ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ–ಕಾಲೇಜುಗಳ ಸುತ್ತಮುತ್ತ ಧೂಮಪಾನ ಮತ್ತು ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಕೇಂದ್ರ ಸಮಿತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳ ಸನಿಹದಲ್ಲಿರುವ ಅಂಗಡಿ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಸಿಗರೇಟ್, ತಂಬಾಕು ಸೇರಿದಂತೆ ಯಾವುದೇ ಧೂಮಪಾನ ವಸ್ತುಗಳ ಮಾರಾಟ ಕಂಡುಬಂದರೆ ಅವರ ಲೈಸನ್ಸ್ ರದ್ದುಗೊಳಿಸುವಂತೆ ಸೂಚಿಸಿದರು.
ಶಾಲಾ ಪರಿಸರದಲ್ಲಿ ಧೂಮಪಾನ ಮತ್ತು ಮಾದಕ ವಸ್ತುಗಳ ಚಟುವಟಿಕೆಗಳು ನಡೆಯದಂತೆ ಎಲ್ಲಾ ಶಾಲಾ ಎಸ್‌ಡಿಎಂಸಿಗಳು ಪರಿಶೀಲನೆ ನಡೆಸಬೇಕು. ಈ ಕುರಿತು ಶಾಲಾ ಶಿಕ್ಷಣ ಇಲಾಖೆ ವರದಿ ಪಡೆಯಬೇಕೆಂದು ಅವರು ತಿಳಿಸಿದರು.
ಶಾಲಾ–ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವಂತೆ ಸೂಚನೆ ನೀಡಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಜನರಲ್ಲಿ ಡ್ರಗ್ಸ್ ಮುಕ್ತ ಅಭಿಯಾನವನ್ನು ಬಲಪಡಿಸಬೇಕು ಎಂದು ಹೇಳಿದರು.
ಹೋಂಸ್ಟೇ ಮತ್ತು ಲಾಡ್ಜ್‌ಗಳಲ್ಲಿ ಆಗ್ಗಿಂದಾಗೆ ತಪಾಸಣೆ ನಡೆಸುವುದು, ಕರಾವಳಿ ಭದ್ರತಾ ಪೊಲೀಸರು ಬೋಟ್‌ಗಳನ್ನು ಅನಿರೀಕ್ಷಿತವಾಗಿ ಪರಿಶೀಲಿಸುವುದು, ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಪಾರ್ಸೆಲ್‌ಗಳ ಮೇಲೆ ನಿಗಾವಹಿಸುವಂತೆ ಸೂಚಿಸಲಾಗಿದೆ.
ಇದಲ್ಲದೆ ಕೈಗಾರಿಕಾ ಘಟಕಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾದಕ ವಸ್ತುಗಳ ವಿರುದ್ಧ ನಿಗಾವಹಿಸಲು ಸೂಚಿಸಲಾಗಿದೆ.
ಡ್ರಗ್ಸ್ ಮತ್ತು ಇತರೆ ಮಾದಕ ವಸ್ತುಗಳ ಚಟಕ್ಕೆ ಒಳಗಾದ ಮಕ್ಕಳನ್ನು ಹೊರತೆಗೆಯಲು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ವಿಶೇಷ ಕೌನ್ಸಿಲಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಇಲ್ಲಿ ಕರೆತಂದು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಿಥುನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
Authorities in Mangalore have issued strict instructions to cancel licenses of shops selling cigarettes, tobacco, or drugs near schools and colleges. Increased inspections and awareness campaigns are being implemented to ensure student safety and curb substance abuse.

