ಕೊರೋನಾ ಸಮಯದಲ್ಲಿ ಶಾಲೆ ತೆರೆಯುತ್ತಿಲ್ಲ ಎನ್ನುವ ನೋವಿನ ನಡುವೆಯೂ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ನೆಟ್ವರ್ಕ್ ಸಮಸ್ಯೆಗಳ ಮಧ್ಯೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿನಿ ನಿಶ್ಮಿತಾ 623 ಅಂಕ ಪಡೆದಿದ್ದಾಳೆ. ಐ ಎ ಎಸ್ ಕನಸು ಹೊತ್ತಿರುವ ನಿಶ್ಮಿತಾ ಗುತ್ತಿಗಾರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕುದ್ರಡ್ಕ ಬಳಿಯ ನಿಶ್ಮಿತಾ ಎಸ್ ಎಸ್ ಎಲ್ ಸಿ ಯಲ್ಲಿ 623 ಅಂಕ ಪಡೆದಿದ್ದಾಳೆ. ಗುತ್ತಿಗಾರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಕೊರೋನಾ ಸಂಕಷ್ಟದ ನಡುವೆ ಶಾಲೆ ಆರಂಭ ಆಗದೇ ಇರುವಾಗ ಸತತ ಪರಿಶ್ರಮ ಪಟ್ಟು ಓದಿದ್ದಾಳೆ. ಆನ್ ಲೈನ್ ತರಗತಿಗೆ ನೆಟ್ವರ್ಕ್ ಸಮಸ್ಯೆ ಇದ್ದರೂ ಓದಿನಲ್ಲಿ ಹಿಂದೆ ಬೀಳಲಿಲ್ಲ. ಸರಕಾರ ನೀಡಿದ ಮಾರ್ಗಸೂಚಿಗಳನ್ನು ಗಮನಿಸಿದಳು. ಚಂದನ ವಾಹಿನಿಯಲ್ಲಿ ಬರುತ್ತಿದ್ದ ಪಾಠಗಳನ್ನು ಕೇಳುತ್ತಿದ್ದಳು. ಯೂಟ್ಯೂಬ್ ಲಿಂಕ್ ಗಳು ಮೂಲಕ ಪಾಠ ಕೇಳಿದಳು. ಶಾಲೆಯ ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಿದರು. ಹೀಗೇ ಯಶಸ್ಸಿಗಾಗಿ , ಗುರಿ ತಲುಪಲು ನಿರಂತರ ಓದಿದಳು. ಹೀಗಾಗಿ ಅಂಕ ಪಡೆಯಲು ಸಾಧ್ಯವಾಗಿತ್ತು ಎನ್ನುತ್ತಾಳೆ ನಿಶ್ಮಿತಾ. ಮುಂದೆ ಐ ಎ ಎಸ್ ಮಾಡಬೇಕೆಂಬ ಕನಸು ಹೊತ್ತಿರುವ ನಿಶ್ಮಿತಾ ಈ ನಿಟ್ಟಿನಲ್ಲಿ ಮುಂದಿನ ವಿದ್ಯಾಭ್ಯಾಸ ನಡೆಸುತ್ತೇನೆ ಎಂದು ಹೇಳುತ್ತಾಳೆ. ಗ್ರಾಮೀಣ ಭಾಗದಲ್ಲಿ ಬೆಳೆದಿರುವ ಕಾರಣ ಜನರ ಸಂಕಷ್ಟ ತಿಳಿಯುತ್ತದೆ , ಈ ಕಾರಣಕ್ಕೆ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಕನಸಿದೆ ಎನ್ನುತ್ತಾಳೆ. ಈಕೆಯ ತಂದೆ ಗಣಪ್ಪಯ್ಯ ನಾಯ್ಕ್ ಅವರು ಕೃಷಿ ಹಾಗೂ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಾರೆ. ತಾಯಿ ರೇವತಿ ಗೃಹಿಣಿಯಾಗಿದ್ದಾರೆ. ಸಹೋದರ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಸರಕಾರದ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಾಠದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇರುವ ಕಾರಣದಿಂದ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪಾಠಗಳನ್ನು ನೀಡಲಾಗುತ್ತಿತ್ತು. ಗ್ರಾಮೀಣ ಭಾಗಗಳಲ್ಲಿ ಈ ಪಾಠ ಪ್ರಯೋಜನವಾಗಿದೆ ಎನ್ನುವುದು ಇಂತಹ ವಿದ್ಯಾರ್ಥಿಗಳಿಂದ ಈಗ ಬೆಳಕಿಗೆ ಬಂದಿದೆ.