ನಾವೆಲ್ಲಾ ಗ್ರಾಮೀಣಾಭಿವೃದ್ಧಿಯ ಬಗ್ಗೆ ಮಾತನಾಡುತ್ತೇವೆ. ಯಾವುದು ಗ್ರಾಮೀಣಾಭಿವೃದ್ಧಿ, ಅದರ ವ್ಯಾಪ್ತಿ ಎಷ್ಟು ದೊಡ್ಡದು…?. ಉದ್ಯೋಗದಿಂದ ತೊಡಗಿ ಮೂಲಭೂತ ಸೌಕರ್ಯದವರೆಗೆ ಇಲ್ಲಿ ಬಹಳ ಮಹತ್ವ ಇದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಅಂತ ಬಂದಾಗ ಹಲವು ಆಯಾಮಗಳು ಇರುತ್ತವೆ. ಸಾಮಾನ್ಯ ಜನರಿಗೆ, ಸಾಮಾನ್ಯ ಯುವಕರಿಗೆ “ಉದ್ಯೋಗ ಮರೀಚಿಕೆ”ಯಾಗುತ್ತದೆ.ಇದಕ್ಕೆ ಕಾರಣ ಬೇರೆ ಬೇರೆ. ಊರು ಬಿಡಲೂ ಆಗುವುದಿಲ್ಲ, ಓದಿನ ಉದ್ಯೋಗವೂ ಸಿಗುವುದಿಲ್ಲ..!. ಬೇರೆ ಕೆಲಸ ಒಗ್ಗುವುದಿಲ್ಲ..! ಇಂತಹ ಹಲವಾರು ಯುವಕರು ಇದ್ದಾರೆ. ಇವರ ಬದುಕಿನಲ್ಲಿ ಒಂದೊಂದು ತಿರುವುಗಳು ಇರುತ್ತವೆ.………ಮುಂದೆ ಓದಿ……..
ಈಚೆಗೆ ಒಬ್ಬರು ಸಿಕ್ಕಿದರು. ಅವರು ಮಾತನಾಡುತ್ತಾ, “ತಮ್ಮ ತುಂಬಾ ಓದಿದ್ದಾನೆ, ಉದ್ಯೋಗ ಸಿಗಲಿಲ್ಲ, ಬೇರೆ ಕೆಲಸಕ್ಕೆ ಹೋಗುವುದಿಲ್ಲ. ಓದಿದ ಉದ್ಯೋಗವೇ ಬೇಕಂತೆ, ಕೊನೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ” ಎಂತ ಮಾಡುವುದು. ಮುಂದುವರಿಯುತ್ತಾ, “ರಬ್ಬರ್ ಟ್ಯಾಪಿಂಗ್ ತಿಳಿದಿದೆ,ಆದರೆ ಆ ಕೆಲಸ ಮಾಡುತ್ತಿಲ್ಲ, ಈಗ ರಬ್ಬರ್ ಹಾಲು ತೆಗೆಯುತ್ತಾನೆ, ಎಂತ ಮಾತೂ ಆಡುವುದಿಲ್ಲ..” ಹೀಗೆಂದು ಹೇಳಿದರು.
ಈಚೆಗೆ ಕೆಲವು ಯುವಕರನ್ನು ಮಾತನಾಡಿಸಿದ್ದೆ, ಏನು ಓದಿದ್ದು ಎಂದರೆ,”ಡಿಗ್ರಿ ಆಗಿದೆ, ಮುಂದೆ ಓದಿದರೆ ಉನ್ನತ ವ್ಯಾಸಾಂಗ ಮಾಡಬೇಕು, ಇಲ್ಲದಿದ್ರೆ ನೋಡಬೇಕು..” ಅದಾಗಲೇ ಓದು ಮುಗಿಸಿ ಒಂದು ವರ್ಷ ಆಗಿರುತ್ತದೆ..!.
