ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ ಪೂರೈಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿರುವ ‘ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’ಯಿಂದ ಇದಾಗಲೇ 10 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಸೌರ ಫಲಕ ಅಳವಡಿಸಲಾಗಿದೆ. ಮಾರ್ಚ್ 2027 ರ ವೇಳೆಗೆ ಒಂದು ಕೋಟಿಗೂ ಹೆಚ್ಚು ಮನೆಗಳಿಗೆ ಸೌರಶಕ್ತಿ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಯೋಜನೆಯಿಂದ ಪ್ರತಿ ಮನೆ, ತಿಂಗಳಿಗೆ 300 ಯುನಿಟ್ ವಿದ್ಯುತ್ ಪಡೆಯಲಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವ ಮೂಲಕ ಹಣವನ್ನು ಕೂಡ ಗಳಿಸಬಹುದಾಗಿದೆ ಎಂದಿದ್ದಾರೆ. ಈ ಕುರಿತು ರಾಜ್ಯಸಭೆಗೆ ನಿನ್ನೆ ಮಾಹಿತಿ ನೀಡಿದ್ದ ಸಚಿವರು, 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೂಲಕ 2 ಲಕ್ಷ ರೂಪಾಯಿವರೆಗಿನ ಸಾಲಗಳಿಗೆ ಶೇಕಡಾ 6.75ರಷ್ಟು ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಗೆ 75 ಸಾವಿರದ 21 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 75 ಸಾವಿರ ರೂಪಾಯಿಗಿಂತಲೂ ಅಧಿಕ ವಿದ್ಯುತ್ ಉತ್ಪಾದನೆ ವೆಚ್ಚ ಉಳಿತಾಯವಾಗುತ್ತಿದೆ ಎಂದು ತಿಳಿಸಿದ್ದರು.