ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್-KMF ) ನಂದಿನಿ ಬ್ರ್ಯಾಂಡ್ನ ಪೂರ್ಣ ಕೆನೆಭರಿತ ಹಾಲಿನ ದರವನ್ನು ಹೆಚ್ಚಿಸಿದೆ. ಈ ಹಾಲು 6% ಕೊಬ್ಬು ಹಾಗೂ 9% SNF (ಕೊಬ್ಬುರಹಿತ ಘನಪದಾರ್ಥ ಹಾಲಿನಲ್ಲಿರುವ ಪೋಷಕಾಂಶದ ಭಾಗವು ಹಾಲಿನ ಕೊಬ್ಬು ಮತ್ತು ನೀರನ್ನು ಹೊರತುಪಡಿಸಿ ಬೇರೆಯಾಗಿರುತ್ತದೆ) ಅನ್ನು ಒಳಗೊಂಡಿದ್ದು ಈ ಹಿಂದೆ ಗ್ರಾಹಕರಿಗೆ ಒಂದು ಲೀಟರ್ಗೆ ರೂ 50 ಹಾಗೂ ಅರ್ಧಲೀಟರ್ಗೆ ರೂ 24 ಕ್ಕೆ ದೊರೆಯುತ್ತಿತ್ತು. ಆದರೀಗ ಗ್ರಾಹಕರು ಅದೇ ಬೆಲೆಯನ್ನು ನೀಡಿ 900 ಮಿಲಿ ಹಾಗೂ 450 ಮಿಲಿ ಹಾಲಿನ ಪ್ಯಾಕ್ಗಳನ್ನು ಖರೀದಿಸುವಂತಾಗಿದ್ದು ಕೆಎಂಎಫ್ ಹಾಲಿನ ಕೊರತೆಯನ್ನು ನೀಗಿಸಲು ತಂತ್ರ ಹೂಡಿದೆ.
ಅದೇ ಬೆಲೆ ಪ್ರಮಾಣ ಮಾತ್ರ ಕಡಿಮೆ:ಸಾಬೂನು, ಶ್ಯಾಂಪೂ, ಬಿಸ್ಕತ್ತು, ತಂಪು ಪಾನೀಯಗಳಿಗೆ ಅದೇ ದರವನ್ನು ವಿಧಿಸುತ್ತಾರೆ ಆದರೆ ಉತ್ಪನ್ನ ಪ್ರಮಾಣ ಮಾತ್ರ ಕಡಿಮೆಯಾಗಿರುತ್ತದೆ. ಇಂತಹ ಮಾರುಕಟ್ಟೆ ತಂತ್ರವನ್ನು ಹಲವಾರು ಗ್ರಾಹಕ ಸರಕುಗಳ ಕಂಪನಿಗಳು ವರ್ಷಗಳಿಂದ ಅನುಸರಿಸುತ್ತಿದ್ದರೂ ಈ ರೀತಿಯ ತತ್ವವನ್ನು ಹಾಲಿಗೆ ಅಳವಡಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಬೆಲೆ ಅದೇ ಆಗಿರುತ್ತದೆ ಆದರೆ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ.
ಹಾಲಿನ ಹಾಗೂ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳ:KMF ನವೆಂಬರ್ 24 ರಿಂದ ತನ್ನ ಎಲ್ಲಾ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿತ್ತು. ಸರಬರಾಜು ನಿಂತು ಹೋಗಿರುವುದರಿಂದ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ವಿಶೇಷವಾಗಿ ಕೊಬ್ಬಿನ ಕೊರತೆ ಇರುವುದರಿಂದ ಪೂರ್ಣ ಕೆನೆಭರಿತ ಹಾಲಿನ ದರ ಹೆಚ್ಚಿಸಲು ಹಾಗೂ ಕರ್ನಾಟಕದ ಹೊರಗೆ ತುಪ್ಪದ ಮಾರಾಟವನ್ನು ನಿಲ್ಲಿಸಲಾಯಿತು ಎಂದು ಉದ್ಯಮದ ಮೂಲಗಳು ತಿಳಿಸಿವೆ.
