Advertisement
ಅಂಕಣ

ಸೀತೆ ಪುನೀತೆ | ಅಪೂರ್ಣ ರಾಮಾಯಣ

Share

“ನಾವು ವಾಲ್ಮೀಕಿಗಳಿಂದ ರಾಮಾಯಣವನ್ನು ಸೀತಾ ಪರಿತ್ಯಾಗದವರೆಗೆ ಮಾತ್ರ ತಿಳಿದಿದ್ದೇವೆ. ಆ ಬಳಿಕದ ಕಥೆ ಗೊತ್ತಿಲ್ಲ. ಅದನ್ನು ನಿನ್ನಿಂದಲೇ ತಿಳಿದು ರಾಮಾಯಣವನ್ನು ಪೂರ್ಣಗೊಳಿಸುತ್ತೇವೆ” ಎಂಬುದಾಗಿ ಲವಕುಶರು ರಾಮನಲ್ಲೇ ಹೇಳುತ್ತಾರೆ. ಯಜ್ಞಾಶ್ವವನ್ನು ಬಿಡಿಸಲು ಬಂದ ರಾಮನಲ್ಲಿ ಯುದ್ಧದ ನಡುವಿನ ಸಂಭಾಷಣೆ ಇದು.

Advertisement
Advertisement
Advertisement
Advertisement

ಇದೇ ಮಾತುಗಳನ್ನು ಈ ಸರಣಿಯಲ್ಲಿ ಅವರು ಲಕ್ಷ್ಮಣನಲ್ಲಿಯೂ ಭರತನಲ್ಲಿಯೂ ಹೇಳುತ್ತಾರೆ. ಅವರ ಮುಖ್ಯ ಪ್ರಶ್ನೆ ಎಂದರೆ ಪ್ರಜೆಗಳು ಮಾಡಿದ ಅಪವಾದಕ್ಕೆ ರಾಮನು ಸೀತೆಯನ್ನು ಪರಿತ್ಯಜಿಸಿದ್ದು ಸರಿಯೆ? ಅರಣ್ಯದಲ್ಲಿ ಸೀತೆ ಏನಾದಳು? ಅವಳ ಮನಸ್ಸಿಗೆ ಎಂತಹ ಆಘಾತವಾಗಿದೆ? ಇದನ್ನು ತಿಳಿಯುವ ಯತ್ನ ಮಾಡಿದ್ದೀರಾ? ಸ್ತ್ರೀಯನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ? ರಾಮರಾಜ್ಯಕ್ಕೆ ಇದು ಭೂಷಣವೇ?” ಈ ಪ್ರಶ್ನೆಗಳಿಗೆ ಉತ್ತರ ಸಿಗದ ಹೊರತು ರಾಮಾಯಣ ಪೂರ್ಣವಾಗುವುದಿಲ್ಲ. ಪೂಜ್ಯ ವಾಲ್ಮೀಕಿಯವರಿಂದ ಕಲಿತಿರುವ ರಾಮಾಯಣವನ್ನು ಅಯೋಧ್ಯೆಯ ಬೀದಿಗಳಲ್ಲಿ ಮತ್ತು ಕೊನೆಗೆ ರಾಜಸಭೆಯಲ್ಲೂ ಹಾಡಿ ಜನರನ್ನು ಮೋಡಿ ಮಾಡಿದ ಲವಕುಶರು ತಮ್ಮದು ಅಪೂರ್ಣ ರಾಮಾಯಣವೆನ್ನುತ್ತಾರೆ.

