ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳಿಗೆ ಹೊಸ ಪರಿಹಾರಗಳನ್ನು ಚರ್ಚಿಸಲು ಮತ್ತು ಅನ್ವೇಷಿಸಲು ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಶೃಂಗಸಭೆಯ(Bengaluru Tech Summit) ಪೂರ್ವಭಾವಿಯಾಗಿ ನುರಿತ ತಜ್ಞರನ್ನು ಒಳಗೊಂಡ ನಾಲ್ಕು ಸಮ್ಮೇಳನಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್(Rural Development and Panchayati Raj )ಹಾಗೂ ಮಾಹಿತಿ ತಂತ್ರಜ್ಞಾನ(Information Technology) ಸಚಿವ ಪ್ರಿಯಾಂಕ್ ಖರ್ಗೆ(Minister Priyank Kharge )ಹೇಳಿದ್ದಾರೆ.
ಕರ್ನಾಟಕ ಮತ್ತು ಭಾರತದ ವಿವಿದಡೆ ನೆಲೆಸಿರುವ ಚಿಂತಕರು, ನೀತಿ ನಿರೂಪಕರು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಸಮುದಾಯದ ಮುಖಂಡರನ್ನು ಒಟ್ಟುಗೂಡಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು, ಗ್ರಾಮೀಣ ಸವಾಲುಗಳನ್ನು ಗುರುತಿಸಲು, ಸಹಯೋಗಗಳನ್ನು ಉತ್ತೇಜಿಸಲು ಮತ್ತು ತಾಂತ್ರಿಕ ಆವಿಷ್ಕಾರದ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ವೇದಿಕೆಯನ್ನು ಸೃಷ್ಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ನೀರಿನ ಸವಾಲುಗಳು ಮತ್ತು ಪರಿಹಾರಗಳ ಶೃಂಗಸಭೆಯು ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ನೀರಿನ ಸವಾಲುಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಚರ್ಚಿಸಲಿದೆ. ಘನ ತ್ಯಾಜ್ಯ ನಿರ್ವಹಣೆ ಮತ್ತು ಪರಿಹಾರಗಳ ಶೃಂಗಸಭೆಯು ನವೀನ ತಾಂತ್ರಿಕ ಪರಿಹಾರಗಳ ಮೂಲಕ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಒತ್ತುವ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ವರ್ತುಲ ಆರ್ಥಿಕತೆಯ ಸಭೆಯು ಇಂದಿನ ಜಗತ್ತಿನಲ್ಲಿ ವರ್ತುಲ ಆರ್ಥಿಕತೆಯ ಪ್ರಾಮುಖ್ಯತೆ ಹಾಗೂ ಅದನ್ನು ಅರ್ಥೈಸಿಕೊಳ್ಳಲು ವೇದಿಕೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸಂಬಂಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಚಿವರು ಸಭೆ ನಡೆಸಿದರು. ಸಭೆಯಲ್ಲಿ ಅಭಿವೃದ್ಧಿ ಆಯುಕ್ತರೂ ಆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್, ಮಾಹತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.