ಆತ್ಮವಂಚನೆಯ SSLC ಫಲಿತಾಂಶ |

May 22, 2024
10:17 AM
ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಆತ್ಮನಿರ್ಭರತೆ, ಸ್ವಾವಲಂಬನೆಯನ್ನು ಹೆಚ್ಚಿಸಬೇಕಿದೆ.

ಇದು ಪ್ರತಿ ವರ್ಷವೂ ಹೀಗೇ: ಗ್ರೇಸ್ ಮಾರ್ಕ್‍ಗಳ ಮೂಲಕ ಫಲಿತಾಂಶದ ಏರಿಕೆ. ಅದಕ್ಕೊಂದು ಸ್ಪಷ್ಟೀಕರಣ ನೀಡಿ ರಾಜ್ಯದ ಮರ್ಯಾದೆ ಉಳಿಸಿದ್ದೇವೆಂದು ಹೇಳಿ ಶಿಕ್ಷಣ ಮಂತ್ರಿಗಳೂ ಇಲಾಖಾಧಿಕಾರಿಗಳೂ ಕೈತೊಳೆದು ಕೊಳ್ಳುವುದು. ಈ ವರ್ಷವಂತೂ ನೆಲ ಕಚ್ಚಿದ ಆತ್ಮನಿರ್ಭರತೆ. ಒಟ್ಟು ಫಲಿತಾಂಶದ ಏರಿಕೆಗಾಗಿ ಪಾಸ್ ಮಾರ್ಕಗಳು 25% ಕ್ಕೆ ಇಳಿಕೆ. ಯಾರಿಗಿದು ಮಾಡುವ ಮೋಸ! ಯುವ ತಲೆಮಾರಿನ ಜನಾಂಗಕ್ಕೇ ಮಾಡುವ ವಂಚನೆಯಲ್ಲವೇ?