ಕೆಲವು ಸಮಯದ ಹಿಂದೆ ಒಬ್ಬರು ಉಪನ್ಯಾಸರು ಮಕ್ಕಳಿಗೆ ಬದುಕಿನ ಶಿಕ್ಷಣ ಹೇಳಿಕೊಡುತ್ತಿದ್ದರು. ಅವರು ಕಾಲೇಜು ಮಕ್ಕಳಿಗೆ ನೀಡುತ್ತಿದ್ದ ಪ್ರಾಜೆಕ್ಟ್‌ಗಳಲ್ಲಿ ಸ್ವಾವಲಂಬನೆಯ ವಿಷಯವೂ ಇತ್ತು. ಅದರ ಜೊತೆಗೊಂದು ಕಿವಿಮಾತು ಹೇಳುತ್ತಿದ್ದರು,” ಓದಿದ ಕೂಡಲೇ ಅದೇ ಉದ್ಯೋಗ ಸಿಗಲೇಬೇಕು ಎಂದೇನಿಲ್ಲ, ಹಾಗಾಗಿ ನಿಮ್ಮ ಓದಿಗೆ ಸಂಬಂಧಿಸಿದ ಉದ್ಯೋಗ ಸಿಗುವವರೆಗೂ ಬೇರೆ ಕೆಲಸ, ಸ್ವಾವಲಂಬನೆಯ ಕೆಲಸ ಮಾಡಬೇಕು. ಉದಾಹರಣೆಗೆ ಮನೆಯ ಕೆಲಸಗಳಲ್ಲಿ, ತೋಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು. ಮನೆಯವರ ಕೆಲಸದ ಜೊತೆ ಜೋಡಿಸಿಕೊಳ್ಳುವುದು, ಗ್ರಾಮೀಣ ಭಾಗವಾದ್ದರಿಂದ ತೋಟದ ಕೆಲಸಗಳನ್ನು ಮಾಡುವುದು, ಯಂತ್ರದ ಮೂಲಕ ಕಳೆ ತೆಗೆಯುವುದು ಹೀಗೇ ಉದ್ಯೋಗಗಳು ಸಾಕಷ್ಟು ಇವೆ” ಎನ್ನುತ್ತಿದ್ದರು.ಹೇಗೆ ತೆಗೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿಲ್ಲುತ್ತದೆ ಎಂದು ಹೇಳುತ್ತಿದ್ದರು.
ಕೆಲವು ಸಮಯದ ಹಿಂದೆ ಮಾತನಾಡುತ್ತಿರಬೇಕಾದರೆ ಡಿಗ್ರಿ ಓದಿದ ಯುವಕನೊಬ್ಬ ತನ್ನಂತೆ ಇರುವ ಐದಾರು ಯುವಕರ ತಂಡ ಕಟ್ಟಿಕೊಂಡು ತೋಟದ ಕಳೆ ತೆಗೆಯುವ ಕೆಲಸವನ್ನು ಆರಂಭಿಸಿದರು. ಎಲ್ಲರೂ ಶಿಸ್ತು ಬದ್ಧವಾಗಿ ಸಮಯಕ್ಕೆ ಸರಿಯಾಗಿ , ನಿಗದಿತ ದಿನದಂದು ಕೃಷಿಯ ಕಳೆತೆಗೆಯುವ ಕೆಲಸ ಯಂತ್ರದ ಮೂಲಕ ಮಾಡಿದರು. ದಿನದ ಆದಾಯ ಒಂದು ಸಾವಿರಕ್ಕಿಂತ ಹೆಚ್ಚಾದವು. ಸುಮಾರು 50 ಕೃಷಿಕರ ತೋಟವನ್ನು ಆಯ್ಕೆ ಮಾಡಿಕೊಂಡರು. ಇಡೀ ವರ್ಷ ಕೆಲಸವನ್ನು ಯೋಜಿಸಿಕೊಂಡರು. ಅಗತ್ಯ ಎನಿಸಿದರೆ ರಜೆ ಮಾಡಿಕೊಂಡರು. ತಿಂಗಳ ಆದಾಯ ಕನಿಷ್ಟ 30,000 ಪಡೆದರು. ಕೃಷಿಕನೂ ಹ್ಯಾಪಿ. ನಿಗದಿತ ಸಮಯದಲ್ಲಿ ಕೆಲಸ ಫಿನಿಶ್.
