ಜೀವನದಲ್ಲಿ(Life) ಒಂದು ಹುಟ್ಟು, ಒಂದು ಸಾವು. ಅದರ ನಡುವೆ ಜೀವನ. ಇಲ್ಲಿ ಒಂದು ಮದುವೆ(Marriage).. ಆದರೆ ಈಗ ಆ ಕಾಲ ಸರಿದಿದೆ. ಅದರಲ್ಲೂ ಸಿನಿಮಾ ನಟ ನಟಿಯರು ತಮ್ಮ ಕೊನೆಗಾಲದವರೆಗೂ ಒಂದಾದ ಮೇಲೊಂದರಂತೆ ಮನಸೋ ಇಚ್ಚೆ ವಿಚ್ಚೇದನ ಕೊಡ್ತಾರೆ, ಮರು ಮದುವೆ ಆಗ್ತಾರೆ. ಆದರೆ ನಮ್ಮಂತ ಸಾಮಾನ್ಯ ಜನ ಕೊಂಚ ಮರ್ಯಾದಿ ನೋಡುತ್ತಾರೆ. ಅದರಲ್ಲೂ ೫೦ ವರ್ಷ ಕಳೆದ ಮೇಲೆ ಗಂಡ ಅಥವಾ ಹೆಂಡತಿ ಸತ್ತರೆ, ಅಥವಾ ಬಿಟ್ಟು ಹೋದರೆ ಮದುವೆ ಆಗೋದು ತೀರ ಅಪರೂಪ. ಅದಕ್ಕೆ ಸಮಾಜ ಕೂಡ ಅಷ್ಟಾಗಿ ಸಮ್ಮತಿಸುವುದಿಲ್ಲ.
ಆದರೆ, ಅವರಿಗೂ ಬದುಕು ಇದೆ. ಒಂಟಿಯಾಗಿ(Single) ಕಳೆಯುವುದು ಬಹಳ ಕಷ್ಟದ ವಿಷಯ. ಮಕ್ಕಳು(Children) ತಾವು ಮದುವೆಯಾಗಿ ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆಯೇ ವಿನಃ ತಮ್ಮ ಹಿರಿಯರ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತೀರಾ ಅಂದರೆ ತಗೊಂಡೋಗಿ ವೃದ್ದಾಶ್ರಮಕ್ಕೆ(Oldage Home) ಕಳುಹಿಸಿ ಕೈತೊಳೆದುಕೊಳ್ಳುತ್ತಾರೆ. ಆದರೆ ಇಲ್ಲೊಂದು ಸಂಸ್ಥೆ ಬಾಳಿನಲ್ಲಿ ಒಂಟಿಯಾಗಿದ್ದ ಹಿರಿಯ ಜೀವಗಳಿಗೆ (Elderly People) ಬಾಳ ಸಂಗಾತಿಯನ್ನು ಹುಡುಕಿ ಬದುಕು ಹಗುರವಾಗಲು ಪ್ರಯತ್ನಿಸುತ್ತಿದೆ.
ಸಂಗಾತಿ ಜೊತೆಗಿದ್ದಾಗ ಹರ್ಷದಿಂದ ಇದ್ದ ಜೀವ, ಸಂಗಾತಿ ಇಲ್ಲದೆ ಇದ್ದರೆ ಜೀವನ ಮಂಕಾಗುತ್ತದೆ. ಮುಪ್ಪಿನಲ್ಲಿ ಜೊತೆಗಾರ, ಜೊತೆಗಾರ್ತಿ ಇರಬೇಕು ಅನ್ನೋ ಹಂಬಲ ಇರುತ್ತದೆ. ವಿಧವೆಯರು, ವಿಚ್ಛೇಧಿತರು ಸೇರಿದಂತೆ ಹಲವರು ಸಂಗಾತಿ ಹುಡುಕಾಟಕ್ಕಾಗಿ ಬೆಂಗಳೂರಿನ ಗ್ರೀನ್ ಪಾತ್ ಇಕೋ ಹೋಟೆಲ್ ನಲ್ಲಿ ಜನವರಿ 28 ರಂದು ಪರಿಚಯ ವೇದಿಕೆ ಕಾರ್ಯಕ್ರಮ ಮಾಡಿದೆ.
