ಅಡಿಕೆ ಕಳ್ಳಸಾಗಾಣಿಕೆ ತಡೆಯಲು ಕೈಗೊಂಡ ಕ್ರಮಗಳು ಇದೀಗ “ಅಡಿಕೆ ಗಲಾಟೆ”ಗೆ ಕಾರಣವಾಗಿದೆ. ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಟ್ರಕ್‌ಗಳಿಗೆ ಅಪರಿಚಿತ ವ್ಯಕ್ತಿಗಳು ಮಿಜೋರಾಂನಲ್ಲಿ ಬೆಂಕಿ ಹಚ್ಚಿದ್ದಾರೆ. ಅಡಿಕೆ ತುಂಬಿದ್ದ 6 ಲಾರಿಗಳು ಬೆಂಕಿಗೆ ಆಹುತಿಯಾಗಿದೆ. ಕಳೆದ ಹಲವು ಸಮಯಗಳಿಂದ ಬರ್ಮಾ ಅಡಿಕೆಯು ಕಳ್ಳದಾರಿಯಲ್ಲಿ ಬರುತ್ತಿತ್ತು. ಇದರ ತಡೆಗೆ ಅಸ್ಸಾಂ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿತ್ತು. ಇದರಿಂದ ತ್ರಿಪುರಾ ಹಾಗೂ ಆಸುಪಾಸಿನ ಕೆಲವು ಪ್ರದೇಶಗಳ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು. ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮಿಜೋರಾಂನಲ್ಲಿ ಕಳ್ಳಸಾಗಣೆ ಮೂಲಕ ಅಡಿಕೆ ಸಾಗಿಸುತ್ತಿದ್ದ ಆರು ಲಾರಿಗಳಿಗೆ ಬೆಂಕಿ ಹಚ್ಚಿದ ಘಟನೆ ಪಶ್ಚಿಮ ಮಿಜೋರಾಂನ ಮಮಿತ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.ಮಿಜೋರಾಂನ ಮಮಿತ್ ಜಿಲ್ಲೆಯಲ್ಲಿ ಶನಿವಾರ ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಟ್ರಕ್‌ಗಳಿಗೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ.
ಟ್ರಕ್‌ಗಳಿಗೆ ಬೆಂಕಿ ಹಚ್ಚಿದವರನ್ನು ಗುರುತಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕಳೆದ ಹಲವು ಸಮಯಗಳಿಂದ ಅಡಿಕೆ ಕಳ್ಳಸಾಗಾಣಿಕೆ ತಡೆಯ ಬಗ್ಗೆ ತ್ರಿಪುರಾ, ಅಸ್ಸಾಂ ಅಡಿಕೆ ಬೆಳೆಗಾರರು ಒತ್ತಾಯ ಮಾಡುತ್ತಿದ್ದರು.
ಬರ್ಮಾ ಅಡಿಕೆಯು ಭಾರತದೊಳಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿತ್ತು. ಇದರಿಂದ ತ್ರಿಪುರಾ ಸೇರಿದಂತೆ ಅಸ್ಸಾಂ ಹಾಗೂ ಇತರಡೆಯ ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಅಡಿಕೆ ಕಳ್ಳಸಾಗಾಣಿಕೆಯಲ್ಲಿ ಬರುವುದು ತಡೆಯಾಗಬೇಕು, ಸ್ಥಳೀಯ ಅಡಿಕೆ ಸಾಗಾಟಕ್ಕೆ ಅನುಮತಿ ಸಿಗಬೇಕು ಎಂದು ಕಳೆದ ಹಲವು ಸಮಯಗಳಿಂದ ಒತ್ತಾಯ ಇತ್ತು. ಆದರೆ ಯಾವುದೂ ಫಲ ನೀಡದ ಬಳಿಕ ಪ್ರತಿಭಟನೆಯನ್ನೂ ಅಡಿಕೆ ಬೆಳೆಗಾರರು ನಡೆಸಿದ್ದರೂ. ಹಾಗಿದ್ದರೂ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಲೇ ಇತ್ತು. ಬೆಳೆಗಾರರ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ. ಈ ಅಡಿಕೆ ಸಾಗಾಣಿಕೆಯ ಕಾರಣದಿಂದ ಭಾರತದ ಅಡಿಕೆ ಧಾರಣೆಯ ಮೇಲೂ ಪರಿಣಾಮ ಬೀರುತ್ತಿದೆ. ಈಗಲೂ ಅಡಿಕೆ ಧಾರಣೆ ಕುಸಿತಕ್ಕೆ ಈ ಆಮದು ಕಾರಣವಾಗಿದೆ.
