ನವ ಮಾಧ್ಯಮಗಳ ಯುಗ ಇದು. ಅತ್ಯಂತ ವೇಗದ ಇಂಟರ್ನೆಟ್ ಬೇಕು. ಅದರ ಜೊತೆಗೇ ಈಗ ಸೋಶಿಯಲ್ ಮೀಡಿಯಾದಲ್ಲಿ ನೀವಿರಬೇಕು. ಇದೆರಡು ಇಲ್ಲವಾದರೆ ಈಗ ಬದುಕೇ ವ್ಯರ್ಥ ಎನ್ನುವ ಕಾಲ ಇದಾಗಿದೆ. ಹೀಗಾಗಿ ಏನಿಲ್ಲವೆಂದರೂ ಒಂದು ಖಾತೆ, ಒಂದು ಸ್ಟೇಟಸ್ಸು, ಒಂದು ರೀಲ್ಸ್..! ಇದಿಷ್ಟು ಬೇಕೇ ಬೇಕು. ಅಷ್ಟೇ ಅಲ್ಲ, ಅದರಾಚೆಗೆ ಈ ಸೋಶಿಯಲ್ ಮೀಡಿಯಾವೂ ಸೆಳೆಯುತ್ತದೆ ಹಾಗೂ ಎಲ್ಲಿಗೋ ತಲಪಿಸಿಬಿಡುತ್ತದೆ. ಬದುಕಿನ ಗೆಲುವು ಕೂಡಾ ಇಲ್ಲಿದೆ, ಸೋಲು ಕೂಡಾ ಇಲ್ಲಿಯೇ ಇದೆ. ಗ್ರಾಮದ ಅಭಿವೃದ್ಧಿಯೂ ಇಲ್ಲಿದೆ.. ಗ್ರಾಮದೊಳಗೆ ಜಗಳವೂ ಇದರಲ್ಲಿದೆ. ಇದಕ್ಕಾಗಿ ಬಳಸುವುದೇ ಎಚ್ಚರಿಕೆ ಇರಬೇಕು ಅಷ್ಟೇ. ಈ ವೇದಿಕೆಗಳು ಸಮಾಜ ಮತ್ತು ವ್ಯಕ್ತಿಯನ್ನು ರೂಪಿಸಲು ಕೂಡಾ ಶಕ್ತಿಯನ್ನು ಹೊಂದಿದೆ. ವ್ಯಕ್ತಿಗಳು ಬಳಸುವುದರ ಮೇಲೆ ಎಲ್ಲವೂ ಇರುತ್ತದೆ. ಆದರೆ, ಇಂದು ಶೇ.80 ರಷ್ಟು ಕೆಟ್ಟ ಪ್ರಭಾವವೇ ಬೀರುತ್ತಿರುವುದು ಅಪಾಯಕಾರಿ.
ಒಂದು ಸಣ್ಣ ಕಾರ್ಯಕ್ರಮವಾಗಲಿ ಎಷ್ಟು ಮಂದಿ “ಮೀಡಿಯಾ”ದವರು ಹೀಗಂತ ಈಗೀಗ ಕೆಲವರು ಕೇಳುತ್ತಾರೆ. ಒಬ್ಬೊಬ್ಬರದು ಒಂದೊಂದು ಮೀಡಿಯಾ, ಒಂದೊಂದು ಯೂಟ್ಯೂಬ್. ಅಷ್ಟೂ ಪುಟ್ಟ ಪುಟ್ಟ ಮೀಡಿಯಾಗಳಿಗೆ ಯಾರು ವೀಕ್ಷಕರು..? ಎಷ್ಟು ತಲಪುತ್ತದೆ ಎನ್ನುವುದನ್ನು ಕೆಲವರು ಲೆಕ್ಕ ಹಾಕುತ್ತಾರೆ. ಆದರೆ ಇಂದು ಅಂತಹ ಎಲ್ಲಾ ಪುಟ್ಟ ಪುಟ್ಟ ಯೂಟ್ಯೂಬ್ ಗಳೂ, ಯೂಟ್ಯೂಬರ್‌ಗಳೂ ಅವರದೇ ಜನರಿಗೆ ತಲಪುತ್ತಾರೆ. ಅವರದೇ ಮಾದರಿಯಲ್ಲಿಆದಾಯವನ್ನೂ ಮಾಡಿಕೊಳ್ಳುತ್ತಾರೆ. ಅಂದರೆ ಸೋಶಿಯಲ್ ಮೀಡಿಯಾದಲ್ಲಿ ಆಯ್ಕೆಗಳಿಗೆ ಅವಕಾಶ ಇದೆ. ಆದಾಯಕ್ಕೂ ಅವಕಾಶ ಇದೆ. ಅವರವರ ಆಸಕ್ತಿಗೆ ಅನುಗುಣವಾಗಿ ವೀಕ್ಷಕರು-ಚಂದಾದಾರರು ಆಗಿರುತ್ತಾರೆ, ಅಂತಹವರು ವೀಕ್ಷಣೆ ಮಾಡಬಹುದು, ಓದಬಹುದು. ಆದರೆ ಒಬ್ಬ ಸಂಪಾದಕ ಇಲ್ಲದೆಯೇ, ತಾನೇ ಸಂಪಾದಕನಾಗಿ ಒಂದು ಕಂಟೆಂಟ್ ಜಗತ್ತಿಗೆ ನೀಡಬಹುದಾದ ಮೀಡಿಯಾ ಅದು. ಎಷ್ಟು ಪ್ರಯೋಜನವೋ.. ಅಷ್ಟೇ ಅಪಾಯವೂ ಇದೆ ಇಲ್ಲಿ.
