ಕೆಲವೊಮ್ಮೆ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಸಾಧನೆ ಮಾಡುತ್ತಾರೆ. ಅದಕ್ಕೆ ಧೈರ್ಯ, ಗಟ್ಟಿತನ ಬೇಕು. ಅದು ಎಲ್ಲರಲ್ಲೂ ಬರೋದಿಲ್ಲ. ಇಲ್ಲೊಬ್ಬ 8 ವರ್ಷದ ಬಾಲಕಿ ಬಾವಿಗೆ ಬಿದ್ದಿದ್ದ 7 ವರ್ಷದ ತನ್ನ ತಮ್ಮನನ್ನು ರಕ್ಷಿಸಲು ಸ್ವತಃ ಬಾವಿಗೆ ಹಾರಿ ಜೀವ ಉಳಿಸಿದ್ದಾಳೆ.
ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ 8 ವರ್ಷದ ಶಾಲೂ ಎಂಬ ಧೀರ ಬಾಲಕಿ. ಈಕೆ ಬಾವಿಗೆ ಹಾರಿ ಹಿಮಾಂಶೂ ಎಂಬ ತಮ್ಮನ ರಕ್ಷಣೆ ಮಾಡಿದ್ದಾಳೆ. ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದ ಉತ್ತರ ಪ್ರದೇಶ ಮೂಲದ ಜೀತೇಂದ್ರ- ರಾಜಕುಮಾರಿ ದಂಪತಿಗೆ 8 ವರ್ಷದ ಶಾಲೂ, 7 ವರ್ಷದ ಹಿಮಾಂಶೂ, 3 ವರ್ಷದ ರಾಶಿ, 2 ವರ್ಷದ ಕಪಿಲ್ ಎಂಬ ನಾಲ್ವರು ಮಕ್ಕಳು. ಇವರ ಪೈಕಿ ಹಿಮಾಂಶೂ ಹಾಗೂ ರಾಶಿ ತೋಟದಲ್ಲಿ ಆಟವಾಡುವಾಗ ಬಾವಿಗೆ ಬಾಲ್ ಬಿದ್ದಿದೆ. ಬಾಲ್ ತೆಗೆಯಲು ಹೋದ ಹಿಮಾಂಶು ಸಹ ಬಾವಿಯಲ್ಲಿ ಬಿದ್ದಿದ್ದಾನೆ. ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಿಮಾಂಶೂವನ್ನು ಕಂಡು ಅಕ್ಕ ಶಾಲೂ ಸಹ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ.
ಇದೇ ವೇಳೆ ಅಕ್ಕ ಪಕ್ಕದ ಜನರು ಶಾಲೂ ಸಹಾಯಕ್ಕೆ ಬಂದಿದ್ದಾರೆ. ಎಲ್ಲರೂ ಸೇರಿ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬಾಡಿಗೆ ಮನೆ ಮಾಲೀಕ ಧನಂಜಯ್ಯ ಎಂಬುವವರ ಬಳಿ ಶಾಲೂ ಈಜು ಕಲಿಯುತ್ತಿದ್ದಳು. ಹೀಗಾಗಿ ತಮ್ಮನನ್ನು ರಕ್ಷಿಸಲು ಶಾಲೂ ಧೈರ್ಯ ಮಾಡಿದ್ದಾಳೆ.