ಆಧುನಿಕ ಜೀವನ ಶೈಲಿಯ ಪರಿಣಾಮವಾಗಿ ಮಾನವನ ಆಯಸ್ಸು ದಿನೇದಿನೇ ಕ್ಷೀಣಿಸುತ್ತಿದ್ದು, ಆರೋಗ್ಯವನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಆಹಾರ ಪದ್ಧತಿಯಾದ ಸಿರಿಧಾನ್ಯಗಳ ಸೇವನೆಗೆ ಮರಳಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಮುನಿಯಪ್ಪಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ರೀಡಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ “ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನನಿತ್ಯದ ಆಹಾರದಲ್ಲಿ ನವಣೆ, ಸಜ್ಜೆ, ಉದ್ದು, ರಾಗಿ ಹಾಗೂ ಜೋಳದಂತಹ ಸಿರಿಧಾನ್ಯಗಳನ್ನು ಸೇರಿಸಿಕೊಳ್ಳುವುದು ಅತ್ಯಂತ ಅಗತ್ಯವೆಂದು ಸಲಹೆ ನೀಡಿದರು.
ಹಿಂದಿನ ಕಾಲದಲ್ಲಿ ಭಾರತದಲ್ಲಿ ಜನಸಂಖ್ಯೆಯ ಶೇಕಡಾ 75ರಷ್ಟು ಮಂದಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಗುಣಮಟ್ಟದ ಸಿರಿಧಾನ್ಯ ಆಹಾರ ಮತ್ತು ಹಣ್ಣು–ಹಂಪಲುಗಳನ್ನು ಸೇವಿಸುತ್ತಾ ಗಟ್ಟಿ ದೇಹಾರೋಗ್ಯದೊಂದಿಗೆ ಶತಮಾನವರೆಗೆ ಬದುಕುತ್ತಿದ್ದರೆಂದು ಅವರು ನೆನಪಿಸಿದರು. ಆ ಕಾಲದ ಆಹಾರ ಪದ್ಧತಿ ಮಾನವನ ಜೀವನದಲ್ಲಿ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿತ್ತು ಎಂದರು.
ಇಂದಿನ ದಿನಗಳಲ್ಲಿ ಜೀವನಶೈಲಿ ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಿರಿಧಾನ್ಯಗಳ ಮಹತ್ವ ಮತ್ತಷ್ಟು ಹೆಚ್ಚಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳಿಗೆ ವಿಶೇಷ ಒತ್ತು ನೀಡಿ, ಸಿರಿಧಾನ್ಯ ಬೆಳೆಸುವ ರೈತರಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.




