ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ ಹಣ್ಣು, ಆಹಾರ ಮತ್ತು ತರಕಾರಿ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ವಿಜಯಪುರ, ಬಾಗಲಕೋಟೆ, ಗದಗ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು, ಸ್ವಸಹಾಯ ಸಂಘಟನೆಗಳ ಸದಸ್ಯರು ಪಾಲ್ಗೊಂಡು, ಮೌಲ್ಯಾಧಾರಿತ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.
ಕರಿಮೆಣಸು, ವಿವಿಧ ಬಗೆಯ ಅಕ್ಕಿ ಮಾರಾಟ, ಪ್ರದರ್ಶನದ ಜತೆಗೆ ಏಲಕ್ಕಿ, ದಾಲ್ಚಿನ್ನಿ, ಬಿದಿರು, ಕಾಫಿ, ಗೋಡಂಬಿ, ಅಡಿಕೆ ಸೇರಿದಂತೆ ವಿವಿಧ ತಳಿಗಳ ಸಸಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ. ಮೇಳದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು, ರೈತರು ಭಾಗವಹಿಸಿ, ಕೃಷಿ ಸಂಬಂಧ ಅಗತ್ಯ ಮಾಹಿತಿ ಪಡೆದರು. ಮೇಳದಲ್ಲಿ ಪ್ರಮುಖವಾಗಿ ಜೇನು ಸಾಕಾಣಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ, ಎರೆಹುಳು, ಗೊಬ್ಬರ ತಯಾರಿಕೆ ಸೇರಿದಂತೆ ಸ್ವಾವಲಂಬx ಕೃಷಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ಇಡಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ.ಸುನಿಲ್ ಹೇಳಿದರು.
ಈ ಸಂದರ್ಭ ಮಾತನಾಡಿದ ಗ್ರಾಹಕ ಶೇಷಗಿರಿ, ವಿಶ್ವವಿದ್ಯಾಲಯಗಳು ದೇಸೀಯ ತಳಿಗಳ ಮೇಲೆ ಸಂಶೋಧನೆ ನಡೆಸುವ ಮೂಲಕ ಹೊಸ ತಳಿಗಳ ಮೇಲೆ ಬೆಳಕು ಚೆಲ್ಲಬೇಕು ಎಂದರು.
ಹೊಸ ತಳಿಯ ಹಣ್ಣುಗಳನ್ನು ಬೆಳೆಯಲು ಹೆಚ್ಚಿನ ಸಂಶೋಧನೆ ನಡೆದಿದ್ದು, ಮೇಳದಲ್ಲಿ ಮಾವು ಮತ್ತು ಹಲಸಿನ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿದೆ ಎಂದು ಸ್ಥಳೀಯರಾದ ಸ್ಥಳೀಯರಾದ ಚಂದ್ರಶೇಖರ್ ಹೇಳಿದರು.
ಮತ್ತೊಬ್ಬ ಮಾರಾಟಗಾರರಾದ ಸೌದಾಮಿನಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಯೋಜನೆಯಿಂದ ಆರ್ಥಿಕ ಸಹಕಾರ ಪಡೆದು ಯಂತ್ರಗಳ ಮೂಲಕ ಗೃಹ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಇಂತಹ ಮೇಳಗಳು ವ್ಯಾಪಾರ ವಹಿವಾಟಿಗೆ ಸಹಕರಿಸುತ್ತವೆ ಎಂದು ಸಂತಸ ವ್ಯಕ್ತಪಡಿಸಿದರು.