ಒಬ್ಬರು ಅತ್ಯಂತ ಕನಿಷ್ಟ ಓದಿದ ವ್ಯಕ್ತಿ. ತೆಂಗಿನ ಕಾಯಿ ಕೀಳಲು ಹೋಗುತ್ತಾರೆ. ಕೃಷಿಕನಿಗೂ ಮೋಸವಾಗದ ಹಾಗೆ ಪ್ರಾಮಾಣಿಕವಾಗಿ ದುಡಿಯುತ್ತಾರೆ. ಒಂದಷ್ಟು ಕೃಷಿಕರ ಮನೆಯನ್ನು ಖಾಯಂಗೊಳಿಸುತ್ತಾರೆ. ಇಡೀ ವರ್ಷ ತೆಂಗಿನ ಕಾಯಿ ಕೀಳುವುದೇ ಅವರ ಕೆಲಸ. ಹೊಸ ಯಂತ್ರಗಳ ಬಳಕೆ ಮಾಡಿಕೊಂಡರು. ಒಂದು ದಿನದ ಆದಾಯ ಕನಿಷ್ಟ 2000 ರೂಪಾಯಿ ಪಡೆದುಕೊಳ್ಳುತ್ತಾರೆ. ಈಗ ಅವರೂ ಹ್ಯಾಪಿ.. ಕೃಷಿಕನೂ ಹ್ಯಾಪಿ.
ಇದೆಲ್ಲಾ ಉದಾಹರಣೆ ಏಕೆಂದರೆ, ಓದು ಎನ್ನುವುದು ಅದೇ ಉದ್ಯೋಗ ನೀಡಬೇಕಾಗಿಲ್ಲ. ನಿಜವಾಗೂ ಬೇಕಾದ್ದು ಪದವಿಗಿಂತಲೂ ಶಿಕ್ಷಣ. ಉದ್ಯೋಗ ಬದುಕು ಕಟ್ಟಿಕೊಳ್ಳಲು, ಶಿಕ್ಷಣ ಬೇಕಾದ್ದು ಬದುಕು ರೂಪಿಸಲು ಅಷ್ಟೇ. ಬದುಕು ರೂಪಿಸಿಕೊಂಡರೆ ಬದುಕು ಕಟ್ಟಿಕೊಳ್ಳುವ ಉದ್ಯೋಗವೂ ಲಭ್ಯವಾಗುತ್ತದೆ.
