ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರೀಡೆಗಳ(Sports) ಹಬ್ಬ ಒಲಿಂಪಿಕ್ಸ್(Olympic-2024) ಅಂದ್ರೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿರುತ್ತದೆ. ಅದರ ಸಂಭ್ರಮವೇ ಬೇರೆ. ಇಡೀ ವಿಶ್ವದ ಆಟಗಾರರು ಇಲ್ಲಿ ಜೊತೆಯಾಗಿ ತಮ್ಮ ಅಸ್ತತ್ವಕ್ಕಾಗಿ ಹೋರಾಡುತ್ತಾರೆ. ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್ ಈ ಬಾರಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ (Paris) ನಡೆಯಲಿದೆ. ಮುಂದಿನ ಜುಲೈ 26 ರಂದು ಕ್ರೀಡಾ ಜಾತ್ರೆ ಉದ್ಘಾಟನೆಯಾಗಲಿದ್ದು, ಆಗಸ್ಟ್ 11ರಂದು ತೆರೆ ಬೀಳಲಿದೆ.
ಒಟ್ಟು 35 ಸ್ಥಳಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, 10,500 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಾದಾಟ ನಡೆಸಲಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಪ್ರತಿದಿನ 6 ಲಕ್ಷಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯಿರಲಿದೆ. ಊಟದ ವ್ಯವಸ್ಥೆ ನಿರ್ವಹಣೆ ಮಾಡುವುದಕ್ಕಾಗಿಯೇ 31,500 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಒಲಿಂಪಿಕ್ಸ್ ಇತಿಹಾಸ ಏನು? : ಒಲಿಂಪಿಕ್ಸ್ ಕ್ರೀಡಾಕೂಟದ ಮೂಲ ಗ್ರೀಸ್ ದೇಶದ್ದಾಗಿದೆ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. 3-4 ಶತಮಾನದವರೆಗೆ ಈ ಕೂಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿತ್ತು. ಕ್ರಮೇಣ ಈ ಕ್ರೀಡಾಕೂಟವನ್ನು ನಿಲ್ಲಿಸಲಾಯಿತು. ನಂತರ ಮತ್ತೆ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, 1859 ರಲ್ಲಿ. ಇವಾಂಜೆಲಾಸ್ ಝಪ್ಪಾನ್ ಎಂಬಾತ ಪ್ರಪ್ರಥಮವಾಗಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಪ್ರಾಯೋಜಿಸಿದರು. ಬಳಿಕ 1894ರಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯೂಬರ್ತಿನ್ ಎಂಬುವವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹುಟ್ಟುಹಾಕಿದರು. 1896 ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಾಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ಸ್ ಕ್ರೀಡಾಕೂಟವೂ ಆಗಿತ್ತು.
ಮೊದಲ ಒಲಿಂಪಿಕ್ಸ್ ದಿನ ನಡೆದಿದ್ದು ಯಾವಾಗ?: ಮೊದಲ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನವನ್ನು ಜೂನ್ 23, 1948 ರಂದು ಆಚರಿಸಲಾಯಿತು. ಇದರಲ್ಲಿ ಪೋರ್ಚಗಲ್, ಗ್ರೀಸ್, ಆಸ್ಟ್ರೀಯಾ, ಕೆನಡಾ, ಸ್ವಿಟ್ಜರ್ಲೆಂಡ್, ಗ್ರೇಟ್ ಬ್ರಿಟನ್, ಉರುಗ್ವೆ, ವೆನೆಜುವೆಲಾ, ಮತ್ತು ಬೆಲ್ಜಿಯಂ ಸೇರಿ ಒಟ್ಟು 9 ದೇಶಗಳು ಮೊದಲ ಬಾರಿಗೆ ಈ ಒಲಿಂಪಿಕ್ಸ್ ದಿನಾಚರಣೆಯಲ್ಲಿ ಭಾಗವಹಿಸಿದ್ದವು.