ಭಾರತದಲ್ಲಿ ಇಂಟರ್ನೆಟ್ ಬೆಳೆಯುವುದಕ್ಕೆ ಆರಂಭವಾಗಿ ಬಹುಕಾಲವೇನೂ ಆಗಿಲ್ಲ. ಈಚೆಗೆ 10 ವರ್ಷಗಳ ಹಿಂದೆ 2ಜಿ ಕಾಲ ಇತ್ತು, ಅಲ್ಲಿಂದ 3ಜಿ ಆಗಿ ಈಗ 5ಜಿ ಕಾಲ ಬಂದಾಗಿದೆ. ಅತ್ಯಂತ ವೇಗದ ಇಂಟರ್ನೆಟ್. ಹಳ್ಳಿಯಲ್ಲಿಯೂ ಇಂಟರ್ನೆಟ್ ಬಂದಿದೆ, ಅದೂ ವೇಗದ ಇಂಟರ್ನೆಟ್. ಭಾರತವು ಡಿಜಿಟಲ್ ಇಂಡಿಯಾ ಹೆಸರಿನಲ್ಲಿ ಕೆಲಸ ಮಾಡಲು ಶುರು ಮಾಡಿದ ಬಳಿಕ ಡಿಜಿಟಲ್ ಯುಗ ಆರಂಭವಾಯಿತು, ಅಂತರ್ಜಾಲವನ್ನು ಜನರೂ ಸ್ವೀಕರಿಸಿದರು ಹಾಗೂ ಡಿಜಿಟಲ್ ವೇದಿಕೆಯನ್ನು ಅವಲಂಬಿಸಿದರು. ಇಂದಿಗೂ ಶೇ.100 ಡಿಜಿಟಲ್ ವ್ಯವಸ್ಥೆ ಒಳಗೆ ಬಾರದೇ ಇದ್ದರೂ 2025 ರಲ್ಲಿ 800 ಮಿಲಿಯನ್ ಸಕ್ರಿಯ ಇಂಟರ್ನೆಟ್ ಬಳಕೆದಾರರನ್ನು ದಾಟಿದೆ ಭಾರತ. ಅದರ ಜೊತೆಗೇ ಭಾರತದಲ್ಲಿ ಸೋಶಿಯಲ್ ಮೀಡಿಯಾಗಳೂ ಬೆಳೆದಿದೆ, ಬೆಳೆಯುತ್ತಿದೆ. ಗೂಗಲಿನ ಸಣ್ಣ ಇಮೇಲ್ ಪತ್ರ ವ್ಯವಹಾರಗಳ ಮೂಲಕ ಆರಂಭವಾದ ವೇದಿಕೆಯು ಇಂದು ಮೆಟಾ ಮತ್ತು ಎಕ್ಸ್ ನಂತಹ ತಂತ್ರಜ್ಞಾನವು ಸಾಕಷ್ಟು ವ್ಯಾಪಿಸಿದೆ. ಸಾಮಾಜಿಕ ತಾಲತಾಣಗಳು ದೈತ್ಯ ಶಕ್ತಿಯಾಗಿ ಬೆಳೆದಿದೆ. ಇಂದು ಲಕ್ಷಾಂತರ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಇಲ್ಲದಿದ್ದರೇ ಅದೊಂದು ಕೊರತೆ..!.