Advertisement

ಅಂತಿಮವಾಗಿ ರಾಮಸೀತೆಯರು ಒಂದಾಗುತ್ತಾರೆಂಬ ಆಶಾವಾದವನ್ನು ಈ ಸರಣಿಯ ಉದ್ದಕ್ಕೂ ಮೂಡಿಸಲಾಗುತ್ತದೆ. ಕೊನೆಯಲ್ಲಿ ರಾಮಸೀತೆಯರ ಭೇಟಿಯೂ ಆಗುತ್ತದೆ. ಸೀತೆ ಮತ್ತೊಮ್ಮೆ ಅಯೋಧ್ಯೆಗೆ ಆಗಮಿಸಿದ ಸಂದರ್ಭವನ್ನು ಒಂದು ಉತ್ಸವವನ್ನಾಗಿ ಆಚರಿಸುವ ನಿರ್ಧಾರವಾದಾಗ ಈ ಆಸೆಗೆ ಮತ್ತಷ್ಟು ಪುಷ್ಠಿ ದೊರೆಯುತ್ತದೆ. ಅದೇ ನಿರೀಕ್ಷೆಯಲ್ಲಿ ಪ್ರೇಕ್ಷಕರನ್ನು ಕಾದಿರಿಸುವ ಈ ಸರಣಿಯು ಕೊನೆಯಲ್ಲಿ ಮೂಲ ಕಥೆಯ ಹಳಿಗೆ ಮರಳುತ್ತದೆ.
ತಾನು ಸೀತೆಯ ಚಾರಿತ್ಯ್ರದ ಮೇಲೆ ಪೂರ್ಣ ವಿಶ್ವಾಸ ಹೊಂದಿದ್ದೇನೆ. ಅವಳ ಬಗ್ಗೆ ಯಾವ ಸಂಶಯವೂ ಇಲ್ಲ. ಒಬ್ಬ ಹೆಂಡತಿಯಾಗಿ ಅವಳನ್ನು ಮರಳಿ ಪರಿಗ್ರಹಿಸುವಲ್ಲಿ ಯಾವುದೇ ಪ್ರಶ್ನೆ ಇಲ್ಲ. ಆದರೆ ಅಯೋಧ್ಯೆಯ ಮಹಾರಾಣಿಯಾಗಿ ಅವಳನ್ನು ಸ್ವೀಕರಿಸಲು ಪ್ರಜಾಜನರ ನಿರಾಕ್ಷೇಪಣೆಯೂ ಮುಖ್ಯವಾಗುತ್ತದೆ. ಈಗ ಒಬ್ಬ ಪ್ರಜೆಯು ಸಾರ್ವಜನಿಕವಾಗಿ ಎತ್ತಿದ ಪ್ರಶ್ನೆಯನ್ನು ನಾವು ಪರಿಗಣಿಸಲೇಬೇಕು. ಇಲ್ಲವಾದರೆ ಅದು ಸದಾಕಾಲ ಉಳಿಯುವ ಪ್ರಶ್ನೆಯಾಗುತ್ತದೆ. ನಮ್ಮ ಇತಿಹಾಸದಲ್ಲಿ ಒಂದು ಕಳಂಕವಾಗಿ ಅದನ್ನು ಹಾಗೆ ಉಳಿಸುವುದು ಸರಿಯಲ್ಲ. ಹಾಗಾಗಿ ಸೀತೆಯ ಅಗ್ನಿಪರೀಕ್ಷೆಗೆ ನನ್ನ ಒಪ್ಪಿಗೆ ಇದೆ ಎಂದು ಶ್ರೀರಾಮ ಸಭೆಯಲ್ಲಿ ಘೋಷಿಸುತ್ತಾನೆ. ಆಗ ಒಮ್ಮೆಲೇ ರಾಮನ ತಾಯಂದಿರು, ತಮ್ಮಂದಿರು ಹಾಗೂ ಪ್ರಜಾಜನರೆಲ್ಲರೂ ಹತಪ್ರಭರಾಗುತ್ತಾರೆ. ಎಲ್ಲರೂ ದುಃಖದಲ್ಲಿ ಮುಳುಗುತ್ತಾರೆ. ಯಾರೊಬ್ಬರೂ ಪ್ರಶ್ನಿಸಲಾಗದಷ್ಟು ಹಾಗೂ ಸಮಸ್ಯೆಯನ್ನು ಚರ್ಚಿಸಲಾಗದಷ್ಟು ಎತ್ತರವನ್ನು ರಾಮನು ಪಡೆದಿರುತ್ತಾನೆ. ಹಾಗಾಗಿ ಲಕ್ಷ್ಮಣ, ಭರತ ಮತ್ತು ಹನುಮಂತ ಕಣ್ಣೀರು ಹಾಕುವುದು ಬಿಟ್ಟರೆ ಬೇರೇನೂ ಮಾತಾಡದ ಸ್ಥಿತಿಯಲ್ಲಿರುತ್ತಾರೆ. ಹಾಗಾಗಿ ದುಷ್ಟ ಯೋಚನೆಯ ಪ್ರಜೆಯೊಬ್ಬನು ಎತ್ತಿದ ಪ್ರಶ್ನೆಗೆ ಅಲ್ಲಿ ಮರುಪ್ರಶ್ನೆ ಎತ್ತುವವರು ಯಾರೂ ಇರಲಿಲ್ಲ. ಸ್ವತಃ ವಸಿಷ್ಟರೇ ರಾಮನು ನಿರ್ಧರಿಸಿದ ಬಳಿಕ ತಪ್ಪು ಹುಡುಕುವುದಕ್ಕಿಲ್ಲ ಎಂದು ಹೇಳುತ್ತಾರೆ.

