ವಿದೇಶಿ ಅಡಿಕೆಯ ಆಮದಿನ ಮೇಲಿನ ಅಬಕಾರಿ ಸುಂಕವನ್ನು ಶೇ. 110 ರಷ್ಟು ಕಡಿಮೆ ಮಾಡಿ, ಇಲ್ಲಿನ ಅಡಿಕೆ ಮೇಲಿನ ಜಿಎಸ್‌ಟಿ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಖಂಡಿಸಿದ್ದಾರೆ. ದೇಶದ ಅಡಿಕೆ ಬೆಳೆಗಾರರ ಪರವಾಗಿ ನಿಲ್ಲಬೇಕಾದ ಸರ್ಕಾರ ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಸಿದ್ಧರಾಮಯ್ಯ ಅವರು, ಮಲೆನಾಡು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದಾಗ ಅಡಿಕೆ ಬೆಳೆಗಾರರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈಚೆಗೆ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಡಿಸಿದರು. ಈಗಾಗಲೇ ಅಡಿಕೆಗೆ ಕೊಳೆ ರೋಗ, ಹಳದಿ ಎಲೆ, ಎಲೆಚುಕ್ಕೆ ರೋಗವೂ ಕಾಡುತ್ತಿದೆ. ಇದೆಲ್ಲಾ ಕಾರಣಗಳಿಂದ ಅಡಿಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ಬೆಳೆಗಾರರ ಆದಾಯ ಅಷ್ಟಕಷ್ಟೆ ಎನ್ನುವಂತಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೇಂದ್ರ ಸರ್ಕಾರ ನಮ್ಮ ಅಡಿಕೆಯ ಮೇಲೆ ಜಿಎಸ್‌ಟಿ ಹೆಚ್ಚಿಸುತ್ತಾ, ವಿದೇಶದಿಂದ ಬರುವ ಆಮದು ಅಡಿಕೆ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುತ್ತಿದೆ.ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅಡಿಕೆಯ ಕನಿಷ್ಠ ಆಮದು ದರ 110ರೂ ಇದ್ದಾಗ ಕ್ವಿಂಟಾಲ್ ಅಡಿಕೆ ಬೆಲೆ ಸರಾಸರಿ 75 ಸಾವಿರ ರೂಪಾಯಿ ಇತ್ತು. ಈಗ ಕನಿಷ್ಠ ಆಮದು ದರ 251 ಇದೆ. ಆದರೂ ಅಡಿಕೆ ಬೆಲೆ ಕ್ವಿಂಟಾಲ್‌ಗೆ 50 ಸಾವಿರಕ್ಕೆ ಕುಸಿದಿದೆ. ಇದಕ್ಕೆ ಕಾರಣ ವ್ಯಾಪಕ ಅಡಿಕೆ ಕಳ್ಳ ಸಾಗಣೆ. 2021ರ ಜೂನ್‌ನಲ್ಲಿ ಸಿಬಿಐ ದೇಶದ 19 ಗೋದಾಮುಗಳ ಮೇಲೆ ದಾಳಿ ನಡೆಸಿ ಅಡಿಕೆ ಕಳ್ಳಸಾಗಣೆಯನ್ನು ಪತ್ತೆಹಚ್ಚಿ ಕಾಳಸಂತೆಕೋರರನ್ನು ಬಂಧಿಸಿದ್ದರಿಂದ ಕುಸಿತ ಕಂಡಿದ್ದ ಅಡಿಕೆ ದರ ಏರಿಕೆಯಾಗಿತ್ತು. ಈಗ ಮತ್ತೆ ಕಳ್ಳಸಾಗಣೆ, ಕಾಳಸಂತೆ ಮಾರಾಟ ಹೆಚ್ಚಾಗಿ ಅಡಿಕೆ ದರ ಕುಸಿಯುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಮೇಲೆ ದಾಳಿ ನಡೆಸುತ್ತಿದೆ.
ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕೊಳೆರೋಗದಿಂದ ಕಂಗಾಲಾದ, ಮತ್ತಿತರ ಸಮಸ್ಯೆಗಳಿಗೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ 40 ಕೋಟಿ ರೂ ಪರಿಹಾರ ನೀಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಡಿಕೆ ಸುಲಿಯುವ ಯಂತ್ರ, ಸಂಸ್ಕರಣಾ ಯಂತ್ರ ಮತ್ತು ಘಟಕಗಳಿಗೆ ಸೇರಿದಂತೆ ಇನ್ನಿತರೆ ಅಗತ್ಯಗಳಿಗೆ ಸಬ್ಸಿಡಿ ನೀಡಿತ್ತು ಎಂದು ಅವರು ಹೇಳಿದರು.