Advertisement

ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳಿಗೆ ಒಂದು ಮಹತ್ವದ ಸ್ಥಾನವಿದೆ. ಆದರೆ ಪಬ್ಲಿಕ್ ಪರೀಕ್ಷೆಗಳಿಗೆ ಇನ್ನು ಹೆಚ್ಚಿನ ಮಹತ್ವವಿದೆ. ಏಕೆಂದರೆ ವಿದ್ಯಾರ್ಥಿಯು ಪೂರ್ಣವಾಗಿ ಬಾಹ್ಯ ಸಂಸ್ಥೆಗಳ ಮೌಲ್ಯಮಾಪನಕ್ಕೆ ಒಳಗಾಗುವ ಸಂದರ್ಭ ಅದು. ಪಾಠಪಟ್ಟಿಯ ಒಂದು ಚೌಕಟ್ಟನ್ನು ಬಿಟ್ಟು ಉಳಿದೆಲ್ಲವೂ ವಿದ್ಯಾರ್ಥಿಗೆ ಅಪರಿಚಿತ. ಪ್ರಶ್ನೆಪತ್ರಿಕೆ ತಯಾರಿಸುವವರು, ಅದನ್ನು ಮುದ್ರಿಸುವವರು, ಪರೀಕ್ಷಾ ಕೊಠಡಿಯಲ್ಲಿ ಹಂಚಿ ಉಸ್ತುವಾರಿ ಮಾಡುವವರು, ಮಾದರಿ ಉತ್ತರಗಳನ್ನು ನಿರ್ಧರಿಸುವವರು, ಮೌಲ್ಯಮಾಪನ ಮಾಡುವವರು, ಅಂಕಪಟ್ಟಿಗಳಲ್ಲಿ ಅಂಕಗಳನ್ನು ನಮೂದಿಸುವವರು, ಇವರೆಲ್ಲರೂ ಗೋಪ್ಯತೆಯನ್ನು ಕಾಪಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ. ಇವರ್ಯಾರಿಗೂ ಪರಸ್ಪರ ಪರಿಚಯವಿರುವುದಿಲ್ಲ. ಇವರ್ಯಾರೂ ತಾವು ಮಾಡುತ್ತಿರುವ ಗೌಪ್ಯದ ಕೆಲಸದ ಬಗ್ಗೆ ಮನೆಯವರಿಗೇ ಹೇಳುವಂತಿಲ್ಲ. ಏಕೆಂದರೆ ಪರೀಕ್ಷೆಯ ಫಲಿತಾಂಶವು ಹುಟ್ಟು ಹಾಕುವ ನಿರೀಕ್ಷೆಗಳು, ಉಂಟು ಮಾಡುವ ಗಾಬರಿ ಹಾಗೂ ಅಂತಿಮವಾಗಿ ಫಲಿತಾಂಶ ಕೈ ಸೇರಿದಾಗಿನ ಯಶಸ್ಸು ಅಥವಾ ನಿರಾಶೆಗಳು ವಿದ್ಯಾರ್ಥಿಯ ಬದುಕನ್ನು ನಿರ್ಧರಿಸುವ ಮಾಪಕಗಳೆಂದು ಪರಿಗಣಿಸಲಾಗುತ್ತದೆ. ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯು ವಿದ್ಯಾರ್ಥಿಯ ಮುಂದಿನ ವಿಜ್ಞಾನ, ಕಲೆ, ವಾಣಿಜ್ಯ ಶಿಕ್ಷಣದ ಮಾರ್ಗಗಳನ್ನು ನಿರ್ಧರಿಸುತ್ತದೆ. ಪೂರ್ಣ ಪಾರದರ್ಶಕವಾಗಿ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಯ ಜ್ಞಾನ ಸಾಮರ್ಥ್ಯದ ಮಾಪಕವೆಂದು ನಂಬಲಾಗಿರುವ ಈ ಪರೀಕ್ಷೆಯು ವಾಸ್ತವದಲ್ಲಿ ಹಾಗಿಲ್ಲ. ಶಂಕರಾಚಾರ್ಯರು ಹೇಳಿದ ಬ್ರಹ್ಮ ಒಂದೇ ಸತ್ಯ, ಜಗತ್ ಎಲ್ಲವೂ ಮಿಥ್ಯೆ ಎಂಬುದಕ್ಕೆ ಇದು ಒಳ್ಳೆಯ
ಉದಾಹರಣೆಯಾಗಬಲ್ಲುದು. ನಮ್ಮೊಳಗಿನ ಸಾಮರ್ಥ್ಯ ಮಾತ್ರ ಸತ್ಯ, ಈ ಪರೀಕ್ಷೆ, ರೇಂಕ್, ಅಂಕಗಳೆಲ್ಲವೂ ಮಿಥ್ಯೆ
ಎಂಬುದನ್ನು ಈ ಸಲದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವನ್ನು ನಿರ್ಣಯಿಸಿದ ಶಿಕ್ಷಣ ಇಲಾಖೆಯ
ತಂತ್ರಗಾರಿಕೆ ಬಯಲುಗೊಳಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಯಥಾಸ್ಥಾನ ಗೌರವಕ್ಕೆ ಪಾತ್ರವಾಗಿವೆ.

