ಸರ್ಕಾರಿ ಶಾಲೆಗಳಲ್ಲಿ ಈಚೆಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ವ್ಯವಸ್ಥೆ ಇದ್ದರೂ ಹಲವು ಮೂಲಭೂತ ವ್ಯವಸ್ಥೆಗಳ ಕೊರತೆ ಕಾಡುತ್ತಿದೆ. ಶಿಕ್ಷಕರ ಕೊರತೆ, ಕಟ್ಟಡದ ಸಮಸ್ಯೆ, ಸಂಪರ್ಕ ವ್ಯವಸ್ಥೆ ಇದೆಲ್ಲಾ ಇದ್ದರೂ ಇರುವ ವ್ಯವಸ್ಥೆಯಲ್ಲಿ ಗುಣಮಟ್ಟದ ಸೇವೆ ನೀಡಲು ಎಲ್ಲಾ ವ್ಯವಸ್ಥೆಗಳು ನಡೆಯುತ್ತದೆ. ಇದೇ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸಾಥಖೇಡಾ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ.…..ಮುಂದೆ ಓದಿ….
ಸಾಥಖೇಡಾದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕಲಿತು ಸರ್ಕಾರಿ ಉದ್ಯೋಗದಲ್ಲಿರುವವರು, ಹಳೆಯ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ,ಪ್ರವಚನ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೂ ಕೂಡ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಗ್ರಾಮದ ಪ್ರಮುಖರು ಸೇರಿ ಕೈಗೊಂಡ ನಿರ್ಧಾರದಿಂದ ಮಕ್ಕಳು ಡಿಜಿಟಲ್ ಮೂಲಕ ಶಿಕ್ಷಣ ಕಲಿಯುತ್ತಿದ್ದು, ಇದರಿಂದ ಕಲಿಕೆಗೂ ಮತ್ತಷ್ಟು ಪೂರಕವಾಗಿದೆ.
ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಶಾಲೆಗೆ ಕಾಯಕಲ್ಪ ಕಲ್ಪಿಸಿದ್ದೇವೆ. ಸಾಥಖೇಡಾದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯವಿದ್ದರೂ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಜೊತೆಗೆ ಸರ್ಕಾರವೂ ಈ ಬಗ್ಗೆ ಗಮನಹರಿಸಿಲ್ಲ. ಈ ಬಗ್ಗೆ ಇನ್ನಷ್ಟು ಸೌಲಭ್ಯ ಕಲ್ಪಿಸಿದರೆ ಗ್ರಾಮೀಣ ಪ್ರದೇಶದ ಬಡಮಕ್ಕಳು ಕೂಡ ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎನ್ನುತ್ತಾರೆ ಶಾಲೆಯ ಹಳೆಯ ವಿದ್ಯಾರ್ಥಿ ಈರಣ್ಣ ಪೂಜಾರಿ.
ಸರ್ಕಾರಿ ನೌಕರರು, ಗ್ರಾಮದ ಮುಖಂಡರು ಸೇರಿ ಶಾಲೆಗೆ ಸುಣ್ಣ, ಬಣ್ಣದ ವ್ಯವಸ್ಥೆ ಮಾಡುವುದರ ಜೊತೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಉತ್ತೇಜನ ಸಿಕ್ಕಿದೆ ಎನ್ನುತ್ತಾರೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಶಾಂತಪ್ಪ.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯ ಸಾಥಖೇಡಾದ ಗ್ರಾಮಸ್ಥರು ತಮ್ಮೂರಿನ ಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡುವ ಮೂಲಕ ರಾಜ್ಯದ ಇತರೆ ಗ್ರಾಮಗಳಿಗೂ ಮಾದರಿಯಾಗಿದ್ದಾರೆ.