ತನ್ನ ಸ್ವಾಗತದ ಸಿದ್ಧತೆಯಲ್ಲಿದ್ದ ಅಯೋಧ್ಯೆಯ ಶಿವಮಂದಿರದಲ್ಲಿ ಸಂತೋಷದಲ್ಲಿದ್ದ ಸೀತೆಗೆ ಅಗ್ನಿಪರೀಕ್ಷೆಗೆ ಸಿದ್ಧಳಾಗಬೇಕೆಂಬ ರಾಮನ ನಿರ್ಧಾರದ ಬಗ್ಗೆ ಹನುಮಂತ ಅಳುತ್ತಲೇ ತಿಳಿಸುತ್ತಾನೆ. ತನ್ನ ಮೇಲೆ ಯಾಕೆ ಇಂತಹ ಅಪವಾದ ಬರುತ್ತದೆಂದು ವ್ಯಾಕುಲಗೊಂಡ ಸೀತೆಯು ಪರಿಹಾರಕ್ಕಾಗಿ ವಾಲ್ಮೀಕಿಗಳ ಮೊರೆ ಹೋಗುತ್ತಾಳೆ. ಪ್ರತ್ಯಕ್ಷರಾದ ಋಷಿಗಳು, “ನೀನಿದನ್ನು ಪತ್ನಿಯಾಗಿ ಅಲ್ಲ, ರಾಣಿಯಾಗಿ ಅಲ್ಲ, ತಾಯಿಯಾಗಿ ಅಲ್ಲ, ಬದಲಿಗೆ ಒಬ್ಬ ಹೆಣ್ಣಾಗಿ ಎದುರಿಸಬೇಕು. ಅದು ಹೇಗೆ ಎಂಬುದನ್ನು ನೀನೇ ನಿರ್ಧರಿಸಬೇಕು” ಎಂದು ಹೇಳುತ್ತಾರೆ. ಅದನ್ನೊಪ್ಪಿದ ಸೀತೆಯು ಬಳಿಕ ರಾಜಸಭೆಗೆ ಬರುತ್ತಾಳೆ. ಆಕೆ ಹೇಗೆ ಪ್ರವೇಶಿಸುತ್ತಾಳೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಆಕೆಯ ಮುಖದಲ್ಲಿ ದುಃಖ ತುಂಬಿರಬಹುದೆಂದು ನಿರೀಕ್ಷಿಸುತ್ತಾರೆ. ಆದರೆ ಯಾವುದೇ ಗಾಬರಿ ಮತ್ತು ದುಃಖಗಳಿಲ್ಲದೆ ದ್ವಂದ್ವರಹಿತ ಮುಖಭಾವದಿಂದ ಬಂದ ಸೀತೆಯು ತಾನು ವಾಲ್ಮೀಕಿ ಮಹರ್ಷಿಗಳ ಸಲಹೆ ಪಡೆದಿರುವಂತೆ ತಾನು ರಾಮನ ರಾಣಿಯಾಗಿ ಅಲ್ಲ, ಮಕ್ಕಳ ತಾಯಿಯಾಗಿ ಅಲ್ಲ, ಒಬ್ಬ ಸ್ತ್ರೀಯಾಗಿ ಈ ಸವಾಲನ್ನು ಎದುರಿಸುವ ನಿರ್ಧಾರ ಮಾಡಿದ್ದೇನೆ ಎಂಬುದಾಗಿ ಹೇಳಿದಾಗ ರಾಮನ ಸಹಿತ ಎಲ್ಲರೂ ಮೌನವಾಗುತ್ತಾರೆ. ಆದರೆ ದುಷ್ಟ ಚಿಂತನೆಯ ವ್ಯಕ್ತಿ ಮಾತ್ರ ಸೀತೆಗೆ “ಬೇಗನೆ ಅಗ್ನಿ ಪರೀಕ್ಷೆಗೆ ಒಳಗಾಗು” ಎಂಬುದಾಗಿ ಒತ್ತಾಯಿಸುತ್ತಾನೆ. ಆತನನ್ನು ತಡೆಯಲು ಯಾರೂ ಮುಂದಾಗುವುದಿಲ್ಲ. ಆದರೆ ಸೀತೆ ಆತನಲ್ಲೇ “ನನ್ನ ಪಾವಿತ್ರ್ಯವನ್ನು ಪ್ರಶ್ನಿಸುವ ವ್ಯಕ್ತಿಯು ತನ್ನ ಪಾವಿತ್ರ್ಯವನ್ನು ಪರೀಕ್ಷಿಸಿದ್ದಾನೆಯೋ?” ಎಂದು ಕೇಳುತ್ತಾಳೆ. ಆಗ ಆತ ಗಾಬರಿಯಾಗುತ್ತಾನೆ. ಅದೇ ಹೊತ್ತಿಗೆ ಮಿಥಿಲೆಯಿಂದ ಹಿಂದಿರುಗಿದ ಲವಕುಶರು ಕೂಡಾ ತಮ್ಮ ಅಮ್ಮನ ಚಾರಿತ್ರ್ಯವನ್ನು ಪ್ರಶ್ನಿಸಿದಾತನನ್ನು ನಿಗ್ರಹಿಸಲು ಬಾಣ ಪ್ರಯೋಗಕ್ಕೆ ಸಿದ್ಧರಾಗುತ್ತಾರೆ. ಆದರೆ ಸೀತೆಯೇ ಅವರನ್ನು ತಡೆದು “ಪ್ರಶ್ನಿಸಿದವನ ಧ್ವನಿ ಅಡಗಿಸುವುದು ಸರಿಯಾದ ದಾರಿಯಲ್ಲ. ಅದಕ್ಕೆ ಸರಿಯಾದ ಉತ್ತರ ನೀಡಬೇಕು” ಎನ್ನುತ್ತ ತಾನೇ ವಿವರಣೆ ನೀಡುತ್ತಾಳೆ.