ಜನವರಿ 2025 ರ ಹೊತ್ತಿಗೆ, ಭಾರತದಲ್ಲಿ 491 ಮಿಲಿಯನ್ ಸಾಮಾಜಿಕ ಮಾಧ್ಯಮ ಬಳಕೆದಾರರಿದ್ದರು, ಇದು ದೇಶದ ಒಟ್ಟು ಜನಸಂಖ್ಯೆಯ 33.7% ಆಗಿದೆ ಎಂದು ವರದಿ ಹೇಳುತ್ತದೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ವೇಗವಾಗಿ ಬೆಳೆಯುತ್ತಿದೆ. ದೊಡ್ಡ ಕಂಪನಿಗಳಿಗೆ ಈಗ ಭಾರತವು ಸೋಶಿಯಲ್ ಮೀಡಿಯಾದ ಮಾರುಕಟ್ಟೆಗೆ ಅವಕಾಶ ಇರುವ ಜಾಗವಾಗಿದೆ. 2029 ರ ಹೊತ್ತಿಗೆ, ಭಾರತವು ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಮಾರುಕಟ್ಟೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಈಗ ರಾಜಕೀಯದಿಂದ ತೊಡಗಿ ಎಲ್ಲಾ ವ್ಯವಹಾರಗಳಿಗೆ ಸಾಮಾಜಿಕ ಮಾಧ್ಯಮವು ಪ್ರಮುಖ ಮಾರ್ಕೆಟಿಂಗ್ ಸಾಧನವಾಗಿದೆ. ಇಲ್ಲಿ ಯುವಕರು ಕೂಡಾ ಇದರ ಬಹುದೊಡ್ಡ ಗ್ರಾಹಕರಾಗಿದ್ದಾರೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ವ್ಯಾಟ್ಸಪ್, ಇನ್ ಸ್ಟಾಗ್ರಾಂ , ಪೇಸ್ ಬುಕ್ ಅತ್ಯಂತ ಜನಪ್ರಿಯ ಮಾಧ್ಯಮಗಳು. ಯುವಕರು ಹೆಚ್ಚಾಗಿ ಇದು ಮೂರರಲ್ಲಿ ಸಕ್ರಿಯವಾಗಿದ್ದಾರೆ ಎಂದು ಡಾಟಾ ಹೇಳುತ್ತದೆ ಕೂಡಾ. ಇನ್ನು ಯುವಕರು ನ್ಯೂಸ್‌ಗಳಿಗಾಗಿ, ಮಾಹಿತಿಗಾಗಿ ಯೂಟ್ಯೂಬ್ ಗಳನ್ನು, ಡಿಜಿಟಲ್ ವೇದಿಕೆಗಳನ್ನು ಅಲವಂಬಿಸುತ್ತಾರೆ. ಹೀಗಾಗಿ ಎಷ್ಟು ಸಮಯ ಇಲ್ಲಿ ಯುವಕರು ತೊಡಗಿಸಿಕೊಳ್ಳುತ್ತಾರೆ, ಯಾವ ಆಸಕ್ತಿ ಯುವಕರಿಗೆ ಇದೆ ಎನ್ನುವುದನ್ನು ನಮಗೆ ಗೊತ್ತಿಲ್ಲದೆಯೇ ಡಾಟಾ ಸಂಗ್ರಹವಾಗಿ ಅದಕ್ಕೆ ಅನುಗುಣವಾಗಿ ಆಲ್ಗೋರಿಥಂ ಸಿದ್ಧವಾಗುತ್ತದೆ. ಅದೇ ಮಾದರಿಯಲ್ಲಿ ಮಾರುಕಟ್ಟೆಯ ವೇದಿಕೆಗಳೂ ಸಿದ್ಧವಾಗುತ್ತದೆ. ಈ ಕಾರಣದಿಂದ ಒಮ್ಮೆ ನೀವು ಒಂದು ವಿಷಯ ಹುಡುಕಾಡಿದರೆ ನಂತರ ಅದೇ ಸಾಲು ಸಾಲಾಗಿ ನಿಮ್ಮ ಆಸಕ್ತಿಯ ವಿಷಯ ತೋರಿಸುತ್ತದೆ..!.
ಈ ದೇಶದಲ್ಲಿ ವಾರ್ಷಿಕವಾಗಿ ಸುಮಾರು ಒಂದು ಕೋಟಿ ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಇದರಲ್ಲಿ 15 ಲಕ್ಷ ಎಂಜಿನಿಯರ್‌ಗಳು ಮತ್ತು 85 ಲಕ್ಷ ಬಿಎ, ಬಿಕಾಂ, ಬಿಎಸ್ಸಿ ಮತ್ತು ಬಿಬಿಎ ಮುಂತಾದ ಇತರ ಕ್ಷೇತ್ರಗಳು ಸೇರಿವೆ.ಇದರಲ್ಲಿ ಸುಮಾರು 30 ಶೇಕಡಾ ಮಂದಿ ಉನ್ನತ ವ್ಯಾಸಾಂಗ ಮಾಡುತ್ತಾರೆ. ಉಳಿದ ಶೇ.20 ರಷ್ಟು ಮಂದಿ ಉದ್ಯೋಗ ಪಡೆಯುತ್ತಾರೆ. ಉಳಿದ ಶೇ.10-20 ರಷ್ಟು ಮಂದಿ ಸಿಕ್ಕಿದ ಉದ್ಯೋಗಕ್ಕೆ ತೆರಳುತ್ತಾರೆ. ಉಳಿದ ಅಷ್ಟೂ ಮಂದಿಯನ್ನು ಸದ್ಯ ಸೋಶಿಯಲ್ ಮೀಡಿಯಾ ಟಾರ್ಗೆಟ್ ಮಾಡಿದೆ. ಅಂತಹವರ ಬದುಕು ಹಾಳಾಗದಂತೆಯೂ ಎಚ್ಚರವಹಿಸಬೇಕಾಗಿದೆ.
ಸುಮಾರು 2012-13 ರ ನಂತರ ಸೋಶಿಯಲ್ ಮೀಡಿಯಾ ವೇಗ ಪಡೆಯಿತು. ಆಗ ಅನೇಕ ರಾಜಕೀಯ ಪಕ್ಷಗಳೂ ಸೋಶಿಯಲ್ ಮೀಡಿಯಾ ಬಳಕೆ ಹಾಗೂ ಪ್ರಚಾರಕ್ಕೆ ಶುರು ಮಾಡಿದವರು. ಯಾರು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುವುದನ್ನು ಅರಿತುಕೊಂಡು, ಅವರ ಆಸಕ್ತಿಯ ಅನುಗುಣವಾಗಿ ಪಕ್ಷವನ್ನೂ ಕಟ್ಟಿದರು. ಬಿಜೆಪಿ ಹಿಂದುತ್ವದ ವಿಪರೀತ ಪ್ರಚಾರ ಮಾಡಿದರೆ, ಆಮ್ ಆದ್ಮಿ ಭ್ರಷ್ಟಾಚಾರ ವಿರೋಧಿಯಾಗಿ ಪ್ರಚಾರ ಮಾಡಿತು. ಅನೇಕ ಯುವಕರನ್ನು ತಲಪಿತು. ಕಾಂಗ್ರೆಸ್ ಸಹಿತ ಇತರ ರಾಜಕೀಯ ಪಕ್ಷಗಳು ಆಗ ಸೋಶಿಯಲ್ ಮೀಡಿಯಾ ಬಳಕೆಯ ಕಡೆಗೆ ಅಷ್ಟೊಂದು ಆಸಕ್ತಿ ತೋರಲಿಲ್ಲ. ಸೋಶಿಯಲ್ ಮೀಡಿಯಾ ಬಳಕೆಯ ಕಾರಣದಿಂದ ಪಕ್ಷಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದವು, ಬಹುಬೇಗನೆ ಜನರನ್ನು ಅದರಲ್ಲೂ ಯುವಕರನ್ನು ತಲಪಿದವು. ಸತ್ಯ-ಸುಳ್ಳುಗಳು ಯಾವುದೆಂದು ಅರಿಯದಷ್ಟೂ ಅಬ್ಬರ ಹೆಚ್ಚಾದವು. ಯುವಕರು ಹೆಚ್ಚು ಆಕರ್ಷಣೆಗೆ ಒಳಗಾದರು ಲೈಕ್-ಶೇರ್‌ಗಳಲ್ಲಿ ಬ್ಯುಸಿಯಾದರು. ಅದೇ ಉದ್ಯಮವಾಯಿತು. ಪೇಕು ಪೇಜು, ಪೇಕು ಖಾತೆ, ಲೈಕ್ ಇತ್ಯಾದಿಗಳ ಮೂಲಕವೇ ಅದೊಂದು ಉದ್ಯಮವಾಗಿ ಬೆಳೆಯಿತು. ಎಷ್ಟು ಶೇರು-ಲೈಕ್ ಆಧಾರದ ಮೇಲೆಯೇ ಪಾವತಿಯೂ ನಡೆಯಿತು. ಅನೇಕ ಬಾರಿ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆಯೇ ದೇಶ ಸೇವೆ ಎನ್ನುವಷ್ಟರ ಮಟ್ಟಿಗೆ ಬೆಳೆಯಿತು ಸೋಶಿಯಲ್ ಮೀಡಿಯಾ ಹವಾ.
ಆ ಕಾಲದಲ್ಲಿ “ನಖಾವೂಂಗಾ, ನ ಖಾನೇ ದೂಂಗಾ” , “ಚೌಕೀದಾರ್” ,”ಭ್ರಷ್ಟಾಚಾರ ವಿರೋಧ” , “ಸ್ವಚ್ಛ ಭಾರತ್” ಇವೆಲ್ಲಾ ಬಹಳ ಫೇಮಸ್ಸಾದ ಡೈಲಾಗ್. ಸೋಶಿಯಲ್ ಮೀಡಿಯಾದಲ್ಲಿ ಬಹುಬೇಗನೆ ತಲಪಿದ್ದ ಸಂಗತಿಗಳು. ಇದನ್ನೇ ನಂಬಿ ಆಗ ತಾನೆ ಹಳ್ಳಿಗೆ ಬಂದ ಯುವಕನೊಬ್ಬ, ಊರಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯಲ್ಲಿನ ಭ್ರಷ್ಟಾಚಾರವನ್ನು ವಿರೋಧಿಸಿದ. ಕಳಪೆ ಕಾಮಗಾರಿ ಎಂದು ದಾಖಲೆ ಸಹಿತ ಹೇಳಿದ, ದೂರು ನೀಡಿದ. ಪಟ್ಟು ಬಿಡದೇ ಇದ್ದಾಗ ಪೊಲೀಸ್ ಠಾಣೆಯಲ್ಲಿ ಆ ಗುತ್ತಿಗೆದಾರ ಕೇಸು ದಾಖಲಿಸಿದ. ಆ ಗುತ್ತಿಗೆದಾರನ ಜೊತೆಗೆ ಯಾರೆಲ್ಲಾ ಫೇಮಸ್ ಡೈಲಾಗ್ ಹೇಳಿದ್ದರು ಅವರೆಲ್ಲಾ ಸೇರಿಕೊಂಡು ಪೊಲೀಸ್ ಠಾಣೆಯಲ್ಲಿ ಬಳಿಕ ರಾಜಿಯಲ್ಲಿ ಇತ್ಯರ್ಥವಾಯಿತು.