ಪ್ರಯತ್ನ ಇಲ್ಲದೆ, ಶ್ರಮ ಇಲ್ಲದೆ ಯಾವುದು ಕೂಡಾ ಸಾಧ್ಯವಿಲ್ಲ. ನಿರಂತರ ಪ್ರಯತ್ನಗಳು ಇದ್ದಾಗ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯವಿದೆ. ಹೀಗಾಗಿ ಓದಿನದ್ದೇ ಉದ್ಯೋಗವನ್ನು ಅರಸಿಕೊಂಡಿದ್ದರೆ ಸಾಧ್ಯವಿಲ್ಲ. ಕೃಷಿಯೂ ಇಂದು ಉತ್ತಮವಾದ ಆದಾಯ ತರಬಲ್ಲ ಕ್ಷೇತ್ರ. ಆದರೆ ಹೇಗೆ ಆದಾಯ ತರಬಲ್ಲುದು ಎನ್ನುವುದು ಅನುಭವಿಸಿ ಸಾಧಿಸಬೇಕು. ಆದರೆ, ಕೀಳರಿಮೆ ಮಾತ್ರಾ ಬೇರು ಸಹಿತ ಕೀಳಬೇಕು. ಕೃಷಿಯ ಮೊದಲ ಕಳೆಯೇ ಕೀಳರಿಮೆ. ಡಿಗ್ರಿ ಮಾಡಿರುವ, ಇಂಜಿನಿಯರ್ ಆಗಿರುವ, ವೈದ್ಯನೂ ಆಗಿರುವ ಯುವಕನೊಬ್ಬ ಕೃಷಿಯಲ್ಲಿ ತೊಡಗಿಸಿಕೊಂಡನೆಂದರೆ,ಮೊದಲ ಪ್ರಶ್ನೆಯೇ,”ಅದೇನು ಕೃಷಿ”, ಅಂದರೆ, ಕೇಳುಗನ ಭಾವ, ಈ ಯುವಕ ಓದಿದರೂ ಸರಿಯಾದ ಕೆಲಸ ಸಿಗಲಿಲ್ಲ ಎನ್ನುವ ಭಾವವೇ ಹೆಚ್ಚು ಫೋಕಸ್ ಆದಂತಿರುತ್ತದೆ, ಕನಿಕರವೂ ಇರುತ್ತದೆ. ಅಂದರೆ ಕೃಷಿಯೇ ಅಪರಾಧ, ಕೃಷಿಯೇ ಮಾಡಬಾರದು ಎನ್ನುವ ಹಾಗೆ ಈ ಸಮಾಜ ನೋಡಿ ಬಿಡುತ್ತದೆ..!. ಇನ್ನು ಯುವಕೃಷಿಕನೊಬ್ಬ ಮದುವೆಯಾದ ಎಂದಿಟ್ಟುಕೊಳ್ಳಿ, ಯುವತಿಯ ಆಯ್ಕೆ ಕೃಷಿಯೇ ಆಗಿರುತ್ತದೆ ಎಂದಿಟ್ಟುಕೊಳ್ಳಿ, ಮದುವೆಯ ದಿನವೇ ದೂರದ ಬಾಯಿಗಳು ಮಾತನಾಡುತ್ತವೆ,”ಹುಡುಗ ಕೃಷಿಯಂತೆ..” ಈಗ ಕಷ್ಟ ಅಲ್ವಾ, ಇವಳಿಗೆ ಆದೀತಾ..! ಹೀಗೇ ಮಾತುಗಳು ಆರಂಭವಾಗಿಬಿಡುತ್ತದೆ. ಮಾನಸಿಕವಾಗಿ ಕುಗ್ಗಿಸಿ ಬಿಡುತ್ತಾರೆ, ಯುವತಿಯೇ ಇದು ಬೇಡ ಎನ್ನುವ ಹಾಗೆ ಆಗಿರುತ್ತದೆ, ಕೇಳುವ ಮಾತುಗಳು..!.