Advertisement

ರಾವಣನ ವಧೆಯ ಬಳಿಕ ಸೀತೆಯು ಅಗ್ನಿಪರೀಕ್ಷೆಯಲ್ಲಿ ಪರಿಶುದ್ಧಳೆಂದು ನಿರೂಪಿತವಾದ ಬಳಿಕವೇ ರಾಮನು ಸೀತೆಯನ್ನು ಕೂಡಿಕೊಂಡು ಪುರಪ್ರವೇಶ ಮಾಡಿದ್ದನು. ಮತ್ತೆ ಅಪವಾದ ಬಂದಾಗ ಸೀತೆಯನ್ನು ರಾಮನು ಪರಿತ್ಯಜಿಸಿದ್ದನು. ಈಗ ಏಕಾಏಕಿಯಾಗಿ ಅವಳನ್ನು ಪವಿತ್ರಳೆನ್ನುವುದು ಹೇಗೆ? ಆದರೆ ಸೀತೆಯು ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಒಳಗಾಗುವುದನ್ನು ತಿರಸ್ಕರಿಸುತ್ತಾಳೆ. ಗಂಡಸರು ಬಯಸಿದಾಗಲೆಲ್ಲ ಹೆಣ್ಣು ತನ್ನ ಪಾವಿತ್ರ್ಯದ ಪರೀಕ್ಷೆ ನೀಡಬೇಕೆಂಬ ಗಂಡುಮನಸ್ಸಿನ ಅಹಂಕಾರವನ್ನು ಪ್ರಶ್ನಿಸುತ್ತಾಳೆ. ಈ ಸಾಕೇತದ ರಾಜಸಭೆಯಲ್ಲಿ ಶ್ರೀರಾಮನ ಸಮಕ್ಷಮದಲ್ಲೇ ಸೀತೆ ಎತ್ತುವ ಸ್ತ್ರೀಯರ ಸ್ಥಾನಮಾನದ ಪ್ರಶ್ನೆಗಳು ಸಮರ್ಪಕ ಎಂಬುದಾಗಿ ಅಲ್ಲಿದ್ದ ಎಲ್ಲರಿಂದ ಮಾನ್ಯವಾಗುತ್ತವೆ. ಈ ಸಮಾಜದಲ್ಲಿ ಬಹಳ ಸುಲಭವಾಗಿ ಹೆಣ್ಣನ್ನು ಅಪರಾಧಿಯನ್ನಾಗಿ ಮಾಡಲಾಗುತ್ತದೆ. ಆಕೆ ಮೌನವಾಗಿ ಕತ್ತಲಿನಲ್ಲಿ ಮತ್ತು ಕಾಡಿನಲ್ಲಿ ಕಳೆದುಹೋಗಬೇಕಾಗುತ್ತದೆ. ಹೆಣ್ಮಕ್ಕಳಿಗೆ ಒದಗಬಹುದಾದ ಇಂತಹ ದುಃಸ್ಥಿತಿಯನ್ನು ಶಾಶ್ವತವಾಗಿ ತಪ್ಪಿಸಬೇಕಾಗಿದೆ. ತಾನೀಗ ಅಗ್ನಿಪರೀಕ್ಷೆಗೆ ಒಪ್ಪಿದರೆ ಮತ್ತೆ ಹೆಣ್ಣುಗಳನ್ನು ಶಿಕ್ಷಿಸಲು ಅದೇ ಒಂದು ಪರಂಪರೆಯಾದೀತು. ಅಂತಹ ದುಷ್ಟಪದ್ಧತಿಗೆ ತಾನು ಅಸ್ತಿವಾರ ಹಾಕಲು ಬಯಸುವುದಿಲ್ಲ.