ಈಚೆಗೆ ಯುವಕನೊಬ್ಬ ಸೋಶಿಯಲ್ ಮೀಡಿಯಾ ವ್ಯಾಟ್ಸಪ್ ಮೂಲಕ ಅಭಿವೃದ್ಧಿ ಹೆಸರಿನ ಗುಂಪು ಮಾಡಿ ಅದರೊಳಗೆ ರಾಜಕೀಯ ಸೇರಿಕೊಂಡಾಗ ಯುವಕನ ಮೇಲೆಯೇ ಕೇಸಾದವು. ಯುವಕ ಕಿಡಿಗೇಡಿಯಾದ, ಆತ ಆತ್ಮಹತ್ಯೆಗೆ ಶರಣಾಗಬೇಕಾಯಿತು. ಊರಿನ ಅಭಿವೃದ್ಧಿ, ನಮ್ಮ ಕ್ಷೇತ್ರದ ಅಭಿವೃದ್ಧಿ ವ್ಯಾಟ್ಸಪ್ ಗುಂಪಿನ ಮೂಲಕ ಸಾಧ್ಯವಿಲ್ಲ ಎನ್ನುವ ಅರಿವು ಈಗ ಆಗಿದೆ, ಆಗುತ್ತಿದೆ.
ಸೋಶಿಯಲ್ ಮೀಡಿಯಾವು ಈಗ ಲಂಗು ಲಗಾಮು ಇಲ್ಲದ ವ್ಯವಸ್ಥೆಗಳು. ಯಾರು ಬೇಕಾದರೂ ಏನನ್ನು ಬೇಕಾದರೂ ಹಾಕಬಹುದು. ತಾನೇ ಸಂಪಾದಕ ಆಗಿರುವ ಮೈಕ್ರೋ ಬ್ಲಾಗಿಂಗ್. ಈ ಕಾರಣದಿಂದ ಯಾವುದೇ ವಿಷಯದ ಮೇಲೆ ಸಮಾಜದಲ್ಲಿ ಗಲಾಟೆಗಳು ನಡೆದಿದೆ, ಎಷ್ಟೋ ಮಂದಿಗೆ ನೆರವಾಗಲು ಇದೇ ವೇದಿಕೆಯಿಂದಲೂ ಸಾಧ್ಯವಾಗಿದೆ. ನೆರವಿಗಿಂತಲೂ ಅಪಾಯಕಾರಿಯಾಗಿ ಬೆಳೆದಿರುವುದು ಅಶಾಂತಿ ಸೃಷ್ಟಿಸಲು. ಯಾವುದೋ ಯುವಕರು ಬದುಕಿಗೆ ಕೊಳ್ಳಿ ಇಡುವುದಕ್ಕೇ ಹೆಚ್ಚು ಬಳಕೆಯಾಗಿದೆ.
ಅನೇಕ ಮಂದಿ ಇದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಉದ್ರೇಕಕಾರಿಯಾಗಿರುವ ಅಂಶಗಳನ್ನು ಶೇರ್ ಮಾಡುತ್ತಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಯುವಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಾರೆ. ಅಂತಹವರು ಯಾರೂ ಅವರ ಮಕ್ಕಳಿಗೆ ಮನೆಯಲ್ಲಿ ಮೊಬೈಲ್ ಬಳಕೆಯ ಮೇಲೆ ನಿಯಂತ್ರಣ ಇರುತ್ತದೆ, ಅವರನ್ನು ಪ್ರತ್ಯೇಕವಾಗಿ ಬೇರೆಯೇ ತರಬೇತಿಗಳಿಗೆ ಕಳುಹಿಸುತ್ತಾರೆ. ಸೋಶಿಯಲ್ ಮೀಡಿಯಾವೇ ಸತ್ಯ ಎಂದು ನಂಬಿರುವ ,ಅದರಿಂದಲೇ ಅಭಿವೃದ್ಧಿ ಸಾಧ್ಯ ಎಂದು ನಂಬಿರುವ ಆಗ ತಾನೆ ಸಮಾಜದ ಮುಂದೆ ಬಂದಿರುವ ಯುವಕರು ಇದಕ್ಕೆಲ್ಲಾ ಬಲಿಯಾಗುತ್ತಾರೆ. ಇಡೀ ಭವಿಷ್ಯವನ್ನು ಹಾಳು ಮಾಡಿರುತ್ತಾರೆ. ಯಾರು ಪ್ರಚೋದಿಸುತ್ತಾರೆ ಅವರ ಮಕ್ಕಳೆಲ್ಲಾ ಉನ್ನನ ಸ್ಥಾನದಲ್ಲಿರುತ್ತಾರೆ..!. ಬಲಿಯಾಗುವ ಯುವಕರಿಗೆ ರಾಜಕೀಯ ಭವಿಷ್ಯವೂ ಇರುವುದಿಲ್ಲ, ಸಮಾಜದಲ್ಲಿ ಸ್ಥಾನವೂ ಇರುವುದಿಲ್ಲ. ಕೇಸುಗಳಾದರೆ ಯಾವುದೇ ಪಕ್ಷಗಳಿಗೆ, ಸಂಘಟನೆಗಳಿಗೆ ಲಾಭವಾಗುತ್ತದೆ, ಅದರಿಂದಲೇ ಮೈಲೇಜ್ ಪಡೆಯುತ್ತಾರೆ. ಆದರೆ ಯುವಕರ ಭವಿಷ್ಯ, ಕೇಸುಗಳಾದ ನಂತರದ ದಿನಗಳಲ್ಲಿ ಏಕಾಂಕಿ…!. ಅಂತಹವರು ಕೊನೆಗೆ “ಸಾಲಗಾರ, ಮೋಸಗಾರ, ಅವನಿಗೆ ಕೆಲಸವಿಲ್ಲ” ಎಂದೇ ಹೇಳಿಸಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಯಾರೋ ಬಳಸಿ ಎಸೆದು ಬಿಡುವವರಾಗುತ್ತಾರೆ ಅಷ್ಟೇ..!. ಹೀಗಾಗಿ ಇಂತಹ ಯುವಕರು ಬಹಳ ಎಚ್ಚರಿಕೆಯಿಂದ ಸೋಶಿಯಲ್ ಮೀಡಿಯಾ ಬಳಕೆ ಮಾಡಬೇಕು. ಸರಿಯಾಗಿ ಬಳಕೆ ಮಾಡಿದರೆ ಗೆಲವು-ಪ್ರಚೋದನೆಗೆ ಒಳಗಾಗಿ ಪ್ರತಿಕ್ರಿಯೆ ನೀಡಿದರೆ ಸೋಲು ನಿಶ್ಚಿತ. ಹೀಗಾಗಿ ವಿವೇಕಯುತವಾಗಿಯೇ ಹೆಜ್ಜೆ ಇಡಬೇಕಿದೆ.
ಸೋಶಿಯಲ್ ಮೀಡಿಯಾದಲ್ಲಿ ತಕ್ಷಣದ ಪ್ರತಿಕ್ರಿಯೆ ಹೆಚ್ಚಿನ ಆದ್ಯತೆ. ಇಲ್ಲಿ ಆ ಕ್ಷಣದ ಪ್ರತಿಕ್ರಿಯೆ ಇರುತ್ತದೆ. ಯಾವುದೇ ವಿಷಯಗಳು ನಮ್ಮ ಮನಸ್ಸಿಗೆ ವಿರುದ್ಧವಾಗಿ ಕಂಡಾಗ ತಕ್ಷಣದ ಪ್ರತಿಕ್ರಿಯೆಯನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಲಾಗುತ್ತದೆ. ಅಂದರೆ ಆ ಕ್ಷಣದ ಪ್ರಚೋದನೆ ಅದು. ಕೆರಳಿಸುತ್ತದೆ, ಅದೇ ಪ್ರತಿಕ್ರಿಯೆಯಾಗುತ್ತದೆ. ಈ ಕಾರಣದಿಂದಲೇ ಅನೇಕ ಕೆಟ್ಟ ಪ್ರತಿಕ್ರಿಯೆಗಳು ಬಂದಿರುತ್ತದೆ. ಹೀಗಾಗಿ ಸೋಶಿಯಲ್ ಮೀಡಿಯಾದ ಪ್ರತಿಕ್ರಿಯೆಗಳು ಬಹಳ ಗಂಭೀರವಲ್ಲ ಎಂದು ಪರಿಗಣಿಸಬೇಕು. ಅದು ಬಹಳ ಪರಿಣಾಮವನ್ನೂ ಉಂಟು ಮಾಡುತ್ತದೆ. ನಮ್ಮ ಸಾರ್ವಕಾಲಿಕ ಅಭಿಪ್ರಾಯ ಅದು ಅಲ್ಲದೇ ಇದ್ದರೂ, ಆ ಕ್ಷಣದ ಅಭಿಪ್ರಾಯ ಅದಾದರೂ ಅದೇ ಸಾರ್ವಕಾಲಿಕ ಅಭಿಪ್ರಾಯ ಎಂದು ಈಗ ಬಿಂಬಿತವಾಗುತ್ತದೆ. ಹೀಗಾಗಿ ಇಂದು ಸೋಶಿಯಲ್ ಮೀಡಿಯಾದ ಪ್ರತಿಕ್ರಿಯೆ ಕೂಡಾ ಪ್ರಚೋದನೆಗೆ ಒಳಗಾಗುತ್ತದೆ.
