ಬಹುನಿರೀಕ್ಷಿತ ಆಕ್ಸಿಯಮ್ ಮಿಷನ್-4 ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆ 1ನಿಮಿಷಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು, ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಲ್ಲಿ ನಭಕ್ಕೆ ಚಿಮ್ಮಿದೆ. ಭಾರತದೊಂದಿಗೆ ಹಂಗರಿ ಮತ್ತು ಪೋಲೆಂಡ್ ದೇಶದ ನಾಲ್ವರು ಗಗನಯಾತ್ರಿಗಳು ಭಾಗವಹಿಸಿದ್ದಾರೆ. ಈ ಮೂಲಕ 41 ವರ್ಷಗಳ ಬಳಿಕ ಬಾಹ್ಯಾಕಾಶ ಯಾನದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿ ದಾಖಲೆ ಬರೆದಿದೆ.
ಬಾಹ್ಯಾಕಾಶಕ್ಕೆ ತೆರಳುವ ವೇಳೆ ಮಾತನಾಡಿರುವ ಶುಕ್ಲಾ “ಇದು ತನ್ನ ವೈಯಕ್ತಿಕ ಪ್ರಯಾಣವಲ್ಲ, ಭಾರತದ ಮಾನವ ಬಾಹ್ಯಾಕಾಶ ಪ್ರಯಾಣವಾಗಿದೆ. ತನ್ನೊಂದಿಗೆ ಭಾರತದ ಧ್ವಜವನ್ನು ಕೊಂಡೊಯ್ಯುತ್ತಿದ್ದೇನೆ” ಎಂದು ತಿಳಿಸಿದ್ದಾರೆ. 41 ವರ್ಷಗಳ ನಂತರ ಭಾರತವು ಬಾಹ್ಯಕಾಶಕ್ಕೆ ಗಗನಯಾತ್ರಿಯನ್ನು ಕಳುಹಿಸಿದೆ. 1984 ರಲ್ಲಿ ತೆರಳಿದ್ದ ರಾಕೇಶ್ ಶರ್ಮಾ ಬಳಿಕ ಶುಕ್ಲಾ ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯನಾಗಿದ್ದಾರೆ.
ಗಗನಯಾತ್ರಿಗಳು ಮುಂದಿನ ಎರಡು ವಾರಗಳವರೆಗೆ ವಿಜ್ಞಾನ, ಸಂವಹನ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಒಳಗೊಂಡಿರುವ ಪ್ರಯೋಗಗಳನ್ನು ನಡೆಸಲಿದ್ದಾರೆ. ಕಳೆದ ತಿಂಗಳಿನಿಂದ ಈ ಕಾರ್ಯಾಚರಣೆಗೆ ಸಿದ್ಧತೆಗಳು ನಡೆದಿದ್ದವು. ಆದರೆ ತಾಂತ್ರಿಕ ದೋಷಗಳಿಂದಾಗಿ ಉಡಾವಣೆಯನ್ನು ಏಳು ಬಾರಿ ಮುಂದೂಡಲಾಗಿತ್ತು. ಇಂದು ಅದು ಯಶಸ್ವಿಯಾಗಿ ಉಡಾವಣೆಗೊಂಡಿದೆ. ಎಲ್ಲವೂ ನಿಗದಿಯಂತೆ ನಡೆದರೆ ಈ ನೌಕೆ ನಾಳೆ ಭಾರತೀಯ ಸಮಯ ಸಂಜೆ 4:30ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಆಗಲಿದೆ. ಆಕ್ಸಿಯಮ್ ಮಿಷನ್-4 ಯಶಸ್ವಿಯಾಗಿ ಉಡಾವಣೆಗೊಂಡ ಬಳಿಕ ವಿಜ್ಞಾನಿಗಳ ಜೊತೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ತಂದೆ-ತಾಯಿ ಸಂಭ್ರಮ ಆಚರಿಸಿದರು.
ಬಳಿಕ ಸಚಿವ ಜಿತೇಂದ್ರ ಸಿಂಗ್, ಇದು ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 41 ವರ್ಷಗಳ ಬಳಿಕ ಭಾರತ ಬಾಹ್ಯಾಕಾಶದಲ್ಲಿ ಇಂಥದ್ದೊಂದು ಸಾಧನೆ ಮಾಡಿದೆ ಎಂದರು. ಚಂದ್ರಯಾನ ಮಿಷನ್ ಯಶಸ್ವಿಯಾದ ಬೆನ್ನಲ್ಲೇ ಭಾರತವು ಇಂಥದ್ದೊಂದು ಸಾಧನೆ ಮಾಡಿರುವುದು ರಾಷ್ಟ್ರದ ಹೆಮ್ಮೆ ಎಂದ ಸಚಿವರು, ವಿಕಸಿತ ಭಾರತದ ಪರಿಕಲ್ಪನೆ ಸಾಕಾರಕ್ಕೆ ಇದೊಂದು ದಿಟ್ಟ ಹೆಜ್ಜೆಯಾಗಿದೆ ಎಂದರು. ಭಾರತವೇ ರೂಪಿಸಿರುವ ಏಳು ಪ್ರಯೋಗಗಳನ್ನು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ನಡೆಸಲಿದ್ದಾರೆ ಎಂದರು.
14 ದಿನಗಳ ಕಾಲ ಐಎಸ್ಎಸ್ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ರೀತಿಯ ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಮುಖ್ಯವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಸೇರಿದಂತೆ 60 ರೀತಿಯ ವಿವಿಧ ಪ್ರಯೋಗ ಮಾಡಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ವಿವಿಧ ಪ್ರಯೋಗ ಮಾಡಲಿದ್ದಾರೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗಗಳು ಅಲ್ಲಿ ನಡೆಯಲಿವೆ. ಜೊತೆಗೆ ದೆಹಲಿಯ 2 ಪ್ರಯೋಗ, ಕೇರಳದ 1 ಪ್ರಯೋಗ ಸಂಬಂಧ ಅಧ್ಯಯನ ನಡೆಯಲಿದೆ.