ಸ್ಪಷ್ಟ ಮಾತುಗಳಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿದ ಸೀತೆಯ ಮಾತುಗಳು ರಾಮನ ಅಮ್ಮಂದಿರನ್ನೂ ತಮ್ಮಂದಿರನ್ನೂ ಲವಕುಶರನ್ನೂ ಹನುಮಂತನನ್ನೂ ಹಗುರಾಗಿಸಿತು. ಜನಕರಾಯ ಮತ್ತು ಆತನ ಪತ್ನಿಯ ಮುಖದಲ್ಲಿಯೂ ಮಂದಹಾಸ ಮಿನುಗಿತು. ಆದರೆ ರಾಮನ ಮುಖದಲ್ಲಿ ನಿರ್ಭಾವುಕತೆ ಇರುತ್ತದೆ. ಅಷ್ಟರಲ್ಲಿ ಸೀತೆ ಮುಂದುವರಿದು “ನಾನು ಪರಿಶುದ್ಧಳೆಂದಾದರೆ ನನ್ನ ತಾಯಿ ಭೂದೇವಿ ನನಗೆ ಇಂಬು ಕೊಡಲಿ” ಎಂದು ಹೇಳುತ್ತಾಳೆ. ತಕ್ಷಣ ಭೂಮಿ ನಡುಗುತ್ತದೆ, ದೊಡ್ಡ ಕಂದಕ ಉಂಟಾಗಿ ಒಂದು ಸಿಂಹಾಸನ ಮೇಲೆದ್ದು ಬರುತ್ತದೆ. ಅದರ ಮೇಲೆ ಸಾಕ್ಷಾತ್ ಭೂದೇವಿ ಕುಳಿತಿರುತ್ತಾಳೆ. ಅಮ್ಮನನ್ನು ನೋಡಿ ಸಂತಸ ಪಟ್ಟ ಸೀತೆ ಎಲ್ಲರಲ್ಲೂ ತನ್ನ ನಿರ್ಗಮನದ ನಿರ್ಧಾರವನ್ನು ಪ್ರಕಟಿಸುತ್ತಾಳೆ. ರಾಮನೂ ಸೇರಿದಂತೆ ಪ್ರತಿಯೊಬ್ಬರೂ ಆ ನಿರ್ಧಾರವನ್ನು ಬದಲಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆದರೆ ಸೀತೆ ಮರುಚಿಂತನೆ ಮಾಡದೆ ಅಮ್ಮನೊಂದಿಗೆ ಭೂಗತಳಾಗುತ್ತಾಳೆ.
ಸೀತೆಯ ವಿಯೋಗದ ಉತ್ಕಟ ಭಾವನೆಗಳಿಂದ ಉಗ್ರಗೊಳ್ಳುವ ರಾಮ ಮತ್ತೆ ಸೀತೆಯನ್ನು ಮರಳಿಸುವಂತೆ ಭೂದೇವಿಯಲ್ಲಿ ಪ್ರಾರ್ಥಿಸುತ್ತಾನೆ. ಆದರೆ ಸೀತೆ ಒದಗದಿದ್ದಾಗ ಇಡೀ ನಿಯತಿಯನ್ನೇ ಹಾಳುಗೆಡಹುವುದಾಗಿ ನಭಕ್ಕೆ ಬಾಣ ಹೂಡುತ್ತಾನೆ. ಆಗ ಈಶ್ವರ ಮತ್ತು ಬ್ರಹ್ಮ ಬಂದು ಸಮಾಧಾನಿಸುತ್ತಾರೆ. ಯಾವತ್ತೂ ತನ್ನ ಹೆಸರಿನ ಮುಂದೆ ಸೀತೆಯ ಹೆಸರಿರಬೇಕೆಂದು ಬಯಸುತ್ತಾನೆ. ಮುಂದೆ ಮಕ್ಕಳನ್ನು ಬೆಳೆಸಿ ರಾಮರಾಜ್ಯದ ಬುನಾದಿಯನ್ನು ಗಟ್ಟಿಗೊಳಿಸಲು ಒಪ್ಪುತ್ತಾನೆ.