ಒಂಟಿಯಾಗಿ ಬದುಕುತ್ತಿರುವವರು, ಮಕ್ಕಳಿಂದ ದೂರ ಇರುವ ಹಿರಿಯ ನಾಗರಿಕರದ್ದು ನಿಜಕ್ಕೂ ಬಹುದೊಡ್ಡ ಸಮಸ್ಯೆ. ಈ ಮುಪ್ಪಿನಲ್ಲಿ ಮನಸ್ಸಿನ ಮಾತನ್ನು ಹಂಚಿಕೊಳ್ಳಲು ಸಂಗಾತಿಯ ಹುಡುಕಾಟದಲ್ಲಿ ಇದ್ದವರಿಗೆ ಪರಿಚಯ ವೇದಿಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಮ್ಯಾಚ್ ಮೇಕಿಂಗ್ ಕಾರ್ಯಕ್ರಮಕ್ಕೆ ಬಂದವರು ತಮ್ಮ ಪರಿಚಯ ಮಾಡಿಕೊಂಡು, ತಮ್ಮಲ್ಲಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಮ್ಮ ಆಗು-ಹೋಗುಗಳನ್ನು ನೋಡಿಕೊಳ್ಳಲು ಹಾಗೂ ಇಬ್ಬರಿಗೂ ಜೊತೆಗೆ ಇರುವ ಅವಶ್ಯಕತೆ ಇರೋದರಿಂದ ಅಂತಹವರು ಸ್ವಇಚ್ಛೆಯಿಂದ ಬಂದು ಇಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಪತ್ನಿ ಇಲ್ಲ ಎಂದರೇ ಅರ್ಧ ಜೀವನವೇ ಇಲ್ಲ ಎಂದರ್ಥ, ಹೆಂಡತಿಯನ್ನು ಕಳೆದುಕೊಂಡವರಿಗಷ್ಟೇ ಆದರ ನೋವು ಗೊತ್ತಾಗುತ್ತದೆ. ಹಾಗಾಗಿ ಇಲ್ಲಿ ಬಹುಮುಖ್ಯ ಕಾರ್ಯಕ್ರಮ ನಡೆಯುತ್ತಿದೆ ಅಂತ ಮಾಹಿತಿ ಸಿಕ್ತು. ಆದ್ದರಿಂದ ಬಂದು ಮಾಹಿತಿ ಪಡೆದುಕೊಂಡಿದ್ದೇನೆ. ಮೇಡಂ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ವಿವಾಹ ಆಕಾಂಕ್ಷಿ ಮಂಜುನಾಥ್ ಹೇಳಿದ್ದಾರೆ. ಒಟ್ಟಿನಲ್ಲಿ ಶಕ್ತಿ ಇದ್ದಷ್ಟು ದಿನ ದುಡಿದು ರಿಟೈರ್ಡ್ ಲೈಫ್ ಲೀಡ್ ಮಾಡಬೇಕೆಂಬ ಆಸೆ ಹೊತ್ತಿದ್ದ ಜೀವಗಳು ತಮ್ಮ ಲೈಫ್ ಕಂಪ್ಯಾನಿಯನ್ ಹುಡುಕಾಟ ನಡೆಸಿದರು.
ಈವೆಂಟ್‌ನಲ್ಲಿ ಭಾಗವಹಿಸುವವರಿಗೆ ಕೆಲವೊಂದು ಮಾನದಂಡಗಳನ್ನು ಇಡಲಾಗಿತ್ತು. ಆಧಾರ್ ಕಾರ್ಡ್, ಪಾಲುದಾರರ ಮರಣ/ವಿಚ್ಛೇದನ ಪ್ರಮಾಣಪತ್ರ (ಫೋಟೋಕಾಪಿಗಳು), ನೋಂದಣಿ ಶುಲ್ಕ: ಮಹಿಳೆಯರಿಗೆ ರೂ 500, ಪುರುಷರಿಗೆ ರೂ 1,000 ~ ವಯಸ್ಸು: 50 ಮತ್ತು ಮೇಲ್ಪಟ್ಟವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
– (ಅಂತರ್ಜಾಲ ಮಾಹಿತಿ ನ್ಯೂಸ್ 18)