ಖಾಸಗಿ ವಿದ್ಯಾರ್ಥಿಗಳಿಗಿಲ್ಲದ ಒಂದು ಸೌಲಭ್ಯ ಶಾಲೆಗಳ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ
ಹಾಜರಾಗುವ ವಿದ್ಯಾರ್ಥಿಗಳಿಗಿದೆ. ಅದೆಂದರೆ ಆಂತರಿಕ ಮೌಲ್ಯಮಾಪನದಲ್ಲಿ 20ಕ್ಕೆ 20 ರಂತೆ ಪಡೆಯುವ
ಪೂರ್ಣಾಂಕಗಳು. ಅವುಗಳನ್ನು ನೀಡುವಲ್ಲಿ ಶಾಲೆಗಳವರು ಚೌಕಾಶಿ ಮಾಡುವುದಿಲ್ಲ. ಏಕೆಂದರೆ ಅವು
ಅಂಕಪಟ್ಟಿಯಲ್ಲಿಯಲ್ಲಿ ನಮೂದಾಗದಿರುವುದರಿಂದ ಅಂತಿಮವಾಗಿ ಶಾಲೆಗಳವರು ವಿದ್ಯಾರ್ಥಿಗಳ ಆಗ್ರಹಕ್ಕೆ
ಒಳಗಾಗಲು ಇಷ್ಟಪಡುವುದಿಲ್ಲ. ಅಲ್ಲದೆ 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದರೂ
ಅವುಗಳನ್ನು ಏರಿಸಲು ಆಂತರಿಕ ಮೌಲ್ಯಮಾಪನದ ಅಂಕಗಳು ಸಹಕಾರಿಯಾಗುತ್ತವೆ. ಇದು ರಾಜ್ಯಾದ್ಯಂತ ನಡೆಯುವ
ಸರ್ವ ಸಮಾನತೆಯ ಒಂದು ಅಂಶ. ಇನ್ನುಳಿದಂತೆ ಪರೀಕ್ಷೆಯಲ್ಲಿ ನಕಲು ಮಾಡುವುದು, ಚೀಟಿ ಇಟ್ಟುಕೊಂಡು
ಬರೆಯುವುದು, ಶಿಕ್ಷಕರೇ ಉತ್ತರಗಳನ್ನು ಹೇಳಿ ಸಹಕರಿಸುವುದು ಇತ್ಯಾದಿ ಅಕ್ರಮಗಳು ನಡೆಯುತ್ತಿದ್ದುದು ಗುಟ್ಟಿನ
ವಿಷಯವಾಗಿರಲಿಲ್ಲ. ಅವು ಹೆಚ್ಚಾದಂತೆ ಜಿಲ್ಲಾವಾರು ಫಲಿತಾಂಶಗಳಲ್ಲಿ ಏರುಪೇರು ಉಂಟಾಯಿತು. ಉಡುಪಿ ಮತ್ತು
ದಕ್ಷಿಣ ಕನ್ನಡ ಜಿಲ್ಲೆಗಳ ಫಲಿತಾಂಶದ ಮಟ್ಟವು ಗಣನೀಯವಾಗಿ ಇಳಿದಿತ್ತು.

ಈ ಬಾರಿ ನಡೆದ ಒಂದು ವಿಶಿಷ್ಠ ವಿದ್ಯಮಾನವೆಂದರೆ ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಿದ್ದು
ಹಾಗೂ ಅಕ್ರಮಗಳ ಮೇಲೆ ನಿಯಂತ್ರಣ ಸಾಧಿಸಿದ್ದು. ಶಿಕ್ಷಣ ಇಲಾಖೆ ಮಾಡಿದ ಈ ಪ್ರಯೋಗವನ್ನು
ಪ್ರಶಂಸನೀಯವೆನ್ನಬಹುದು. ಇದನ್ನು ವಿದ್ಯಾರ್ಥಿಗಳ ಮೇಲೆ ಹೇರಿದ ಒತ್ತಡ ಎಂದು ಋಣಾತ್ಮಕವಾಗಿ
ವ್ಯಾಖ್ಯಾನಿಸುವವರಿದ್ದಾರೆ. ಅದೇನಿದ್ದರೂ ಅಕ್ರಮಗಳನ್ನು ತಡೆಯುವಲ್ಲಿ ಸಿ.ಸಿ ಕೆಮಾರಾಗಳು ನಿರ್ಣಾಯಕ ಪಾತ್ರ
ವಹಿಸಿವೆ. ಹಾಗಾಗಿ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ನಕಲು ಮಾಡಿದ ಅಥವಾ ಡಿಕ್ಟೇಟ್ ಮಾಡಿದ್ದನ್ನು ಬರೆದ
ಉತ್ತರ ಪತ್ರಿಕೆಗಳು ಸಿಗಲಿಲ್ಲ. ಅಂದರೆ ಪರೀಕ್ಷೆಯು ಕ್ರಮಪ್ರಕಾರ ಜರಗಿದೆ ಎನ್ನಬಹುದು.