KMF ಭಾರತದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆ:271.34 LKPD ಹಾಲನ್ನು ಸಂಗ್ರಹಿಸುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮೂಲ್‌ನ ನಂತರ KMF ಭಾರತದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾಗಿದ್ದು, ಅದರ ಜಿಲ್ಲಾ ಒಕ್ಕೂಟಗಳು 2021-22 ರಲ್ಲಿ ದಿನಕ್ಕೆ ಸರಾಸರಿ 81.64 ಲಕ್ಷ ಕೆಜಿ (LKPD) ಹಾಲನ್ನು ಸಂಗ್ರಹಿಸುತ್ತವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಎಂಎಫ್‌ನ ಸಂಗ್ರಹಣೆಯು 9-10 ಎಲ್‌ಕೆಪಿಡಿ ಕಡಿಮೆಯಾಗಿದೆ. ಇದೀಗ ಸಂಸ್ಥೆಯು ಹೋಟೆಲ್ ಹಾಗೂ ಇತರ ಬೃಹತ್ ಗ್ರಾಹಕರಿಗೆ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ದೇಶಕ್ಕೆ ತಟ್ಟಿದೆ ಹಾಲಿನ ಕೊರತೆಯ ಬಿಸಿ:ಹಾಲಿನ ಕೊರತೆ ಬರಿಯ ಕರ್ನಾಟಕಕ್ಕೆ ಮಾತ್ರ ತಟ್ಟಿದ ಸಮಸ್ಯೆಯಲ್ಲ ಬದಲಿಗೆ ದೇಶದಾದ್ಯಂತ ಹಾಲಿನ ಕೊರತೆ ಇದೆ. ಮೊಸರು, ಲಸ್ಸಿ ಮತ್ತು ಐಸ್‌ಕ್ರೀಮ್‌ಗೆ ಬೇಡಿಕೆಯೊಂದಿಗೆ, ಏಪ್ರಿಲ್-ಜೂನ್ ಅವಧಿಯಲ್ಲಿ, ಪ್ರಸ್ತುತ ಕೊರತೆಯು ತೀವ್ರಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಮೇವು ಹಾಗೂ ಇನ್ನಿತರ ಮೇವಿನ ಉತ್ಪನ್ನಗಳ ಬೆಲೆ ಹೆಚ್ಚಾದುದೇ ಇದಕ್ಕೆ ಕಾರಣ.
ಮೇವು ಹಾಗೂ ಇನ್ನಿತರ ಉತ್ಪನ್ನಗಳ ಬೆಲೆ ಹೆಚ್ಚಳ:ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರೈತರು ಹಿಂಡಿಯ ಪ್ರಮಾಣವನ್ನು ಗರ್ಭಿಣಿ ಹಸು ಹಾಗೂ ಕರುಗಳಿಗೆ ಕಡಿಮೆ ಮಾಡಿದರು. ಅಂತೆಯೇ ಕಡಿಮೆ ಮೇವು ನೀಡುತ್ತಿದ್ದರು. ಇದರಿಂದ ಹಾಲಿನ ಗುಣಮಟ್ಟ ಕುಸಿಯಿತು, ಅಂತೆಯೇ ಜಾನುವಾರುಗಳನ್ನು ಕಾಡಿದ್ದ ಮುದ್ದೆ ಚರ್ಮ ಕಾಯಿಲೆ (ಲಂಪಿ ಸ್ಕಿನ್ ಡಿಸೀಸ್) ಹಾಲಿನ ಉತ್ಪಾದನೆಯಲ್ಲಿ ಇನ್ನಷ್ಟು ಕುಸಿತವನ್ನುಂಟು ಮಾಡಿದವು. ಕೋವಿಡ್ ನಂತರ ಹಾಲಿಗೆ ಬೇಡಿಕೆ ಹೆಚ್ಚಿದರೂ ಕೆಲವೊಂದು ಕಾರಣಗಳಿಂದ ಹಾಲಿನ ಗುಣಮಟ್ಟ ಕುಸಿಯಲಾರಂಭಿಸಿತು.