ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ., ಅಧಿಕಾರಕ್ಕಾಗಿ ಇಬ್ಬರೂ ಬಡಿದಾಡಿಕೊಳ್ಳುತ್ತಿದ್ದಾರೆ. ಇಬ್ಬರು ಸಿಎಂ ಸ್ಥಾನದ ಆಕಾಂಕ್ಷಿಗಳು. ಹೈಕಮಾಂಡ್ ಗೂ ಕೇರ್ ಅನ್ನದೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಆದ್ರೂ ಡಿಕೆಶಿ, ಸಿದ್ದು ಮಾಧ್ಯಮದ ಮುಂದೆ ತಾವು ಚೆನ್ನಾಗಿದ್ದೇವೆ ಅಂತಾರೆ.
ಇದಕ್ಕೆ ಸ್ಪಷ್ಟನೆಯೆಂಬಂತೆ ನಿನ್ನೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ನನ್ನ ಮತ್ತು ಡಿ ಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾವಿಬ್ಬರೂ ಚೆನ್ನಾಗಿದ್ದೇವೆ ಎಂದಿದ್ದಾರೆ.
ಸಹಜವಾಗಿ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿವೆ ಆದರೆ ಅದು ಪಕ್ಷದ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿಯಲ್ಲ ಎಂದು ಹೇಳಿದ್ದಾರೆ, ನಾನು ನನ್ನ ತವರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಇದು ನನ್ನ ಕೊನೆಯ ಚುನಾವಣೆ. ನಂತರ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಬಿಜೆಪಿ ರೀತಿ ಮತೀಯ ಪಕ್ಷವಲ್ಲ, ನಮ್ಮದು ಜಾತ್ಯತೀತ ಪಕ್ಷ. ಕರ್ನಾಟಕದಲ್ಲಿ ಯಾವ ಜಾತಿ, ಮತ, ಧರ್ಮಗಳ ಮಧ್ಯೆ ನಾವು ಬೇಧಭಾವ ಮಾಡುವುದಿಲ್ಲ. ಹಿಂದುಗಳಿರಲಿ, ಮುಸ್ಲಿಮರಿರಲಿ, ಕ್ರೈಸ್ತರಿರಲಿ ಅಥವಾ ಬೇರೆ ಯಾವುದೇ ಜಾತಿ, ಧರ್ಮದವರಾಗಿರಲಿ ನಾವು ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.