ಆದರೆ ಶಿಕ್ಷಣ ಇಲಾಖೆಯು ಈ ಶ್ರೇಯಸ್ಸನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಫಲಿತಾಂಶದಲ್ಲಿ
ತೇರ್ಗಡೆಯಾದವರ ಪ್ರಮಾಣವನ್ನು ಹೆಚ್ಚಿಸುವ ತಂತ್ರಗಾರಿಕೆ ಮಾಡಿತು. ವಾಸ್ತವಿಕವಾಗಿ ಈ ಸಲದ ತೇರ್ಗಡೆಯ
ಪ್ರಮಾಣವು 53% ರಷ್ಟು ಮಾತ್ರ ಇತ್ತು. ಅದು ಈ ಹಿಂದಿನ ವರ್ಷಗಳಲ್ಲಿ ತೋರಿಸಿದ್ದಕ್ಕಿಂತ ಸುಮಾರು 30% ರಷ್ಟು
ಕಡಿಮೆ ಇತ್ತು. ಅಂದರೆ ಸರಾಸರಿ 35% ಅಂಕಗಳನ್ನು ತೇರ್ಗಡೆಯ ಅಂಕಗಳನ್ನಾಗಿ ಪರಿಗಣಿಸಿದರೆ ಕಡಿಮೆ ಪ್ರಮಾಣದ
ಫಲಿತಾಂಶವನ್ನು ಪ್ರಕಟಿಸುವ ಅನಿವಾರ್ಯತೆ ಇತ್ತು. ಅದಕ್ಕಾಗಿ ಆರು ವಿಷಯಗಳಲ್ಲಿ ಗಳಿಸಬೇಕಾಗಿದ್ದ ತೇರ್ಗಡೆಯ
ಅಂಕಗಳನ್ನು 175 ರ ಬದಲು 125ಕ್ಕೆ ಇಳಿಸಿ ಅಂದರೆ 25% ಕ್ಕೆ ಇಳಿಸಿದ್ದರಿಂದ ರಾಜ್ಯದ ಫಲಿತಾಂಶವನ್ನು 73% ಕ್ಕೆ
ಏರಿಸಲು ಸಾಧ್ಯವಾಯಿತು. ಹೀಗೆ ಮಾಡದಿದ್ದರೆ ಹಿಂದಿನ ವರ್ಷಕ್ಕಿಂತ 30% ಫಲಿತಾಂಶದ ಕುಸಿತದಿಂದಾಗಿ ಸರಕಾರವು
ತೀವ್ರ ಮುಜುಗರ ಅನುಭವಿಸಬೇಕಾಗುತ್ತಿತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಯಾವ ರೀತಿಯ ಮುಜುಗರ
ಹಾಗೂ ಯಾಕಾಗಿ ಮುಜುಗರ ಎಂಬುದು ಅರ್ಥವಾಗುವುದಿಲ್ಲ. ಒಂದು ವೇಳೆ 53% ಎಂದೇ ಫಲಿತಾಂಶವನ್ನು
ಪ್ರಕಟಿಸಿದ್ದರೆ ಮರ್ಯಾದೆ ಹೋಗುವ ಯಾವ ಪ್ರಮೇಯವಿತ್ತು ಎಂಬುದು ಅರ್ಥವಾಗುವುದಿಲ್ಲ, ಬದಲಾಗಿ
ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಒಂದು ಹಳಿಗೆ ತಂದ ಕೀರ್ತಿ ಸರಕಾರಕ್ಕೆ ಸಿಗುತ್ತಿತ್ತು. ಅದನ್ನು ಮಾನ್ಯ ಶಿಕ್ಷಣ
ಮಂತ್ರಿಗಳೂ ಐ.ಎ.ಎಸ್. ಹುದ್ದೆಯ ಶಿಕ್ಷಣ ಇಲಾಖಾಧಿಕಾರಿಗಳೂ ಕಳೆದುಕೊಂಡರು.