ಪದವಿ ಓದಿನ ಬಳಿಕ ಸಮಾಜದ ಮುಂದೆ ಯುವಕನೊಬ್ಬ ತೆರೆದುಕೊಂಡ ಎಂದಾರೆ, ಎಲ್ಲೋ ಸಿಗುವ ಯುವಕನನ್ನು ನಾವು ಕೇಳುತ್ತೇವೆ ,”ಏನು ಮಾಡುತ್ತಿ ಈಗ”, ಯುವಕ ಓದಿನ ಕೆಲಸ ಸಿಗಲಿಲ್ಲ ಅನ್ನಬೇಕೇ..? ಅಥವಾ ತಾನು ಇಂತಹ ಕೆಲಸ ಮಾಡುತ್ತೇನೆ ಎನ್ನಬೇಕೇ..? ಒಂದು ವೇಳೆ ಪದವಿ ಓದಿನ ಕೆಲಸ ಸಿಕ್ಕಿಲ್ಲ ಎಂದಾರೆ, ತಕ್ಷಣವೇ ಹೇಳುವುದು, “ಜಾಬ್‌ಗೆ ಟ್ರೈ ಮಾಡಲಿಲ್ವಾ “, ಯುವಕ ಸಹಜವಾಗಿಯೇ ಇಡೀ ವರ್ಷ ಎಲ್ಲರ ಮುಂದೆಯೂ “ಇನ್ನೂ ಹೆಚ್ಚಿನ ಓದು ಓದುತ್ತೇನೆ, ಅಲ್ಲಿ ಇಂಟರ್‌ವ್ಯೂ ಆಗಿದೆ, ಇಲ್ಲಿ ಆಗಿದೆ ಎನ್ನುತ್ತಾನೆ ” ಅಷ್ಟೂ ವರ್ಷ ಸಮಯ ಮುಂದೆ ಹೋಗುತ್ತದೆ. ವರ್ಷ ಕಳೆಯುತ್ತಿದ್ದಂತೆಯೇ “ಆಂತರಿಕ ಸೋಲು” ಆರಂಭವಾಗುತ್ತದೆ. ನೀವೆಲ್ಲಾದರೂ ಒಬ್ಬ ಯುವಕ ಸಿಕ್ಕಾಗ, ಪದವಿ ಓದಿನ ಬಳಿಕ ಏನು ಎಂದು ಕೇಳುತ್ತಾ,” ಹೀಗೆ ಮಾಡು” ಅಂತ ಹೇಳಿದ್ದೀರಾ..? ಉದ್ಯೋಗ ಅಂತ ಹೀಗೆ ಮಾಡಬಹುದು ಎಂದು ಹೇಳಿದ್ದಿದೆಯಾ..?. ಅಂತಹ ಸಲಹೆಗಳು ಇಲ್ಲದ ಮೇಲೆ ಏಕೆ ಒಬ್ಬ ಯುವಕನ ಶಿಕ್ಷಣದ, ಖಾಸಗಿ ಬದುಕಿನ ಬಗ್ಗೆ ಪ್ರಶ್ನೆ. ಆತನಿಗೆ ತಾನು ಓದಿದ ಪದವಿಯ ಉದ್ಯೋಗ ಸಿಕ್ಕಿಲ್ಲದೇ ಇರಬಹುದು, ಹೀಗಾಗಿ ಆತ ಬದುಕಿನ ಆಯ್ಕೆಯಲ್ಲಿ ಇನ್ನೊಂದರ ಆಯ್ಕೆ ಮಾಡಿಕೊಂಡಿರಬಹುದು. ಅವನ ಆಯ್ಕೆಯನ್ನೂ ಯಾಕೆ ಪ್ರಶ್ನೆ ಮಾಡಬೇಕು..? ಅವನ ಬದುಕಿನ ಸ್ವಾತಂತ್ರ್ಯವನ್ನು ಏಕೆ ಪ್ರಶ್ನಿಸಬೇಕು..?. ಒಂದು ವೇಳೆ ಯುವಕನೊಬ್ಬ ಆಯ್ಕೆ ಮಾಡಿಕೊಂಡಿರುವ ವಿಷಯದ ಬಗ್ಗೆಯೂ ಮಾತನಾಡುವುದು ಇದೆ,” ಇದಕ್ಕೆ ಈಗ ಡಿಮಾಂಡ್ ಇಲ್ಲ” “ನೀನು ಇಂತಹದ್ದು ತೆಗೆದುಕೊಳ್ಳಬೇಕಿತ್ತು..” ಎನ್ನುವ ಚಟವೂ ಇದೆ. ಮೊದಲೇ ಈ ಆಯ್ಕೆಯನ್ನು ನೀವೂ ಹೇಳಿರುತ್ತಿದ್ದರೆ…!. ಹೀಗಾಗಿ ಎಲ್ಲರೂ ಯೋಚಿಸಿಕೊಳ್ಳಬೇಕಾದ್ದು, ತರಗತಿಯಲ್ಲಿ, ಸಮಾಜದಲ್ಲಿ, ಬದುಕಿನಲ್ಲಿ ಶೇ.100 ಅಂಕ ಪಡೆಯುವ ಮಂದಿಯೇ ಇರುವುದಿಲ್ಲ, ಶ್ರೀಮಂತನೇ ಇರಲು ಸಾಧ್ಯವಿಲ್ಲ. ಅವನವನ ವ್ಯಾಪ್ತಿಯಲ್ಲಿ, ಅವನವನ ಪರಿಶ್ರಮದಿಂದ ಮಾತ್ರವೇ ಬೆಳೆಯುವುದು ಸಾಧ್ಯ. ಹೀಗಾಗಿ ಅವನಂತೆ ನಾವಾಗಲು, ನಮ್ಮಂತೆ ಅವನಾಗಲು ಸಾಧ್ಯವೇ ಇಲ್ಲ. ಅವನಂತಾಗಲು ನಾವು ಪ್ರಯತ್ನಿಸಿದರೆ ಸೋಲು ನಿಶ್ಚಿತವೇ. ಉದ್ಯೋಗವೂ ಹಾಗೇ, ಆ ಕಾಲದಲ್ಲಿ ನಮ್ಮ ಮುಂದಿರುವ ಆಯ್ಕೆಗಳಲ್ಲಿ ಅತ್ಯುತ್ತಮವಾದ್ದು ಆಯ್ಕೆ ಮಾಡಿಕೊಳ್ಳಬೇಕಷ್ಟೆ ಹೊರತು ಯಾರೋ ಕೇಳುತ್ತಾರೆ ಎಂದು ನಮ್ಮ ಸೋಲನ್ನು ನಾವೇ ನಿರೀಕ್ಷಿಸುವುದು ಸರಿಯಲ್ಲ. ಇಂದು ಎಲ್ಲಾ ಕ್ಷೇತ್ರಗಳಿಗೂ ಶಿಕ್ಷಣ ಪಡೆದವರು ಬೇಕಾಗಿದ್ದಾರೆ, ಪದವಿ ಪಡೆದವರಷ್ಟೇ ಅಲ್ಲ ಎನ್ನುವುದು ಸದಾ ನೆನಪಿನಲ್ಲಿರಬೇಕು.
ಬದುಕಿನ ಅನಿವಾರ್ಯತೆಗಳು ಕೆಲಸ ಮಾಡಿಸುತ್ತವೆ. ನಿರೀಕ್ಷೆಗಳು ಉತ್ಸಾಹವನ್ನು ಹೆಚ್ಚಿಸುತ್ತವೆ, ಕನಸುಗಳು ಬದುಕನ್ನು ಕಟ್ಟುತ್ತವೆ, ಭರವಸೆಗಳು ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಆದರೆ, ನಿರಾಸೆಗಳು ಮಾನಸಿಕವಾಗಿ ಕುಗ್ಗಿಸುತ್ತವೆ, ಕಾಲೆಳೆಯುತ್ತದೆ.. ಮುಂದೆ ಸಾಗಲು ಬಿಡುವುದೇ ಇಲ್ಲ. ಕೆಲಸ ಮಾಡಲೇ ಬಿಡುವುದಿಲ್ಲ. ಅದಕ್ಕಾಗಿ ಎಲ್ಲಿಂದ ತಿರುವು ಪಡೆಯಬೇಕು..?, ಯಾರಿಂದ ತಿರುವು ಪಡೆಯಬೇಕು, ಹೇಗೆ ತಿರುವು ಪಡೆಯಬೇಕು ಎನ್ನುವ ಆಯ್ಕೆಯನ್ನು ಮೊದಲೇ ಮಾಡಿಕೊಳ್ಳಬೇಕಷ್ಟೇ. ಈ ಆಯ್ಕೆಯೇ ಬದುಕಿನ ತಿರುವು. ಯಶಸ್ಸಿನ ದಾರಿ.