ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು.ಜೊತೆಗೆ ಜಿಲ್ಲಾ ಕೇಂದ್ರೀಯ ಬ್ಯಾಂಕ್ ಪ್ರತಿ ಬೆಳೆಗೆ ಕೊಡಬಹುದಾದ ಅಲ್ಪಾವಧಿ ಬೆಳೆ ಸಾಲದ ಮಿತಿಯನ್ನು ಹೆಚ್ಚಿಸ ಬೇಕು.ಆ ಬಳಿಕವಷ್ಟೇ ರೈತರಿಗೆ ಈ ಹೆಚ್ಚಳದ ಲಾಭ ಸಿಕ್ಕೀತು.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…