ಕೃಷಿ ಬೆಳವಣಿಗೆಯ ನಡುವೆ ಈಗ ಕಾಡುತ್ತಿರುವುದು ಕೃಷಿ ಕಾರ್ಮಿಕರ ಸಮಸ್ಯೆ. ಅದರಲ್ಲೂ ನುರಿತ ಕೃಷಿ ಕಾರ್ಮಿಕರು, ಕೌಶಲ್ಯ ಹೊಂದಿದ ಕಾರ್ಮಿಕರು ಅಪರೂಪದಲ್ಲಿ ಅಪರೂಪ. ರಾಜ್ಯದ ಎಲ್ಲಾ ಕಡೆಯೂ ಈ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಣೆಗೆ ಕೃಷಿ ತಂತ್ರಜ್ಞಾನಗಳ ಬಳಕೆಯೇ ಪರಿಹಾರ ಎಂದು ಹಲವು ಕಡೆ ಅಭಿಪ್ರಾಯ ಕೇಳುತ್ತಿದೆ. ಹಾವೇರಿ ಜಿಲ್ಲೆಯ ಕೃಷಿಕರು ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಕೃಷಿ ಕಾರ್ಮಿಕರ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಕಂಡುಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹಲವೆಡೆ ರೈತರು ಆಧುನಿಕ ತಂತ್ರಜ್ಞಾನದ ಜರಡಿ ಬಳಸಿ ಸೋಯಾಬಿನ್ ಒಕ್ಕಣಿ ಮಾಡುತ್ತಿದ್ದಾರೆ. ಇಲ್ಲಿ ಕೂಡಾ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದೆ. ಉತ್ತಮ ಭತ್ಯೆ ಕೊಟ್ಟರೂ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಹೀಗಾಗಿ ರೈತರು ಬೆಳೆ ಬೆಳೆಯಲು, ಬೆಳೆದ ಬೆಳೆಯನ್ನು ಹಸನು ಮಾಡಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ರೈತರು ಆಧುನಿಕ ತಂತ್ರಜ್ಞಾನದ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಸೋಯಾಬಿನ್, ಹತ್ತಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಹಾವೇರಿ ತಾಲೂಕು ಒಂದರಲ್ಲೇ 4500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೆಳೆ ಬೆಳೆಯಲಾಗುತ್ತದೆ. ಹಿಂದೆ ಸೋಯಾಬಿನ್ ಬೆಳೆದ ನಂತರ ಅದರ ಒಕ್ಕಣಿ ಮಾಡಲು ಕಣಗಳಲ್ಲಿ ಬೆಳೆ ಹಾಕುತ್ತಿದ್ದರು. ಆದರೆ ಈಗ ಕಣಗಳ ಸಂಖ್ಯೆ ಕಡಿಮೆ ಆಗಿದ್ದು, ಕಾರ್ಮಿಕರ ಸಮಸ್ಯೆಯೂ ಹೆಚ್ಚಾಗಿದೆ. ಹೀಗಾಗಿ ರೈತರು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಾಳುಗಳನ್ನು ಒಕ್ಕಣಿ ಮಾಡುವಾಗ ಮಣ್ಣು ಬರುತ್ತಿದೆ. ಕಾಳುಗಳಲ್ಲಿ ಮಣ್ಣು ಬೇರ್ಪಡಿಸಲು ರೈತರು ಕಷ್ಟಪಡುತ್ತಿದ್ದರು. ಹೀಗಾಗಿ ಜರಡಿ ಬಳಕೆಗೆ ಬಂದ ಮೇಲೆ ಮಣ್ಣಿನಿಂದ ಸುಲಭವಾಗಿ ಕಾಳುಗಳನ್ನು ಬೇರ್ಪಡಿಸಿ ಲಾಭ ಪಡೆಯುತ್ತಿದ್ದಾರೆ. ಸ್ಪೆರೊ ಸಪರೇಟರ್ ಎಂಬ ಹೆಸರಿನ ಈ ಜರಡಿ ಬಳಕೆಯಿಂದ ರೈತರಿಗೆ ಸೋಯಾಬಿನ್ ಒಕ್ಕಣೆ ಮಾಡುವುದು ಬಲು ಸುಲಭವಾಗಿದೆ. ಕಡಿಮೆ ಖರ್ಚು ಮತ್ತು ಕಡಿಮೆ ಕಾರ್ಮಿಕರ ಬಳಕೆ ಜೊತೆಗೆ ಸಮಯವೂ ಉಳಿತಾಯ ಆಗಲಿದೆ.
ಕೃಷಿಯಲ್ಲಿ ಈಚೆಗೆ ತಂತ್ರಜ್ಞಾನಗಳ ಬಳಕೆ ಹೆಚ್ಚಾಗಬೇಕು ಎನ್ನುವ ಮಾತುಗಳು ಕೇಳುತ್ತಿವೆ. ಆದರೆ ಹೊಸ ಹೊಸ ತಂತ್ರಜ್ಞಾನಗಳು ಬಂದಾಗ ಅದರ ಪರಿಚಯದ ಜೊತೆಗೆ ಸಾಧಕ ಬಾಧಕಗಳ ಬಗ್ಗೆಯೂ ರೈತರಿಗೆ ಅರಿವು ಮೂಡಿಸಬೇಕಿದೆ.
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…