ಈ ಸಲದ ಫಲಿತಾಂಶವನ್ನು ಒಟ್ಟಾಗಿ ನೋಡಿದರೆ ಸರಕಾರದ ಅಕ್ರಮದಿಂದಾಗಿ ಸುಮಾರು 1.23 ಲಕ್ಷ
ವಿದ್ಯಾರ್ಥಿಗಳು ಅಂದರೆ 20% ಮಕ್ಕಳು ಗ್ರೇಸ್ ಮಾರ್ಕ್ ನಿಂದಾಗಿ ಪಾಸಾಗಿದ್ದಾರೆ. ಇಷ್ಟಾದ ಬಳಿಕವೂ ಫೇಲ್
ಆದವರಿಗೆ ಜೂನ್ 7 ರಿಂದ ಮರುಪರೀಕ್ಷೆ ಇದೆ. ಅದರಲ್ಲೂ ಫೇಲ್ ಆದರೆ ಮೂರನೇ ಪರೀಕ್ಷೆಯನ್ನು ನಡೆಸಿ ಎಲ್ಲಾ
ಮಕ್ಕಳನ್ನು ತೇರ್ಗಡೆ ಮಾಡುವ ಹಂಚಿಕೆ ಇದೆ. ಇಷ್ಟೆಲ್ಲಾ ಮಾಡುವ ಬದಲು ಪರೀಕ್ಷೆಯನ್ನೇ ನಡೆಸದೆ ಶಾಲಾ
ಮಟ್ಟದಲ್ಲೇ ಪರೀಕ್ಷೆಗಳನ್ನು ನಡೆಸಿ ಉದಾರವಾಗಿ ಅಂಕಗಳನ್ನು ನೀಡಿ ಎಲ್ಲರನ್ನು ತೇರ್ಗಡೆಗೊಳಿಸುತ್ತಿದ್ದರೆ
ಪರೀಕ್ಷೆಗಳಿಗಾಗಿ ನಡೆಸಿದ ಖರ್ಚುಗಳು, ಒತ್ತಡಗಳು ಹಾಗೂ ಫಲಿತಾಂಶದ ಪೇಚಾಟಗಳನ್ನು ತಪ್ಪಿಸಬಹುದಿತ್ತು.
ಇಷ್ಟೊಂದು ಉದಾರ ಫಲಿತಾಂಶ ನೀಡಿದ ಬಳಿಕವೂ, ಮೂರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ
ಶರಣಾಗಿದ್ದಾರೆ. ಇನ್ನು, ತೋಚಿದ್ದನ್ನು ಗೀಚಿ ತೇರ್ಗಡೆಯಾದ ವಿದ್ಯಾರ್ಥಿಯೊಬ್ಬನ ಬೇನರ್ ಹಾಕಿ ಗೆಳೆಯರು
ಸಂಭ್ರಮಿಸಿದ್ದಾರೆ! ಇದರೊಂದಿಗೆ 625 ಕ್ಕೆ 625 ಗಳಿಸಿದ ಮ್ಯಾಜಿಕ್ಕೂ ಬೆಸೆದುಕೊಂಡಿದೆ.

ಬರಹ :
ಚಂದ್ರಶೇಖರ ದಾಮ್ಲೆ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಸುಕ್ಕಾ
April 30, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಗುಜ್ಜೆ ಚಟ್ನಿ
April 29, 2025
8:00 AM
by: ದಿವ್ಯ ಮಹೇಶ್
ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ
ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror

Join Our Group