ಭಾರತದಲ್ಲಿ ಬೆಳೆಯುವ ಆಹಾರದಲ್ಲಿ ಸಜ್ಜೆಗೆ ಐದನೇ ಸ್ಥಾನವಿದೆ. ಇದರ ಮೂಲ ಸ್ಥಾನ ಆಫ್ರಿಕಾ. ಈ ಸಜ್ಜೆ 2000 ವರ್ಷಕ್ಕೂ ಹಿಂದೆ ಸಾಗುವಳಿಯಲ್ಲಿತ್ತು. ಸಜ್ಜೆಯನ್ನು ಇಂಗ್ಲಿಷ್‌ನಲ್ಲಿ ಪರ್ಲ್ ಮಿಲ್ಲೆಟ್ ಹಿಂದಿಯಲ್ಲಿ ಬಾಜ್ರಾ ಮತ್ತು ಕೆಲವು ಕಡೆ ಕಂಬು ಎಂದು ಕರೆಯುತ್ತಾರೆ. ಈ ಬೆಳೆ ಅತೀ ಕಡಿಮೆ ಮಳೆ ಬರುವ ಪ್ರದೇಶದಲ್ಲಿ ಬೆಳೆಯಬಹುದು. ಸಜ್ಜೆಯಿಂದ ತಯಾರಾದ ರೊಟ್ಟಿ ಹಾಗೂ ಕಡುಬು ಉತ್ತಮ ಪೋಷಕಾಂಶಗಳ ಜೊತೆಗೆ ಸೇವಿಸಲು ಬಹಳ ರುಚಿ. ಅಕ್ಕಿ ರೊಟ್ಟಿ ಹಾಗೂ ಸಜ್ಜೆ ರೊಟ್ಟಿಯನ್ನು ಹೋಲಿಸಿ ನೋಡಿದರೆ ರುಚಿ ಹಾಗೂ ಆರೋಗ್ಯದಲ್ಲಿ ಸಜ್ಜೆಯದೇ ಮೇಲಿದೆ.
ಸಣ್ಣ ಸಣ್ಣ ಮುತ್ತುಗಳನ್ನು ಒತ್ತೊತ್ತಾಗಿ ಜೋಡಿಸಿದಂತೆ ಉದ್ದವಾದ ತೆನೆಗಳಲ್ಲಿ ಸುಂದರವಾಗಿ ಕಾಣುವ ಈ ಕಿರು (ಸಿರಿ) ಧಾನ್ಯಗಳಿಗೆ ಕನ್ನಡ ಭಾಷೆಯಲ್ಲಿ> ಸಜ್ಜೆ ,ಸಜ್ಜಿ.
ಸಂಸ್ಕೃತದಲ್ಲಿ > ಅಗ್ರ ಧಾನ್ಯ,ವಜ್ರಾನ್ನ
ಹಿಂದಿ ಹಾಗೂ ಉರ್ದು ಭಾಷೆಯಲ್ಲಿ> ಬಾಜರಾ
ಆಂಗ್ಲ ಭಾಷೆಯಲ್ಲಿ – pearl Millet.
ಮುಂಗಾರು ಹಂಗಾಮಿನಲ್ಲಿ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಸಜ್ಜೆ ಅತ್ಯಂತ ಶಕ್ತಿಯುತ ಸಿರಿಧಾನ್ಯ.
ಸಜ್ಜೆ ತಿಂದು ವಜ್ಜೆ ಹೊರು ಎಂಬ ನಾಣ್ಣುಡಿ ಯಂತೆ
ದೇಹಕ್ಕೆ ಬಲ ನೀಡುವ ಸಜ್ಜೆ ರೊಟ್ಟಿಯ ಊಟದ
ವಿಶೇಷತೆಯೇ ಬೇರೆ.
ಖಡಕ್ ಸಜ್ಜೆ ರೊಟ್ಟಿ, ಗಟ್ಟಿ ಮೊಸರು, ಅಗಸಿ ಚಟ್ನಿ, ಸೇಂಗಾ ಚಟ್ನಿ, ಬದನೆಕಾಯಿ ಎಣ್ಣಿಗಾಯಿ,ಮಡಕಿ ಕಾಳಿನ ಉಸುಳಿ,ಹಸಿ ಮೆಂತೆ ಪಲ್ಲೆ, ಉಳ್ಳಾಗಡ್ಡಿ ಇದ್ದರ ಮುಗೀತು ಎಂಟ್ಹತ್ತು ರೊಟ್ಟಿ ಒಬ್ಬನೇ ವ್ಯಕ್ತಿ ಆರಾಮ ವಾಗಿ ತಿನ್ನಬಹುದು.