ಒಲಿಂಪಿಕ್ಸ್‌ನಲ್ಲಿ ಭಾರತದ ಆರಂಭ ಯಾವಾಗ? : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾರತ ಭಾಗವಹಿಸಿದ್ದು, 1900ರ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ. ಪ್ಯಾರಿಸ್‌ನಲ್ಲಿ ರಜೆ ಕಳೆಯಲೆಂದು ತೆರಳಿದ್ದ ಆಂಗ್ಲೋ-ಇಂಡಿಯನ್ ಅಥ್ಲೀಟ್ ನಾರ್ಮನ್ ಪಿಚರ್ಡ್ ಭಾರತವನ್ನು ಪ್ರತಿನಿಧಿಸಿ 200 ಮೀ. ಓಟ ಮತ್ತು 200 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಬಳಿಕ 1920ರಲ್ಲಿ ಬೆಲ್ಜಿಯಂನ ಆಂಟ್ವರ್ಪ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಇಬ್ಬರು ಹಾಗೂ 1924ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 8 ಮಂದಿಯ ತಂಡ ಭಾಗವಹಿಸಿತ್ತು. 1928ರಲ್ಲಿ ನೆದರ್ಲೆಂಡ್‌ನ ಆಮ್‌ಸ್ಟರ್‌ಡಂ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವ ವೇಳೆ ಭಾರತೀಯ ಒಲಿಂಪಿಕ್ಸ್ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಆಗ ಭಾರತದ ಅಧಿಕೃತ ಕ್ರೀಡಾತಂಡ ಪ್ರತಿನಿಧಿಸಿ ಮೊದಲ ಬಾರಿ ಗೆದ್ದು ಚಿನ್ನ (ಹಾಕಿ) ತಂದಿತ್ತು. 2020 ರಂದು ಜಪಾನ್‌ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ 124 ಅಥ್ಲೀಟ್‌ಗಳನ್ನ ಕಳುಹಿಸಿತ್ತು. ಈ ಪೈಕಿ ಕೇವಲ 7 ಮಂದಿಯಷ್ಟೇ ಪದಕ ಗೆದ್ದಿದ್ದರು. ಒಂದೇ ಒಂದು ಚಿನ್ನದ ಪದಕವಷ್ಟೇ ಭಾರತದ ಪಾಲಾಗಿತ್ತು. ಇನ್ನು 2024ರ ಒಲಿಂಪಿಕ್ಸ್‌ಗೆ ಈಗಾಗಲೇ 49 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.
ರೇಸ್‌ನಲ್ಲಿ ಭಾರತ: ಒಲಿಂಪಿಕ್ಸ್ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಏಕೆಂದರೆ ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಡ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್ ಬಹುದೊಡ್ಡ ಬೂಸ್ಟರ್ ಡೋಸ್ ಆಗಿದ್ದು, ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ.
ಒಲಿಂಪಿಕ್ಸ್ ಆಯೋಜಿಸಲು ಭಾರತಕ್ಕೆಷ್ಟು ಹಣ ಬೇಕು? : 2008ರ ಬೀಜಿಂಗ್ ಒಲಿಂಪಿಕ್ಸ್ ಇದುವರೆಗಿನ ಅತ್ಯುತ್ತಮ ಆಯೋಜನೆ ಎಂದೇ ವಿಶ್ಲೇಷಿಸಲಾಗುತ್ತದೆ. ಚೀನಾ ಬರೋಬ್ಬರಿ 6.81 ಶತಕೋಟಿ ಡಾಲರ್ ವೆಚ್ಚಮಾಡಿತ್ತು. ಚೀನಾದಂತೆ ಸಕಲ ವ್ಯವಸ್ಥೆಗಳನ್ನು ನೀಡಿ ಒಲಿಂಪಿಕ್ಸ್ ಆಯೋಜಿಸಲು ಭಾರತಕ್ಕೆ ಕನಿಷ್ಠ 3-4 ಲಕ್ಷಕೋಟಿ ರೂ. ಮೀಸಲಿಡುವುದು ಅನಿವಾರ್ಯವಾಗಬಹುದು. ಆದರೆ, ಹಲವು ರಾಷ್ಟ್ರಗಳು ಐಒಸಿ ಅಂದಾಜಿಸುವ ವಾಸ್ತವಿಕ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ ನಿದರ್ಶನಗಳೂ ಇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ವೆಚ್ಚ ಬೀಳುತ್ತದೆ ಎಂದು ಹೇಳಲಾಗಿದೆ.
– ಅಂತರ್ಜಾಲ ಮಾಹಿತಿ
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…