Advertisement

ಹೀಗೆ ಮುಗಿಯುವ ಅದ್ಭುತ ರಾಮಾಯಣವೂ ಸೀತಾ ವಿಯೋಗದಿಂದಾಗಿ ಅಪೂರ್ಣ ರಾಮಾಯಣವೇ ಆಗುತ್ತದೆ. ರಾಮ ಮತ್ತು ಸೀತೆಯನ್ನು ಒಂದುಗೂಡಿಸಿದರೆ ಮಾತ್ರ ಅದು ಪೂರ್ಣವಾಗುತ್ತದೆ ಎನ್ನುತ್ತಿದ್ದ ಲವಕುಶರ ಕನಸು ಕನಸಾಗಿಯೇ ಉಳಿಯುತ್ತದೆ. ಅಂತಹ ಹೊಸ ರಾಮಾಯಣದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರೂ ಸೀತಾ ನಿರ್ಯಾಣದಿಂದಾಗಿ ನಿಟ್ಟುಸಿರು ಬಿಡುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದಲ್ಲಿ ಅನುಷ್ಠಾನ ಸಾಧ್ಯವಿಲ್ಲ : ಡಾ.ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆಯನ್ನು ಆಡಳಿತದಲ್ಲಿ ಜಾರಿಗೆ ತರದಿದ್ದರೆ, ಆದೇಶಗಳಿಂದ ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು…

3 hours ago

ಮಾವಿನ ನಂತರ  ಬಾಳೆಯು ಪ್ರಮುಖ ಹಣ್ಣಿನ ಬೆಳೆ

ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಭಾರತ ದೇಶವು…

2 days ago

ಜಲಜೀವನ್ ಮಿಷನ್ ಯೋಜನೆ | ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ

ಜಲಜೀವನ್  ಯೋಜನೆ, ಯಲಬುರ್ಗಾ ತಾಲೂಕಿನ ತಿಪ್ಪನಹಾಳದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಗ್ರಾಮದ ಜನರ ಸಂತಸಕ್ಕೆ…

2 days ago

ಕೃಷಿ ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ ವಿಶ್ವವಿದ್ಯಾಲಯ ಶ್ರಮಿಸಬೇಕು

ರೈತರು ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ…

2 days ago

ಫೆ.21 “ಭಾವತೀರ ಯಾನ” ಸಿನಿಮಾ ಬಿಡುಗಡೆ | ಇಬ್ಬರು ಗೆಳೆಯರ ಭಾವಯಾನ | ಮಲೆನಾಡಿನಲ್ಲಿ ನಡೆದಿದೆ ಚಿತ್ರೀಕರಣ |

ಪ್ರೀತಿ ಎಂದರೆ ಹುಡುಗ-ಹುಡುಗಿಯ ನಡುವಿನ ಪ್ರೇಮವೊಂದೇ ಅಲ್ಲ.ವ್ಯಕ್ತಿಯ ಒಳಗಿನ ಭಾವ ಅದು. ಹೀಗಾಗಿ…

3 days ago

ನನಗೆ ಹೇಗೆ ಕೂಡುತ್ತೋ, ಹಾಗೆ ಮಾತ್ರ ನಾನು ಕೃಷಿ ಮಾಡೋದು…

ಸಾಕಷ್ಟು ಜನ ಅಡಿಕೆ‌ ರೈತರು ಕೇವಲ ಹವ್ಯಾಸೀ ಕೃಷಿಕರು ಹೊರತು ವೃತ್ತಿಪರ ಅಲ್ಲವೇ…

4 days ago