ಪ್ರೋಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣಾಂಶ, ನಾರಿನಾಂಶ,ಕ್ಯಾಲ್ಸಿಯಂ,ಫೈಬರ್ ಇತ್ಯಾದಿ ಹೇರಳ ವಾಗಿ ಇರುವ ಕಾರಣ ಸಜ್ಜೆ ಗೆ ಸಿರಿ ಧಾನ್ಯಗಳ ಎರಡನೇ ಅಣ್ಣನೆಂದು ಕರೆಯಲಾಗುತ್ತದೆ.
{ ಸಜ್ಜೆ ಸೇವನೆಯ ಪ್ರಯೋಜನಗಳು}
*ಸುಲಭವಾಗಿ ಕರಗುವ ಆಹಾರವಾಗಿದ್ದು ನಾರಿನಂಶ ಹೊಂದಿದ್ದು ಮಲಬದ್ಧತೆ ನಿವಾರಣೆ ಆಗುತ್ತದೆ.
* ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ.
* ಸಜ್ಜೆ ಯು ಅಂಟಿಲ್ಲದ (Gluten free) ಧಾನ್ಯ ವಾಗಿದ್ದು ಹೊಟ್ಟೆಯ ತೊಂದರೆಗಳಿಗೆ ಉತ್ತಮ ಆಹಾರ ವಾಗಿದೆ.
* ಪ್ರೋಟೀನ್,ನಾರು, ಖನಿಜಾಂಶಗಳ ಆಗರವಾಗಿದ್ದು ಬೊಜ್ಜನ್ನು ನಿಯಂತ್ರಿಸುತ್ತದೆ.
* ನಿತ್ರಾಣ,ರಕ್ತ ಹೀನತೆ ಗೆ ಸಜ್ಜೆ ರೊಟ್ಟಿ ಊಟ ಅತ್ಯುತ್ತಮ ವಾಗಿದೆ.
* ಮಧುಮೇಹಿಗಳಿಗೆ ಸಜ್ಜೆ ಉತ್ತಮ ಆಹಾರ.
* ತ್ವಚೆಯ ಕಾಂತಿ ಹೆಚ್ಚಿಸುತ್ತದೆ, ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
ಸಜ್ಜೆ ಹಿಟ್ಟಿನಿಂದ ಸಜ್ಜೆ ರೊಟ್ಟಿ , ಸಜ್ಜೆ ಮಾದಲಿ , ಸಜ್ಜೆ ಉಂಡೆ, ಬಿಸ್ಕತ್ತು ಇತ್ಯಾದಿ ತಯಾರಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿ ಮಗಳು ಚೊಚ್ಚಲು ಬಸುರಿ ಎಂದು ಬೀಗರ ಕಡೆಯಿಂದ ಶುಭ ಸುದ್ದಿ ಬಂದರೆ ಸಾಕು “ಬುತ್ತಿ ರೊಟ್ಟಿ” ತಯಾರಿಸಿಕೊಂಡು ಬೀಗರ ಮನೆಗೆ ಹೋಗುವ ಸಂಭ್ರಮವೇ ಬೇರೆ.
“ಬುತ್ತಿ ರೊಟ್ಟಿ” ಅಂದರೆ ಅವರವರ ಯೋಗ್ಯತೆಗೆ ತಕ್ಕಂತೆ 100 ರಿಂದ 200 ವರೆಗೆ ಸಜ್ಜೆ ರೊಟ್ಟಿ, ಕಾಳು ಪಲ್ಲೆ, ಎಣ್ಣೆ ಗಾಯಿ ಬದನೆಕಾಯಿ, ಅಗಸಿ ಚಟ್ನಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಮೊಸರನ್ನ, ತರೇವಾರಿ ಉಪ್ಪಿನ ಕಾಯಿ,ಕರಿಗಡಬು, ಶೇಂಗಾ ಹೋಳಿಗೆ ಇತ್ಯಾದಿ ತಯಾರಿಸಿಕೊಂಡು ಬೀಗರ ಮನೆಗೆ ಹೋಗುವುದು.
ಮಾಹಿತಿ ಲೇಖನ> S.H.Nadaf