ಇಂದು ಮಾಧ್ಯಮಗಳಿಗಿಂತಲೂ ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಬಹಳ ಜನಪ್ರಿಯವಾಗಿದೆ. ಜನರು ತಮಗೆ ಬೇಕಾದ ಮಾಹಿತಿಯನ್ನು ತಮಗೆ ಇಷ್ಟವಾದ ಜನರ ಮಾತುಕತೆ, ಚರ್ಚೆಯನ್ನು ವೀಕ್ಷಿಸಲು ಅವರ ಚಾನೆಲ್ ಜೊತೆ ಇರುತ್ತಾರೆ. ಹೀಗಾಗಿ ಅದೇ ದೊಡ್ಡ ಸುದ್ದಿಯಾಗುತ್ತದೆ. ಇಂದು ಬಹುತೇಕ ಸುದ್ದಿಗಳು, ಸಂಗತಿಗಳು ಸೋಶಿಯಲ್ ಮೀಡಿಯಾ ಕಾರಣದಿಂದಲೇ ಚರ್ಚೆಯಾಗುತ್ತದೆ, ಜೀವಂತವಾಗಿರುತ್ತದೆ. ಹೀಗಾಗಿ ಒಂದು ಯೂಟ್ಯೂಬ್ ಚಾನೆಲ್, ಒಬ್ಬ ಯೂಟ್ಯೂಬರ್ ಕೂಡಾ ಇಂದು ನಗಣ್ಯವಲ್ಲ. ಅವರದೇ ರೀತಿಯಲ್ಲಿ ಸಮಾಜದ ಮುಂದೆ ವಾಸ್ತವನ್ನು ತೆರೆದಿಡುತ್ತಾರೆ. ವಿಷಯವನ್ನು ತಿಳಿಸುತ್ತಾರೆ.ಅದೇ ರೀತಿ ಕೆಲವರು ಜನರಿಗೆ ಅದು ಸತ್ಯ ಎಂದು ಕಾಣುವ ಹಾಗೆ, ಸತ್ಯ ಎಂದು ಪ್ರತಿಪಾದಿಸುವ ಹಾಗೆಯೂ ಮಾತನಾಡುತ್ತಾರೆ. ಹೀಗಾಗಿ ಒಬ್ಬ ಧ್ರುವ ರಾಟಿ ಚುನಾವಣೆಯ ವೇಳೆ ಸದ್ದು ಮಾಡುತ್ತಾರೆ, ಒಬ್ಬ ಸಮೀರ್ ಕೂಡಾ ಗಮನ ಸೆಳೆಯುತ್ತಾರೆ, ಒಬ್ಬ ಬ್ರೋ ಕೂಡಾ ಜನರಿಗೆ ಇಷ್ಟವಾಗುತ್ತಾರೆ.
ಬಹುತೇಕ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದವಿಷಯಗಳಿಗೆ ಆಯಸ್ಸುಕೂಡಾ ಕಡಿಮೆಯೇ. ಕೆಲವೇ ದಿನಗಳ ಬಳಿಕ ಜನರು ಮರೆಯುತ್ತಾರೆ. ಅದನ್ನು ತಿಳಿದಿರುವ ಜನರು ಆಗಾಗ ಸುದ್ದಿಯಾಗುವ ಹಾಗೆ ಮಾಡುತ್ತಾರೆ. ಯಾವುದೇ ಹಳೆಯ ವಿಷಯ ತೆಗದು ಮೇಲೆ ತಂದು ಚರ್ಚೆ ಮಾಡುತ್ತಾರೆ. ಆಗಾಗ ಸುದ್ದಿಯಲ್ಲಿದ್ದರೆ ಮಾತ್ರವೇ ಸೋಶಿಯಲ್ ಮೀಡಿಯಾದಲ್ಲೂ ವಿಷಯಗಳಿಗೆ ಜೀವಂತಿಕೆ. ಈ ಕಾರಣದಿಂದ ಅನಗತ್ಯ ಚರ್ಚೆ, ವಾದ, ಕೇಸುಗಳು ಇಲ್ಲಿ ಆದರೆ ಮಾತ್ರವೇ ವಿಷಯಗಳು ಜೀವಂತ. ಇಂತಹ ಸಮಯದಲ್ಲಿ ಕೂಡಾ ಒಂದಷ್ಟು ಯುವಕರೇ ದಾಳವಾಗುತ್ತಾರೆ..!. ಈ ಎಲ್ಲಾ ಕಾರಣದಿಂದ ಸೋಶಿಯಲ್ ಮೀಡಿಯಾ ಗೆಲ್ಲುವುದಕ್ಕೂ, ಸೋಲುವುದಕ್ಕೂ,ಅಸ್ಥಿರವಾಗುವುದಕ್ಕೂ, ಸ್ಥಿರವಾಗುದಕ್ಕೂ, ಆದಾಯಕ್ಕೂ ಕಾರಣವಾಗುತ್ತದೆ. ಬಹಳಸಬೇಕಾದ್ದು ಮಾತ್ರಾ ಎಚ್ಚರದಿಂದ.
ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಅಂಶಗಳು ಸಾಕಷ್ಟು ಇದೆ. ಉತ್ತಮ ಮಾಹಿತಿ ಹಂಚುವಿಕೆಯ ಸಕಾರಾತ್ಮಕ ಅಂಶಗಳು ಇದ್ದರೆ ಅನೇಕರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ವೇದಿಕೆಗಳು ಸಮಾಜ ಮತ್ತು ವ್ಯಕ್ತಿಯನ್ನು ರೂಪಿಸಲು ಕೂಡಾ ಶಕ್ತಿಯನ್ನು ಹೊಂದಿದೆ. ಅದು ವ್ಯಕ್ತಿಗಳ ಮೇಲೆ ಇರುತ್ತದೆ. ಆದರೆ ಇಂದು ಶೇ.80 ರಷ್ಟು ಕೆಟ್ಟ ಪ್ರಭಾವವೇ ಬೀರುತ್ತಿದೆ.
ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಅಂಶಗಳು ಹಲವು ಇದೆ. ಸಂಪರ್ಕದ ದೃಷ್ಟಿಯಿಂದ ಭೌಗೋಳಿಕ ದೂರದಲ್ಲಿರುವ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಸಂವಹನ ಮತ್ತು ಸಂಪರ್ಕವನ್ನು ಸುಗಮಗೊಳಿಸುತ್ತದೆ. ಅಪಾರ ಪ್ರಮಾಣದ ಮಾಹಿತಿ ಒದಗಿಸುತ್ತವೆ ಮತ್ತು ಸುದ್ದಿ ಮತ್ತು ಅಪ್ಡೇಟ್ ಗಳು ಸಿಗುತ್ತದೆ. ಈ ವೇದಿಕೆಯು ಸಮಾನ ಮನಸ್ಸಿನ ಜನರನ್ನು ಹುಡುಕಲು ಮತ್ತು ಅವರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ, ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ. ತಮ್ಮನ್ನು ಸೃಜನಾತ್ಮಕವಾಗಿ ತೊಡಗಿಸಲು, ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳಲು ಮತ್ತು ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಮಾಜಿಕ ಮಾಧ್ಯಮವು ವೇದಿಕೆಗಳನ್ನು ನೀಡುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು, ಬೆಂಬಲವನ್ನು ಕ್ರೋಢೀಕರಿಸಲು ನೆರವಾಗುತ್ತದೆ.
ಹಾಗೆಂದು ನಕಾರಾತ್ಮವಾಗಿ ಅನೇಕ ಸಂಗತಿಗಳು ಇಂದು ಬೆಳೆಯುತ್ತಿದೆ. ಸೋಶಿಯಲ್ ಮೀಡಿಯಾದ ಅತಿಯಾದ ಬಳಕೆಯು ಆತಂಕ, ಖಿನ್ನತೆ ಮತ್ತು ಜೀವನದ ಅವಾಸ್ತವಿಕ ಭಾವನೆಗಳಿಗೆ ಕಾರಣವಾಗುತ್ತದೆ. ಸೈಬರ್ ಬೆದರಿಕೆ, ಕಿರುಕುಳ ಮತ್ತು ದ್ವೇಷ ಭಾಷಣಗಳಿಗೆ, ದ್ವೇಷ ಹರಡಲು ಕಾರಣವಾಗುತ್ತಿವೆ. ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿದೆ.ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯು ಕೂಡಾ ಈಗ ಆತಂಕಕಾರಿಯಾಗಿದೆ. ಈ ವೇದಿಕೆಗಳು ನಮಗೆ ತಿಳಿಯದೆಯೇ ನಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತವೆ, ಗೌಪ್ಯತೆ ಮತ್ತು ಮಾಹಿತಿಯ ದುರುಪಯೋಗದ ಸಾಧ್ಯತೆಯ ಬಗ್ಗೆ ಕಳವಳ ಇದೆ. ಈಗ ಅತಿಯಾದ ಬಳಕೆ ವ್ಯಸನವಾಗಬಹುದು. ಅಸೂಯೆಯೂ ಹೆಚ್ಚಾಗುತ್ತದೆ ಮತ್ತು ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯು ಮುಖಾಮುಖಿ ಸಂವಹನವನ್ನು ಕಡಿಮೆ ಮಾಡುತ್ತದೆ, ನಿರ್ಲಿಪ್ತತೆಯ ಭಾವನೆಯನ್ನು ಬೆಳೆಸಿ ನಿಜ ಜೀವನದ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಈಚೆಗಿನ ವರದಿ ಹೇಳಿದೆ.