ಕಳೆದ ವಾರ ಇಡಿ ಅಧಿಕಾರಿಗಳು ಮುಂಬಯಿಯಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಅಡಿಕೆ ವಶಕ್ಕೆ ಪಡೆದಿದ್ದರು. ಈ ಸಂದರ್ಭ ಒಪ್ಪಂದದ ಪ್ರಕಾರ ಅಡಿಕೆ ಆಮದಾಗುತ್ತಿರುವ ಭೂತಾನ್ ಒಪ್ಪಂದದ ಮೂಲಕ ಅಡಿಕೆ ಆಮದಾಗಿದೆ ಎಂದು ನಕಲಿ ದಾಖಲೆ ಹಾಜರು ಪಡಿಸಿದ್ದರು. ಇದು ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರು. ಈ ಜಾಲದ ಹಿಂದೆ ರಾಜಕೀಯ ಕೈವಾಡವೂ ಇರುವ ಬಗ್ಗೆ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುತ್ತಿದ್ದರು. ಈ ನಡುವೆ ಮಿಜೋರಾಂನಲ್ಲಿ ಅಡಿಕೆ ಸಾಗಾಟ ಮಾಡುತ್ತಿದ್ದ ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ.
ಮಿಜೋರಾಂ ರಾಜ್ಯಸಭಾ ಸಂಸದ ಕೆ.ವನ್ಲಾಲ್ವೆನಾ ಅವರು ಸಂಸತ್ತಿನಲ್ಲಿ ಮಿಜೋರಾಂ ಮತ್ತು ತ್ರಿಪುರಾ ಅಡಿಕೆ ಬೆಳೆಗಾರರ ಸಂಕಷ್ಟವನ್ನು ಪ್ರಸ್ತಾಪಿಸಿದ್ದರು. ಅದಾಗಿ ಎರಡು ದಿನಗಳಲ್ಲೇ ಟ್ರಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ.
ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ವನಲಾಲ್ವೆನಾ, ಪಶ್ಚಿಮ ಮಿಜೋರಾಂ ಮತ್ತು ತ್ರಿಪುರದ ಬಹುಪಾಲು ರೈತರು ಕಳೆದ ಹಲವು ದಶಕಗಳಿಂದ ಅಡಿಕೆಯ ಆದಾಯದ ಮೂಲವಾಗಿ ಅವಲಂಬಿಸಿದ್ದಾರೆ.ಅಸ್ಸಾಂ ಸರ್ಕಾರವು ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆಯ ವಿರುದ್ಧ ಕಠಿಣ ಕ್ರಮ ಕೈಗೊಂಡ ನಂತರ ಈ ವರ್ಷ ಮಿಜೋರಾಂ ಮತ್ತು ತ್ರಿಪುರಾದ ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಂ ಬೀರಿದೆ. ಮಿಜೋರಾಂ ಮತ್ತು ತ್ರಿಪುರದಲ್ಲಿ ಬೆಳೆದ ಅಡಿಕೆಯನ್ನು ದೇಶದ ಇತರ ರಾಜ್ಯಗಳಿಗೆ ಸಾಗಿಸಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯರು ಹೇಳಿದ್ದರು.
ಈಶಾನ್ಯ ರಾಜ್ಯಗಳಲ್ಲಿ ಉತ್ಪಾದಿಸುವ ಅಡಿಕೆಯನ್ನು ಭಾರತದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅನುಮತಿಸಬೇಕು ಮತ್ತು ಅವುಗಳನ್ನು ಸ್ಥಳೀಯವಾಗಿ ಬೆಳೆಯುವ ಅಡಿಕೆ ಎಂದು ಪರಿಗಣಿಸಬೇಕು, ಅಕ್ರಮವಾಗಿ ಆಮದು ಮಾಡಿಕೊಂಡ ಅಡಿಕೆ ಎಂದು ತಪ್ಪಾಗಿ ಭಾವಿಸಬಾರದು ಎಂದು ರಾಜ್ಯಸಭಾ ಸದಸ್ಯ ಒತ್ತಾಯಿಸಿದ್ದರು.
ಅಸ್ಸಾಂ ರೈಫಲ್ಸ್ ಸೇರಿದಂತೆ ಭದ್ರತಾ ಪಡೆಗಳು ಆಗಾಗ ಸಾವಿರಾರು ಟನ್ ಕಳ್ಳಸಾಗಾಣಿಕೆಯ ಅಡಿಕೆಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಬರ್ಮಾದಿಂದ ಈ ಅಡಿಕೆ ಕಳ್ಳಸಾಗಾಣಿಕೆಯ ಮೂಲಕ ಅಸ್ಸಾಂ ಮೂಲಕ ಬರುತ್ತಿತ್ತು.